»   » ಅಗ್ನಿ ಶ್ರೀಧರ್ 'ತಮಸ್ಸು' ಚಿತ್ರಕ್ಕೆ ಮತ್ತೊಂದು ವಿಘ್ನ

ಅಗ್ನಿ ಶ್ರೀಧರ್ 'ತಮಸ್ಸು' ಚಿತ್ರಕ್ಕೆ ಮತ್ತೊಂದು ವಿಘ್ನ

Posted By:
Subscribe to Filmibeat Kannada

ಪ್ರೇಕ್ಷಕರು ಕಾತುರ, ಕುತೂಹಲದಿಂದನಿರೀಕ್ಷಿಸುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ತಮಸ್ಸು' ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಹುಬ್ಬಳ್ಳಿ ಮತ್ತು ಮೈಸೂರಿನ ಚಿತ್ರ ಪ್ರದರ್ಶಕರು ಹೊಸ ಕ್ಯಾತೆ ತೆಗೆದಿದ್ದು ಪರಭಾಷಾ ಚಿತ್ರಗಳಂತೆ 'ತಮಸ್ಸು' ಚಿತ್ರವನ್ನು ಎರಡು ವಾರಗಳ ಬಳಿಕ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ. ಹಾಗಾಗಿ ಈ ಕೇಂದ್ರಗಳಲ್ಲಿ 'ತಮಸ್ಸು' ಚಿತ್ರ ಬಿಡುಗಡೆ ಅನುಮಾನಾಸ್ಪದವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಾರ ಪರಭಾಷಾ ಚಿತ್ರವೊಂದು ರಾಜ್ಯದಲ್ಲಿ ಎರಡು ವಾರಗಳ ಬಳಿಕ ತೆರೆಕಾಣಬೇಕು ಎಂಬ ನಿಯಮವಿದೆ. ಇದೇ ನಿಯಮವನ್ನು ಕನ್ನಡ ಸೇರಿದಂತೆ ಎಲ್ಲಾ ಚಿತ್ರಗಳಿಗೂ ಅನ್ವಯವಾಗುವಂತೆ ಮಾಡಿ. 'ತಮಸ್ಸು' ಚಿತ್ರವನ್ನು ಹುಬ್ಬಳ್ಳಿ, ಮೈಸೂರು ಕೇಂದ್ರಗಳಲ್ಲಿ ಎರಡು ವಾರಗಳ ಬಳಿಕ ಬಿಡುಗಡೆ ಮಾಡುವಂತೆ ಹೊಸ ತಕರಾರು ತೆಗೆದಿದ್ದಾರೆ.

ಹುಬ್ಬಳ್ಳಿ, ಮೈಸೂರು ಚಿತ್ರ ಪ್ರದರ್ಶಕರ ಈ ತಕರಾರಿನಿಂದ 'ತಮಸ್ಸು' ಚಿತ್ರ ಹೊಸ ಸಮಸ್ಯೆಗೆ ನಾಂದಿ ಹಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ದೇಶಕ ಅಗ್ನಿ ಶ್ರೀಧರ್, ಕನ್ನಡ ಚಿತ್ರಗಳಿಗೆ ಕನ್ನಡಿಗರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಶತ್ರುಗಳು ಹೊರಗಿಲ್ಲ ಒಳಗೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಮತ್ತು ಮೈಸೂರಿನ ಚಿತ್ರ ವಿತರಕರು ಕನ್ನಡಿಗರಲ್ಲದೆ ಇರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಈ ಸಮಸ್ಯೆ ಈಗ ಫಿಲಂ ಚೇಂಬರ್ ಮುಂದೆ ಬಂದಿದೆ. ಫಿಲಂ ಚೇಂಬರ್ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಏನು ತೀರ್ಪು ನೀಡಲಿದ್ದಾರೋ ಕಾದು ನೋಡಬೇಕಾಗಿದೆ. ತಮಸ್ಸು ಚಿತ್ರ ಇದೇ ಶುಕ್ರವಾರ(ಜೂ.11) ಬಿಡುಗಡೆಯಾಗುತ್ತಿದೆ.

'ಆ ದಿನಗಳು' ಎಂಬ ಯಶಸ್ವಿ ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಪತ್ರಕರ್ತ ಅಗ್ನಿಶ್ರೀಧರ್ 'ತಮಸ್ಸು' ಚಿತ್ರದ ಬಗ್ಗೆ ಇಡೀ ಚಿತ್ರೋದ್ಯಮ ಆಸಕ್ತಿಯಿಂದ ಎದುರುನೋಡುತ್ತಿದೆ. ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನಾಗೇಂದ್ರ ಅರಸ್ ಸಂಕಲನವಿದೆ. ಡಿಫರೆಂಟ್ ಡ್ಯಾನಿ ಸಾಹಸ, ಶಶಿಧರ್ ಅಡಪ ಕಲಾ ನಿರ್ದೇಶನ ಹಾಗೂ ಮಧುಗಿರಿ ಪ್ರಕಾಶ್ ಅವರ ನಿರ್ಮಾಣ ನಿರ್ವಹಣೆ 'ತಮಸ್ಸು ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada