»   »  ಪ್ರಿಯಾ ವಿರುದ್ಧ ಕಲಾವಿದರ ಸಂಘಕ್ಕೆ ದಿಗಂತ್ ದೂರು

ಪ್ರಿಯಾ ವಿರುದ್ಧ ಕಲಾವಿದರ ಸಂಘಕ್ಕೆ ದಿಗಂತ್ ದೂರು

Subscribe to Filmibeat Kannada

'ಇ ಪ್ರೀತಿ' ಚಿತ್ರದ ನಿರ್ದೇಶಕಿ ಪ್ರಿಯಾ ಭಾರತಿ ವಿರುದ್ಧ ನಟ ದಿಗಂತ್ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು(ಜು.16) ನಡೆದ ಪತ್ರಿಕಾಗೋಷ್ಠಿಯಲ್ಲಿ ದಿಗಂತ್ ಈವಿಷಯ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾ ಭಾರತಿ ವಿರುದ್ಧ ದಿಗಂತ್ ಆರೋಪಗಳ ಸುರಿಮಳೆಗೈದರು.

ಕನ್ನಡ ಚಿತ್ರ ನಿರ್ದೇಶಕಿ, ಅನಿವಾಸಿ ಕನ್ನಡತಿ ಪ್ರಿಯಾ ಭಾರತಿ ವಿರುದ್ಧ ದಿಗಂತ್ ಮಾತ್ರವಲ್ಲ ಇಡೀ'ಇ ಪ್ರೀತಿ' ಚಿತ್ರತಂಡವೇ ತಿರುಗಿಬಿದ್ದಿದೆ ಎಂಬ ಅಂಶವನ್ನು ದಿಗಂತ್ ಸ್ಪಷ್ಟಪಡಿಸಿದರು. ಪ್ರಿಯಾ ಭಾರತಿ ಅವರ ಚಿಂತನಾ ಲಹರಿಗೂ ಮತ್ತು ಇಲ್ಲಿನ, ಅಂದರೆ ಗಾಂಧೀನಗರದ ಆಲೋಚನಾ ಕ್ರಮಕ್ಕೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಅವರ ಮನಸ್ಸು ಅಮೆರಿಕಾ, ದೇಹ ಮಾತ್ರ ಭಾರತದಲ್ಲಿದೆ. ಇಂಗ್ಲಿಷ್ ಭಾಷೆಯಲ್ಲಿ ಯೋಚಿಸಿ ಸೃಜನಶೀಲ ಕನ್ನಡ ಕೆಲಸ ಮಾಡುವಾಗ ತಲೆದೋರುವ ಎಲ್ಲ ಸಾಂಸ್ಕೃತಿಕ ವೈರುಧ್ಯಗಳು ಇ ಪ್ರೀತಿ ಚಿತ್ರ ನಿರ್ಮಾಣದಲ್ಲಿ ಭುಗಿಲೆದ್ದವು ಎಂದು ದಿಗಂತ್ ಹೇಳಿದರು.

ಈಗಾಗಲೇ ಮೂರು ಸಲ ಛಾಯಾಗ್ರಾಹಕರನ್ನು ಎರಡು ಬಾರಿ ಪ್ರೊಡಕ್ಷನ್ ಮೆನೇಜರ್ ಗಳನ್ನು ಬದಲಾಯಿಸಲಾಗಿದೆ. ಪ್ರಿಯಾ ಅವರಿಗೆ ಚಿತ್ರ ನಿರ್ಮಾಣದ ಎಬಿಸಿಡಿ ಗೊತ್ತಿಲ್ಲ ಎಂದರು ದಿಗಂತ್. ಛಾಯಾಗ್ರಾಹಕ ಹ್ಯಾರಿಸ್ ವಿರುದ್ಧ ಬೀದಿ ಜಗಳಕ್ಕೆ ನಿಂತ ಜಗಳಗಂಟಿ ಪ್ರಿಯಾ ಭಾರತಿ ಎಂದು ಮೂದಲಿಸಿದರು. ಜಯಂತ್ ಕಾಯ್ಕಿಣಿ, ನೀನಾ ಮಹೇಶ್, ಮನೋಮೂರ್ತಿ ಕಡೆಗೆ ಚಿತ್ರದ ನಿರ್ಮಾಪಕ ನಾರಾಯಣ್ ಹೊಸಮನೆ ಸಹ ಪ್ರಿಯಾ ಅವರದೇ ತಪ್ಪು ಎನ್ನುತ್ತಿದ್ದಾರೆ.

ಕಾರ್ಯಕಾರಿ ನಿರ್ಮಾಪಕ ಮನನ್, ಸಹಾಯಕ ನಿರ್ದೇಶಕಿ ರಾಜಶ್ರೀ, ಛಾಯಾಗ್ರಾಹಕ ಸತ್ಯ ಹೆಗಡೆ ಸಹ ಈಗಾಗಲೇ ಪ್ರಿಯಾ ಅವರೊಂದಿಗೆ ಜಗಳ ಮಾಡಿಕೊಂಡು ದೂರಸರಿದಿದ್ದಾರೆ.ತಮ್ಮನ್ನು 'ಮೂರನೇ ದರ್ಜೆ ಕಾರ್ಮಿಕರಂತೆ' ನೋಡುತ್ತಿದ್ದಾರೆ ಎಂದು ಆರೋಪಿಸಿ ಮನನ್ ಚಿತ್ರತಂಡದಿಂದ ದೂರಸರಿದರು. ಸಂಭಾವನೆ ವಿಚಾರವಾಗಿ ರಾಜಶ್ರೀ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಕ್ಕೆ ಅವರೂ ಇ ಪ್ರೀತಿಯನ್ನು ಕೈಬಿಟ್ಟರು ಎಂದು ದಿಗಂತ್ ವಿವರ ನೀಡಿದರು.

ಆರೋಪ ಪ್ರತ್ಯಾರೋಪಗಳ ಪ್ರವಾಹದಲ್ಲಿ ಇ ಪ್ರೀತಿಯ ಹಣೆಬರಹ ಏನಾಗಬಹುದು ಎಂಬುದೇ ಈಗ ಎಲ್ಲರ ಕುತೂಹಲವಾಗಿದೆ. ಅದಕ್ಕಿಂತ ಹೆಚ್ಚಾಗಿ ದಿಗಂತ್ ಕೊಟ್ಟಿರುವ ದೂರನ್ನು ಕಲಾವಿದರ ಸಂಘದ ಅಧ್ಯಕ್ಷ ರವಿಚಂದ್ರನ್ ಹೇಗೆ ಬಗೆಹರಿಸುವರು ಎನ್ನುವುದು ಕೌತುಕದ ವಿಚಾರವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada