ದರ್ಶನ್ 'ಕುರುಕ್ಷೇತ್ರ'ಕ್ಕೆ ಆರ್ಮುಗ ರವಿಶಂಕರ್ ಎಂಟ್ರಿ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ 50ನೇ ಚಿತ್ರ 'ಕುರುಕ್ಷೇತ್ರ' ಇದೇ ಭಾನುವಾರ (ಆಗಸ್ಟ್ 6) ಅದ್ಧೂರಿಯಾಗಿ ಶುರುವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುನಿರತ್ನ ನಿರ್ಮಾಣ ಮಾಡುತ್ತಿರುವ ಈ ಪೌರಾಣಿಕ ಸಿನಿಮಾಗೆ ಚಾಲನೆ ನೀಡಲಿದ್ದಾರೆ.
ಈ ಮಧ್ಯೆ 'ಕುರುಕ್ಷೇತ್ರ' ಚಿತ್ರದ ಪಾತ್ರಗಳು ಅಂತಿಮವಾಗಿದೆಯಾ ಎಂಬ ಪ್ರಶ್ನೆ ಕಾಡಿದೆ. ಮೂಲಗಳ ಪ್ರಕಾರ 'ಕುರುಕ್ಷೇತ್ರ'ದ ಬಹುತೇಕ ಪಾತ್ರಗಳು ಆಯ್ಕೆಯಾಗಿದ್ದು, ಕಲಾವಿದರ ಪಟ್ಟಿ ಸಿದ್ದವಾಗಿದೆಯಂತೆ. ಹೀಗಾಗಿ, ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಕನ್ನಡದ ಖ್ಯಾತ ಖಳನಟ ರವಿಶಂಕರ್ ಕೂಡ 'ಕುರುಕ್ಷೇತ್ರ' ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.

ರವಿಶಂಕರ್ ಅಭಿಮಾನಿಗಳು ಮೊದಲೇ ಇದನ್ನ ನಿರೀಕ್ಷೆ ಮಾಡಿದ್ದರು. ಈ ಸುದ್ದಿ ಯಾವಾಗ ಅಧಿಕೃತವಾಗಿ ಹೊರಬೀಳಲಿದೆ ಎಂದು ಕಾಯುತ್ತಿದ್ದಾರೆ. ಹೀಗಿರುವಾಗ, 'ಕುರುಕ್ಷೇತ್ರ' ಚಿತ್ರದ ಆಹ್ವಾನ ಪತ್ರಿಕೆಯಲ್ಲಿ ಪಾತ್ರಧಾರಿಗಳ ಫೋಟೋಗಳು ಬಹಿರಂಗವಾಗಿದೆ. ಈ ಪಟ್ಟಿಯಲ್ಲಿ ರವಿಶಂಕರ್ ಅವರ ಫೋಟೋ ಕೂಡ ಇದೆ.

ಹಾಗಿದ್ರೆ, ರವಿಶಂಕರ್ ಅವರದ್ದು, 'ಕುರುಕ್ಷೇತ್ರ' ಚಿತ್ರದಲ್ಲಿ ಯಾವ ಪಾತ್ರ ಎಂಬ ಕುತೂಹಲ ಹೆಚ್ಚಾಗಿದೆ. ಅದಕ್ಕೆ ಈಗ ಉತ್ತರ ಸಿಕ್ಕಿಲ್ಲ. ಉಳಿದಂತೆ ಅರ್ಜುನ್ ಸರ್ಜಾ, ಸಾಯಿಕುಮಾರ್, ನಿಖಿಲ್ ಕುಮಾರ್, ನಟಿ ಸ್ನೇಹ, ಹರಿಪ್ರಿಯಾ, ರೆಜಿನಾ, ಲಕ್ಷ್ಮಿ, ರವಿಚಂದ್ರನ್, ಅಂಬರೀಶ್ ಸೇರಿದಂತೆ ಹಲವರು 'ಕುರುಕ್ಷೇತ್ರ'ದಲ್ಲಿ ಅಭಿನಯಿಸಲಿದ್ದಾರೆ.
ಸದ್ಯ, ದರ್ಶನ್ ಅವರ ದುರ್ಯೋಧನನ ಗೆಟಪ್ ಮಾತ್ರ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಉಳಿದ ಪಾತ್ರಧಾರಿಗಳ ಅಸಲಿ ಗೆಟಪ್ ಗೌಪ್ಯವಾಗಿಟ್ಟಿದ್ದಾರೆ. ಉಳಿದ ಎಲ್ಲ ನಿರೀಕ್ಷೆಗಳಿಗೆ ಆಗಸ್ಟ್ 6 ರಂದು ತೆರೆ ಬೀಳಲಿದ್ದು, ಅಲ್ಲಿಯವರೆಗೂ ಈ ನಿರೀಕ್ಷೆ ಹಾಗೆ ಇರಲಿ....


Click it and Unblock the Notifications











