For Quick Alerts
  ALLOW NOTIFICATIONS  
  For Daily Alerts

  ಸಿನಿಮಾದವರ ವಿರುದ್ಧ ಸಿನಿಮಾವನ್ನೇ ಅಸ್ತ್ರವಾಗಿ ಬಳಸಲಿರುವ ಜಗನ್: ಬಂಪರ್ ಪ್ಲ್ಯಾನ್

  |

  ಆಂಧ್ರ ಸಿಎಂ ಜಗನ್ ವಿರುದ್ಧ ತೆಲುಗು ಚಿತ್ರರಂಗ ತೀವ್ರ ಅಸಮಾಧಾನಗೊಂಡಿದೆ. ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಮೊದಲುಗೊಂಡು ಇಡೀ ಚಿತ್ರರಂಗವನ್ನೇ ಎದುರು ಹಾಕಿಕೊಂಡಿದ್ದಾರೆ ಸಿಎಂ ಜಗನ್.

  ಆಂಧ್ರದಲ್ಲಿ ಚಿತ್ರಮಂದಿರದ ಟಿಕೆಟ್ ದರಗಳನ್ನು ತೀವ್ರವಾಗಿ ಇಳಿಸಿ, ಚಿತ್ರಮಂದಿರಗಳ ಮಾಲೀಕರ ಮೇಲೆ ಕಠಿಣ ನಿಯಮಗಳನ್ನು ಜಾರಿಗೊಳಿಸಿ, ಸಿನಿಮಾ ಟಿಕೆಟ್ ದರಗಳನ್ನು ಸರ್ಕಾರವೇ ಮಾರಾಟ ಮಾಡುವ ಯೋಜನೆ ತರುವ ಮೂಲಕ ಪರೋಕ್ಷವಾಗಿ ಚಿತ್ರರಂಗದ ಮೇಲೆ ಅಲ್ಲಿನ ವ್ಯವಹಾರಗಳ ಮೇಲೆ ಸರ್ಕಾರದ ನಿಗಾ ಹೇರಿದ್ದಲ್ಲದೆ, ಆರ್ಥಿಕವಾಗಿಯೂ ಪೆಟ್ಟು ನೀಡಿದರು. ಇದರಿಂದ ಚಿತ್ರರಂಗದವರು ಜಗನ್ ವಿರುದ್ಧ ಅಸಮಾಧಾನಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಜಗನ್‌ ವಿರುದ್ಧವಾಗಿ ನೇರವಾಗಿ, ಪರೋಕ್ಷವಾಗಿ ಕೆಲಸ ಮಾಡಲು ಹಲವು ಸ್ಟಾರ್ ನಟರು ಸಿದ್ಧರಾಗಿದ್ದಾರೆ.

  ಆದರೆ ಜಗನ್, ಚಾಣಾಕ್ಷ ರಾಜಕಾರಣಿಯಾಗಿದ್ದು, ಕಳೆದ ಆಂಧ್ರ ವಿಧಾನಸಭೆ ಚುನಾವಣೆಗೆ ಮುನ್ನ ಸಹ ಅವರು ಇತರ ರಾಜಕೀಯ ದಾಳಗಳ ಜೊತೆಗೆ ಸಿನಿಮಾ ದಾಳವನ್ನೂ ಪ್ರಯೋಗಿಸಿ ಐತಿಹಾಸಿಕ ಬಹುಮತದಿಂದ ಗೆದ್ದು ಸಿಎಂ ಆಗಿದ್ದರು. ಕಳೆದ ಬಾರಿ ಆಂಧ್ರದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಬರೋಬ್ಬರಿ ಒಂದು ತಿಂಗಳ ಮುಂದಷ್ಟೆ ತಮ್ಮ ತಂದೆ ವೈಎಸ್‌ ರಾಜಶೇಖರ ರೆಡ್ಡಿ ಕುರಿತ ಸಿನಿಮಾ ಬಿಡುಗಡೆ ಮಾಡಿಸಿ ಜನರಲ್ಲಿ ಅವರ ಪರವಾದ ಅಭಿಪ್ರಾಯ ಮೂಡುವಂತೆ ಮಾಡಲು ಯಶಸ್ವಿಯಾಗಿದ್ದರು. ಈ ಬಾರಿಯೂ ಅದೇ ಯೋಜನೆಯನ್ನು ಜಾರಿಗೊಳಿಸಲು ಜಗನ್ ಮುಂದಾಗಿದ್ದಾರೆ.

  ಸವಾಲಿನ ಚುನಾವಣೆ ಆಗಲಿದೆ

  ಸವಾಲಿನ ಚುನಾವಣೆ ಆಗಲಿದೆ

  ಕಳೆದ ಚುನಾವಣೆಗಿಂತಲೂ ಜಗನ್‌ಗೆ ಈ ಬಾರಿಯ ಚುನಾವಣೆ ಸವಾಲಿನದ್ದಾಗಿರಲಿದ್ದು, ಕಳೆದ ಬಾರಿ ಜಗನ್‌ ಗೆಲುವಿನ ಕಾರಣಗಳಲ್ಲಿ ಒಂದಾದ 'ಯಾತ್ರ' ಸಿನಿಮಾದ ದಾಳವನ್ನೇ ಮತ್ತೆ ಉರುಳಿಸಲು ಮುಂದಾಗಿದ್ದು, 'ಯಾತ್ರ 2' ಸಿನಿಮಾವನ್ನು ಮುಂದಿನ ಚುನಾವಣೆಗೆ ಮುಂದಾಗಿ ಬಿಡುಗಡೆ ಮಾಡುವ ಯೋಜನೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆಂದು ಈಗಿನಿಂದಲೇ ತಯಾರಿ ಸಹ ಆರಂಭಿಸಿದ್ದಾರೆ.

  ಚುನಾವಣೆಗೆ ಮುನ್ನ ಬಿಡುಗಡೆ ಆಗಿದ್ದ 'ಯಾತ್ರ'

  ಚುನಾವಣೆಗೆ ಮುನ್ನ ಬಿಡುಗಡೆ ಆಗಿದ್ದ 'ಯಾತ್ರ'

  2019 ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಿದ್ದ ತೆಲುಗಿನ 'ಯಾತ್ರ' ಸಿನಿಮಾದಲ್ಲಿ ಮಲಯಾಳಂನ ಪ್ರಮುಖ ನಟ ಮಮ್ಮುಟಿ ಜಗನ್‌ರ ತಂದೆ, ಮಾಜಿ ಆಂಧ್ರ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಪಾತ್ರದಲ್ಲಿ ನಟಿಸಿದ್ದರು. ಅವರ ರಾಜಕೀಯ ಜೀವನ, ಕಾಂಗ್ರೆಸ್ ಪಕ್ಷದಿಂದ ದೂರಾದ ಬಗೆ, ಅವರ ಐತಿಹಾಸಿಕ ಕಾಲ್ನಡಿಗೆ ಯಾತ್ರೆಗಳು ಇನ್ನಿತರೆ ವಿಷಯಗಳ ಬಗ್ಗೆ ಆ ಸಿನಿಮಾ ಇತ್ತು. ಆ ಸಿನಿಮಾದಿಂದಾಗಿ ಜಗನ್‌ಗೆ ಸಾಕಷ್ಟು ಸಹಾಯವಾಯಿತು. ಅವರು ಭಾರಿ ಬಹುಮತದಿಂದ ಗೆದ್ದು ಬಂದರು.

  ರಾಮ್ ಗೋಪಾಲ್ ವರ್ಮಾ ಜೊತೆ ಚರ್ಚೆ

  ರಾಮ್ ಗೋಪಾಲ್ ವರ್ಮಾ ಜೊತೆ ಚರ್ಚೆ

  2023 ರ ಅಂತ್ಯ ಅಥವಾ 2024 ರಲ್ಲಿ ಆಂಧ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಚುನಾವಣೆಗೆ ಮುನ್ನಾ 'ಯಾತ್ರ 2' ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಲು ಜಗನ್‌ ಸಜ್ಜಾಗಿದ್ದಾರೆ. ಇದಕ್ಕಾಗಿ ತೆಲುಗಿನ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಟ್ಟಿಗೆ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ. ರಾಮ್ ಗೋಪಾಲ್ ವರ್ಮಾ ಮೊದಲಿನಿಂದಲೂ ಆಂಧ್ರದ ಮಾಜಿ ಸಿಎಂ, ಜಗನ್‌ರ ವಿರೋಧಿ ಚಂದ್ರಬಾಬು ನಾಯ್ಡು ಅನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಜಗನ್‌ಗೆ ಹೊಸದಾಗಿ ತಲೆನೋವು ನೀಡುತ್ತಿರುವ ಪವನ್ ಅವರನ್ನೂ ವಿರೋಧಿಸುತ್ತಲೇ ಬಂದಿದ್ದಾರೆ. ಹಾಗಾಗಿ 'ಯಾತ್ರ 2' ನಿರ್ದೇಶಿಸಲು ಶತ್ರುವಿನ ಶತ್ರು ರಾಮ್ ಗೋಪಾಲ್ ವರ್ಮಾ ಅನ್ನು ಜಗನ್ ಆರಿಸಿದ್ದಾರೆ ಎನ್ನಲಾಗುತ್ತಿದೆ.

  'ಯಾತ್ರ 2' ನಲ್ಲಿ ಏನಿರಲಿದೆ?

  'ಯಾತ್ರ 2' ನಲ್ಲಿ ಏನಿರಲಿದೆ?

  'ಯಾತ್ರ 2' ಸಿನಿಮಾದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಸಾವು, ಆ ನಂತರ ಜಗನ್ ಅನುಭವಿಸಿದ ಕಷ್ಟ, ಜೈಲು ವಾಸ, ಚಂದ್ರಬಾಬು ನಾಯ್ಡು ಸರ್ಕಾರದಿಂದ ಅನುಭವಿಸಿದ ಹಿಂಸೆ, ಹೊಸ ಪಕ್ಷ ಸ್ಥಾಪನೆ, ಕಾಂಗ್ರೆಸ್‌ನಿಂದ ಬಂದ ಅಸಹಾಕಾರ, ಜಗನ್‌ ಮಾಡಿದ ಕಾಲ್ನಡಿಗೆ ಯಾತ್ರೆ, ಯಾತ್ರೆಗೆ ಸರ್ಕಾರ ಮಾಡಿದ ಅಡ್ಡಿ ಇನ್ನಿತರೆ ವಿಷಯಗಳನ್ನು ಒಳಗೊಂಡಿರಲಿದೆ. ಸಿನಿಮಾದ ಯೋಜನೆಯನ್ನು ಈಗಿನಿಂದಲೇ ಮಾಡಿ ಇನ್ನೆರಡು ವರ್ಷದಲ್ಲಿ ಬಿಡುಗಡೆ ಮಾಡುವುದು ಜಗನ್‌ರ ಯೋಜನೆ ಎನ್ನಲಾಗುತ್ತಿದೆ. 2019 ರಲ್ಲಿ ಬಿಡುಗಡೆ ಆಗಿದ್ದ 'ಯಾತ್ರ' ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಗಳಿಸಿಕೊಳ್ಳುವ ಜೊತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಯಶಸ್ಸು ಗಳಿಸಿತ್ತು. ಜಗನ್‌ರ ರಾಜಕೀಯ ಬೆಳವಣಿಗೆಗೂ ಸಹಾಯ ಮಾಡಿತ್ತು. ಮುಂದಿನ 'ಯಾತ್ರ' ಏನು ಮಾಡಲಿದೆ ಕಾದು ನೋಡಬೇಕಿದೆ.

  English summary
  Ram Gopal Varma met Andhra CM Jagam Mohan Reddy to discuss about Yatra 2 movie. before 2019 Andhra assembly election Yatra movie released and helped Jagan to win election by huge margin.
  Wednesday, October 26, 2022, 22:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X