»   » ಜೇಮ್ಸ್ ಬಾಂಡ್ ಗೆ ಸಿಕ್ಕಳು ಉಕ್ರೇನಿನ ಬೆಡಗಿ

ಜೇಮ್ಸ್ ಬಾಂಡ್ ಗೆ ಸಿಕ್ಕಳು ಉಕ್ರೇನಿನ ಬೆಡಗಿ

By: ಮಹೇಶ್ ಮಲ್ನಾಡ್
Subscribe to Filmibeat Kannada

ಐದಡಿ ಒಂಬತ್ತೂವರೆ ಇಂಚು ಎತ್ತರದ ಉಕ್ರೇನ್ ಸುಂದರಿ ಓಲ್ಗಾ ಕುರಿಯೆಂಕೋ ಜೇಮ್ಸ್ ಬಾಂಡ್ ನ ಹೊಸ ಗೆಳತಿಯಾಗಿ ಆಯ್ಕೆಯಾಗಿದ್ದಾಳೆ. ಬ್ರಿಟನ್ನಿನ ಹೊಸ ಬೆಡಗಿ ಜೆಮ್ಮಾ ಅರ್ಟಟನ್ ಹಾಗೂ ಓಲ್ಗಾ ಈ ಬಾರಿ ಜೇಮ್ಸ್ ಬಾಂಡ್ ಡೇನಿಯಲ್ ಕ್ರೆಗ್ ನ ಹೊಸ ಬಾಂಡ್ ಗರ್ಲ್ಸ್ ಗಳಾಗಿ ಮಿಂಚಲಿದ್ದಾರೆ. ಕ್ಯಾಸಿನೋ ರಾಯಲ್ ಚಿತ್ರದ ನಂತರದ ಭಾಗವಾಗಿ 'ಕ್ವಾಂಟಮ್ ಆಫ್ ಸೊಲಾಸ್' ಚಿತ್ರ ತೆರೆಕಾಣಲು ಸಿದ್ಧವಾಗಿದೆ.


ಓಲ್ಗಾ 'ಗಂಗಾ'
ಸೋವಿಯಟ್ ರಷ್ಯಾದ ತಾಯಿ, ಉಕ್ರೇನಿನ ತಂದೆಗೆ ನವೆಂಬರ್ 14 ರಂದು ಜನಿಸಿದ ಓಲ್ಗಾ ಬಾಲ್ಯದಲ್ಲಿ ತಂದೆ ತಾಯಿಯ ಪ್ರೀತಿಯನ್ನು ಕಳೆದುಕೊಂಡವಳು. ಮೂರು ವರ್ಷದವಳಿದ್ದಾಗ ಇವಳ ತಂದೆ-ತಾಯಿ ವಿಚ್ಛೇದನ ಪಡೆದರು. ಬಡತನದ ಆ ದಿನಗಳಲ್ಲಿ ತನ್ನ ಚಿಕ್ಕಮ್ಮನ ಆರೈಕೆಯೆ ಆಸರೆಯಾಯಿತು. ಅಜ್ಜ, ಅಜ್ಜಿ, ಮಾವನ ಜೊತೆಗೆ ತಾಯಿಯೂ ಸೇರಿ ಒಂದೆ ಫ್ಲಾಟ್ ನಲ್ಲಿ ವಾಸಮಾಡುತ್ತಿದ್ದ ಕಷ್ಟಕರ ಕಾಲ. ಓಲ್ಗಾ ಪುನಃ ತನ್ನ ತಂದೆಯನ್ನು ನೋಡಿದ್ದು ತನ್ನ ಹದಿಮೂರನೇ ವಯಸ್ಸಿನಲ್ಲಿ. ಅದು ಆತ ತನ್ನ ಎರಡನೇ ಪತ್ನಿಯಿಂದ ಡೈವೋರ್ಸ್ ಆಗಿ ಪುನಃ ಈ ಕಡೆ ಮುಖ ಮಾಡಿದಾಗ.

ಸುಂದರ ಅಂಗಸೌಷ್ಟವ ಹೊಂದಿದ್ದ ಓಲ್ಗಾ ರೂಪದರ್ಶಿಯಾಗಿ ಹೆಸರು ಮಾಡತೊಡಗಿದಳು. ಶಾಲೆಯಲ್ಲಿ ಕಲಿತಿದ್ದು ಫ್ರೆಂಚ್ ಭಾಷೆ. ಇಂಗ್ಲೀಷ್ ಕೂಡ ಮಾತಾಡಬಲ್ಲಳು. ಅನ್ನುಲೈರ್ ಲಾ ( Annulaire, L" )ಎಂಬ ಚಿತ್ರದೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದಳು. ಫ್ಯಾಷನ್ ಫೋಟೋಗ್ರಾಫರ್ ಸೆಡ್ರಿಕ್ ವಾಲ್ ಮೊಲ್ ನನ್ನು ಮದುವೆಯಾದ ಓಲ್ಗಾ ದಾಂಪತ್ಯ ಉಳಿದಿದ್ದು ನಾಲ್ಕು ವರ್ಷ ಮಾತ್ರ. ನಂತರ ಡೆನಿಯಲ್ ಗ್ಯಾಬ್ರಿಲ್ ನನ್ನು ವರಿಸಿದರೂ 2007ರಲ್ಲಿ ಡೈವೋರ್ಸ್ ಕೊಟ್ಟಳು. ಒಟ್ಟಿನಲ್ಲಿ ಸಾಂಸಾರಿಕ ಜೀವನದಲ್ಲಿ ಸುಖ ಕಂಡಿದ್ದು ಕಮ್ಮಿ.

ಬ್ರೂಕ್ಲೀನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ Annulaire, L" ಚಿತ್ರದ ಇರಿಸ್ ಪಾತ್ರಕ್ಕೆ ಅಪಾರ ಪ್ರಶಂಸೆ ಗಳಿಸಿದಳು. ನಂತರ Paris, je t'aime (2006), The Serpent (2006) , Hitman (2007) ಈಕೆಗೆ ಹೆಸರು ತಂದು ಕೊಟ್ಟ ಚಿತ್ರಗಳು. Quantum of Solace (2008) ಚಿತ್ರವಲ್ಲದೆ ವಿಡಿಯೋ ಗೇಮ್ ಆಧಾರಿತ ಚಿತ್ರ Max Payne (2008) ನಲ್ಲೂ ನಟಿಸಿದ್ದಾಳೆ.

ಕ್ವಾಂಟಮ್ ಆಫ್ ಸೋಲಾಸ್ -ಹೊಸ ಬಾಂಡ್ ಚಿತ್ರ
ಜೇಮ್ಸ್ ಬಾಂಡ್ ಚಿತ್ರಸರಣಿಯ 22ನೇ ಚಿತ್ರ ಇದಾಗಿದೆ. ಡೇನಿಯಲ್ ಕ್ರೆಸ್ ಎರಡನೇ ಬಾರಿ ಜೇಮ್ಸ್ ಬಾಂಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾಂಡ್ ಚಿತ್ರ ಡಾ.ನೋ 1962ರಲ್ಲಿ ತೆರೆಕಂಡಿತ್ತು. ಕೈಟ್ ರನ್ನರ್ ಚಿತ್ರ ಖ್ಯಾತಿಯ ಮಾರ್ಕ್ ಫೋಸ್ಟರ್ ಈ ಚಿತ್ರದ ನಿರ್ದೇಶಕ. ಕ್ಯಾಸಿನೋ ರಾಯಲ್ ಗೆ ಕಥೆ ಬರೆದಿದ್ದ ರಾಬರ್ಟ್ ವೆಡ್ ಮತ್ತು ಪೌಲ್ ಹಗ್ಗಿನ್ಸ್ ಜೋಡಿ ಈ ಚಿತ್ರಕ್ಕೂ ಚಿತ್ರಕಥೆ ಒದಗಿಸಿದ್ದಾರೆ. ಯುಕೆನಲ್ಲಿ ಅ.31 ಕ್ಕೆ , ಯುಎಸ್ ನಲ್ಲಿ ನವೆಂಬರ್ 14(ಥ್ಯಾಂಕ್ಸ್ ಗೀವಿಂಗ್ ವಾರಾಂತ್ಯ) ಹಾಗೂ ಭಾರತದಲ್ಲಿ ನ.7 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಭಾರತದಲ್ಲಿ ಈ ಚಿತ್ರದ ಬಿಡುಗಡೆಯ ಹಕ್ಕನ್ನು ಸೋನಿ ಪಿಕ್ಚರ್ಸ್ ಸಂಸ್ಥೆ ಪಡೆದಿದೆ.

(ದಟ್ಸ್ ಜಾಲಿವುಡ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada