»   »  ಜಗ್ಗೇಶ್, ಅಂಬರೀಶ್ ಈಗ ಒಡೆದ ಹೃದಯಗಳು

ಜಗ್ಗೇಶ್, ಅಂಬರೀಶ್ ಈಗ ಒಡೆದ ಹೃದಯಗಳು

By: *ಜಯಂತಿ
Subscribe to Filmibeat Kannada
ಎರಡೂವರೆ ವರ್ಷದ ಹಿಂದಿನ ಮಾತು. ಜಗ್ಗೇಶ್ ತಮ್ಮ ಮನೆಯಲ್ಲಿ ಬಿಸಿಬೇಳೆ ಭಾತ್ ಮಾಡಿಸಿದ್ದರು. ತಿಂತೀರಾ ಪ್ರೀತಿಯಿಂದ ಕೇಳಿದರು. ತಮ್ಮ ಮನೆಯ ಬಿಸಿಬೇಳೆ ಭಾತ್ ಕರ್ನಾಟಕದಲ್ಲೇ ವರ್ಲ್ಡ್ ಫೇಮಸ್ ಅಂತ ಚಟಾಕಿ ಹಾರಿಸಿದರು. ಆಮೇಲೆ ನಮ್ಮ ಅಂಬರೀಶಣ್ಣನವರಿಗೂ ಅದು ಇಷ್ಟ ಎಂಬ ಕೊಸರು.

ಬಿಸಿಬೇಳೆ ಭಾತ್ ಕಾರ್ಯಕ್ರಮ ಮುಗಿದ ಮೇಲೆ ಸೌದಿಯಿಂದ ಹೊಸದಾಗಿ ತಂದಿದ್ದ ಮೇಕಪ್ ಸೆಟ್ ತೋರಿಸಿದರು. ಅದನ್ನು ಕೈಗೆ ಹಚ್ಚಿಕೊಂಡು ಬಣ್ಣದಲ್ಲಿ ಆಗುವ ಬದಲಾವಣೆಯನ್ನು ತುಂಬಾ ಮುಗ್ಧತೆಯಿಂದ ಬಣ್ಣಿಸಿದರು. ಕಪ್ಪಗಿರುವ ತಮ್ಮಂಥ ಕಲಾವಿದರಿಗೆ ಮೇಕಪ್ಪೇ ದೇವರು ಅಂದರು. ಮೇಕಪ್ ಬಗೆಗಿನ ಮಾತು ಅಂತ್ಯವಾಗಿದ್ದೂ ಅಂಬರೀಶಣ್ಣನ ನೆನಕೆಯಲ್ಲೇ. ನಮ್ಮ ಅಂಬರೀಶಣ್ಣೋರು ಇದನ್ನು ಕಂಡರೆ ಎತ್ತಿಕೊಂಡು ಹೋಗ್ಬಿಡ್ತಾರೆ. ಅವರು ಇವತ್ತೂ ನನ್ನ ಏನೋ ಕರಿಯಾ ನನ್ಮಗನೇ ಅಂತಲೇ ಪ್ರೀತಿಯಿಂದ ಮಾತಾಡಿಸೋದು ಅಂದವರೇ ಅಂಬರೀಶ್ ತರಹ ನಡೆದು ತೋರಿಸಿ ಖುಷಿ ಪಟ್ಟರು.

ಜಗ್ಗೇಶ್ ಮುಗ್ಧತೆಯಲ್ಲಿ ಆಗ ಸಹಜತೆ ಇತ್ತು. ಅಂಬರೀಶ್ ಅವರ ಬಾಯಲ್ಲಿ ಸುಮ್ಮನೆ ಅಂಬರೀಶಣ್ಣ ಆಗಿರಲಿಲ್ಲ. ಅವಕಾಶಕ್ಕಾಗಿ ಅಂಡಲೆಯುತ್ತಿದ್ದಾಗ ಜಗ್ಗೇಶ್ ಕೈಹಿಡಿದು ಮೇಲೆತ್ತಿದ್ದು ಅಂಬರೀಶ್ ಅಂತ ಇಡೀ ಗಾಂಧೀನಗರಕ್ಕೇ ಗೊತ್ತು. ಒರಟುತನದಲ್ಲಿ ಇಬ್ಬರಿಗೂ ಸಾಮ್ಯತೆಯುಂಟು. ಜಗ್ಗೇಶ್ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲೂ ಒಪ್ಪಿದವರು ಇದೇ ಅಂಬಿ. ರಾಣಿ ಮಹಾರಾಣಿ ಸಿನಿಮಾದಲ್ಲಿ ಜಗ್ಗೇಶ್‌ಗೆ ಅವಕಾಶ ಕೊಡಿಸಿದ್ದು ಕೂಡ ಅಂಬಿ. ಆ ಚಿತ್ರದ ಕಳ್ಳೆಕಾಯ್ ಕಳ್ಳೆಕಾಯ್ ಡೈಲಾಗ್ ಇವತ್ತಿಗೂ ಜನಪ್ರಿಯ. ಜಗ್ಗೇಶ್ ಅಭಿನಯದ ಮೊದಮೊದಲ ಸಿನಿಮಾಗಳಲ್ಲಿ ಪ್ರಜ್ಞಾಪೂರ್ವಕವಾಗಿ ಅಂಬರೀಶ್ ಕುರಿತ ಅಭಿಮಾನದ ಮಾತುಗಳು ಇದ್ದೇ ಇರುತ್ತಿದ್ದವು.

ಅಂಬರೀಶ್ ಒರಟರಾದರೂ ಅವರ ಹೃದಯವಂತಿಕೆಯ ಬಗ್ಗೆ ಗಾಂಧೀನಗರದಲ್ಲಿ ಒಳ್ಳೆಯ ಕಥೆಗಳು ಚಾಲ್ತಿಯಲ್ಲಿವೆ. ಜಗ್ಗೇಶ್ ಅಂಥ ಕಥೆಗಳ ಭಾಗವಾಗಿ ಸದಾ ಉಳಿಯುತ್ತಾರೆ. ಜಗ್ಗೇಶ್ ಹುಂಬತನದ ಬಗೆಗೂ ಕಥೆಗಳಿವೆ. ಆದರೆ, ತಮ್ಮ ಗಮನ ಸೆಳೆಯುವ ಟೈಮಿಂಗ್‌ನಿಂದ ಕಲಾವಿದರಾಗಿ ಅವರ ಗಳಿಕೆಯೂ ದೊಡ್ಡದು.

ಇದೆಲ್ಲ ಸಿನಿಮಾ ಹಾಗೂ ಖಾಸಗಿ ಬದುಕುಗಳ ಕಥೆ. ಈ ಆಪ್ತಕ್ಷಣಗಳನ್ನು ನೆನಪಿಸಿಕೊಳ್ಳಲಿಕ್ಕೆ ಕಾರಣ ಅಂಬಿ ಹಾಗೂ ಜಗ್ಗಿ ನಡುವೆ ನಡೆಯುತ್ತಿರುವ ಶೀತಲ ಸಮರ. ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ನಾಯಕತ್ವ ಪ್ರಶ್ನಾತೀತವಲ್ಲ ಎಂದಿದ್ದಾರೆ ಜಗ್ಗೇಶ್.

ಅಂಬಿ ಇದ್ದ ಕಾಂಗ್ರೆಸ್ ಪಕ್ಷದಿಂದ ಚಂಗನೆ ಕಮಲಕ್ಕೆ ಹಾರಿದ ಜಗ್ಗೇಶ್ ಮಾತಿನ ಧಾಟಿ ಈಗ ಬದಲಾಗಿದೆ. ಮಡಿಕೇರಿಯಲ್ಲಿ ವೇದಿಕೆ ಮೇಲೆ ನಿಂತು, ಅಂಬರೀಶ್ ಏನೂ ಕೆಲಸ ಮಾಡಿಲ್ಲ. ಅವರ ವಿರುದ್ಧ ಪ್ರಚಾರ ಮಾಡಲು ಹೋದರೆ ಒಂದು ಕೈ ನೋಡಿಕೊಳ್ಳುವುದಾಗಿ ನಟ-ನಟಿಯರಿಗೆ ಬೆದರಿಕೆ ಹಾಕಿದ್ದಾರೆ ಅಂತ ಜಗ್ಗಿ ಭಾಷಣ ಕುಟ್ಟಿದರು. ಜಗ್ಗೇಶ್‌ದು ಅತಿಯಾಯಿತು. ಅವರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಅವರ ಹೊಸ ಚಿತ್ರಗಳಿಗೆ ಬಹಿಷ್ಕಾರ ಹಾಕಬೇಕಾದೀತು ಎಂದು ಅಂಬಿಯ ಹಾರ್ಡ್‌ಕೋರ್ ಅಭಿಮಾನಿಗಳು ಗುಡುಗಿದ್ದಾರೆ.

ಜಗ್ಗೇಶ್ ಮಾತಿನ ಚೋದ್ಯ ನೋಡಿ. ಚಿತ್ರರಂಗದ ಯಜಮಾನ ಅಂಥ ಅಂಬರೀಷ್ ಎಲ್ಲಿಯೂ ಘೋಷಿಸಿಕೊಂಡಿರಲಿಲ್ಲ. ವಿಷ್ಣುವರ್ಧನ್, ಪಾರ್ವತಮ್ಮನವರಂಥ ಗಟ್ಟಿಗರೇ ಗಟ್ಟಿಯಾಗಿ ಮಾತನಾಡಲು ಹಿಂದೆಮುಂದೆ ನೋಡುವಾಗ ಚಿತ್ರರಂಗದಿಂದ ಹೆಚ್ಚೂಕಡಿಮೆ ನಿಷ್ಕ್ರಮಿಸಿರುವ ಅಂಬರೀಷ್ ಯಜಮಾನ್ಯದ ಮಾತನಾಡಲು ಹೇಗೆ ಸಾಧ್ಯ? ಈ ಸತ್ಯ ಜಗ್ಗೇಶ್‌ಗೂ ಗೊತ್ತು. ಗೊತ್ತಿದ್ದೂ ಯಜಮಾನಿಕೆ ಮಾತನಾಡುತ್ತಾರೆಂದರೆ ಅದರ ಹಿಂದಿರುವುದು ಬೇರೆಯದೇ ಹುನ್ನಾರ. ಅದು, ರಾಜಕಾರಣವಲ್ಲದೆ ಬೇರೆ ಏನಾಗಿರಲಿಕ್ಕೆ ಸಾಧ್ಯ?

ಗುರುಶಿಷ್ಯ, ಅಪ್ಪಮಗ, ಸೋದರ ಸಂಬಂಧ- ಇಂಥವಕ್ಕೆಲ್ಲ ರಾಜಕೀಯದಲ್ಲಿ ಎಲ್ಲಿದೆ ಅರ್ಥ? ಬಂಗಾರಪ್ಪನವರಂಥ ಬಂಗಾರಪ್ಪನವರ ಮೇಲೇ ಅವರ ಕುಮಾರ ಬಂಡೆದ್ದುದನ್ನು, ಬಂಡನ್ನು ಅರಗಿಸಿಕೊಂಡದ್ದನ್ನು ನಾವು ನೋಡಿದ್ದೇವೆ. ಹೀಗಿರುವಾಗ ಕೇವಲ ವೃತ್ತಿಬಾಂಧವರು ರಾಜಕೀಯದ ಕೆಸರು ಎರಚಿಕೊಳ್ಳುವುದರಲ್ಲಿ ಆಶ್ಚರ್ಯವೇನಿದೆ?

Actror Ambareesh
ಜಗ್ಗೇಶ್‌ರ ವರ್ತನೆ ಅಂಬರೀಷ್‌ಗೆ ಬೇಸರ ತಂದಿರುವುದು ನಿಜ. ನಾನು ಏನು ಅಂತ ಜಗ್ಗೇಶ್ ಅವರ ಹೆಂಡತಿ-ಮಕ್ಕಳನ್ನು ಕೇಳಲಿ. ನಟ-ನಟಿಯರನ್ನು ಕಟ್ಟಿಹಾಕಿಕೊಳ್ಳೋಕೆ ನಾನು ಡಾನ್ ಅಲ್ಲ. ಹಾಗೆ ಕಟ್ಟಿಹಾಕಿಕೊಳ್ಳೋಕೂ ಆಗೋಲ್ಲ. ದುಡ್ಡಿನ ಆಸೆಗೆ ಪಕ್ಷ ಬದಲಿಸಿ ಅವರು ಹೀಗೆಲ್ಲಾ ಮಾತಾಡುತ್ತಿದ್ದಾರೆ ಅಂತ ಅಂಬರೀಶ್ ಪ್ರತಿಕ್ರಿಯೆ ನೀಡಿದರು.

ಅಂಬಿ ಮಾತನ್ನು ಗಮನಿಸಿ. ಅದರಲ್ಲಿ ಭಾವುಕ ನೆಲೆಗಟ್ಟಿದೆ. ಜಗ್ಗೇಶ್ ಆಡಿದ ಮಾತು ಅವರ ಅಂತರಾಳದಿಂದ ಬಂದಂಥವೇ ಎಂಬ ಗುಮಾನಿಯೂ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದೆ. ಯಾಕೆಂದರೆ, ಅಂಬರೀಶ್ ಒಳ್ಳೆಯತನವನ್ನು ಜಗ್ಗೇಶ್ ತಮ್ಮ ಅನುಭವದ ಮೂಲಕ ಸಿಕ್ಕಸಿಕ್ಕವರಲ್ಲಿ ಹೇಳಿಕೊಂಡಿದ್ದರು. ಅಂಬರೀಶ್‌ಗೂ ಜಗ್ಗೇಶ್ ಮೇಲೆ ಪ್ರೀತಿ ಇತ್ತು. ಅವನು ಸ್ವಲ್ಪ ಪಾಲಿಶ್ ಆದ್ರೆ ಇನ್ನೂ 'ಸೂಪರ್ ನನ್ಮಗ' ಆಗ್ತಾನೆ ಅಂತ ಅಂಬರೀಶ್ ಹೇಳಿದ್ದುಂಟು. ತಮ್ಮ ಪಾಡಿಗೆ ತಾವು ಸಿನಿಮಾ ಕೆಲಸಗಳನ್ನು ಮಾಡಿಕೊಂಡಿದ್ದ ಇಬ್ಬರಿಗೂ ಮೂಗಿಗೆ ರಾಜಕೀಯದ ತುಪ್ಪ ಹಚ್ಚಿದವರು ಹೀಗೆಲ್ಲಾ ಆಡಿಸುತ್ತಿರಬಹುದೇ?

ಸಿನಿಮಾ ಕ್ಷೇತ್ರದಲ್ಲಿ ಮೊದಲೇ ನಾಯಕತ್ವದ ಕೊರತೆ ಇದೆ. ಈಗ ಎರಡು ಹೃದಯಗಳ ನಡುವೆ ರಾಜಕೀಯ ಬಂದು, ಹೊಸ ವೈಷಮ್ಯ ಉದ್ಭವಿಸಿದೆ. ಇದು ದೊಡ್ಡ ದುರಂತ. ರಾಜಕೀಯದ ಮೊಗಸಾಲೆಯಲ್ಲಿ ಅಡ್ಡಾಡಿ ಅಂಬರೀಶ್ ಆಗಲೀ, ಜಗ್ಗೇಶ್ ಆಗಲೀ ಏನೇನೂ ಸಾಧಿಸಿಲ್ಲ. ಬಣ್ಣ ಅಳಿಸಿಟ್ಟ ಮೇಲೆ ಮುಂದೇನು ಎಂಬ ಪ್ರತಿಷ್ಠೆಗೆ ಬಿದ್ದು ಇಬ್ಬರೂ ರಾಜಕೀಯದ ದಾಳಗಳಾಗಿರುವುದು ಇನ್ನೊಂದು ಸಿನಿಮಾಗೇ ವಸ್ತುವಾದೀತು.


ಗಿಲ್ಲಿ ಚಿತ್ರಕ್ಕೆ ನಾಯಕನಾಗಿ ಜಗ್ಗೇಶ್ ಪುತ್ರರತ್ನ
ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ
ಎದ್ದೇಳು ಮಂಜುನಾಥ ಚಿತ್ರದ ವಿಡಿಯೊ
ಜಗ್ಗೇಶ್ ಸಾಲ ಕೇಳಿದರೆ ನಾನು ಕೊಟ್ಟು ಬಿಡ್ತೀನಾ?
ನಾ ಕಂ‌ಡ ರಾಜಕೀಯ:ನಟ ಶಾಸಕ ಜಗ್ಗೇಶ್ ಪುಸ್ತಕ
ಅಂಬಿ ಮತ್ತು ಜಯಮಾಲಾ ಚುನಾವಣೆಗೆ ಸ್ಪರ್ಧೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada