»   » ಪ್ರೇಮಕವಿ ಕಲ್ಯಾಣ್ ,ನೀವು ಮಾಡಿದ್ದು ಸರೀನಾ?

ಪ್ರೇಮಕವಿ ಕಲ್ಯಾಣ್ ,ನೀವು ಮಾಡಿದ್ದು ಸರೀನಾ?

By: * ಮಲೆನಾಡಿಗ
Subscribe to Filmibeat Kannada
Music Director K Kalyan
ಈ ಸುಂದರ ಬೆಳದಿಂಗಳ.. ಈ ತಂಪಿನ ಅಂಗಳದಲ್ಲಿ'.." ವಾಹ್ ಎಂಥಾ ಸಾಹಿತ್ಯ ಅಮೃತವರ್ಷಿಣಿ ಚಿತ್ರದಲ್ಲಿನ ಹಾಡುಗಳಿಗೆ ಮೆರಗು ನೀಡಿದ್ದು, ಅಂದು ಚಿತ್ರಸಾಹಿತಿ ಕೆ. ಕಲ್ಯಾಣ್ ನೀಡಿದ ಸಾಹಿತ್ಯ. ದೇವಾ ಅವರು ಸುಂದರ ಪದಗಳಿಗೆ ಉತ್ತಮ ರಾಗ ಸಂಯೋಜನೆ ನೀಡಿದ್ದರೂ ಕೂಡ. ಆದರೆ, ಮುಂದೆ ಕಲ್ಯಾಣ್ ಸಾಹಿತಿಯಿಂದ ಸಂಗೀತ ನಿರ್ದೇಶಕರಾಗಿ ಭಡ್ತಿ ಪಡೆದರಾದರೂ, ಜನ ಅವರನ್ನು ಇಂದಿಗೂ ಇಷ್ಟಪಡುವುದು ಚಿತ್ರಸಾಹಿತಿಯಾಗಿಯೇ. ಇಂದು ಕಲ್ಯಾಣ್ ಸಂಗೀತ ಸಂಯೋಜನೆಯ ಚಿತ್ರ 'ಪ್ರೀತಿ ನೀ ಶಾಶ್ವತನಾ' ತೆರೆ ಕಂಡಿದೆ. ಅದರೆ, ಅವರ ರಾಗಗಳನ್ನು ಹಾಡಿ ಕನ್ನಡಿಗರಿಗೆ ಉಣಬಡಿಸಿದ ಗಾನ ಗಂಧರ್ವ ಕಿನ್ನರ ಕಿನ್ನರಿಯ ಪಟ್ಟಿಯಲ್ಲಿ ಯಕಶ್ಚಿತ್ ಒಬ್ಬ ಕನ್ನಡ ಮೂಲದ ಹಾಡುಗಾರರಿಲ್ಲದಿರುವುದು ದುರಂತವೇ ಸೈ.

ಪ್ರೇಮಕವಿ ಎಂದೇ ಖ್ಯಾತಿ ಗಳಿಸಿರುವ ಕೆ .ಕಲ್ಯಾಣ್ ಯಾರದೋ ಶಿಫಾರಸ್ಸಿನಿಂದ ಚಿತ್ರರಂಗದಲ್ಲಿ ಉಳಿದು ಬೆಳೆದಿಲ್ಲ. ಸ್ವಂತ ಪ್ರತಿಭೆಯಿಂದ ಸ್ವಚ್ಛ ಸಾಹಿತ್ಯ ನೀಡಿ, ಚಿತ್ರರಸಿಕರ ಮನ ತಣಿಸಿದ ಚರಿತ್ರೆ ಉಳ್ಳವರು. ಆದರೆ, ಈ ಚಿತ್ರದಲ್ಲಿ ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ. ಬಹುಶಃ ಹೊಸ ತಂಡ ಚಿತ್ರನಿರ್ಮಾಣ ನೀಡಿರುವ ಹಿನ್ನೆಲೆಯಲ್ಲಿ ಯಾವುದಕ್ಕೂ ಸೇಫ್ ಆಗೋಣ ಎಂದು ಕಲ್ಯಾಣ್ ಹೀಗೆ ಮಾಡಿರಬಹುದೇ? ಕ್ಷಮಿಸಿ, ಕಲ್ಯಾಣ್ ಅವರೇ ನಿಮ್ಮ ಗ್ರಹಿಕೆ ಏನೇ ಇದ್ದರೂ ಕನ್ನಡ ಗಾಯಕ ಗಾಯಕಿಯರಿಗೆ ಮಾಡಿದ ದೊಡ್ಡ ಅಪಮಾನವಿದು. ಸ್ಟಾರ್ ಗಾಯಕ, ಸಾಹಿತಿ, ಸಂಗೀತ ನಿರ್ದೇಶಕ ಇದ್ದ ಮಾತ್ರಕ್ಕೆ ಸಿಡಿ/ ಕ್ಯಾಸೆಟ್ ಹಿಟ್ ಆಗುವುದಿಲ್ಲ. ನೆನಪಿಡಿ, ಮನೋಮೂರ್ತಿ, ಸೋನು ನಿಗಮ್, ಜಯಂತ್ ಕಾಯ್ಕಿಣಿ ಸಂಗಮದಲ್ಲಿ ಬಂದ 'ನೀನೆ ಬರೀ ನೀನೆ' ಅಲ್ಬಂ ನೆಲಕಚ್ಚಿದ್ದು ಕಣ್ಮುಂದೆ ಇದೆ.

ಗಾಯದ ಮೇಲೆ ಉಪ್ಪು ಸುರಿದಂತೆ 'ಪ್ರೀತಿ ನೀ ಶಾಶ್ವತನಾ' ಚಿತ್ರದ ಪ್ರಚಾರದ ವಿಷಯಕ್ಕೆ ಬಂದರೆ, "ಕನ್ನಡ ಚಿತ್ರರಂಗದಲ್ಲೊಂದು ವಿಶೇಷ ದಾಖಲೆ ಈ ಚಿತ್ರದಲ್ಲಿ ಮಹಾನ್ ಗಾಯಕರ ಸಮ್ಮಿಲನ" ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ನಿರಾಭಿಮಾನಿಗಳಾದ ಕನ್ನಡಿಗರನ್ನು ಸ್ಚಲ್ಪಮಟ್ಟಿಗೆ ಕೆರಳಿಸುತ್ತಿದೆ. ಜೇಸುದಾಸ್, ಎಸ್ ಪಿ ಬಾಲಸುಬ್ರಮಣ್ಯ(ಕನ್ನಡಿಗರ ದತ್ತು ಪುತ್ರ ಎಂದು ಕೊಳ್ಳಿ) ಸೋನು ನಿಗಂ, ಅಭಿಜಿತ್, ಉದಿತ್ ನಾರಾಯಣ್, ಕುನಾಲ್ ಗಾಂಜಾವಾಲಾ, ಶಾನ್, ಚಿತ್ರಾ, ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್ ಹೀಗೆ ಪರಭಾಷಾ ಗಾಯಕರ ಪಟ್ಟಿ ಬೆಳೆಯುತ್ತದೆ.

ಮೇಲ್ಕಂಡ ಗಾಯಕರ ಗಾಯನದ ಬಗ್ಗೆ ನಮ್ಮ ಅಪಸ್ವರವಿಲ್ಲ. ಒಂದು ಅಲ್ಬಂನಲ್ಲಿ ಒಂದೋ ಎರಡೋ ಪರಭಾಷೆಯವರು ಹಾಡಿದರೆ ಓಕೆ. ನಿಮಗೆ ನಿಮ್ಮದೇ ಆದ ಆಯ್ಕೆ ಇರುತ್ತದೆ. ಆದರೆ , ಒಬ್ಬ ಕನ್ನಡ ಗಾಯಕ/ಕಿಯ ಗಾಯನ ನಿಮಗೆ ರುಚಿಸಿಲ್ಲ ಎಂದರೆ ಏನರ್ಥ. ಹೋಗಲಿ, ಪರಭಾಷಾ ಗಾಯಕ/ಕಿಯರು ಏನಾದರೂ ಬಿಟ್ಟಿಯಾಗಿ ಹಾಡುತ್ತಾರಾ? ಸೋನು ನಿಗಂಗೆ ಏನಿಲ್ಲವೆಂದರೂ 2.5 ಲಕ್ಷ ಇದ್ದರೆ, ಶ್ರೇಯಾಗೆ ಕನಿಷ್ಠವೆಂದರೂ 50 ಸಾವಿರ, ಜೇಸುದಾಸ್ ಗೆ 40 ಸಾವಿರ..ಹೊಸ ನಿರ್ಮಾಪಕರನ್ನು ತಿಮ್ಮಪ್ಪನೆ ಕಾಪಾಡಬೇಕು. ಇಷ್ಟೆಲ್ಲಾ ಜಗತ್ ಪ್ರಸಿದ್ಧ ಗಾಯಕ/ಕಿಯರ ಗಾನಸುಧೆಯ ಆಲ್ಬಂ ಆದರೂ ಇದನ್ನು ಕೊಂಡು ಕೊಳ್ಳಲು ಯಾವುದೇ ಕ್ಯಾಸೆಟ್ ಕಂಪೆನಿ ಮುಂದು ಬರದಿದ್ದದ್ದು ವಿಪರ್ಯಾಸ. ಕೊನೆಗೆ ನಿರ್ಮಾಪಕ ಆರ್ ವೆಂಕಟೇಶ್ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಆಡಿಯೋ ಕ್ಯಾಸೆಟ್ ಹಂಚಿಕೆ ಮಾಡಿದ್ದಾರೆ.

ಅಯ್ಯೋ ಇದೆಲ್ಲಾ ಇದ್ದದ್ದೇ ಕನ್ನಡ ಗಾಯಕರು ರಿಯಾಲಿಟಿ ಷೋಗಳಿಗೆ ಲಾಯಕ್ಕು. ಎಂದೆನಿಸಿದರೆ..ತಲೆ ಕೆಡಿಸಿಕೊಳ್ಳಬೇಡಿ, ಚಿತ್ರದ ಹಾಡುಗಳನ್ನು ಕೇಳಿ, ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಟಿವಿಯಲ್ಲಿ ಬರಲಿ ಎಂದು ಕಾಯಬೇಡಿ. ಕೆ. ಕಲ್ಯಾಣ್ ಮತ್ತೊಮ್ಮೆ ಇಂಥಾ ಪ್ರಮಾದ ಎಸಗದಿರಲಿ ಎಂಬ ಹಾರೈಕೆಯೊಂದಿಗೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada