»   »  ಓಂ ನಮಃ ಚಿತ್ರ ನಿರ್ಮಾಪಕನಿಗೆ ಚೂರಿ ಇರಿತ

ಓಂ ನಮಃ ಚಿತ್ರ ನಿರ್ಮಾಪಕನಿಗೆ ಚೂರಿ ಇರಿತ

Subscribe to Filmibeat Kannada

'ಓಂ ನಮಃ' ಕನ್ನಡ ಚಿತ್ರದ ಸಹ ನಿರ್ಮಾಪಕ ರಾಜು(40) ಅವರನ್ನು ಅಪಹರಿಸಿ ನಂತರ ಚೂರಿಯಿಂದ ಇರಿದು ಹಲ್ಲೆ ಮಾಡಲಾಗಿದೆ. ಈ ಸಂಬಂಧ ನಿರ್ಮಾಪಕ ರಾಜು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಹ ನಿರ್ಮಾಪಕರೊಂದಿಗಿನ ಹಣಕಾಸು ವ್ಯವಹಾರದಲ್ಲಿನ ಮನಸ್ತಾಪವೇ ಈ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ .

ಮೆಕಾನಿಕ್ ಆಗಿದ್ದ ರಾಜು ಅವರು ಓಂ ನಮಃ ಚಿತ್ರಕ್ಕಾಗಿ ರು.10 ಲಕ್ಷ ಬಂಡವಾಳ ಹೂಡಿದ್ದರು. ನಂತರ ಅವರು ರು.10 ಲಕ್ಷವನ್ನು ಹಿಂತಿರುಗಿಸಲು ಕೇಳಿದ್ದಾರೆ. ಈ ಸಂಬಂಧ ಚಿತ್ರದ ಸಹ ನಿರ್ಮಾಪಕರ ನಡುವೆ ಮನಸ್ತಾಪ ಬಂದಿದೆ. ಮುನಿವೀರಪ್ಪ, ಶಾಂತಕುಮಾರ್, ಉಮೇಶ್ ಅವರೊಂದಿಗೆ ಸೇರಿ ಎಂಟಿಜಿ ಪ್ರೊಡಕ್ಷನ್ ಲಾಂಛನದಲ್ಲಿ ರಾಜು ಅವರು 'ಓಂ ನಮಃ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಹಕಾರ ನಗರದಲ್ಲಿ ರಾಜು ಟಿವಿ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದಾರೆ.

ಓಂ ನಮಃ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಸಿನಿಮಾ ಬ್ಯಾನರ್ ಗಳಲ್ಲಿ ರಾಜು ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಕುಪಿತಗೊಂಡ ರಾಜು ತನ್ನ ಪಾಲಿನ ರು.10 ಲಕ್ಷ ಹಿಂತಿರುಗಿಸುವಂತೆ ಮುನಿವೀರಪ್ಪ, ಉಮೇಶ್ ಅವರ ಬಳಿ ಕೇಳಿಕೊಂಡಿದ್ದ. ಈ ಸಂಬಂಧ ಇವರ ನಡುವೆ ಜಗಳ ಉಂಟಾಗಿ ನಂತರ ಸಂಧಾನ ಮಾಡಿಕೊಂಡು ರಾಜುಗೆ ರು.10 ಲಕ್ಷದ ಚೆಕ್ ನೀಡಲಾಗಿತ್ತು.

ನಂತರ ಚೆಕ್ ಬೌನ್ಸ್ ಆದ ಕಾರಣ ಆಕ್ರೋಶಗೊಂಡ ರಾಜು ಸಹ ನಿರ್ಮಾಪಕರಾದ ಮುನಿವೀರಪ್ಪ, ಶಾಂತಕುಮಾರ್ ಬಳಿ ಜಗಳ ತೆಗೆದ. ಈ ಸಂಬಂಧ ಸಹ ನಿರ್ಮಾಪಕರಾದ ಮುನಿವೀರಪ್ಪ, ಶಾಂತಕುಮಾರ್, ಉಮೇಶ್ ತಮ್ಮನ್ನು ಮಾರುತಿ ವ್ಯಾನಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮನ್ನು ದೊಡ್ಡಬಳ್ಳಾಪುರದವರೆಗೆ ಕರೆದೊಯ್ದು ಚೂರಿಯಿಂದ ಇರಿದು ಲೆಟರ್ ಹೆಡ್ ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ರಾಜು ಆಪಾದಿಸಿದ್ದಾರೆ. ಇತ್ತೀಚೆಗಷ್ಟೇ ಓಂ ನಮಃ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಂಡಿತ್ತು. ವಿಜಯೇಂದ್ರನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ರಾಜು ಅವರನ್ನು ಮಧ್ಯರಾತ್ರಿ 2ರವರೆಗೂ ಸುತ್ತಾಡಿಸುವಾಗ ಮೂತ್ರದ ನೆಪವೊಡ್ಡಿ ತಪ್ಪಿಸಿಕೊಂಡು ಬಂದಿದ್ದಾರೆ. ನಂತರ ಯಲಹಂಕ ಉಪನಗರ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಪೊಲೀಸರೊಂದಿಗೆ ಅವರು ಸುರಕ್ಷಿತವಾಗಿ ಹಿಂತಿರುಗಿದ್ದಾರೆ ಎಂದು ಡಿಸಿಪಿ ಬಸವರಾಜ ಮಾಲಗತ್ತಿ ವಿವರ ನೀಡಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada