»   » ಸೆನ್ಸಾರ್ ಸಮಸ್ಯೆಯಲ್ಲಿ ಅಗ್ನಿ ಶ್ರೀಧರ್ 'ತಮಸ್ಸು'

ಸೆನ್ಸಾರ್ ಸಮಸ್ಯೆಯಲ್ಲಿ ಅಗ್ನಿ ಶ್ರೀಧರ್ 'ತಮಸ್ಸು'

Posted By:
Subscribe to Filmibeat Kannada

ಅಗ್ನಿ ಶ್ರೀಧರ್ ನಿರ್ದೇಶನದ ಚೊಚ್ಚಲ 'ತಮಸ್ಸು' ಚಿತ್ರ ಸೆನ್ಸಾರ್ ಸಮಸ್ಯೆಗೆ ಸಿಲುಕಿದೆ. "ಚಿತ್ರದಲ್ಲಿ ಹಿಂದು ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆ ತರುವ ಅವಹೇಳನಕಾರಿ ದೃಶ್ಯಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಂಭಾಷಣೆಗಳು ಚಿತ್ರದಲ್ಲಿವೆ" ಎಂದು ಸೆನ್ಸಾರ್ ಮಂಡಳಿ ಹೇಳಿದೆ.

'ಎ' ಸರ್ಟಿಫಿಕೇಟ್ ನೊಂದಿಗೆ 'ತಮಸ್ಸು' ಚಿತ್ರದ ಒಂದಷ್ಟು ಭಾಗಗಳಿಗೆ ಕತ್ತರಿ ಹಾಕಬೇಕು ಎಂದು ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ ನಾಗರಾಜ್ ಸೂಚಿಸಿದ್ದಾರೆ. ಸೆನ್ಸಾರ್ ಮಂಡಳಿಯ ಈ ವರ್ತನೆಗೆ ಚಿತ್ರದ ನಿರ್ದೇಶಕ ಅಗ್ನಿ ಶ್ರೀಧರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಚಿತ್ರದಲ್ಲಿ ಎಲ್ಲೂ ಹಿಂದು ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆಯಾಗುವಂತೆ ಸಂಭಾಷಣೆಗಳನ್ನು ಬಳಸಿಲ್ಲ. ಚಿತ್ರಕತೆಗೆ ಪೂರಕವಾದ ದೃಶ್ಯಗಳನ್ನು ಸೇರಿಸಿದ್ದೇವೆ. ಚಿತ್ರದಲ್ಲಿ ಬಳಸಿರುವ ಪದಗಳನ್ನು ಮಾತ್ರ ಸೆನ್ಸಾರ್ ಮಂಡಳಿ ಗಣನೆಗೆ ತೆಗೆದುಕೊಂಡಿದೆ. ಈ ಕ್ರಮ ಸರಿಯಲ್ಲ. ಚಿತ್ರವನ್ನು ಮರುಪರಿಶೀಲನೆ ನಡೆಸಬೇಕು. ಅಲ್ಲೂ ನಮಗೆ ನ್ಯಾಯ ಸಿಗಲಿಲ್ಲ ಅಂದ್ರೆ ದೆಹಲಿಯ ಟ್ರಿಬ್ಯೂನಲ್ ಮೆಟ್ಟಿಲೇರುವುದಾಗಿ " ಅಗ್ನಿ ಶ್ರೀಧರ್ ತಿಳಿಸಿದ್ದಾರೆ.

ಸೆನ್ಸಾರ್ ಮಂಡಳಿ ಚಿತ್ರವನ್ನು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎ ಆರ್ ಇನ್ ಫ್ಯಾಂಟ್ ಅವರಿಗೆ ತೋರಿಸುವ ಅವಶ್ಯಕತೆ ಏನಿತ್ತು ಎಂದು 'ತಮಸ್ಸು' ಚಿತ್ರದ ನಿರ್ಮಾಪಕ ಎಂ ಎಸ್ ರವೀಂದ್ರ ಪ್ರತಿಕ್ರಿಯಿಸಿದ್ದಾರೆ.ಆದರೆ ಚಿತ್ರದಲ್ಲಿ ಸಾಮಾಜಿಕ ಹಿತಾಸಕ್ತಿಗೆ ಮಾರಕವಾಗುವ ಅಂಶಗಳಿವೆ ಎಂದರೆ ಅದಕ್ಕೆ ಸಂಬಂಧಪಟ್ಟ ಯಾರನ್ನು ಬೇಕಾದರೂ ಚಿತ್ರ ವೀಕ್ಷಣೆಗೆ ಆಹ್ವಾನಿಸಬಹುದು ಎಂದು ಸೆನ್ಸಾರ್ ಹೇಳಿದೆ.

"ಸಂಬಂಧಪಟ್ಟ ಅಧಿಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆಯಬಹುದು. ಹಾಗಾಗಿ ಹೆಚ್ಚುವರಿ ಡಿಜಿಪಿ ಇನ್ ಫ್ಯಾಂಟ್ ಅವರನ್ನು ಚಿತ್ರ ವೀಕ್ಷಣೆಗೆ ಆಹ್ವಾನಿಸಿದ್ದೆವು. ನಮಗೆ ನಮ್ಮದೇ ಆದ ನಿಯಮಗಳಿವೆ. ಅವನ್ನು ಪಾಲಿಸುತ್ತಿದ್ದೇವೆ ಅಷ್ಟೆ. ಒತ್ತಡಕ್ಕೆ ಮಣಿದು ಪ್ರಮಾಣ ಪತ್ರ ಕೊಟ್ಟರೆ ಸಾರ್ವಜನಿಕ ಹೇಳಿಕೆಯನ್ನು ಎದುರಿಸಬೇಕಾಗುತ್ತದೆ. ಸೈನೈಡ್, ಪೊಲೀಸ್ ಸ್ಟೋರಿ ಚಿತ್ರಗಳಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು" ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ನಾಗರಾಜ್ ಹೇಳಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada