»   » ಸಾವಿನ ಕದ ತಟ್ಟಿಬಂದ ಸಾಯಿ ಮಾತು...

ಸಾವಿನ ಕದ ತಟ್ಟಿಬಂದ ಸಾಯಿ ಮಾತು...

Posted By: *ಮಂಡಕ್ಕಿ ರಾಜ
Subscribe to Filmibeat Kannada

ಅವರು ಮತ್ತೆ 'ಸಾಯಿ ರಾಮ್" ಅಂದರು. ಸಾವಿನ ಕದ ತಟ್ಟಿ ಬದುಕಿ ಬಂದಮೇಲೂ ನಾಲಗೆ ಮೇಲೆ ಅದೇ ಭಗವಂತನ ಧ್ಯಾನ. ಕೆಲವರು ಅವರು 'ಸಾಯಿ" ಅಂದಾಗ ಸಣ್ಣಗೆ ನಕ್ಕರು. ಇನ್ನು ಕೆಲವರು ನೀರು ಕುಡಿದಾಗ, 'ಅದೇನು ಕುಡಿದರಪ್ಪಾ" ಎಂದು ಮಾತಾಡಿಕೊಂಡರು. ಆ ಅಪಸ್ಯವಗಳನ್ನು ಗಮನಿಸಿದಂತೆ ಸಾಯಿಪ್ರಕಾಶ್ ಮಾತನಾಡತೊಡಗಿದರು...

'ನಾನು ತಪ್ಪು ಮಾಡಿಬಿಟ್ಟೆ. ಹದಿಮೂರನೇ ತಾರೀಖು. ಅಮಾವಾಸ್ಯೆ. ಮಾಡಬಾರದ್ದನ್ನು ಮಾಡಿಬಿಟ್ಟೆ ಎಂದರು. ಅವರು ತಮ್ಮ ಆತ್ಮಹತ್ಯೆ ಯತ್ನದ ಬಗ್ಗೆ ಮೊದಲನೆಯದಾಗಿ ಹೇಳಿಕೊಂಡಿದ್ದು ಹೀಗೆ. 'ದೇವರು ಕೊಟ್ಟ ತಂಗಿ" ಅವರ ಮೇಲೆ ಒತ್ತಡಗಳ ಸುರಿಮಳೆಗರೆದಿದೆ. ಅದಾದ ಕೆಲವೇ ದಿನಗಳಲ್ಲಿ ಸಹೋದರನ ಎರಡೂ ಕಿಡ್ನಿಗಳು ವಿಫಲವಾದ ಸುದ್ದಿ. 'ಹೇ ಭಗವಂತ" ಅಂದುಕೊಳ್ಳುವಷ್ಟರಲ್ಲಿ ಚೀಟಿ ಮಾಡಿ ಐದು ಲಕ್ಷ ಕಳೆದುಕೊಂಡ ತಂಗಿಯ ಫೋನು 'ಅಣ್ಣಾ... ಹೆಲ್ಪ್ ಮಿ".

ಕೈಲಿ ಕಾಸು ಇಲ್ಲದ ಸಾಯಿ ಯಾರಿಗೂ ಸಹಾಯ ಮಾಡಲಾಗದೆ ಕುಸಿದುಹೋಗಿದ್ದಾರೆ. ಇಸಿದುಕೊಂಡ ಸಾಲ ತೀರಿಸುವ ದಾರಿಗಳೆಲ್ಲ ಕತ್ತಲು ಕತ್ತಲಾದ ಮೇಲೆ ಆತ್ಮಹತ್ಯೆಗೆ ಶರಣಾಗುವ ಕೆಟ್ಟ ಮನಸ್ಸು ಮಾಡಿದರಂತೆ. ದೇವರು ಒಮ್ಮೆ ಕ್ಷಮಿಸಿಬಿಟ್ಟ. ಇನ್ನು ಖಂಡಿತ ಅಂಥಾ ತಪ್ಪು ಮಾಡುವುದಿಲ್ಲ" ಎಂದು ಸಾಯಿ ಪ್ರಮಾಣ ಮಾಡುವ ಧಾಟಿಯಲ್ಲಿ ಹೇಳಿದರು.

ಇದೇ ನವೆಂಬರ್‌ನಲ್ಲಿ ಸುದೀಪ್ ಕಾಲ್‌ಷೀಟ್ ಕೊಡಲು ಒಪ್ಪಿದ್ದಾರೆ. ಮುಂದಿನ ಫೆಬ್ರುವರಿಯಲ್ಲಿ ದರ್ಶನ್ ಕೂಡ ಕಾಲ್‌ಷೀಟ್ ನೀಡಲು ಸಿದ್ಧ. ನಿರ್ಮಾಪಕರಾದ ವಿಜಯ್‌ಕುಮಾರ್, ಪ್ರಕಾಶ್ ಪರ್ಸೆಂಟೇಜ್ ಹಂಚಿಕೊಂಡು ಸಿನಿಮಾ ಮಾಡಲು (ಅಂದರೆ, ಕಾಲ್‌ಷೀಟ್ ಬೆಲೆಯಲ್ಲಿ ಉಳಿತಾಯವಾದಲ್ಲಿ ಅದನ್ನು ಸಾಯಿಪ್ರಕಾಶ್ ಅವರಿಗೇ ಕೊಡುವುದು) ಮುಂದೆಬಂದಿದ್ದಾರೆ. ಈಗ ಆಶಾಕಿರಣಗಳು ಒಂದೊಂದೇ ಕಾಣುತ್ತಿವೆ.

ಸದ್ಯಕ್ಕೆ ಸಾಯಿ ತಲೆಯಲ್ಲಿ ಯಾವ ಕಥೆಯೂ ಇಲ್ಲ. ಜನ ಯಾವ ಸಿನಿಮಾ ನೋಡಿಯಾರು ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಂಡು ಆಮೇಲೆ ಚಿತ್ರ ನಿರ್ದೇಶನಕ್ಕೆ ಇಳಿಯುವ ಯೋಚನೆ ಅವರದ್ದು. ಅಂದಹಾಗೆ, 'ದೇವರು ಕೊಟ್ಟ ತಂಗಿ"ಗೆ ಆದ ಖರ್ಚು ಐದೂಕಾಲು ಕೋಟಿ. ಇದರಲ್ಲಿ ಎರಡೂಕಾಲು ಕೋಟಿ ಐಡಿಬಿಐ ಸಾಲ. ಬಂದದ್ದು ಶೇ.50ರಷ್ಟು. ಬಂಡವಾಳ ಹೊಂದಿಸಲು ಹಾಗೂ ತಕ್ಷಣದ ಸಾಲ ತೀರಿಸಲು ಒಂದು ಮನೆ, ಏಳು ಸೈಟುಗಳನ್ನು ಅವರು ಮಾರಿದ್ದಾರೆ. ಇಷ್ಟಾದ ಮೇಲೂ ಒಂದು ಕೋಟಿ ಸಾಲ ಬಾಕಿ ಇದೆ. ತಿಂಗಳಿಗೆ ಎರಡೂವರೆ ಲಕ್ಷ ಬಡ್ಡಿ ಕಟ್ಟುತ್ತಿದ್ದಾರೆ.

'ನನ್ನ ಈ ಪರಿಸ್ಥಿತಿಗೆ ನಾನೊಬ್ಬನೇ ಕಾರಣ. ಪತ್ರಿಕೆಯೊಂದು ಬರೆದಿರುವಂತೆ ಶಿವಣ್ಣನವರಿಗೂ ಇದಕ್ಕೂ ಏನು ಸಂಬಂಧವಿಲ್ಲ. 1995ರಿಂದ ನನ್ನ, ಶಿವಣ್ಣನ ಸಂಬಂಧ ಚೆನ್ನಾಗಿದೆ. ಮುಂದೆಯೂ ಚೆನ್ನಾಗಿರುತ್ತದೆ" ಎನ್ನುವಷ್ಟರಲ್ಲಿ ಅವರ ಕಣ್ಣಲ್ಲಿ ನೀರು ಜಿನುಗಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada