»   »  ಹೊಡಿಮಗ ಇನ್ನು ಹ್ಯಾಟ್ರಿಕ್ ಹೊಡಿಮಗ!

ಹೊಡಿಮಗ ಇನ್ನು ಹ್ಯಾಟ್ರಿಕ್ ಹೊಡಿಮಗ!

Subscribe to Filmibeat Kannada
Shivarajkumar and Niklet Bird in Hatrick Hodimaga
'ಹೊಡಿಮಗ' ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದಂತೆ ಉದ್ಭವವಾಗಿದ್ದ ವಿವಾದ ಅಂತ್ಯವಾಗಿದ್ದು, ಚಿತ್ರದ ಶೀರ್ಷಿಕೆಯನ್ನು 'ಹ್ಯಾಟ್ರಿಕ್ ಹೊಡಿಮಗ' ಎಂದು ಬದಲಾಯಿಸಲಾಗಿದೆ.

ಹೊಡಿಮಗ ಎಂಬ ಶೀರ್ಷಿಕೆ ಹಿಂಸೆಯನ್ನು ಬಿಂಬಿಸುತ್ತದೆ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸಿಕೊಳ್ಳುವಾಗಲೇ ಏಕೆ ಆಕ್ಷೇಪ ವ್ಯಕ್ತಪಡಿಸಿದ್ದಿಲ್ಲ, ಸರ್ಟಿಫಿಕೇಟ್ ನೀಡುವ ಹಂತದಲ್ಲಿ ವ್ಯಕ್ತಪಡಿಸಿದ್ದೇಕೆ ಎಂದು ಚಿತ್ರದ ನಿರ್ಮಾಪಕ ವಿಎಸ್ ರಾಜಕುಮಾರ್ ಮತ್ತು ನಿರ್ದೇಶಕ ಪಿ ಸತ್ಯ ವಾದ ಮಂಡಿಸಿದ್ದರು.

ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯಿಂದಾಗಿ ವಿವಾದ ಬಗೆಹರಿದಿದೆ. ವಾಣಿಜ್ಯ ಮಂಡಳಿಯ ಪದಾಧಿಕಾರಿಗಳಾದ ಅಧ್ಯಕ್ಷೆ ಜಯಮಾಲಾ, ಖಜಾಂಚಿ ಸಾರಾ ಗೋವಿಂದು, ಕೆಸಿಎನ್ ಚಂದ್ರಶೇಖರ್, ಹೊಡಿಮಗ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರು ಇಂದು ಭೇಟಿ ಮಾಡಿ ವಿವಾದಕ್ಕೆ ಕೊನೆಹಾಡಿದ್ದಾರೆ. ಶೀರ್ಷಿಕೆಗೆ ಒಪ್ಪಿಗೆ ನೀಡದಿದ್ದರೆ ಸೆನ್ಸಾರ್ ಮಂಡಳಿ ಮುಂದೆ ಧರಣಿ ಕೂಡುವುದಾಗಿ ನಿರ್ಮಾಪಕ ಮತ್ತು ನಿರ್ದೇಶಕರು ಈಮೊದಲು ಬೆದರಿಕೆ ಹಾಕಿದ್ದರು.

ಹೊಡಿಮಗ ಎಂಬ ಶೀರ್ಷಿಕೆ ಬದಲಾಗಿ ಹ್ಯಾಟ್ರಿಕ್ ಹೊಡಿಮಗ ಶೀರ್ಷಿಕೆಗೆ ಚಂದ್ರಶೇಖರ್ ಒಪ್ಪಿಗೆ ನೀಡಿದ್ದಾರೆ. ಹೊಡಿಮಗದಂದೆ ಹ್ಯಾಟ್ರಿಕ್ ಹೊಡಿಮಗ ಹಿಂಸೆಯನ್ನು ಧ್ವನಿಸುವುದಿಲ್ಲವಾದ್ದರಿಂದ ತಾತ್ತ್ವಿಕವಾಗಿ ಒಪ್ಪಿಗೆ ನೀಡಿದ್ದಾಗಿ ಹೇಳಿದ್ದಾರೆ. ಆದರೆ, ಒಂದು ನಿಬಂಧನೆಯನ್ನು ಮುಂದಿಟ್ಟಿದ್ದಾರೆ. ಹ್ಯಾಟ್ರಿಕ್ ಅಕ್ಷರ ಚಿಕ್ಕದಾಗಿದ್ದು, ಹೊಡಿಮಗ ಅಕ್ಷರ ದೊಡ್ಡದಾಗಿದ್ದರೆ ಒಪ್ಪಿಗೆ ನೀಡುವುದಿಲ್ಲ ಎಂದು ತಡೆಗೋಡೆ ಒಡ್ಡಿದ್ದರು. ಚಿತ್ರದ ನಿರ್ಮಾಪಕರು ಈ ಕರಾರಿಗೆ ಒಪ್ಪಿದ್ದರಿಂದ 'ಹ್ಯಾಟ್ರಿಕ್ ಹೊಡಿಮಗ' ಬಿಡುಗಡೆ ಇನ್ನು ಸುಗಮವಾಗಲಿದೆ.

ಹೊಡಿಮಗ ಚಿತ್ರದ ಶೀರ್ಷಿಕೆಯನ್ನು 'ಜೋಗಿ' ಚಿತ್ರದ ಹಾಡಿನ ಸಾಲಿನಿಂದ ಆರಿಸಲಾಗಿತ್ತು. ಆಕರ್ಷಣೆಗಾಗಿ ಮಾತ್ರ ಇಡಲಾಗಿದೆ, ಶೀರ್ಷಿಕೆಗೂ ಚಿತ್ರದ ಕಥಾವಸ್ತುವಿಗೂ ಸಂಬಂಧವಿಲ್ಲ ಎಂದು ಸಮಜಾಯಿಷಿ ನೀಡಲಾಗಿತ್ತು. ಅಂದಹಾಗೆ, ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಪ್ರಮುಖ ಭೂಮಿಕೆ ವಹಿಸಿದ್ದಾರೆ. ಅವರ ಜೊತೆಯಾಗಿ ನಿಕ್ಲೆಟ್ ಬರ್ಡ್ ಹೊಸ ನಾಯಕಿಯನ್ನು ಶಿವರಾಜ್ ಆರಿಸಿ ತಂದಿದ್ದಾರೆ.

ಚಿತ್ರದ ನಾಯಕ ಶಿವರಾಜ್ ಕುಮಾರ್ 'ಹ್ಯಾಟ್ರಿಕ್' ಹೀರೋ ಅನ್ನುವುದೇನೋ ಸರಿ. ಆದರೆ, ಚಿತ್ರ ಹ್ಯಾಟ್ರಿಕ್ ಹೊಡಿಮಗ ಏನನ್ನು ಧ್ವನಿಸುತ್ತದೆ? ನಾಯಕ ಯಾವುದರಲ್ಲಿ ಹ್ಯಾಟ್ರಿಕ್ ಹೊಡಿತಾನೆ ಚಿತ್ರ ಬಿಡುಗಡೆಯಾದ ನಂತರ ನೀವೇ ನೋಡಿ.

ಪೂರಕ ಓದಿಗೆ
ಸೆನ್ಸಾರ್ ಮಂಡಳಿಯೊಂದಿಗೆ 'ಹೊಡಿಮಗ' ಗುದ್ದಾಟ
'ಹೊಡಿಮಗ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಡೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada