»   »  ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ

ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ

Posted By: * ಪ್ರಸಾದ ನಾಯಿಕ
Subscribe to Filmibeat Kannada
Hodimaga retains old title on posters
ಇದೇ ವಾರ ಬಿಡುಗಡೆಗೆ ತಯಾರಾಗಿರುವ 'ಹೊಡಿಮಗ' ಚಿತ್ರ 'ಹ್ಯಾಟ್ರಿಕ್ ಹೊಡಿಮಗ' ಶೀರ್ಷಿಕೆಯನ್ನು ಉಳಿಸಿಕೊಳ್ಳುವ ಬದಲು 'ಹೊಡಿಮಗ' ಎಂಬ ಶೀರ್ಷಿಕೆಯನ್ನೇ ಉಳಿಸಿಕೊಂಡಿದ್ದು, ಕರ್ನಾಟಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಮತ್ತೊಮ್ಮೆ ಸೆಡ್ಡು ಹೊಡೆದಿದೆ. ಚಂದ್ರಶೇಖರ್ ಅವರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಮತ್ತೊಮ್ಮೆ ಸಾಬೀತಾಗಿದೆ.

ಚಿತ್ರದ ನಿರ್ಮಾಪಕ ರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಂದ್ರಶೇಖರ್ ಅವರ ನಡುವೆ ನಡೆದ ಒಪ್ಪಂದದ ಪ್ರಕಾರ ಚಿತ್ರದ ಹೆಸರು 'ಹ್ಯಾಟ್ರಿಕ್ ಹೊಡಿಮಗ' ಎಂಬುದಾಗಬೇಕಿತ್ತು. ನಿರ್ಮಾಪಕರು ಮತ್ತು ಚಿತ್ರದ ನಿರ್ದೇಶಕರಾದ ಪಿ ಸತ್ಯ ಈ ಬದಲಾವಣೆಗೆ ಒಪ್ಪಿಕೊಂಡ ಮೇಲೆಯೇ ಚಿತ್ರ ಬಿಡುಗಡೆಗೆ ಚಂದ್ರಶೇಖರ್ ಗ್ರೀನ್ ಸಿಗ್ನಲ್ ನೀಡಿದ್ದು. ಚಂದ್ರು ಅವರು ಇಟ್ಟಿದ್ದ ಮತ್ತೊಂದು ನಿಬಂಧನೆಯೆಂದರೆ, ಹ್ಯಾಟ್ರಿಕ್ ಮತ್ತು ಹೊಡಿಮಗ ಎರಡೂ ಪದಗಳು ಒಂದೇ ಗಾತ್ರದ್ದಾಗಿರಬೇಕು.

ಆದರೆ, ಆದದ್ದಾಗಿರುವುದಾದರೂ ಏನು? ಬೆಂಗಳೂರಿನ ತುಂಬ ಪೋಸ್ಟರುಗಳಲ್ಲಿ 'ಹ್ಯಾಟ್ರಿಕ್ ಹೊಡಿಮಗ' ಶೀರ್ಷಿಕೆ ಬದಲು Hatrck Hero ಹೊಡಿಮಗ ಎಂಬ ಶೀರ್ಷಿಕೆ ರಾಜಾಜಿಸುತ್ತಿದೆ. ನಿರ್ಮಾಪಕರು ಒಪ್ಪಿಕೊಂಡಿರುವ ಶೀರ್ಷಿಕೆ ಇಲ್ಲವೇ ಇಲ್ಲ. ಹ್ಯಾಟ್ರಿಕ್ ಹೀರೋ ಎಂಬ ಅಕ್ಷರಗಳನ್ನು ಕೂಡ ಅತೀ ಸಣ್ಣ ಅಕ್ಷರಗಳಲ್ಲಿ ನೀಡಲಾಗಿದೆ. ಕರಾರಿನ ಪ್ರಕಾರ ಎರಡೂ ಪದಗಳು ಒಂದೇ ಗಾತ್ರದಲ್ಲಿರಬೇಕಿತ್ತು.

ಈಗಿನ ಚಿತ್ರಗಳಲ್ಲಿ ಪ್ರತಿ ಶೀರ್ಷಿಕೆಯ ಜೊತೆ ಮೇಲ್ಬರಹ ಅಥವಾ ಅಡಿಬರಹ ಬರೆಯುವುದು ಫ್ಯಾಷನ್ ಆಗಿಹೋಗಿದೆ. ಗಣೇಶ್ ಇನ್, ದರ್ಶನ್ ಇನ್, ಪ್ರೇಮ್ ಇನ್ ಎಂಬಂಥ ಬರಹಗಳಿರುವುದು ಸರ್ವೇಸಾಮಾನ್ಯ. ಅದೇ ರೀತಿ ಹೊಡಿಮಗ ಶೀರ್ಷಿಕೆಯಲ್ಲಿಯೂ Hatrick Hero ಎಂಬುದಿರುವುದು ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಇರುವುದು ಸೂಚಿಸುತ್ತದೆಯೇ ಹೊರತು, ಅದು ಚಿತ್ರದ ಶೀರ್ಷಿಕೆಯಲ್ಲ!

'ಹೊಡಿಮಗ' ಎಂಬ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ರಾಜಕುಮಾರ್ ಪಟ್ಟುಹಿಡಿದಿದ್ದರು. ನಂತರ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯಿಂದ ಶೀರ್ಷಿಕೆ ಬದಲಾಯಿಸಲು ಒಪ್ಪಿಕೊಂಡಿದ್ದರಾದರೂ ಪೋಸ್ಟರುಗಳಲ್ಲಿ ಹಳೆಯ ಹೆಸರನ್ನೇ ಇಟ್ಟು ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ಈ ಕುರಿತು ದಟ್ಸ್ ಕನ್ನಡ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ, "ಇದು ನನ್ನ ಗಮನಕ್ಕೂ ಬಂದಿದೆ, ಆದರೆ, ಚಿತ್ರಕ್ಕೆ ಈಗಾಗಲೇ ಸರ್ಟಿಫಿಕೇಟ್ ನೀಡಲಾಗಿದೆ. ಪೋಸ್ಟರ್ ಗಳನ್ನು ಬದಲಾಯಿಸಲು ಚಿತ್ರದ ನಿರ್ಮಾಪಕರಿಗೆ ಇನ್ನೊಂದು ಚಾನ್ಸ್ ನೀಡಲಾಗುವುದು" ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದರು.

ಪೋಸ್ಟರುಗಳಲ್ಲಿ 'Can you face him?' ಎಂಬ ಇಂಗ್ಲಿಷ್ ಒಕ್ಕಣಿಕೆ ಕೂಡ ಮುಖಕ್ಕೆ ಹೊಡೆದ ಹಾಗೆ ಕಾಣಿಸಿಕೊಂಡಿದೆ. ಈ ಒಕ್ಕಣಿಕೆ ಸೆನ್ಸಾರ್ ಮಂಡಳಿಯನ್ನು ಉದ್ದೇಶಿಸಿ ಹೇಳಿರಬಹುದಾ? ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಈ ಬದಲಾವಣೆಗೆ ಏನು ಹೇಳುತ್ತಾರೆ?

ಪೂರಕ ಓದಿಗೆ
ಹೊಡಿಮಗ ಇನ್ನು ಹ್ಯಾಟ್ರಿಕ್ ಹೊಡಿಮಗ!
ಚಿತ್ರವಿಮರ್ಶೆ : ರುಂಡಗಳ ಚೆಂಡಾಟದಲ್ಲಿ ಹ್ಯಾಟ್ರಿಕ್ ಹೊಡೆದ ಮಗ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada