»   » ಅಭಿ ಬೇಬಿಗೆ ಕನ್ನಡ ಕಲಿಸಿದ ದೀಪಿಕಾ!

ಅಭಿ ಬೇಬಿಗೆ ಕನ್ನಡ ಕಲಿಸಿದ ದೀಪಿಕಾ!

Posted By:
Subscribe to Filmibeat Kannada
Deepika Padukone
'ನಿಂದು ಹೆಸರು ಏನು?', 'ನನಿಗೆ ಮಿಲ್ಕ್ ಕೇಕ್ ತುಂಬಾ ಇಷ್ಟ', 'ನನಿಗೆ ಅಭಿಷೇಕ್ ತುಂಬಾ ಇಷ್ಟ'... ಈ ರೀತಿ ಈಗ ತಾನೆ ಬೆಂಗಳೂರಿಗೆ ಆಗಮಿಸಿ ಕನ್ನಡ ಕಲಿಯುತ್ತಿರುವ ಮಲಯಾಳಿಯೋ, ನಾರ್ತಿಯೋ ಮಾತಾಡಿದ್ದರೆ, ಇಷ್ಟಾದರೂ ಕನ್ನಡ ಕಲಿತಿದ್ದಾನಲ್ಲ ಅಂತ ಸಂತೋಷಪಡಬಹುದಿತ್ತು.

ಇಂಥ ಕನ್ನಡ ಪದಗಳನ್ನು ಉಲಿದಿದ್ದು, ಮಂಗಳೂರು ಬೆಡಗಿ ಐಶ್ವರ್ಯ ರೈ ಬಚ್ಚನ್ ಅವರ ಪಾಣಿಗ್ರಹಣ ಮಾಡಿರುವ ಅಭಿಷೇಕ್ ಬಚ್ಚನ್. ಇದಕ್ಕಾಗಿಯೂ ಸಂತಸಪಡೋಣ. ಇಷ್ಟಾದರೂ ಮಾತಾಡಲು ಪ್ರಯತ್ನಪಟ್ಟನಲ್ಲ ಅಂತ.

ಆದರೆ, ವಿಪರ್ಯಾಸದ ಸಂಗತಿಯೆಂದರೆ, ಈ ಕನ್ನಡ ನುಡಿಮುತ್ತುಗಳನ್ನು ಕಲಿಸಿಕೊಟ್ಟದ್ದು ಕನ್ನಡ ನಾಡಿನ ಕುವರಿ, ಬಾಲಿವುಡ್ ಚಿತ್ರರಂಗದಲ್ಲಿ ಬೆಳಗುತ್ತಿರುವ ಉದಯೋನ್ಮುಖ ತಾರೆ ದೀಪಿಕಾ ಪಡುಕೋಣೆ. ಅವಳು ಈ ಮಾತುಗಳನ್ನು ಹೇಳಿಸಿಕೊಟ್ಟಿದ್ದಕ್ಕೆ ರೇಗಬೇಕಾ ಅಥವಾ ತಪ್ಪುತಪ್ಪಾಗಿದ್ದರೂ ಕೂಡ ಕೊನೆಗೂ ಕೆಲ ಕನ್ನಡ ಪದಗಳನ್ನು ಮಾತಾಡಿದಳಲ್ಲ ಎಂದು ಬೀಗಬೇಕಾ ಹೇಳಿ?

ಟಿವಿಯಲ್ಲಿ ರಿಯಾಲಿಟಿ ಶೋನಲ್ಲಿ ಕಾರ್ತಿಕ್ ಕಾಲಿಂಗ್ ಕಾರ್ತಿಕ್ ಹಿಂದಿ ಚಿತ್ರದ ಜೋಡಿ ದೀಪಿಕಾ ಪಡುಕೋಣೆ ಮತ್ತು ಫರ್ಹಾನ್ ಅಖ್ತರ್ ಅವರು ಭಾಗವಹಿಸಿದಾಗ ಈ ಮಾತುಗಳನ್ನು ದೀಪಿಕಾ ಅಭಿಷೇಕ್ ಅವರಿಗೆ ಕಲಿಸಿಕೊಟ್ಟಿದ್ದಾರೆ. ಓಂ ಶಾಂತಿ ಓಂ ಚಿತ್ರ ನಿಮ್ಮ ಮೊದಲ ಚಿತ್ರವಲ್ಲ ಎಂದು ಅಭಿಷೇಕ್ ದೀಪಿಕಾಳನ್ನು ಕೆಣಕಿದಾಗ, ಅದನ್ನು ಹಿಂಜರಿಯುತ್ತಲೇ ದೀಪಿಕಾ ಒಪ್ಪಿಕೊಂಡಳು.

ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದು ಬೇರೆಲ್ಲೋ ವೃತ್ತಿಯನ್ನು ಅರಸಿ ಹೋದ ಈ ನಟನಾಮಣಿಗಳು ಕನ್ನಡದ ನಾಲ್ಕು ನುಡಿಗಳನ್ನು ಸ್ಪಷ್ಟವಾಗಿ ಮಾತಾಡಲು ತಿಣುಕುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಇಲ್ಲೇ ಹುಟ್ಟಿ, ಇಲ್ಲೇ ನೆಲೆ ಕಂಡುಕೊಂಡ ನಮ್ಮವರೇ ಆದ ಅನೇಕ ನಟಿಯರಿಗೆ ಸರಿಯಾಗಿ ಈಗಲೂ ಕೂಡ ಕನ್ನಡ ಮಾತಾಡಲು ಬರುವುದಿಲ್ಲ ಎಂಬುದು ಎಲ್ಲರೂ ಒಪ್ಪತಕ್ಕ ಮಾತು.

ಹೊರನಾಡಿನಿಂದ ಬಂದ ಪೂಜಾ ಗಾಂಧಿ, ಪಾರ್ವತಿ, ಬಿಯಾಂಕಾ ದೇಸಾಯಿ, ಪ್ರಿಯಾಂಕಾ ಉಪೇಂದ್ರ ಮೊದಲಾದವರು ಇಲ್ಲಿನವರೇ ಎಂಬಂತೆ ಕನ್ನಡ ಮಾತಾಡುತ್ತಿದ್ದಾರೆ. ಹಿಂದೆ ಕೂಡ ಮಾಲಾಶ್ರೀ, ಜೂಲಿ ಲಕ್ಷ್ಮಿ, ಸುಹಾಸಿನಿ, ಸರಿತಾ ಮೊದಲಾದವರು ನಿರರ್ಗಳವಾಗಿ ಕನ್ನಡ ಮಾತಾಡುವುದನ್ನು ಕಲಿತಿದ್ದಾರೆ. ಆದರೆ, ಇಂದಿನ ಕಾಲದ ಹುಡುಗಿಯರಿಗೇನಾಗಿದೆ? ಕನ್ನಡ ನಾಡಿನ ಭಾಷಾ ಸೊಗಡನ್ನು ಯಾಕೆ ಮರೆಯುತ್ತಿದ್ದಾರೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada