»   » ಕಲಾವಿದರ ನಾಡಹಬ್ಬಕ್ಕೆ ರಾಜ್ ಕುಟುಂಬಗೈರು

ಕಲಾವಿದರ ನಾಡಹಬ್ಬಕ್ಕೆ ರಾಜ್ ಕುಟುಂಬಗೈರು

Subscribe to Filmibeat Kannada

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಬೆಂಗಳೂರಿನ ಜೆ ಪಿ ನಗರದಲ್ಲಿ ಏರ್ಪಡಿಸಿದ್ದ ನಾಡಹಬ್ಬ ರಾಜ್ಯೋತ್ಸವಕ್ಕೆ ಬಹುತೇಕ ಕಲಾವಿದರು ಗೈರು ಹಾಜರಾಗಿದ್ದರು. ಈ ಬಗ್ಗೆ ಸಂಘದ ಅಧ್ಯಕ್ಷ ಅಂಬರೀಷ್ ಖೇದ ವ್ಯಕ್ತಪಡಿಸಿದ್ದು, ನಾಡು ನುಡಿಗೆ ಅಪಮಾನ ಮಾಡಲಾಗಿದೆ ಎಂದು ಗುಡುಗಿದರು. ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನ್ನ್ನು ಆಡಿದ್ದಾರೆ.

''ನವೆಂಬರ್ 1ರಂದೇ ಆಚರಿಸಬೇಕೆಂದಿದ್ದೆವು. ರಾಜ್ಯದಲ್ಲಿ ನೆರೆ ಪರಿಹಾರ ನಿಧಿ ಸಂಗ್ರಹಿಸಬೇಕಾಗಿದ್ದರಿಂದ ಸಾಧ್ಯವಾಗಲಿಲ್ಲ. ಹಾಗಾಗಿ ಡಿಸೆಂಬರ್ 13ರಂದು ರಾಜ್ಯೋತ್ಸವನ್ನು ಆಚರಿಸಲು ತೀರ್ಮಾನಿಸಲಾಗಿತ್ತ್ತು. ಸಂಘದ ಕಲಾವಿದರು ಎಂದ ಮೇಲೆ ಎಲ್ಲರೂ ರಾಜ್ಯೋತ್ಸವಕ್ಕೆ ಬರಬೇಕಾಗಿತ್ತು. ಅವರು ಬರದೆ ಇರುವ ಬಗ್ಗೆ ತೀವ್ರ ಬೇಸರವಾಗಿದೆ'' ಎಂದರು ಮಂಡ್ಯದ ಗಂಡು.

ಕಲಾವಿದರ ಸಂಘದ ರಾಜ್ಯೋತ್ಸವಕ್ಕೆ ರಾಜ್ ಕುಮಾರ್ ಕುಟುಂಬದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮರ್, ನಟರಾದ ಸಾಹಸ ಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಗೈರು ಹಾಜರಾಗಿರುವ ಬಗ್ಗೆ ಹಿರಿಯ ನಟರಾದ ಶ್ರೀನಿವಾಸ ಮೂರ್ತಿ ಹಾಗೂ ಮುಖ್ಯಮಂತ್ರಿ ಚಂದ್ರು ಅವರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡುತ್ತಾ, ಎಲ್ಲಿ ಲೋಪವಾಗಿ ಎಂಬುದನ್ನು ಎಲ್ಲರೂ ಕುಳಿತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಕನ್ನಡದ ನೆಲ, ಜಲ, ಭಾಷೆಯ ವಿಚಾರ ಬಂದಾಗ ಕಲಾವಿದರೆಲ್ಲಾ ಒಂದೇ ಎಂದು ತೋರಿಸಿದ್ದೇವೆ. ಕಲಾವಿದರೆಲ್ಲಾ ಒಂದೇ ಕುಟುಂಬದವರಿದ್ದಂತೆ. ಎಲ್ಲೋ ಲೋಪವಾಗಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಮುಖ ನಟರ ಗೈರುಹಾಜರಿ ಬಗ್ಗೆ ಹಿರಿಯ ನಟ ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸುತ್ತ್ತಾ, ಇದೊಂದು ಮನೆ ಸಮಾರಂಭ. ಎಲ್ಲರೂ ಭಾಗಿಯಾಗಲೇ ಬೇಕು. ಕುಂಟು ನೆಪ ಹೇಳಿ ಗೈರುಹಾಜರಾಗುವುದು ತಪ್ಪು. ಇದು ಬೇಸರದ ಸಂಗತಿ. ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳಾದರೆ ಎಲ್ಲರೂ ಒಟ್ಟಿಗೆ ಸೇರುವುದಿಲ್ಲವೆ. ಇನ್ನು ಮುಂದೆ ಹೀಗಾಗಬಾರದು. ಆಂಧ್ರ, ತಮಿಳುನಾಡಿನಲ್ಲಿ ಯಾವುದಾದರೂ ಸಮಾರಂಭ ನಡೆಯುತ್ತದೆ ಎಂದರೆ ಸಭೆ ತುಂಬಿ ತುಳುಕುತ್ತಿರುತ್ತದೆ ಎಂದರು.

ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ತಿಳಿಸಿದ್ದರು. ಆದರೂ ರಾಜ್ಯೋತ್ಸವ ಸಮಾರಂಭಕ್ಕೆ ಬಂದಿಲ್ಲ ಎಂದರೆ ನೋವಿನ ಸಂಗತಿ. ಮುಂದೆ ಇಂತಹ ಸಮಾರಂಭಗಳಿಗೆ ಯಾವುದೇ ಕಾರಣಕ್ಕು ತಪ್ಪಿಸಿಕೊಳ್ಳಬೇಡಿ ಎಂದು ಪಾದಮುಟ್ಟಿ ಕೇಳಿಕೊಳ್ಳುತ್ತೇನೆ. ಚಲನಚಿತ್ರ ಕಲಾವಿದರೆಲ್ಲಾ ಸೇರಿ ಮಾಡುತ್ತಿರುವ ಸಮಾರಂಭ. ಗೈರು ಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಲು ಇದೇನು ಪೊಲೀಸ್ ಇಲಾಖೆಯೆ? ಎಂದು ಶ್ರೀನಿವಾಸಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಧನಸಹಾಯವನ್ನು ಮಾಡಲಾಯಿತು. ಹಿರಿಯ ನಟಿ ಲಕ್ಷ್ಮಿ ದೇವಿ, ಸದಾಶಿವ ಬ್ರಹ್ಮಾವರ ಹಾಗೂ ರೇಣುಕಾ ಪ್ರಸಾದ್ ಅವರಿಗೆ ತಲಾ ರು.10 ಸಾವಿರವನ್ನು ಕೊಡಲಾಯಿತು. ಸಮಾರಂಭದಲ್ಲಿ ರಾಕ್ ಲೈನ್ ವೆಂಕಟೇಶ್, ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ಹಾಸ್ಯ ನಟ ಉಮೇಶ್, ವಿಜಯ್, ರಮೇಶ್ ಅರವಿಂದ್, ರಾಧಿಕಾ ಗಾಂಧಿ,ಭಾವನಾ, ದೊಡ್ಡಣ್ಣ ಮುಂತಾದವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada