For Quick Alerts
  ALLOW NOTIFICATIONS  
  For Daily Alerts

  'ಎಂಧಿರನ್‌'ಗೆ ದಿಡ್ಡಿ ಬಾಗಿಲು ತೆರೆದು ಕೆಎಫ್‌ಸಿಸಿ ಸ್ವಾಗತ!

  By * ಉದಯರವಿ
  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲಿಟ್ಟಿದ್ದ ನಿರೀಕ್ಷೆಗಳು ಕಡೆಗೂ ಹುಸಿಯಾಗಿವೆ. ಯಾವುದೇ ಕಾರಣಕ್ಕ್ಕೂ 24ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಎಂಧಿರನ್' ಬಿಡುಗಡೆಗೆ ಅವಕಾಶ ಕಲ್ಪಿಸುವುದಿಲ್ಲ ಎಂಬ ನಂಬಿಕೆಗೆ ಕೆಎಫ್‌ಸಿಸಿ ಕೊಡಲಿ ಪೆಟ್ಟು ಕೊಟ್ಟಿದೆ. ರಾಜ್ಯದಾದ್ಯಂತ 35 ಚಿತ್ರಮಂದಿರಗಳಲ್ಲಿ 'ಎಂಧಿರನ್' ಚಿತ್ರ ಬಿಡುಗಡೆ ಫಿಲಂ ಚೇಂಬರ್ ಕಾರ್ಯಕಾರಿ ಸಮಿತಿ ಇಂದು (ಸೆ.29)ನಿರ್ಧಾರ ತೆಗೆದುಕೊಂಡಿತು. ಈ ಮೂಲಕ ಪರಭಾಷಾ ಚಿತ್ರವೊಂದಕ್ಕೆ ದಿಡ್ಡಿ ಬಾಗಿಲು ತೆರೆದು ಸ್ವಾಗತಿಸಿದಂತಾಗಿದೆ.

  ಚಿತ್ರದ ನಾಯಕ ನಟ ಸೂಪರ್ ಸ್ಟಾರ್ ರಜನಿಕಾಂತ್ ಎಂಬ ಕಾರಣಕ್ಕೆ ಕೆಎಫ್‌ಸಿಸಿ ತಾನೇ ರೂಪಿಸಿದ ನೀತಿ ನಿಯಮಗಳನ್ನು ಗಾಳಿಗೆ ತೂರಿರುವುದು ಹಲವಾರು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ 'ಎಂಧಿರನ್' ಚಿತ್ರಕ್ಕೆ 35 ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಅವಕಾಶ ಕಲ್ಪಿಸಿರುವ ಬಗ್ಗೆ ಕರ್ನಾಟಕ ಚಲನಚಿತ್ರ ನಿರ್ಮಾಪರ ಸಂಘ ತತ್ ಕ್ಷಣ ಪ್ರತಿಕ್ರಿಯಿಸಿದ್ದು, ಮಂಡಳಿಯ ಧೋರಣೆಯನ್ನು ಖಂಡಿಸಿದ್ದಾರೆ.

  ಈ ಸಂಬಂಧ ಬುಧವಾರ (ಸೆ.29) ಮಧ್ಯಾಹ್ನ ಸಭೆ ಸೇರುತ್ತಿರುವುದಾಗಿ ಕರ್ನಾಟಕ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ ಸಿ ಎನ್ ಚಂದ್ರಶೇಖರ್ ತಿಳಿಸಿದ್ದಾರೆ. ರಾಜ್ಯದಲ್ಲಿ 'ಎಂಧಿರನ್' ಚಿತ್ರದ ಟಿಕೆಟ್ ಧರವನ್ನು ಹೆಚ್ಚಿಸಿರುವುದಾಗಿಯೂ ವಾಣಿಜ್ಯ ಮಂಡಳಿ ತಿಳಿಸಿದೆ. ಆದರೆ ಇದು ಎಷ್ಟು ಸಮಂಜಸ ಎಂದು ಕೆಸಿಎನ್ ಪ್ರಶ್ನಿಸಿದ್ದಾರೆ.

  ಚಲನಚಿತ್ರ ವಾಣಿಜ್ಯ ಮಂಡಳಿಯ ಮೃದು ಧೋರಣೆ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ. ಮಂಡಳಿಯ ಈ ತಾರತಮ್ಯವನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಯಾವ ಕೋನದಲ್ಲಿ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎಂಬುದು ನಮಗೆ ತಿಳಿದುಬಂದಿಲ್ಲ ಎಂದು ಕೆಸಿಎನ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.

  ಪರಭಾಷಾ ಚಿತ್ರವೊಂದು ರಾಜ್ಯದಲ್ಲಿ 24ಕ್ಕಿಂತಲೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾವಂತಿಲ್ಲ ಎಂಬುದು ವಾಣಿಜ್ಯ ಮಂಡಳಿ ನಿಯಮ. ಈ ನಿಯಮವನ್ನು ಧಿಕ್ಕರಿಸಿದಾಗಲೆಲ್ಲಾ ಕೆಎಫ್‌ಸಿಸಿ ಹೋರಾಟ ಮನೋಭಾವ ತೋರಿದೆ. 'ರಾವಣ್' ಮತ್ತು 'ಕೈಟ್ಸ್' ಚಿತ್ರಗಳನ್ನು ಇಲ್ಲಿ ಉದಾಹರಿಸಬಹುದು. ಈಗ 'ಎಂಧಿರನ್' ಸಹ ತಮಿಳು, ತೆಲುಗು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ತೆರೆಕಾಣುತ್ತಿದೆ.

  ಆದರೆ 'ಎಂಧಿರನ್' ಚಿತ್ರದ ವಿಚಾರದಲ್ಲಿ ಕೆಎಫ್‌ಸಿಸಿ ಎಡವುತ್ತಿರುವುದೇಕೆ? ಇದು ರಜನಿಕಾಂತ್ ಚಿತ್ರ ಎಂಬ ಕಾರಣವೆ? ನೀತಿ ನಿಯಮ ಎಂದರೆ ಎಲ್ಲರಿಗೂ ಒಂದೇ ತಾನೆ? ಹಾಗಿದ್ದೂ ಈ ತಾರತಮ್ಯ ಏಕೆ? ಎಂಬ ಪ್ರಶ್ನೆಗಳ ಸರಮಾಲೆಯೇ ಕೆಎಫ್‌ಸಿಯನ್ನು ಸುತ್ತುವರಿದಿವೆ. ಇಂದು ಸಂಜೆ 4 ಗಂಟೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಫಿಲಂ ಚೇಂಬರ್ ಹೇಳಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X