»   »  ಪ್ರೇಮ್‌ಕಹಾನಿ ಸೋಲಿಗೆ ಬೇಜಾರಿಲ್ಲ: ಅಜಯ್

ಪ್ರೇಮ್‌ಕಹಾನಿ ಸೋಲಿಗೆ ಬೇಜಾರಿಲ್ಲ: ಅಜಯ್

Posted By: *ಜಯಂತಿ
Subscribe to Filmibeat Kannada

ಪ್ರೇಮ್‌ಕಹಾನಿ ಸೋತಿದ್ದಕ್ಕೆ ನನಗೇನೂ ಬೇಸರವಿಲ್ಲ! ಅಜಯ್ ತಣ್ಣಗೆ ಹೇಳಿದರು. ಏನಪ್ಪಾ ಇದು, ಚಿತ್ರದ ನಿರ್ದೇಶಕ ಚಂದ್ರು ಕಹಾನಿ ಸೂಪರ್ ಹಿಟ್ ಎಂದು ಕ್ಯಾಮೆರಾ ಕಂಡ ಕಡೆಯಲ್ಲೆಲ್ಲ ಆಣೆ ಮಾಡಿ ಹೇಳುತ್ತಿರುವಾಗ ನಾಯಕ ನಟನ ರಾಗ ಬೇರೆಯೇ ಇದೆಯಲ್ಲ ಎಂದು ಪತ್ರಕರ್ತರಿಗೆ ಆಶ್ಚರ್ಯ. ಹಾಂ, ಅಜಯ್ ಮಾತನಾಡುತ್ತಿದ್ದುದು ಕೃಷ್ಣನ್ ಲವ್ ಸ್ಟೋರಿ ಸುದ್ದಿಗೋಷ್ಠಿಯಲ್ಲಿ.

ಅಜಯ್ ಮತ್ತೆ ಹೇಳಿದರು; ಪ್ರೇಮ್‌ಕಹಾನಿ ಸೋತಿದ್ದಕ್ಕೆ ನನಗೇನೂ ಬೇಸರವಿಲ್ಲ! ನಾನೊಬ್ಬ ಕಲಾವಿದ ಮಾತ್ರ. ನಿರ್ದೇಶಕರು ನನ್ನಿಂದ ಏನನ್ನು ಬಯಸಿದ್ದರೋ ಅದೆಲ್ಲ ಪೂರೈಸಿದ್ದೇನೆ. ಆ ಕುರಿತು ನನಗೆ ತೃಪ್ತಿಯಿದೆ. ಉಳಿದಂತೆ ಕಹಾನಿ ಸಂಪೂರ್ಣವಾಗಿ ನಿರ್ದೇಶಕರ ಚಿತ್ರ ಎಂದರು.

ಅಜಯ್ ಭಿನ್ನರಾಗ ಆಲಿಸಿದ ಪತ್ರಕರ್ತರಿಗೆ, ಚಂದ್ರು ಹಾಗೂ ಅಜಯ್ ನಡುವಣ ಸಂಬಂಧ ಹಳಸಿತಾ ಎನ್ನುವ ಅನುಮಾನ ಮೂಡಿದ್ದು ಸಹಜ. ತಾಜ್ ಮಹಲ್ ಚಿತ್ರದ ಸಂದರ್ಭದಲ್ಲೂ ಹೀಗೇ ಆಗಿತ್ತು. ತಾಜಮಹಲ್ ತೆರೆಕಂಡ ದಿನ ಸುದ್ದಿಗೋಷ್ಠಿಗೆ ಅಜಯ್ ಹಾಜರಿರಲಿಲ್ಲ. ಈಗ, ಕಹಾನಿ ಸಂದರ್ಭದ ಪ್ರಚಾರ ಕಾರ್ಯಕ್ರಮಗಳಲ್ಲೂ ಅವರು ಕಾಣಿಸುತ್ತಿಲ್ಲ. ಹೀರೋ ಸ್ಥಳದಲ್ಲಿ ನಿರ್ದೇಶಕ, ನಿರ್ಮಾಪಕರು ಮಿಂಚುತ್ತಿದ್ದಾರೆ. ಏನಾಯಿತು ಇಬ್ಬರ ನಡುವೆ?

ಪತ್ರಕರ್ತರ ಕುತೂಹಲದ ಪ್ರಶ್ನೆಗೆ ಅಡ್ಡಬಂದದ್ದು ನಿರ್ದೇಶಕ ಶಶಾಂಕ್. ನಮ್ಮ ಚಿತ್ರದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಇನ್ನೊಂದು ಚಿತ್ರದ ಮಾತುಕತೆ ಬೇಡ ಎನ್ನುವುದು ಅವರ ವಿನಯಪೂರ್ವಕ ಆಗ್ರಹ. ಕಾರ್ಯಕಾರಿ ನಿರ್ಮಾಪಕ ಯೋಗೇಶ್ ಹುಣಸೂರು, ಸುಮ್ಮನೆ ವಿವಾದ ಬೇಡ ಎಂದು ಅಜಯ್‌ಗೆ ಕಿವಿಮಾತು ಹೇಳಿದರು.

ಅಜಯ್ ಮಾತು ಬದಲಿಸಿದರು. ಕೃಷ್ಣನ ಪಾತ್ರದ ಬಗ್ಗೆ ಹೇಳತೊಡಗಿದರು. ಅಜಯ್ ಬಗ್ಗೆ ಶಶಾಂಕ್ ಹೇಳಿದ ಮಾತು: ನೀವು ಈವರೆಗೆ ಸಿನಿಮಾದಲ್ಲಿ ನಿಜವಾದ ಅಜಯ್‌ನನ್ನು ಕಂಡಿಲ್ಲ. ಆ ನಿಜರೂಪ ಕೃಷ್ಣನ್ ಲವ್‌ಸ್ಟೋರಿಯಲ್ಲಿ ಕಾಣಿಸಲಿದೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada