»   »  ಸಂಭಾವನೆ ವಿಷ್ಯ:ದಿನೇಶ್ ಗಾಂಧಿ - ಸುದೀಪ್ ಕಿರಿಕ್

ಸಂಭಾವನೆ ವಿಷ್ಯ:ದಿನೇಶ್ ಗಾಂಧಿ - ಸುದೀಪ್ ಕಿರಿಕ್

Subscribe to Filmibeat Kannada

ಈ ವರ್ಷದ ಹಿಟ್ ಚಿತ್ರ 'ವೀರ ಮದಕರಿ' ಇನ್ನೇನು ನೂರು ದಿನ ಪೂರೈಸಲಿದೆ. ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ ನೂರು ದಿನದ ಸಂಭ್ರಮವನ್ನು ಹಾಸನದ ಶ್ರೀಗುರು ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಆದರೆ ಚಿತ್ರದ ನಾಯಕ ಮತ್ತು ನಿರ್ದೇಶಕ ಸುದೀಪ್ ಈ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲವಂತೆ. ಯಾಕೆಂದರೆ ಚಿತ್ರಕ್ಕೆ ದುಡಿದವರಿಗೆ ಸರಿಯಾದ ಸಂಭಾವನೆ ನಿರ್ಮಾಪಕರು ಕೊಟ್ಟಿಲ್ಲ ಎನ್ನುವುದು ಸುದೀಪ್ ಅವರ ದೂರು.

ಒಂದು ಚಿತ್ರ ಚೆನ್ನಾಗಿ ಮೂಡಿಬರಬೇಕೆಂದರೆ ಅದಕ್ಕೆ ಎಲ್ಲಾ ಕಲಾವಿದರ ಮತ್ತು ತಂತ್ರಜ್ಞರ ಸಹಕಾರ ಇರಲೇಬೇಕು. ಚಿತ್ರ ಶುರುವಾಗುವ ಮೊದಲು ಒಂದು ಸಂಭಾವನೆ ನಿಗದಿಪಡಿಸುವುದು ಮತ್ತು ಕೊಡುವುದು ಒಂದು ಸಂಭಾವನೆಯಾದರೆ ಇವರನ್ನು ಕಡೆಗಣಿಸಿದಂತಾಗುತ್ತದೆ. ಚಿತ್ರ ಯಶಸ್ಸು ಗಳಿಸಿದ ಮೇಲಾದರೂ ಅವರಿಗೆ ಸರಿಯಾದ ಸಂಭಾವನೆ ಕೊಡಬೇಕಲ್ಲವೇ? ಇದು ನನ್ನ ನೋವು. ಚಿತ್ರವನ್ನು ನೋಡಿ ನೂರು ದಿನ ಪೂರೈಸಲು ಸಹಕರಿಸಿರುವ ಅಭಿಮಾನಿಗಳಿಗೆ ನನ್ನ ವಂದನೆಗಳು. ಚಿತ್ರದ ಶತದಿನೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿಲ್ಲ ಕ್ಷಮಿಸಿ ಎಂದು ಸುದೀಪ್ ಹೇಳಿದ್ದಾರೆ.

ಆದರೆ ನಿರ್ಮಾಪಕ ದಿನೇಶ್ ಗಾಂಧಿ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಸಲ್ಲಬೇಕಾದ ಸಂಭಾವನೆ ಸರಿಯಾಗಿ ಸಂದಿದೆ. ಕೆಲವು ತಂತ್ರಜ್ಞರು ಮಾತ್ರ ನಿಗದಿಪಡಿಸಿದ್ದ ಸಂಭಾವನೆಗಿಂತ ಹೆಚ್ಚು ಸಂಭಾವನೆಯನ್ನು ಚಿತ್ರ ಯಶಸ್ಸು ಗಳಿಸಿದ ನಂತರ ಕೇಳುತ್ತಿದ್ದಾರೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಪೂರ್ತಿ ಸಂಭಾವನೆ ಪಡೆಯದೆ ಯಾರೂ ಚಿತ್ರದಲ್ಲಿ ದುಡಿಯಲು ಮುಂದೆ ಬರುವುದಿಲ್ಲ. ಇದು ಸುದೀಪ್ ಅವರಿಗೂ ಗೊತ್ತಿರುವ ವಿಷಯ.

ಈ ತಿಂಗಳ 28 ರಂದು ಶತದಿನೋತ್ಸವ ಕಾರ್ಯಕ್ರಮ ಹಾಸನದಲ್ಲಿ ಆಯೋಜಿಸುತ್ತೇನೆ. ಸಮಾರಂಭಕ್ಕೆ ಬರುವಂತೆ ಸುದೀಪ್ ಗೆ ಆಹ್ವಾನ ನೀಡಲಾಗಿದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇನೆ ಆಮೇಲೆ ಅದು ಸುದೀಪ್ ಅವರಿಗೆ ಬಿಟ್ಟ ವಿಷಯ ಎಂದು ದಿನೇಶ್ ಗಾಂಧಿ ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada