»   »  ಪ್ರೇಮ್ ನಿಜಕ್ಕೂ ಡಿಸ್ಟರ್ಬ್ ಆಗಿದ್ದಾರಾ?

ಪ್ರೇಮ್ ನಿಜಕ್ಕೂ ಡಿಸ್ಟರ್ಬ್ ಆಗಿದ್ದಾರಾ?

Posted By: *ಜಯಂತಿ
Subscribe to Filmibeat Kannada

ಪ್ರೇಮ್ ಹಾಗೂ ಗಿಮಿಕ್ ಒಂದೇ ನಾಣ್ಯದ ಎರಡು ಮುಖಗಳು. ರಾಜ್ ಚಿತ್ರದ ಹಾಡೊಂದರಲ್ಲಿ ಕನ್ನಡದ ಹಳೆಯ ನಟಿಯರ ಸೂಪರ್ ಸ್ಟೆಪ್ಪು, ರಾಜ್‌ಕುಮಾರ್ ಸಮಕ್ಕೂ ಪುನೀತ್ ಸಂಭಾಷಣೆ ಒಪ್ಪಿಸುವ ಸೀನು, ಭಾವುಕ ಸನ್ನಿವೇಶಗಳಲ್ಲೂ ನಿಶಾ ಕೊಠಾರಿ ಸೂಪರ್ರು ಹೀಗೆ ಅವರು ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಹೇಳಿದ ಎಲ್ಲವೂ ಉತ್ಪ್ರೇಕ್ಷಿತ ವಿಷಯಗಳು. ರಾಜ್‌ಕುಮಾರ್ ಮುಖವನ್ನೇ ಹೋಲದ ಐವತ್ತು ಅಡಿ ಎತ್ತರದ ಪ್ರತಿಮೆಗೆ ಮೂವತ್ತು ಲಕ್ಷ ರುಪಾಯಿ ಖರ್ಚು ಮಾಡಿಸಿದ್ದು ಅವರ ಇನ್ನೊಂದು ವರಸೆ. ಇವೆಲ್ಲಾ ಚಿತ್ರದ ಓಪನಿಂಗ್ ಮಟ್ಟಿಗೆ ಖಂಡಿತ ಫಲ ಕೊಟ್ಟಿವೆ.

ಬಹುತೇಕ ಪ್ರಮುಖ ಚಿತ್ರಮಂದಿರಗಳ ಟಿಕೇಟನ್ನು ಹರಿಸಿ, ಬ್ಲಾಕ್ ಮಾರುವವರ ಕೈಗೆ ಕೊಟ್ಟು ರೇಟು ಜಾಸ್ತಿ ಮಾಡಿಸಿದ ಅವರ ಹಳೆಯ ತಂತ್ರ ಈ ಸಿನಿಮಾ ಮಟ್ಟಿಗೂ ಕ್ಲಿಕ್ ಆಗಿದೆ. ಜೋಗಿ ಚಿತ್ರ ಬಿಡುಗಡೆಯಾದಾಗಲೂ ಹೀಗೇ ಮಾಡಿದ್ದರು. ಇವೆಲ್ಲದರ ಪರಿಣಾಮವಾಗಿ ನಿರ್ಮಾಪಕ ಸೇಫ್. ಹಾಗಿದ್ದೂ ಪ್ರೇಮ್ ಡಿಸ್ಟರ್ಬ್ ಆಗಿದ್ದಾರೆನ್ನುತ್ತಿದೆ ಗಾಂಧಿನಗರದ ಗಲ್ಲಿಮಾತು.

ರಾಜ್ ನೋಡಿಬಂದ ಶೇಕಡಾ ತೊಂಬತ್ತರಷ್ಟು ಅಭಿಮಾನಿಗಳು ಸಿನಿಮಾದಲ್ಲಿ ಧಮ್ ಇಲ್ಲ ಎನ್ನುತ್ತಿದ್ದಾರೆ. ಪ್ರತಿಕ್ರಿಯೆ ನೋಡಿದರೆ ಇದು ಐವತ್ತು ದಿನ ಓಡುವಂಥ ಚಿತ್ರ ಎಂಬುದನ್ನು ಈಗಲೇ ಹೇಳಿಬಿಡಬಹುದು. ಪ್ರೇಮ್ ಮಾತ್ರ ವ್ಯಾಕುಲತೆಯ ನಡುವೆಯೂ ಪಟ್ಟು ಸಡಿಲಿಸುತ್ತಿಲ್ಲ.

ವಿದೇಶಗಳಲ್ಲಿ ಚಿತ್ರ ಬಿಡುಗಡೆ ಮಾಡಬೇಕಾದರೆ ಪ್ರತ್ಯೇಕವಾಗಿ ಸೆನ್ಸಾರ್ ಆಗಬೇಕು, ಸಿಂಗಪೂರ್, ಮಲೇಷ್ಯಾದಂಥ ದೇಶಗಳಲ್ಲಿ ಸಬ್‌ಟೈಟಲ್ ಇರಬೇಕಾದದ್ದು ಕಡ್ಡಾಯ. ಇವ್ಯಾವುದೂ ಇಲ್ಲದೆಯೇ ಪ್ರೇಮ್ ಪತ್ರಿಕೆಗಳಲ್ಲಿ ಪ್ರಕಟಿಸಿದ ಜಾಹೀರಾತುಗಳಲ್ಲಿ ವಿದೇಶಿ ಚಿತ್ರಮಂದಿರಗಳ ಹೆಸರುಗಳನ್ನೂ ಕಳೆದ ವಾರವೇ ಬರೆದಿದ್ದರು. ಈ ವಾರ ಕೂಡ ಅದು ಪುನರಾವರ್ತನೆಯಾಗಿದೆ. ಈ ಸಲ ವಿದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ನಿರ್ಮಾಪರಿಗೆ ಸಮಾಧಾನದ ಸಂಗತಿ.

ಪ್ರೇಮ್ ಸೂಪರ್‌ಸ್ಟೀಶಿಯಸ್. ಶಕುನಗಳ ಮೇಲೆ ಅವರಿಗೆ ಭಾರೀ ನಂಬಿಕೆ. ಜೋಗಿಯಲ್ಲಿ ಶಿವರಾಜ್‌ಕುಮಾರ್ ಎಂಟ್ರಿ ಕೊಡೋದು ಜೈಲಿನಲ್ಲಿ. ರಾಜ್‌ನಲ್ಲಿ ಪುನೀತ್ ಪ್ರವೇಶವೂ ಹಾಗೆಯೇ. ಅಲ್ಲಿ ಶಿವಣ್ಣ ನೀರಿನ ಪೈಪ್ ಕಿತ್ತಾಗ, ನೀರು ಝಲ್ಲೆಂದು ಚಿಮ್ಮುತ್ತದೆ. ಇಲ್ಲಿ ಬೋರ್‌ವೆಲ್‌ಗೆ ಒಬ್ಬನನ್ನು ಸೆಣೆದು ಅದು ಕಿತ್ತುಹೋಗುವಂತೆ ಮಾಡುವುದು ಪುನೀತ್ ಪವರ್. ಬೋರ್‌ವೆಲ್ ಕಿತ್ತಾಗ ನೀರು ಝಲ್ಲನೆ ಚಿಮ್ಮುವುದು ಹೇಗೆ ಸಾಧ್ಯ ಎಂಬುದು ತಾರ್ಕಿಕ ಪ್ರಶ್ನೆ.

ಪ್ರೇಮ್ ಫ್ಯಾಂಟಸಿ ಮೋಹಿ. ಅಡುಗೆ ಮಾಡುವ ಜಾಗದಲ್ಲಿ ಹೊಗೆ ದಟ್ಟವಾಗಿರುತ್ತದೆ. ಅದನ್ನು ಅವರು ಸಿನಿಮಾದಲ್ಲಿ ಎಷ್ಟು ದಟ್ಟವಾಗಿಸಿದ್ದಾರೆಂದರೆ, ಎದುರಲ್ಲಿ ಇರುವವರು ಕಾಣದಷ್ಟು. ಕಾಣದ ಮುಖಗಳೊಟ್ಟಿಗೆ ಪುನೀತ್ ಹೊಡೆದಾಟ. ಪಾಪ, ಕ್ಯಾಮರಾಮನ್ ಕೃಷ್ಣ ಕಣ್ಣು ಈ ಫೈಟ್ ತೆಗೆಯುವಷ್ಟರಲ್ಲಿ ಮಂಜಾಗಿರಬೇಕು. ಇದು ತರ್ಕಕ್ಕೆ ಪ್ರೇಮ್ ಕೊಳ್ಳಿಯಿಟ್ಟಿರುವುದು ಹೇಗೆಂಬುದಕ್ಕೆ ಇನ್ನೊಂದು ಉದಾಹರಣೆ.

ಪ್ರೇಮ್ ತಮ್ಮನ್ನು ತಾವು ಮೀರಬಲ್ಲರು. ರಾಜ್‌ನಲ್ಲಿ ಯಾರನ್ನೂ ಸಾಯಿಸಿಲ್ಲ. ನಾಯಕಿಯನ್ನು ಕಾಣೆಯಾಗಿಸಿಲ್ಲ. ಪ್ರೀತಿಯ ಕಣ್ಣಾಮುಚ್ಚಾಲೆಯನ್ನು ಮೊದಲಿನಷ್ಟು ತೋರಿಸಿಲ್ಲ. ಪ್ರೇಮ್ ಬದಲಾಗುವುದು ಅನುಮಾನ. ಮಚ್ಚು ಬಿಟ್ಟು ಅವರಿಗೆ ಯೋಚಿಸುವುದಕ್ಕೆ ಬರುವುದಿಲ್ಲವೇನೋ? ಕನ್ನಡದ ಗಂಧವನ್ನು ಒಂದಿನಿತೂ ಅರಿಯದ ಪರದೇಶಿ ನಾಯಕಿಯರ ಮೇಲೆ ಇರುವ ಮೋಹ ಬಿಡುವ ಲಕ್ಷಣಗಳಿಲ್ಲ. ನಿರ್ಮಾಪಕರಿಂದ ನೀರಿನ ಪರಿಯಲ್ಲಿ ಹಣ ಖರ್ಚು ಮಾಡಿಸುವ ಚಾಳಿಯಂತೂ ಮುಂದುವರಿದೇ ಇದೆ.

ಇಷ್ಟೆಲ್ಲ ತಮಾಷೆಗಳ ನಂತರವೂ ನಿರ್ಮಾಪಕ ಸೌಂದರ್ಯ ಜಗದೀಶ್ ಪುನೀತ್ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಇನ್ನೊಂದು ಚಿತ್ರಕ್ಕೆ ಹಣ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಪುನೀತ್ ಈ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡಲು ಸಿದ್ಧರಿಲ್ಲ.

ಮೂರು ವರ್ಷದ ಹಿಂದೆ ಪಾರ್ವತಮ್ಮನವರು ಒಂದು ಮಾತು ಹೇಳಿದ್ದರು- ನಾಯಕನಾಗುವ ತೀಟೆ ಇರುವ ನಿರ್ದೇಶಕ ಎಂದೂ ಬೇರೆ ನಾಯಕರನ್ನು ಉಳಿಸಲಾರ. ಅವರು ಉಪೇಂದ್ರ "ಸ್ವಸ್ತಿಕ್" ತೆಗೆದು ತಮ್ಮ ಎರಡನೇ ಮಗನ ಕೆರಿಯರ್ರನ್ನು ಹಾಳು ಮಾಡಿದ ಎಂದು ನೇರವಾಗಿ ಆರೋಪಿಸಿದ್ದರು. ಅವರಿಗೆ ಆ ಅಭಿಪ್ರಾಯವಿದ್ದೂ ಈಗಾಗಲೇ ನಾಯಕನಾಗಿ ನಟಿಸಿರುವ ಪ್ರೇಮ್ ಕೈಗೆ ತಮ್ಮ ಮೂರನೇ ಮಗನ ಕೆರಿಯರ್ರನ್ನು ಕೊಟ್ಟಿದ್ದು ಹೇಗೆ ಎಂಬುದು ಇನ್ನೊಂದು ಪ್ರಶ್ನೆ. ಏನೇ ಆಗಲೀ, ಇವರೆಲ್ಲಾ ಸಿನಿಮಾ ಮಂದಿ ಅಲ್ಲವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada