»   » ಭಪ್ಪರೆ ಶಿವಣ್ಣ, ಯುಗಾದಿಗೆ ಶಿವಸೈನ್ಯ ಪಕ್ಷ ಸ್ಥಾಪನೆ

ಭಪ್ಪರೆ ಶಿವಣ್ಣ, ಯುಗಾದಿಗೆ ಶಿವಸೈನ್ಯ ಪಕ್ಷ ಸ್ಥಾಪನೆ

By: ಉಗ್ರೇಂದ್ರ
Subscribe to Filmibeat Kannada

ಜಯ ನಾಮ ಸಂವತ್ಸರ ಆರಂಭದ ಶುಭಸಂದರ್ಭದಲ್ಲಿ ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಶಿವರಾಜ್ ಒಂದು ಸಂತಸದ, ಅಚ್ಚರಿ ಮೂಡಿಸುವ, ರಾಜಕಾರಣಿಗಳೆಲ್ಲ ಬೆಚ್ಚಿಬೀಳಿಸುವ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನೆಂದರೆ, ಯುಗಾದಿಯ ಮರುದಿನ 'ಶಿವಸೈನ್ಯ' ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ.

ತಮ್ಮೆಲ್ಲ ಜೀವನವನ್ನು ನಟನೆಯಲ್ಲೇ ಕಳೆಯುವುದಾಗಿ, ರಾಜಕೀಯಕ್ಕೆ ಎಂದೂ ಕಾಲಿಡುವುದಿಲ್ಲ ಎಂದು ಪ್ರಕಟಿಸಿದ್ದ ಅಭಿಮಾನಿಗಳಿಗೆ ಇದು ಹಿತಕರವಾದ ಆಘಾತವಾಗಿದೆ. ಹಾಗೆಯೆ, ಪ್ರಪ್ರಥಮ ಬಾರಿಗೆ ಜನಪ್ರಿಯ ನಟರೊಬ್ಬರು ರಾಜಕೀಯಕ್ಕೆ ಕಾಲಿಡುತ್ತಿದ್ದಾರಲ್ಲ ಎಂದು, ಅವರು ರಾಜಕೀಯ ಸೇರಬಯಸುವ ಅಭಿಮಾನಿಗಳು ಪುಳಕಗೊಂಡಿದ್ದಾರೆ.

ಈ ಸಂತಸವನ್ನು ಹಂಚಿಕೊಳ್ಳಲೆಂದು ಯುಗಾದಿಯ ಸಂಜೆ ಗ್ರೀನ್ ಹೌಸ್ ನಲ್ಲಿ ಶಿವರಾಜ್ ಅವರು ವಿಶೇಷ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಹೊಸ ರಾಜಕೀಯ ಪಕ್ಷದ ಸ್ವರೂಪ, ಮುಂದಿನ ಕನಸುಗಳ ಬಗ್ಗೆ ಅವರು ಸಂಕ್ಷಿಪ್ತವಾಗಿ ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡುವುದಲ್ಲದೆ, ತಮ್ಮ ರಾಜಕೀಯ ನೀತಿ ಪ್ರಕಟಿಸುವುದಾಗಿ ನುಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Actor Shivaraj decides to launch political party

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ, ಒಬ್ಬ ಹೆಸರಾಂತ ಜ್ಯೋತಿಷಿಗಳು ನೀಡಿರುವ ಭವಿಷ್ಯದ ಪ್ರಕಾರ, ರಾಜ್ಯ ಸರಕಾರ ಪತನಗೊಂಡು ಮತ್ತೆ ವಿಧಾನಸಭೆ ಚುನಾವಣೆ ನಡೆಯುವ ಸಂಭವವಿರುವುದರಿಂದ, ಕಟ್ಟಾ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿ, ರಾಜಕೀಯ ಪಕ್ಷ ಕಟ್ಟುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ಶಿವರಾಜ್ ರಾಜಕೀಯ ಪಕ್ಷ ಕಟ್ಟಲು ಮತ್ತೊಂದು ಬಲವಾದ ಕಾರಣವೆಂದರೆ, ನಟನೆಯ ಹಿನ್ನೆಲೆಯುಳ್ಳ ಮತ್ತು ಇಡೀ ವಂಶವನ್ನೇ ನಟನೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬದ ವ್ಯಕ್ತಿಯೊಬ್ಬರು ಸದ್ಯದಲ್ಲೇ ಮುಖ್ಯಮಂತ್ರಿ ಪಟ್ಟ ಏರಲಿದ್ದಾರೆ ಎಂದು ಅದೇ ಜ್ಯೋತಿಷಿ ಭವಿಷ್ಯ ನುಡಿದಿರುವುದು. ಅದರಲ್ಲೂ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗುವ ಸಂಭವನೀಯತೆಯೇ ಹೆಚ್ಚು ಎಂದು ಆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರಂತೆ.

ಇದೇ ಸಂದರ್ಭದಲ್ಲಿ, ಪಕ್ಷ ಕಟ್ಟುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದು, ನಟನೆಯಲ್ಲಿ ಆಸಕ್ತಿ ಇರುವ ಮತ್ತು ಕೆಟ್ಟದಾಗಿ ನಟಿಸಿದರೂ ಸರಿ ನಟನೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಪಕ್ಷದೊಳಗೆ ಸೇರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಇದರಿಂದ, ಸದ್ಯ ತಮಿಳುನಾಡಿನ ಎಂಜಿಆರ್, ಆಂಧ್ರದ ಎನ್ಟಿಆರ್ ಅವರಂತೆ ಕನ್ನಡ ಚಿತ್ರರಂಗದಲ್ಲಿಯೂ ಒಬ್ಬರು ಮುಂದೆ ಬಂದಿದ್ದಾರಲ್ಲ ಎಂದು ಚಿತ್ರರಂಗದ ಮಂದಿಯೆಲ್ಲ ಪುಳಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಈ ಸುದ್ದಿಯಿಂದ ಹೆಚ್ಚು ಕಳವಳಕ್ಕೀಡಾಗಿರುವುದು ಲೋಕಸಭಾ ಚುನಾವಣೆಯಲ್ಲಿ ತೊಡಗಿಕೊಂಡಿರುವ ರಾಜಕಾರಣಿಗಳು. ಅವರ ಮೇಲೆ ಈ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಕೆಲವರು ಪ್ರಚಾರ ಕಾರ್ಯವನ್ನು ಅರ್ಧಕ್ಕೇ ನಿಲ್ಲಿಸಿ, ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಲು ವಾಪಸ್ ಬಂದಿದ್ದಾರೆ ಎಂದೂ ತಿಳಿದುಬಂದಿದೆ. ಕೆಲವರು, ತಾವಿದ್ದ ರಾಜಕೀಯ ಪಕ್ಷಕ್ಕೆ ಸಲಾಂ ಹೊಡೆದು ಶಿವಸೈನ್ಯ ಸೇರಲು ಕೂಡ ಚಿಂತನೆ ನಡೆಸಿದ್ದಾರೆ ಎಂದೂ ಬಲ್ಲ ಮೂಲಗಳಿಂದ ಗೊತ್ತಾಗಿದೆ. ಆಂಧ್ರದಲ್ಲಿ ಹೊಸಪಕ್ಷ ಕಟ್ಟಿರುವ ಪವನ್ ಕಲ್ಯಾಣ್ ಕೂಡ ಈ ಸುದ್ದಿಯಿಂದ ಉತ್ತೇಜಿತರಾಗಿದ್ದು, ಶಿವಸೈನ್ಯದ ಜೊತೆ ಕೈಜೋಡಿಸುವ ಸಂಭವನೀಯತೆಯಿದೆ.

ಒಟ್ಟಿನಲ್ಲಿ ಶಿವಸೈನ್ಯ ರಾಜಕೀಯ ಪಕ್ಷ ಸ್ಥಾಪನೆಯ ಘೋಷಣೆಯಿಂದ ಇಡೀ ಕರ್ನಾಟಕದಲ್ಲಿ, ಅದರಲ್ಲೂ ಕರೆಂಟೇ ಕಾಣದ ಹಳ್ಳಿಗಳಲ್ಲಿ, ಬೇಸಿಗೆಯ ಲೋಡ್ ಶೆಡ್ಡಿಂಗ್ ಗೆ ಬಲಿಯಾಗಿರುವ ಊರುಗಳಲ್ಲಿ ವಿದ್ಯುತ್ ಪ್ರವಹಿಸಿದಂತೆ ಭಾಸವಾಗಿದೆಯಂತೆ. ಶಿವಸೈನ್ಯ ಅಧಿಕಾರಕ್ಕೆ ಬಂದು, ತಮ್ಮ ಹಳ್ಳಿಗೆ ಊರಿಗೆ ವಿದ್ಯುತ್ ಬಂದರೆ ಅಷ್ಟೇ ಸಾಕು ಎಂದು ಜನರು ಆಶಾವಾದದಿಂದ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲಿ ಚಿತ್ರೀಕರಣ ಮತ್ತು ರಾಜಕೀಯದಲ್ಲಿ ರಾಜಕಾರಣ ಚಟುವಟಿಕೆ ಸ್ಥಗಿತಗೊಂಡಿದ್ದು, ಮುಂದೇನಾಗುತ್ತೋ ಎಂದು ಕಾದು ನೋಡುವಂತಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್ ಅವರು ನಾಡಿನ ಸಮಸ್ತ ಜನರಿಗೆ ಏಪ್ರಿಲ್ ತಿಂಗಳ ಶುಭಾಶಯ ಕೋರಿದ್ದಾರೆ.

English summary
Sandalwood Actor Shivaraj has decides to launch new political party Shivasainya immediately after Ugadi festival. Entire film industry is overjoyed by this news. On the other side politicians are thinking to joining Shivasainya by quitting their party.
Please Wait while comments are loading...