»   » ನಾಗವಲ್ಲಿ ದಿಗ್ಬಂಧನಕ್ಕೆ ರಜನಿ ಮೃತ್ಯುಂಜಯ ಹೋಮ

ನಾಗವಲ್ಲಿ ದಿಗ್ಬಂಧನಕ್ಕೆ ರಜನಿ ಮೃತ್ಯುಂಜಯ ಹೋಮ

By: *ಉದಯರವಿ
Subscribe to Filmibeat Kannada

ನಟ ರಜನಿಕಾಂತ್ ಅವರಿಗೂ ನಾಗವಲ್ಲಿ ಭಯ ಕಾಡುತ್ತಿದೆಯೇ? ತನ್ನ ಆತ್ಮೀಯ ಗೆಳೆಯ ವಿಷ್ಣುವರ್ಧನ್ ಅವರನ್ನು ಕಳೆದುಕೊಂಡ ಬಳಿಕ ರಜನಿಕಾಂತ್ ಅವರಿಗೆ ನಾಗವಲ್ಲಿಯ ಭಯ, ಅದರಲ್ಲೂ ಮುಖ್ಯವಾಗಿ ಸಾವಿನ ಭಯ ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ರಜನಿಕಾಂತ್ ಅವರು ಮಹಾ ಮೃತ್ಯುಂಜಯ ಹೋಮವನ್ನು ಮಾಡಿ ಕೃತಾರ್ಥರಾಗಿದ್ದಾರೆ.

ಇಷ್ಟೇ ಅಲ್ಲ ಮೈಸೂರಿನ ಸುತ್ತಮುತ್ತಲ ಹಲವಾರು ಪುಣ್ಯಕ್ಷೇತ್ರಗಳನ್ನು ರಜನಿಕಾಂತ್ ಭೇಟಿ ಮಾಡಿದ್ದಾರೆ. ಅಲ್ಲೆಲ್ಲಾ ನಾಗವಲ್ಲಿ ಸೇರಿದಂತೆ ದುಷ್ಟಶಕ್ತಿಗಳ ನಿವಾರಣೆಗಾಗಿ ಹೋಮ ಹವನಗಳಮೊರೆಹೋಗಿದ್ದಾರೆ . ಇತ್ತೀಚೆಗೆ ಮೈಸೂರಿನ ಲಲಿತ ಮಹಲ್ ಹೋಟೆಲ್ ನಲ್ಲಿ ತನ್ನ ಕುಟುಂಬದ ಸದಸ್ಯರ ಜೊತೆ ರಜನಿ ಎರಡು ದಿನ ತಂಗಿದ್ದರು.

ಲಲಿತಮಹಲ್ ಹೋಟೆಲ್ ನ ಹಿರಿಯ ಕಾರ್ಯನಿರ್ವಾಹಕರೊಬ್ಬರು ಹೇಳುವ ಪ್ರಕಾರ, ಜನವರಿ 31ರಂದು ರಜನಿ ಸಾರ್ ತಮ್ಮ ಕುಟುಂಬದವರೊಂದಿಗೆ ನಮ್ಮ ಹೋಟೆಲ್ ಗೆ ಬಂದಿದ್ದರು. ಎರಡು ದಿನಗಳ ಕಾಲ ಹೋಟೆಲ್ ನಲ್ಲೆ ಇದ್ದು ಸುತ್ತಮುತ್ತಲ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರಗಳನ್ನು ಮಾಡಿಸಿದರು ಎನ್ನುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ರಜನಿಗೆ ಆತ್ಮೀಯರಾದವರೊಬ್ಬರು ಈ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿದ್ದದ್ದು ವಿಶೇಷ. ಅವರು ಹೇಳಿದ್ದಿಷ್ಟು; ವಿಷ್ಣುವರ್ಧನ್ ಸಾವಿನ ಬಳಿಕ ರಜನಿ ತೀವ್ರ ಖಿನ್ನರಾಗಿದ್ದರು. ಸ್ನೇಹಿತರ ಸೂಚನೆಯ ಮೇರೆಗೆ ಅವರು ಟಿ ನರಸಿಪುರದಲ್ಲಿ ಧಾರ್ಮಿಕ ವಿಧಿ ಸಂಸ್ಕಾರಗಳನ್ನು ಮಾಡಿಸಿದ್ದಾಗಿ ಹೆಸರು ಹೇಳಲು ಇಚ್ಛಿಸದ ರಜನಿ ಆತ್ಮೀಯರು ತಿಳಿಸಿದ್ದಾರೆ.

ಆಪ್ತಮಿತ್ರ ಬಿಡುಗಡೆಯಾಗುವುದಕ್ಕೂ ಒಂದು ತಿಂಗಳ ಮುನ್ನ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವಪ್ಪಿದ್ದರು. ಇದೀಗ 'ಆಪ್ತರಕ್ಷಕ' ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ವಿಷ್ಣು ಸಾವಪ್ಪಿದ್ದಾರೆ. ಇದಕ್ಕೆಲ್ಲಾ ನಾಗವಲ್ಲಿ ಶಾಪವೇ ಕಾರಣ ಎಂಬುದು ಚಾಲ್ತಿಯಲ್ಲಿರುವ ವದಂತಿ.

ಈ ವದಂತಿಯಿಂದ ರಜನಿಕಾಂತ್ ಅವರಿಗೂ ಸಾವಿನ ಭಯ ಕಾಡುತ್ತಿದೆಯಂತೆ. ರಜನಿ ನಾಯಕ ನಟನಾಗಿ 'ಆಪ್ತಮಿತ್ರ' ಚಿತ್ರ ತಮಿಳಿನಲ್ಲಿ 'ಚಂದ್ರಮುಖಿ'ಯಾಗಿ ಬಿಡುಗಡೆಯಾಗಿ ಯಶಸ್ಸು ದಾಖಲಿಸಿತ್ತು. ಇದೀಗ 'ಆಪ್ತರಕ್ಷಕ' ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡಲಿದ್ದಾರೆ. ಇಲ್ಲೂ ರಜನಿ ಪಾತ್ರ ಪೋಷಣೆ ಮಾಡಲಿದ್ದಾರೆ. ಒಟ್ಟಿನಲ್ಲಿ ನಾಗವಲ್ಲಿ ಭಯದಿಂದ ತತ್ತರಿಸಿರುವ ರಜನಿ ಮಹಾ ಮೃತ್ಯುಂಜಯ ಹೋಮ ಮಾಡಿಸಿ ಸದ್ಯಕ್ಕೆ ರಿಲ್ಯಾಕ್ಸ್ ಆಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada