»   »  ರಾಜ್ : ಬ್ಲೇಮ್ ಗೇಮ್ ಶುರು ಮಾಡಿದ ಪ್ರೇಮ್

ರಾಜ್ : ಬ್ಲೇಮ್ ಗೇಮ್ ಶುರು ಮಾಡಿದ ಪ್ರೇಮ್

Posted By:
Subscribe to Filmibeat Kannada

'ರಾಜ್ ದಿ ಶೋ ಮ್ಯಾನ್' ಚಿತ್ರವನ್ನು ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ 40 ವಿದೇಶಿ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ 'ರೀಲು' ಬಿಟ್ಟು ಅಪಾರ ಪ್ರಚಾರ ಗಿಟ್ಟಿಸಿದ್ದ ನಿರ್ದೇಶಕ ಪ್ರೇಮ್ ವಿದೇಶ ಹಂಚಿಕೆಯ ಹಕ್ಕು ಹೊಂದಿದ್ದ ಡಾ. ಕಿರಣ್ ಎಂಬುವವರ ಮೇಲೆ ಗೂಬೆ ಕೂಡಿಸುತ್ತಿದ್ದಾರೆ.

ವಿದೇಶದಲ್ಲಿ ರಾಜ್ ದಿ ಶೋ ಮ್ಯಾನ್ ಬಿಡುಗಡೆಯಾಗದಿದ್ದಕ್ಕೆ ನನ್ನ ತಪ್ಪೇನೂ ಇಲ್ಲ. ವಿದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡದೆ ನನಗೆ ಮೋಸ ಮಾಡಿದ್ದಾರೆ ಮತ್ತು ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಮಾಡಿದ್ದಾರೆ ಎಂದು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಕಿರಣ್ ತೋಟಂಬಿಟ್ಟು ಎಂಬುವವರತ್ತ ಪ್ರೇಮ್ ಬೆರಳು ತೋರಿಸುತ್ತಿದ್ದಾರೆ.

ಇದನ್ನು ಜಗಜ್ಜಾಹೀರಾತು ಮಾಡಲು ಸೋಮವಾರ ಪ್ರೇಮ್ ಪತ್ರಿಕಾಗೋಷ್ಠಿ ಕರೆದಿದ್ದರು. ಜೊತೆಗೆ ಕಿರಣ್ ತೋಟಂಬಿಟ್ಟು ಎಂಬುವವರನ್ನೂ ಕರೆಸಿದ್ದರು. ಮಾಧ್ಯಮದವರೆದುರಲ್ಲೇ ವಿದೇಶಗಳಲ್ಲಿ ಚಿತ್ರ ಬಿಡುಗಡೆ ಮಾಡದ್ದಕ್ಕೆ ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅವರ ವಿರುದ್ಧ ಮೋಸ ಮಾಡಿದ ಆರೋಪಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿವುದಾಗಿ ಬೆದರಿಕೆ ಹಾಕಿದರು.

ಇದಕ್ಕೆ ಪ್ರತಿಉತ್ತರಿಸಿದ ಕಿರಣ್, ರಾಜ್ ದಿ ಶೋ ಮ್ಯಾನ್ ಚಿತ್ರ ನೋಡಲು ವಿದೇಶಿ ಕನ್ನಡಿಗರು ಅಂತಹ ಉತ್ಸಾಹವೇನೂ ತೋರುತ್ತಿಲ್ಲ. ಅಲ್ಲದೆ, ವಿದೇಶದಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸುವ ಕುರಿತಂತೆ ತಮ್ಮ ಮತ್ತು ನಿರ್ಮಾಪಕರ ನಡುವೆ ಯಾವುದೇ ಲಿಖಿತ ಒಪ್ಪಂದ ಕೂಡ ನಡೆದಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.

ನಿರ್ಮಾಪಕರು, ನಿರ್ದೇಶಕರು ಮತ್ತು ಹಂಚಿಕೆದಾರರ ತಿಕ್ಕಾಟದಿಂದ ಬೇಸತ್ತಿರುವುದು 'ಬಡಪಾಯಿ' ಪ್ರೇಕ್ಷಕರು. ರಾಜ್ ಬಗ್ಗೆ ವಿದೇಶಗಳಲ್ಲಿ ಕನ್ನಡ ಚಿತ್ರ ಪ್ರೇಮಿಗಳು ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದರು. ಚಿತ್ರ ಬಿಡುಗಡೆಯಾಗದ್ದಕ್ಕೆ ಅನೇಕರು ತಮ್ಮ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಚಿತ್ರ ಯಾವ ರೀತಿ ಪ್ರೇಕ್ಷಕರ ಮೇಲೆ ಪರಿಣಾಮ ಬೀರಿದೆ, ಚಿತ್ರ ಪ್ರೇಕ್ಷಕನ ನಿರೀಕ್ಷೆಗೆ ತಕ್ಕಂತೆ ಬಂದಿದೆಯಿದೆಯೋ ಇಲ್ಲವೋ ಎಂಬುದು ಎರಡನೆಯ ಮಾತು. ಆದರೆ, ಪ್ರೇಕ್ಷಕನಿಗೆ ಬೇಡದ ಅನೇಕ ಕಾರಣಗಳಿಗಾಗಿ ರಾಜ್ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ವಿದೇಶದಲ್ಲಿನ ಚಿತ್ರಮಂದಿರಗಳಲ್ಲಿನ ಬಿಡುಗಡೆ ಕುರಿತಂತೆ ಜಾಹೀರಾತು ನೀಡಿ ಪ್ರಚಾರ ಗಿಟ್ಟಿಸಿದ್ದು ಅಬ್ಬರದ ಆರಂಭಕ್ಕೆ ಮಾತ್ರ ಸಹಕಾರಿಯಾಗಿದೆ.

ಎಷ್ಟೇ ಗಿಮಿಕ್ಕುಗಳ ಅಸ್ತ್ರ ಬಳಸಿದರೂ ಪ್ರೇಕ್ಷಕನನ್ನು ಪರಿಪೂರ್ಣವಾಗಿ ಹಿಡಿದಿಡುವಲ್ಲಿ ಚಿತ್ರ ಸೋತಿದೆ. ಇದರಿಂದಾಗಿ ಇರುಸುಮುರುಸಕ್ಕೆ ಗುರಿಯಾಗಿರುವ ಪ್ರೇಮ್ ವಿಚಲಿತರಾಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಪುನೀತ್ ರಾಜಕುಮಾರ್ ಅವರ ನಟನೆ, ಹರಿಕೃಷ್ಣ ಸಂಗೀತದ ಬಗ್ಗೆ ಉತ್ತಮ ಮಾತುಗಳ ಕೇಳಿಬಂದಿದ್ದರೂ, ಪ್ರೇಮ್ ಹೆಣೆದ ಕಥೆ ಮತ್ತು ನಿರ್ದೇಶನದ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada