»   » ಸಂದರ್ಶನ : ಇಂದಿನ ಸಮಾಜದ ಪ್ರತಿಬಿಂಬವೇ ಈ 'ಬಟರ್ ಫ್ಲೈ'

ಸಂದರ್ಶನ : ಇಂದಿನ ಸಮಾಜದ ಪ್ರತಿಬಿಂಬವೇ ಈ 'ಬಟರ್ ಫ್ಲೈ'

Posted By:
Subscribe to Filmibeat Kannada

ರಮೇಶ್ ಅರವಿಂದ್ ಸದ್ಯ 'ಬಟರ್ ಫ್ಲೈ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದು 'ಕ್ವೀನ್' ಚಿತ್ರದ ರಿಮೇಕ್. ಹಿಂದಿಯಲ್ಲಿ ಕಂಗನಾ ರಣಾವತ್ ನಟಿಸಿದ್ದ 'ಕ್ವೀನ್' ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಇದೇ ಸಿನಿಮಾ ಈಗ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗೆ ರಿಮೇಕ್ ಆಗುತ್ತಿದೆ. ರಮೇಶ್ ಕನ್ನಡ, ತೆಲುಗು, ತಮಿಳು ಭಾಷೆಯ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಇಷ್ಟು ದಿನ ಪ್ಯಾರಿಸ್ ನಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದ ರಮೇಶ್ ಅಂಡ್ ಟೀಂ ಈಗ ಬೆಂಗಳೂರಿಗೆ ವಾಪಸ್ ಆಗಿದೆ. ಜೊತೆಗೆ ಚಿತ್ರೀಕರಣದಲ್ಲಿ ಆದ ತಮ್ಮ ಅನುಭವವನ್ನು ಹಂಚಿಕೊಳ್ಳುವುದಕ್ಕೆ ಇತ್ತೀಚಿಗಷ್ಟೆ ಸುದ್ದಿಗೋಷ್ಠಿ ನಡೆಸಿತ್ತು. ಈ ಕಾರ್ಯಕ್ರಮಕ್ಕೆ ಎಲ್ಲರಿಗಿಂತ ಮುಂಚೆ ಬಂದ ರಮೇಶ್ ತಮ್ಮ ಎಂದಿನ ಶೈಲಿಯಲ್ಲಿ ಎಲ್ಲರನ್ನು ನಗುತ್ತಾ ಮಾತನಾಡಿಸಿದರು. ವೇದಿಕೆ ಮೇಲೆ ಮಾತನಾಡಿ, ಚಾನೆಲ್ ಬೈಟ್ ಮುಗಿಸಿ ಬಂದ ರಮೇಶ್ ನಮ್ಮ ಜೊತೆ ಮಾತು ಆರಂಭಿಸಿದರು.

ಅಂದಹಾಗೆ, 'ಬಟರ್ ಫ್ಲೈ' ಚಿತ್ರದ ಬಗ್ಗೆ ನಟ ರಮೇಶ್ ಅರವಿಂದ್ 'ಫಿಲ್ಮ್ ಬೀಟ್ ಕನ್ನಡ'ಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಮುಂದೆ ಓದಿ...

'i remake a script not a movie' ಅಂತ ಹೇಳಿದ್ರಿ.. ಸೋ, 'ಕ್ವೀನ್' ಚಿತ್ರವನ್ನು ಮತ್ತೆ ಮಾಡುತ್ತಿರುವುದು ಯಾಕೆ?

''ಎಲ್ಲ ಸಿನಿಮಾಗಳನ್ನು ರಿಮೇಕ್ ಮಾಡೋಕ್ಕೆ ಆಗಲ್ಲ. ಅ ಚಿತ್ರದಲ್ಲಿ ಏನೋ ಒಂದು ಅಂಶ ನಿಮಗೆ ಸ್ಪಂದಿಸಬೇಕು. ಇಲ್ಲಿ ನನಗೆ ಸ್ಪಂದಿಸಿದ್ದು ಕಥೆ. ಈಗ ನಡೆಯುತ್ತಿರುವ ಕಥೆ ಅದು. ಇಂದಿನ ಕಾಲದ ಎಷ್ಟೋ ಹುಡುಗ ಹುಡುಗಿ ಪ್ರೀತಿ ಮಾಡಿ ಸಡನ್ ಆಗಿ ಕೈ ಕೊಟ್ಟು ಬಿಡುತ್ತಾರೆ. ಆಗ ನಾವು ಮಾಡಿದ್ದ 'ನಮ್ಮೂರ ಮಂದಾರ ಹೂವೆ' ಸಿನಿಮಾದ ರೀತಿ ಪ್ರೀತಿಸಿದವರಿಗೆ ಜೀವನವನ್ನೇ ತ್ಯಾಗ ಮಾಡುವ ಕಾನ್ಸೆಪ್ಟ್ ಈಗ ಇಲ್ವಾ ಅಂತ ಅನಿಸುತ್ತದೆ... ಅಂದು ಒಂದು ಹುಡುಗಿಗಾಗಿ 20 ವರ್ಷ ಕಾಯುವ ಸಿನಿಮಾ ಮಾಡಿದ್ವಿ.. ಆದರೆ ಈಗ ಅದೆಲ್ಲ ಇಲ್ವಾ ಎಂಬ ಭಾವ ಬರುತ್ತದೆ. ಒಂದು ಸಿನಿಮಾ ಸಮಾಜದ ಪ್ರತಿಬಿಂಬ ಆಗಿರುತ್ತದೆ. ಅದೇ ರೀತಿ ಇಂದಿನ ಸಮಾಜದ ಪ್ರತಿ ಬಿಂಬನೇ ಬಟರ್ ಫ್ಲೈ.''

'ಕ್ವೀನ್' ಚಿತ್ರದಲ್ಲಿ ನಿಮ್ಮನ್ನು ಕಾಡಿದ ಆ ಅಂಶ ಯಾವುದು..?

''ಚಿತ್ರದ ಎರಡು ಅಂಶ ತುಂಬ ಇಷ್ಟ ಆಯ್ತು. ಮೊದಲು ಆಕೆಯ ಮದುವೆ ಮುರಿಯುತ್ತದೆ. ಆದರೆ ಆ ನಂತರ ಆಕೆ ಇಡೀ ಪ್ರಪಂಚ ನೋಡಬೇಕು ಅಂತ ಹೊರಡುತ್ತಾಳೆ. ಈ ಚಿತ್ರದಲ್ಲಿ ಗ್ಲೋಬಲ್ ಕನೆಕ್ಷನ್ ಇದೆ. ಈಗ ಬರಿ ನಮ್ಮ ಉರು.. ನಮ್ಮವರು ಅಂತ ಇಲ್ಲ. ಎಲ್ಲರಿಗೂ ಪ್ರಪಂಚಾದ್ಯಂತ ಸ್ನೇಹಿತರು ಇದ್ದಾರೆ. ಅದೆಲ್ಲ ಇರುವುದರಿಂದ ಈ ಕಾಲಕ್ಕೆ ಈ ಚಿತ್ರ ಸರಿಯಾಗಿದೆ ಅಂತ ಯೋಚನೆಯಿಂದ ಆಯ್ಕೆ ಮಾಡಿದೆ. ಅದು ಬಿಟ್ಟರೆ 'ನಾನು ಸಿನಿಮಾವನ್ನು ರಿಮೇಕ್ ಮಾಡಲ್ಲ, ನಾನು ರಿಮೇಕ್ ಮಾಡುವುದು ಕಥೆ ಅಷ್ಟೆ.' ಆ ಕಥೆಯನ್ನು ನನ್ನ ದೃಷ್ಟಿಯಲ್ಲಿ ನೋಡಿ ಹೇಗೆ ಇಷ್ಟ ಆಗುತ್ತದೆಯೋ ಹಾಗೆ ಮಾಡಿದ್ದೇನೆ.''

ಈಗಾಗಲೇ ತಿಳಿದಿರುವ ಕಥೆಯನ್ನು ಮತ್ತೆ ತೆರೆ ಮೇಲೆ ಹೇಳುವುದು ದೊಡ್ಡ ಚಾಲೆಂಜ್ ಅಲ್ವಾ..?

''ಹೌದು.. ಅದು ದೊಡ್ಡ ಚಾಲೆಂಜಿಂಗ್ ಜಾಬ್.. ಈ ಚಿತ್ರದ ಕೆಲ ಮೇಕಿಂಗ್ ವಿಡಿಯೋ ನೋಡಿದವರು 'ಇದು ಕ್ವೀನ್.. ಆದರೆ ಕ್ವೀನ್ ಅಲ್ಲ' ಅಂತ ಹೇಳುತ್ತಿದ್ದಾರೆ. ಅದು ಎರಡು ಸತ್ಯ. 'ಕ್ವೀನ್' ಚಿತ್ರದ ಓರಿಜಿನಲ್ ಡೈರೆಕ್ಟರ್ 'ಬಟರ್ ಫ್ಲೈ' ನೋಡಿ ಏನು ಹೇಳುತ್ತಾರೆ ಅಂತ ನಾನು ಕೂಡ ಕಾಯುತ್ತಿದ್ದೇನೆ.''

'ಕ್ವೀನ್' ಮತ್ತು 'ಬಟರ್ ಫ್ಲೈ' ಚಿತ್ರಗಳು ನಡುವೆ ಏನು ವ್ಯತ್ತಾಸ ಇದೆ?

''ತುಂಬ ಬದಲಾವಣೆ ಇದೆ.. ಅದು ಸುಮ್ನೆ ಚೇಂಜ್ ಮಾಡಬೇಕು ಅಂತ ಮಾಡಿದ್ದು ಅಲ್ಲ. ಆ ಕಥೆಯನ್ನು ನನ್ನ ತಲೆಯಲ್ಲಿ ಓಡಿಸಿದ್ದಾಗ ಅದು ಹೇಗಿರಬೇಕು ಎನಿಸುತ್ತದೆ ಹೇಗೆ ಬೇರೆ ರೂಪ ಪಡೆದುಕೊಳ್ಳುತ್ತದೆ ಹಾಗೆ ಮಾಡಿದ್ದು. ನಾವು 'ರಾಮ ಶಾಮ ಭಾಮ'.. 'ಸುಂದರಂಗ ಜಾಣ' ಚಿತ್ರಗಳನ್ನು ಕೂಡ ಅದೇ ರೀತಿ ಮಾಡಿದ್ವಿ.''

ರಾಷ್ಟ್ರ ಪ್ರಶಸ್ತಿ ಗೆದ್ದ ಈ ಪಾತ್ರಕ್ಕೆ ಪಾರೂಲ್ ಹೇಗೆ ಆಯ್ಕೆ ಆದರು?

''ಈ ಚಿತ್ರಕ್ಕೆ ನಾನು ಬರುವುದಕ್ಕೂ ಮುಂಚೆಯೇ ಪಾರೂಲ್ ಬಂದಿದ್ದರು. ಅವರು ಈ ಚಿತ್ರದ ಸಹ ನಿರ್ಮಾಪಕಿ ಕೂಡ ಆಗಿದ್ದಾರೆ. ಸೋ, ಈ ಚಿತ್ರಕ್ಕೆ ಯಾರು ಸೂಕ್ತ ನಿರ್ದೇಶಕ ಎಂದು ಯೋಚಿಸಿದಾಗ ನನ್ನ ಹೆಸರು ಬಂದಿದೆ. ನನ್ನನ್ನು ಕರೆದಾಗ ನನಗೂ ಸಹ ಅವರ ನಟನೆ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಪಾರೂಲ್ ಅವರನ್ನು ನಾನು ಗ್ಲಾಮರಸ್ ಪಾತ್ರದಲ್ಲಿ ನೋಡಿದ್ದೆ. ಆದರೆ ಅವರ ಬಳಿ ಮೊದಲು ಮಾತನಾಡಿದಾಗ ಇವರಿಗೆ ನಿಜಕ್ಕೂ ಈ ಚಿತ್ರ ಮಾಡುವ ಆಸೆ ಇದೆ ಎನ್ನುವ ಅಭಿಪ್ರಾಯಕ್ಕೆ ಬಂದೆ.''

'ಬಟರ್ ಫ್ಲೈ' ಚಿತ್ರದ ಮೊದಲ ನೋಟ ಸಖತ್ ಕಲರ್ ಫುಲ್

ಮೂರು ಭಾಷೆಯಲ್ಲಿ ಒಂದೇ ಚಿತ್ರವನ್ನು ಮಾಡುವಾಗ ಮೇಕಿಂಗ್ ಕಷ್ಟ ಆಯ್ತಾ?

''ನನಗೆ ಅದು ಅಷ್ಟು ಕಷ್ಟ ಅಂತ ಏನು ಅನಿಸಿಲ್ಲ. ಇದೇ ರೀತಿ ಈ ಹಿಂದೆ ನಾಲ್ಕು ಭಾಷೆಯ ಚಿತ್ರದಲ್ಲಿ ಒಮ್ಮೆಲೇ ನಟನೆ ಮಾಡಿದ್ದೇನೆ. ಅದರ ಅನುಭವ ಇದೆ. ಈ ರೀತಿ ಇದ್ದಾಗ ಅದನ್ನು ಕೂಲ್ ಆಗಿ ಮಾಡಬೇಕು. ಆ ನಟಿ ಮಾಡಿದ ಶೈಲಿ.. ಈ ನಟಿ ಮಾಡಿದ ಶೈಲಿ ಒಂದೇ ಆಗಬಾರದು. ಮುಖ್ಯವಾಗಿ ಆ ಭಾಷೆಗಳು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ತೊಂದರೆ ಆಗಲಿಲ್ಲ.''

'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ

ಪ್ಯಾರಿಸ್ ನಲ್ಲಿ ಹೇಗಿತ್ತು ಚಿತ್ರೀಕರಣದ ಅನುಭವ?

''ಅಲ್ಲಿ ನಮಗೆ ಮೊದಲ ಸಮಸ್ಯೆ ಆಗಿದ್ದು ಭಾಷೆ. ಅಲ್ಲಿ ನೂರು ಜನರಲ್ಲಿ ಇಬ್ಬರು ಇಂಗ್ಲೀಷ್ ಮಾತನಾಡುತ್ತಾರೆ. ನಮಗೆ ಕನ್ನಡ ಇಂಗ್ಲೀಷ್ ಗೊತ್ತು ಪ್ರೆಂಚ್ ಭಾಷೆ ಗೊತ್ತಿಲ್ಲ. ಅಲ್ಲಿ ಇಂಗ್ಲೀಷ್ ಗೊತ್ತಿದ್ದರೂ ಅವರು ಮಾತನಾಡಿಲ್ಲ. ಚಿತ್ರೀಕರಣದ ವೇಳೆ ನಾನು ಹೇಳಿದನ್ನು ಇನ್ನೊಬ್ಬರು ಫ್ರೆಂಚ್ ನಲ್ಲಿ ಅನುವಾದ ಮಾಡಿ ಹೇಳಬೇಕಿತ್ತು. ಅದು ಬಿಟ್ಟರೆ ಅಲ್ಲಿ ಊಟ ತಿಂಡಿಗೆ ತುಂಬ ಸಮಸ್ಯೆ ಆಯ್ತು''

ಆಗ 'ಅಮೇರಿಕಾ ಅಮೇರಿಕಾ' ಈಗ 'ಪ್ಯಾರಿಸ್ ಪ್ಯಾರಿಸ್' ಹೇಗಿದೆ ನಿಮ್ಮ ಜರ್ನಿ?

''ಫೆಂಟಾಸ್ಟಿಕ್ ಆಗಿ ಇದೆ.. ಆಗ ನಟನಾಗಿ 'ಅಮೇರಿಕಾ ಅಮೇರಿಕಾ'ದಲ್ಲಿ ಕೆಲಸ ಮಾಡಿದ್ದು ಖುಷಿ ನೀಡಿತ್ತು. ಆದರೆ 'ಪ್ಯಾರಿಸ್ ಪ್ಯಾರಿಸ್' ('ಕ್ವೀನ್' ಚಿತ್ರದ ತಮಿಳು ರಿಮೇಕ್) ಇದೊಂದು ದೊಡ್ಡ ಚಾಲೆಂಜ್. 'ಅಮೆರಿಕಾ ಅಮೇರಿಕಾ' ಚಿತ್ರ ಇದ್ದಾಗ ಬರಿ 16 ಜನ ಅಲ್ಲಿಗೆ ಹೋಗಿದ್ವಿ. ಇದರಲ್ಲಿ 150 ಜನ ಹೋಗಿದ್ದೇವೆ. 'ಅಮೇರಿಕಾ ಅಮೇರಿಕಾ' ಚಿತ್ರಕ್ಕೆ ಸಿಕ್ಕ ಮನ್ನಣೆ 'ಪ್ಯಾರಿಸ್ ಪ್ಯಾರಿಸ್' ಸಿಕ್ಕರೆ ತುಂಬ ಖುಷಿ ಆಗುತ್ತದೆ.''

'ಬಟರ್ ಫ್ಲೈ' ಹಾರಾಟ ಯಾವಾಗ ಶುರುವಾಗುತ್ತದೆ?

'ಬಟರ್ ಫ್ಲೈ' ಸಿನಿಮಾದ 80% ಶೂಟಿಂಗ್ ಮುಗಿದಿದೆ. ಮೇ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಇದೆ. ಅಲ್ಲಿಂದ 'ಬಟರ್ ಫ್ಲೈ' ಹಾರಾಟ ಶುರುವಾಗುತ್ತದೆ.

English summary
Actor Ramesh Aravind spoke about 'Butterfly' kannada movie in an Interview with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X