»   » ಕಲಾವಿದರ ಸಂಘಕ್ಕೆ ಅಂಬರೀಷ್ ರಾಜೀನಾಮೆ

ಕಲಾವಿದರ ಸಂಘಕ್ಕೆ ಅಂಬರೀಷ್ ರಾಜೀನಾಮೆ

Posted By: *ವರದಿಗಾರ
Subscribe to Filmibeat Kannada

ಸಹಕಲಾವಿದರ ವರ್ತನೆಗೆ ಬೇಸತ್ತು ರೆಬಲ್ ಸ್ಟಾರ್ ಅಂಬರೀಷ್ ಕಲಾವಿದರ ಸಂಘಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರಗಳನ್ನು ನಿರ್ಮಾಪಕ ಹಾಗೂ ನಿರ್ದೇಶಕರ ಸಂಘಕ್ಕೂ ರವಾನಿಸಿದ್ದಾರೆ. ಬೇಡಿಕೆಯಲ್ಲಿರುವ ನಟರ ಅಸಹಕಾರ ಧೋರಣೆಯಿಂದ ಬೇಸರಗೊಂಡು ರಾಜೀನಾಮೆ ನೀಡುತ್ತಿರುವುದಾಗಿ ಅಂಬರೀಷ್ ತಿಳಿಸಿದ್ದಾರೆ.

''ಕಲಾವಿದರ ಸಂಘದ ಸಭೆ ಸಮಾರಂಭಗಳಿಗೆ ಕರೆದರೆ ಯಾರೂ ಬರುವುದಿಲ್ಲ. ಒಬ್ಬನೇ ಎಷ್ಟು ಅಂತ ಮಾಡಲಿ. ನನಗೂ ವಯಸ್ಸಾಗಿದೆ. ಇನ್ನು ಎಷ್ಟು ದಿನ ಅಂತ ಈ ಅಧ್ಯಕ್ಷ ಸ್ಥಾನದಲ್ಲಿ ಕೂರಲಿ.ಯಾವುದೇ ಸಭೆ, ಸಮಾರಂಭ ಮಾಡಬೇಕಾದರೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ನಾವು ಮೂವರೆ ಮಾಡಬೇಕು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ .

''ಇನ್ನೂ ಅಂಬರೀಷ್ ಎಷ್ಟು ದಿನ ಅಂತ ಈ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.ಇನ್ನು ಇದು ಯಾವ ಮಹಾ. ನಮ್ಮ ಸೇವೆ ಇನ್ನು ಅವರಿಗೆ ಅನಗತ್ಯ ಅನ್ನಿಸುತ್ತದೆ '' ಎಂದುಅಂಬರೀಷ್ ತಮ್ಮ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ರಾಕ್ ಲೈನ್ ಪ್ರತಿಕ್ರಿಯೆ
ಅಂಬರೀಷ್ ರಾಜೀನಾಮೆ ಬಗ್ಗೆ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದ್ದು, ಏಳು ವರ್ಷಗಳಿಂದ ಅವರೇ ಅಧ್ಯಕ್ಷ ಸ್ಥಾನದಲ್ಲಿದ್ದರು. ಕಲಾವಿದರ ಸಂಘದ ಕಟ್ಟಡಕ್ಕೂ ಬಹಳಷ್ಟು ಶ್ರಮಿಸಿದ್ದಾರೆ. ಕಲಾವಿದರ ಸಭೆ, ಸಮಾರಂಭ ಎಂದರೆ ಎಲ್ಲರೂ ಸ್ಪಂದಿಸಬೇಕು. ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮಕ್ಕೆ ಯಾರೂ ಬರಲಿಲ್ಲ ಎಂಬ ನೋವು ಅವರಿಗಿದೆ. ಹಾಗಾಗಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಮನವೊಲಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ವಿನಂತಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಡಿಸೆಂಬರ್ 13ರಂದು ನಡೆದ ಕಲಾವಿದರ ಸಂಘದ ರಾಜ್ಯೋತ್ಸವಕ್ಕೆ ರಾಜ್ ಕುಮಾರ್ ಕುಟುಂಬದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮರ್, ನಟರಾದ ಸಾಹಸ ಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಗೈರುಹಾಜರಾಗಿದ್ದರು. ಈ ಬಗ್ಗೆ ಖೇದ ವ್ಯಕ್ತಪಡಿಸಿದ್ದ ಅಂಬರೀಷ್ ಅಂದೇ ರಾಜೀನಾಮೆ ನೀಡುವ ಮಾತನ್ನು ಆಡಿದ್ದರು. ಕಡೆಗೂ ಅವರು ಕಲಾವಿದರ ಸಂಘಕ್ಕೆ ರಾಜೀನಾಮೆ ನೀಡಿ ಕನ್ನಡ ಚಿತ್ರೋದ್ಯಮದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada