»   »  ಕನ್ನಡ ಗಾಯಕರ ಮೇಲೆ ಹಿಂದಿ ಗಾಯಕರ 'ಸವಾರಿ'

ಕನ್ನಡ ಗಾಯಕರ ಮೇಲೆ ಹಿಂದಿ ಗಾಯಕರ 'ಸವಾರಿ'

Subscribe to Filmibeat Kannada
Anuradha Bhat
'ಸವಾರಿ' ಚಿತ್ರದ ಧ್ವನಿಸುರುಳಿ ಮೇಲೆ ಹಿನ್ನೆಲೆಗಾಯಕಿ ಅನುರಾಧ ಭಟ್ ಅವರ ಹೆಸರಿನ ಬದಲಾಗಿ ಬಾಲಿವುಡ್ ಗಾಯಕಿ ಶ್ರೇಯಾ ಘೋಶಾಲ್ ಹೆಸರನ್ನು ತಪ್ಪಾಗಿ ಮುದ್ರಿಸಲಾಗಿದೆ. ಈ ಮೂಲಕ ಕನ್ನಡ ಗಾಯಕ/ಗಾಯಕಿಯರನ್ನು ಕಡೆಗಣಿಸಲಾಗುತ್ತಿದೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ ಎಂಬುದು ಮತ್ತ್ತೊಮ್ಮೆ ಸಾಬೀತಾಗಿದೆ.

ಇತ್ತೀಚೆಗೆ ತೆರೆಕಂಡ ಸವಾರಿ ಚಿತ್ರದ 'ಮರಳಿ ಮರೆಯಾಗಿ...' ಬಹಳಷ್ಟು ಜನಪ್ರಿಯವಾದ ಗೀತೆ. ಸವಾರಿಯಲ್ಲಿ ಇದೇ ಹಾಡು ಎರಡು ರೂಪಗಳಲ್ಲಿದೆ. ಒಂದು ಹಾಡನ್ನು ಸಾಧನಾ ಸರಗಂಹಾಡಿದ್ದು ಮತ್ತೊಂದು ಗೀತೆ ಅನುರಾಧ ಭಟ್ ಅವರ ಕಂಠದಲ್ಲಿ ಮೂಡಿಬಂದಿದೆ. ಆದರೆ ಸವಾರಿ ಚಿತ್ರದ ಧ್ವನಿಸುರುಳಿ ಕವರ್ ಮೇಲೆ ಸಾಧನಾ ಸರಗಂ ಮತ್ತು ಶ್ರೇಯಾ ಘೋಶಾಲ್ ಹೆಸರನ್ನು ಮುದ್ರಿಸಲಾಗಿದ್ದು ಅನುರಾಧ ಭಟ್ ಅವರ ಹೆಸರನ್ನು ಕೈಬಿಡಲಾಗಿದೆ.

ಶ್ರೇಯಾ ಘೋಶಾಲ್ ಈ ಚಿತ್ರದಲ್ಲಿ ಒಂದೇ ಒಂದು ಹಾಡನ್ನು ಹಾಡಿಲ್ಲ. ವಿಷಯ ಹೀಗಿದ್ದರೂ ಅನುರಾಧ ಭಟ್ ಹೆಸರನ್ನು ಮರೆತಿರುವ ಬಗ್ಗೆ ಹಲವಾರು ಅನುಮಾನಗಳು ಮೂಡಿವೆ. ''ಇದೆಲ್ಲಾ ಆಡಿಯೋ ಕಂಪನಿಯದ್ದೇ ಕಿತಾಪತಿ'' ಎನ್ನುತ್ತಾರೆ ಸವಾರಿ ಚಿತ್ರದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ. ಮೊದಲ ಹಂತದಲ್ಲಿ ಹೊರಬಂದ ಸಿಡಿಗಳಲ್ಲಿ ಬಹಳಷ್ಟು ದೋಷಗಳಿವೆ. ನನ್ನ ಹೆಸರನ್ನೂ ತಪ್ಪಾಗಿ ಮುದ್ರಿಸಲಾಗಿದೆ. ಮುಂದಿನ ಆವೃತ್ತಿಗಳಲ್ಲೂ ಈ ತಪ್ಪನ್ನು ತಿದ್ದಿಕೊಂಡಿಲ್ಲ. ಅಲ್ಲೂ ಶ್ರೇಯಾ ಘೋಶಾಲ್ ಅವರ ಹೆಸರನ್ನೇ ಮುದ್ರಿಸಲಾಗಿದೆ ಎನ್ನುತ್ತಾರೆ ಮಣಿಕಾಂತ್.

Shreya Ghoshal
ಬಾಲಿವುಡ್ ಗಾಯಕ/ಗಾಯಕಿಯರನ್ನು ಮೊದಲು ಕನ್ನಡಕ್ಕೆ ಕರೆತಂದು ಸಾಕಷ್ಟು ವಿವಾದಕ್ಕೆ ಕಾರಣರಾಗಿದ್ದರು ಆನಂದ್ ಆಡಿಯೋ ಕಂಪನಿಯ ಮೋಹನ್ ಛಾಬ್ರಿಯಾ. ಈಗ ಕನ್ನಡ ಗಾಯಕಿ ಹೆಸರಿನ ಜಾಗದಲ್ಲಿ ಬಾಲಿವುಡ್ ಗಾಯಕಿ ಹೆಸರನ್ನು ಮುದ್ರಿಸಿ ಮತ್ತೊಮ್ಮೆ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ಮುಂಬೈ ಗಾಯಕರನ್ನು ಕನ್ನಡಕ್ಕೆ ಕರೆತರುತ್ತಿರುವ ಬಗ್ಗೆ ಕನ್ನಡ ಗಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೂ ಕನ್ನಡದಲ್ಲಿ ಬಾಲಿವುಡ್ ಗಾಯಕರಿಗೆ ಮಣೆಹಾಕುವುದು ಮಾತ್ರ ತಪ್ಪಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಛಾಬ್ರಿಯಾ, ತಪ್ಪೆಲ್ಲಾ ನಿರ್ಮಾಪಕರದ್ದೇ ಎನ್ನುತ್ತಾರೆ. ಧ್ವನಿಸುರುಳಿಗಳನ್ನು ಮುದ್ರಿಸುವುದಕ್ಕೂ ಮುನ್ನ ಎರಡನೆ ಗಾಯಕಿ ಯಾರೆಂದು ನಿರ್ಮಾಪಕರನ್ನು ಕೇಳಿದೆ. ಅವರು ಶ್ರೇಯಾ ಘೋಶಾಲ್ ಎಂದು ಹೇಳಿದರು. ಹಾಡು ಕೇಳಿದಾಗ ಅದು ಶ್ರೇಯಾ ಅವರ ಧ್ವನಿ ಅಲ್ಲ ಎನ್ನಿಸಿತು. ಈ ವಿಚಾರವನ್ನು ನಿರ್ಮಾಪಕರ ಗಮನಕ್ಕೂ ತಂದೆ. ಅದಕ್ಕವರು ಒಪ್ಪಲಿಲ್ಲ. ಚಿತ್ರದ ಗಾಯಕಿ ಶ್ರೇಯಾ ಘೋಶಾಲ್ ಅವರೇ ಎಂದು ನನಗೆ ಎಸ್ ಎಂ ಎಸ್ ಸಹ ಕಳುಹಿಸಿದರು. ಈಗ ತಪ್ಪಿನ ಅರಿವಾಗಿದೆ, ಮುಂದಿನ ಆವೃತ್ತಿಗಳಲ್ಲಿ ಇದನ್ನು ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸಿ.ಅಶ್ವಥ್ ಗೆ ಸ್ವರ ಮಾಂತ್ರಿಕ ಬಿರುದು ಪ್ರದಾನ
ವಾಯ್ಸ್ ಆಫ್ ಬೆಂಗಳೂರಿಗೆ ಅಮೀರ್ ಖಾನ್?
ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ
ಕನ್ನಡಕ್ಕೆ ಬಂದ ಹೊಸ ಕೋಗಿಲೆ ಶ್ರೇಯಾ
ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada