»   » 'ಬಿಗ್ ಬಾಸ್' ಶೋದಿಂದ ಸಮೀರಾಚಾರ್ಯ ಅವರಿಗೆ ಸಿಕ್ಕ ಸಂಭಾವನೆ ಇಷ್ಟು.!

'ಬಿಗ್ ಬಾಸ್' ಶೋದಿಂದ ಸಮೀರಾಚಾರ್ಯ ಅವರಿಗೆ ಸಿಕ್ಕ ಸಂಭಾವನೆ ಇಷ್ಟು.!

By: ಯಶಸ್ವಿನಿ.ಎಂ.ಕೆ
Subscribe to Filmibeat Kannada
'ಬಿಗ್ ಬಾಸ್' ಶೋದಿಂದ ಸಮೀರಾಚಾರ್ಯ ಅವರಿಗೆ ಸಿಕ್ಕ ಸಂಭಾವನೆ ಇಷ್ಟು | Oneindia Kannada

'ಬಿಗ್ ಬಾಸ್' ಕಾರ್ಯಕ್ರಮದ ಮೊದಲ ದಿನದಿಂದ ಹಿಡಿದು ಕೊನೆಯ ದಿನದವರೆಗೂ ಕೇವಲ ಪಂಚೆ-ಶಲ್ಯದಲ್ಲೇ ಕಾಲ ಕಳೆದ, ಧರ್ಮ ನಿಷ್ಠೆಯಿಂದಲೇ ನಡೆದುಕೊಂಡ ಸ್ಫರ್ಧಿ ಸಮೀರಾಚಾರ್ಯ.

ಇನ್ನೇನು ಟಾಪ್ 5 ಹಂತಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಎಲಿಮೇಟ್ ಆದ ಸ್ಪರ್ಧಿ ಸಮೀರಾಚಾರ್ಯ. ನೂರು ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇದ್ದ ಸಮೀರಾಚಾರ್ಯ ಅವರಿಗೆ 'ಬಿಗ್ ಬಾಸ್' ಕಾರ್ಯಕ್ರಮದಿಂದ ಸಿಕ್ಕ ಸಂಭಾವನೆ ಎಷ್ಟು.? ಎಂಬ ಪ್ರಶ್ನೆ ಎಲ್ಲರಿಗೂ ಕಾಡಿರಬಹುದು.

'ಬಿಗ್ ಬಾಸ್' ಸ್ಪರ್ಧಿಗಳ ಸಂಭಾವನೆ ಇಷ್ಟಂತೆ, ಅಷ್ಟಂತೆ ಎಂಬ ಗುಸು ಗುಸು ಸುದ್ದಿ ಅಲ್ಲಿ ಇಲ್ಲಿ ಹರಿದಾಡುತ್ತಿದೆ. ಆದ್ರೆ, ಖಚಿತ ಮಾಹಿತಿ ಇಲ್ಲ. ಸುಮ್ನೆ ಡೌಟ್ ಯಾಕೆ ನೇರವಾಗಿ ಕೇಳಿಬಿಡೋಣ ಅಂತ ಸಮೀರಾಚಾರ್ಯ ಅವರಿಗೆ ಫೋನ್ ಮಾಡಿದ್ವಿ.

ಟಾಸ್ಕ್ ನಲ್ಲಿ ವೈಲೆಂಟ್, ಸ್ನೇಹದ ವಿಚಾರದಲ್ಲಿ ರಿಯಲ್ ಹೀರೋ ಆಗಿದ್ದ ಸಮೀರಾಚಾರ್ಯ ಅವರ 'ಬಿಗ್ ಬಾಸ್' 100 ದಿನಗಳ ಪಯಣ ಹಾಗೂ ಅವರಿಗೆ ಸಿಕ್ಕ ಸಂಭಾವನೆ ಬಗ್ಗೆ ನಿಮ್ಮ 'ಫಿಲ್ಮಿಬೀಟ್' ವರದಿಗಾರ್ತಿ ಪ್ರಶ್ನಿಸಿದರು. ನಿರೀಕ್ಷೆಯಂತೆ ಸಂಭಾವನೆ ಬಗ್ಗೆ ಸಮೀರಾಚಾರ್ಯ ಗುಟ್ಟು ಬಿಟ್ಟು ಕೊಡಲಿಲ್ಲ. ಇದಕ್ಕೆ 'ಅಗ್ರೀಮೆಂಟ್' ಕಾರಣ ಆಗಿರಬಹುದು.!!

ಅದೇನೇಯಿರಲಿ, ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಮೀರಾಚಾರ್ಯ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿರಿ...

ನಿಮಗೆ ಸಿಕ್ಕ ಸಂಭಾವನೆ ಎಷ್ಟು.?

- ನನ್ನ ಸಂಭಾವನೆ 7 ಕೋಟಿ ಕನ್ನಡಿಗರ ವಿಶ್ವಾಸ, ಪಂಚೆ-ಶಲ್ಯ ತೊಟ್ಟ ನನಗೆ ಮನೆಯೊಳಗೆ ಕಾಲಿಟ್ಟಾಗ ಪ್ರತಿವಾರವೂ ಹೊರಹೋಗುತ್ತೇನೆ ಎಂದೆನಿಸಿತು. ಆದರೆ ನನ್ನ ಉದ್ದೇಶ ನನ್ನನ್ನು ಬಡಿದೆಬ್ಬಿಸುತ್ತಿತ್ತು. ನಾನು ದಿನವೂ 'ಬಿಗ್ ಬಾಸ್' ನಲ್ಲಿ ಪೂಜೆ ಮಾಡುತ್ತಿದ್ದೆ, ಅದರ ವರದ ರೂಪವಾಗಿ ಜನ ನನ್ನನ್ನು ಬೆಳೆಸಿದರು. ಇಷ್ಟು ಸಂಭಾವನೆ ಸಾಕು. ನನಗೆ ಸಿಗುವ ಹಣದಲ್ಲಿ ಒಂದು ರೂಪಾಯಿ ನನಗಾಗಿ ವ್ಯಯಿಸದೇ ವಿದ್ಯಾಕ್ರಾಂತಿಗಾಗಿ ಮೀಸಲಿಡುತ್ತೇನೆ. ನನ್ನಂತಹ ಬೆಳೆಯುತ್ತಿರುವ ವ್ಯಕ್ತಿಗೆ ಪ್ರೋತ್ಸಾಹ ನೀಡಿದ ಕನ್ನಡಿಗರಿಗೆ ನನ್ನ ಧನ್ಯವಾದಗಳು.

ಆಚಾರ್ಯರ ಪ್ರತಿಕೃತಿ ದಹನ: 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಸಮೀರ್

'ಬಿಗ್ ಬಾಸ್' ಮನೆಯಲ್ಲಿ ಧರ್ಮ, ನಿಷ್ಠೆ ಹೇಗೆ ಸಾಧ್ಯವಾಯಿತು.?

- 'ಬಿಗ್ ಬಾಸ್' ಕಾರ್ಯಕ್ರಮವನ್ನ ಎಲ್ಲರೂ ದಿನಕ್ಕೆ ನೋಡಿದ್ದು ಕೇವಲ 50 ನಿಮಿಷಗಳಷ್ಟೇ. 'ಬಿಗ್ ಬಾಸ್' ಮನೆಯಲ್ಲಿ ನಿತ್ಯಪೂಜೆ, ಅಭಿಷೇಕ, ಆರಾಧನೆ, ಪಾರಾಯಣ ಎಲ್ಲವನ್ನೂ ನಿಷ್ಠೆಯಿಂದ ನಡೆಸಿದ್ದೇನೆ ಎಂಬ ಹೆಮ್ಮೆಯಿದೆ. ನಾನಿದ್ದಷ್ಟೂ ದಿನ ಧರ್ಮ ಪಾಲನೆಯನ್ನು ಅಲ್ಲಿ ನೆರವೇರಿಸಿದ್ದೇನೆ. ನಾನು ಬಂದಿದ್ದೇನೆ ಎಂಬ ಕಾರಣಕ್ಕಾಗಿ ಸುಬ್ಬಲಕ್ಷ್ಮಿಯವರ ಸುಪ್ರಭಾತ ಹಾಕಿದ್ದಾರೆ. ಆಗ ನನಗೆ ಅತೀವ ಸಂತಸವಾಯಿತು.

ನಿಮ್ಮ ಧರ್ಮಕ್ಕೆ ಮಿಕ್ಕೆಲ್ಲಾ ಪ್ರತಿಸ್ಫರ್ಧಿಗಳ ಸಪೋರ್ಟ್ ಹೇಗಿತ್ತು ?

- ಅದ್ಭುತ. ನನಗೆ ಅತೀವ ಸಂತಸ ತಂದಿರುವ ವಿಚಾರ ಇದು. ಜೆಕೆಯವರು ಪ್ರತಿದಿನ ಪೂಜೆ ಮಾಡಿದ್ದಕ್ಕಾಗಿ ನನ್ನನ್ನು ಅಭಿನಂದಿಸಿದ್ದರು. ಅನುಪಮಾರವರು ನಾನು ಸೀಕ್ರೆಟ್ ರೂಂಗೆ ಹೋದಾಗ ಪೂಜೆ ಮಾಡಿದ್ದನ್ನ ಸ್ಮರಿಸಿದರು. ಶೃತಿಯವರು ಕೂಡ ನಾನು ಸಂಕಲ್ಪ ಮಾಡಿಸುತ್ತಿದ್ದಾಗ ಕಣ್ಣೀರಿಟ್ಟಿದ್ದರು. ಟಿ.ಆರ್.ಪಿ ವಿಚಾರ ಅದು ಡಿಸ್ ಪ್ಲೇ ಮಾಡಲಿಲ್ಲ.

ಕದ್ದು ತಿಂದದ್ದು ತಪ್ಪಲ್ಲವೇ.?

- 'ಬಿಗ್ ಬಾಸ್' ಮನೆಯಲ್ಲಿ ಎಲ್ಲವನ್ನೂ ತೋರಿಸುತ್ತಾರೆ. ಒಂದು ಸಣ್ಣ ಪುದೀನಾ ಡಬ್ಬ, ಮೊಸರು, ಹಾಲು ವಿಚಾರ ಎಲ್ಲವೂ ದೊಡ್ಡ ಗಲಾಟೆಯಾಯಿತು. ಹಾಗಾದರೆ ನನ್ನ ಕಳ್ಳತನದ ವಿಚಾರವಾಗಲೀ ಅಥವಾ ವಿಡಿಯೋವಾಗಲೀ ಏಕೆ ತೋರಿಸಲಿಲ್ಲ.? ಕಾರಣ ಅಲ್ಲಿ ನಾನು ತಪ್ಪು ಎಸಗಲಿಲ್ಲ. ಸುಮ್ಮನಿದ್ದಾರೆ ಅಂದ ಮಾತ್ರಕ್ಕೆ ತಪ್ಪಿದೆ ಎಂಬರ್ಥವಲ್ಲ.

ನೀವು ಬಂದ ಮೊದಲ ದಿನ ಗಾಯತ್ರಿ ಮಂತ್ರಕ್ಕೆ ಅವಮಾನ ಮಾಡಿದ್ದೀರಿ ಎಂಬ ಮಾತುಗಳು ಕೇಳಿಬಂದಿತ್ತಲ್ಲ.?

- ನಾನು ಗುಣಗ್ರಾಹಿ, ದೋಷಗ್ರಾಹಿಯಲ್ಲ. ಕೆಲವೊಮ್ಮೆ ನಮ್ಮಿಂದ ಕೂಡ ತಪ್ಪಾಗಿದೆ. ಅವೆಲ್ಲಕ್ಕೂ ಕ್ಷಮೆ ಕೇಳುತ್ತೇನೆ. ಕ್ಷಮೆ ಕೇಳುವುದರಿಂದ ನಾವೇನೂ ಅಧಃಪತನಕ್ಕೆ ಹೋಗುವುದಿಲ್ಲ. ತಪ್ಪು ಮಾಡುವುದಿಲ್ಲವೆಂದರೆ ನಾವು ದೇವರಾಗುವುದಿಲ್ಲ. ಅದು ತಪ್ಪೆಂದೆನಿಸಿದರೆ ಕ್ಷಮಿಸಿ.

ನೀವು ಅಡುಗೆ ಮಾಡಿಕೊಳ್ಳುತ್ತಿದ್ದಾಗ ನಿಮಗೆ ಕಷ್ಟವೆನಿಸುತ್ತಿತ್ತಾ.?

- ನನಗೆ ಅದು ಕಷ್ಟವೆಂದಿನಿಸಿರಲಿಲ್ಲ. ಆದರೆ ರೇಷನ್ ವಿಚಾರವಾಗಿ ಅನೇಕ ಬಾರಿ ಜಗಳವಾಯಿತು. ಅದಕ್ಕೆ ನನ್ನನ್ನು ನಾನು ಪರಿವರ್ತನೆ ಮಾಡಿಕೊಂಡೆ. ಇರುವ ತನಕವೂ ಈರುಳ್ಳಿ, ಬೆಳ್ಳುಳ್ಳಿ ತಿಂದಿಲ್ಲ. ಧರ್ಮ ನಿಷ್ಠೆಯಿಂದಲೇ ಅಲ್ಲಿ ಇದ್ದಷ್ಟು ದಿನ ಸಾತ್ವಿಕನಾಗಿದ್ದೆ.

ನೀವು ಬಿಗ್ ಬಾಸ್ ಮನೆಗೆ ತೆರಳುವ ಮುಖ್ಯ ಉದ್ದೇಶ ಏನಿತ್ತು ?

- ನನ್ನ ಮುಖ್ಯ ಉದ್ದೇಶ ಮಹದಾಯಿ ಹೋರಾಟ. ಅನೇಕ ಬಾರಿ ಈ ವಿಚಾರವನ್ನು ಅಲ್ಲಿ ಪ್ರಸೆಂಟ್ ಮಾಡಿದ್ದೆ. ನನ್ನ ನಿಲುವು ರೈತ ಪರ. ಮೋದಿ ಬೆಳಗಾವಿಗೆ ಬಂದಾಗ ರೈತರನ್ನು ಭೇಟಿಯಾಗಲು ಬಿಡಲಿಲ್ಲ. ನಾನು ರೈತರ ಮಗ ಅಲ್ಲ. ಆದರೆ ಅವರ ಕಷ್ಟವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರ ಬಲಿದಾನ ನನ್ನ ಕಣ್ಣಲ್ಲಿ ನೀರು ತರಿಸುತ್ತದೆ. ಬಿಗ್ ಬಾಸ್ ನಲ್ಲಿ ಫ್ಯಾಷನ್ ಶೋ ನಡೆಸಿದಾಗ ನಾನು ಮಹದಾಯಿ ಬಗ್ಗೆ ಮಾತನಾಡಿದ್ದೆ. ಆದರೆ ನನಗೆ ಕಡಿಮೆ ಅಂಕ ಸಿಕ್ಕಿತು. ನನಗೆ ಆಗ ಬೇಸರವೆನಿಸಿತು. ಯಾರು ಕೂಡ ನನಗೆ ಸಪೋರ್ಟ್ ಮಾಡಲಿಲ್ಲ. ಅಲ್ಲಿ ಬಂದಾಗ ಮಾತ್ರವಲ್ಲ, ನೀರಿನ ವಿಚಾರವಾಗಿ ರಾಜಕಾರಣ ಸಲ್ಲ.

ನಿಮ್ಮ ಬಗ್ಗೆ ಅವಮಾನಕಾರಿ ಮಾತುಗಳು ಕೇಳಿಬಂದಾಗ ಏನೆನಿಸಿತು ?

- ನಾನು ಯಾರ ವ್ಯಕ್ತಿತ್ವದ ಬಗ್ಗೆ ಮಾತನಾಡುವುದಿಲ್ಲ. ನಾನು ಯಾರನ್ನು ದ್ವೇಷಿಸುವುದಿಲ್ಲ. ಓರ್ವ ಸ್ಪರ್ಧಿ ನನ್ನನ್ನು ಮನೆಯೊಳಗಿದ್ದಾಗ ಮಾತನಾಡುವುದಿಲ್ಲ ಎಂದರು. ಆದರೆ ನನ್ನನ್ನು ಈಗಲೂ ಮಾತನಾಡಿಸುತ್ತಾರೆ. ಅಲ್ಲಿ ಆಟಕ್ಕಾಗಿ ದ್ವೇಷ, ಜಗಳ ನಡೆಯುತ್ತಿರುತ್ತದೆ. ಆದರೆ ಹೊರಬಂದಾಗ ನಾವೆಲ್ಲರೂ ಮನುಷ್ಯರೇ ಅಲ್ಲವೇ.?

ನಿಮ್ಮ ಮುಂದಿನ ನಡೆ...

- ಸದ್ಯ ಮುಂದಿನ ತಿಂಗಳು ಮೋದಿಯವರನ್ನು ಭೇಟಿಯಾಗಲು ಮಹದಾಯಿ ವಿಚಾರವಾಗಿ ಅವರೊಂದಿಗೆ ಮಾತನಾಡಲು ದಿನಾಂಕ ನಿಗದಿ ಮಾಡುತ್ತಿದ್ದೇನೆ. 4 ರಿಯಾಲಿಟಿ ಶೋಗಳಿಗೆ ಒಪ್ಪಿಗೆ ಸೂಚಿಸಿದ್ದೇನೆ. ರಾಮಾಯಣ, ಮಹಾಭಾರತ ವಿಚಾರವಾಗಿ ರಿಸರ್ಚ್ ನಡೆಸಲು ತಯಾರಿ ಸಹ ನಡೆಸುತ್ತಿದ್ದೇನೆ.

English summary
Bigg Boss Kannada 5 contestant Sameer Acharya speaks about his journey in #BBK5 and the remuneration he received for participating in the show in an exclusive interview with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada