»   » ರಾಷ್ಟ್ರ ಪ್ರಶಸ್ತಿ ಪಡೆದ 'ಹೆಬ್ಬೆಟ್ ರಾಮಕ್ಕ' ಚಿತ್ರ : ನಟಿ ತಾರಾ ಸಂದರ್ಶನ

ರಾಷ್ಟ್ರ ಪ್ರಶಸ್ತಿ ಪಡೆದ 'ಹೆಬ್ಬೆಟ್ ರಾಮಕ್ಕ' ಚಿತ್ರ : ನಟಿ ತಾರಾ ಸಂದರ್ಶನ

Posted By:
Subscribe to Filmibeat Kannada

2017ನೇ ಸಾಲಿನ ಪ್ರತಿಷ್ಟಿತ 65ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ಹೆಬ್ಬೆಟ್ ರಾಮಕ್ಕ ಸಿನಿಮಾಗೆ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಅನಕ್ಷರಸ್ಥ ಮಹಿಳೆ ರಾಜಕೀಯ ರಂಗಕ್ಕೆ ಬಂದಾಗ ಯಾವ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದನ್ನ ಚಿತ್ರದ ಮೂಲಕ ತೋರಿಸಲಾಗಿದೆ.

ನಟಿ ತಾರಾ ಅನುರಾಧ ಸಿನಿಮಾದಲ್ಲಿ ಹೆಬ್ಬೆಟ್ ರಾಮಕ್ಕಳಾಗಿ ಅಭಿನಯ ಮಾಡಿದ್ದಾರೆ. ತಾರಾ ಅವರಿಗೆ ರಾಷ್ಟ್ರೀಯ ಪ್ರಶಸ್ತಿಗಳು ಹೊಸತೇನಲ್ಲ.ಈ ಹಿಂದೆಯೇ ತಾರಾ ಅಭಿನಯದ ಹಲವಾರು ಚಿತ್ರಗಳಿಗೆ ನ್ಯಾಷನಲ್ ಅವಾರ್ಡ್ ಸಿಕ್ಕಿದೆ. ಕಳೆದ ವರ್ಷ ನಿರ್ಮಾಣವಾದ ಹೆಬ್ಬೆಟ್ ರಾಮಕ್ಕ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇದೇ ಸಂದರ್ಭದಲ್ಲಿ ನಟಿ ತಾರಾ ಫಿಲ್ಮೀ ಬೀಟ್ ಜೊತೆ ಮಾತನಾಡಿದ್ದಾರೆ.

ನಟಿ ತಾರಾ ಅಭಿನಯದ 'ಹೆಬ್ಬೆಟ್ಟು ರಾಮಕ್ಕ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗೌರವ

ಸಿನಿಮಾ ಬಗ್ಗೆ ಹಾಗೂ ಚಿತ್ರದಲ್ಲಿನ ಪಾತ್ರದ ಬಗ್ಗೆ? ಸಿನಿಮಾ ತಾರಾ ಅವರನ್ನು ಹುಡುಕಿಕೊಂಡು ಬಂದ ರೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೆಬ್ಬೆಟ್ ರಾಮಕ್ಕ ಚಿತ್ರದ ಬಗ್ಗೆ ತಾರಾ ಅವರ ಮನಸ್ಸಿನ ಮಾತು ಇಲ್ಲಿದೆ ಮುಂದೆ ಓದಿ.

ಪ್ರಶಸ್ತಿ ಬಂದಿರುವ ಕ್ಷಣ ಹೇಗಿದೆ ?

ತುಂಬಾ ಖುಷಿ ಆಗುತ್ತಿದೆ. ನಾನು ಅಭಿನಯಿಸಿದ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಸಾಕಷ್ಟು ಲಭಿಸಿವೆ. ಆದರೆ 'ಹೆಬ್ಬೆಟ್ ರಾಮ'ಕ್ಕ ಚಿತ್ರಕ್ಕೆ ಅವಾರ್ಡ್ ಬಂದಿರುವುದು ಖುಷಿಯ ವಿಚಾರ. ಇಂತಹ ಸಿನಿಮಾಗಳು ಗೆಲ್ಲಬೇಕು

ಪ್ರಶಸ್ತಿಯನ್ನ ನಿರೀಕ್ಷೆ ಮಾಡಿದ್ರಾ?

ಖಂಡಿತಾ ಮಾಡಿದ್ವಿ, ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಈ ಸಿನಿಮಾ ಇಷ್ಟು ಪ್ರಭಾವ ಬೀರುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಆದರೆ ಡಬ್ಬಿಂಗ್ ಮಾಡುವಾಗ ಅನ್ನಿಸಿತ್ತು. ಈ ಪಾತ್ರಕ್ಕೆ ಮತ್ತು ಚಿತ್ರಕ್ಕೆ ಪ್ರಶಸ್ತಿ ಲಭಿಸಬೇಕು ಎಂದು. ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಆದಾಗ ಸಾಕಷ್ಟು ಜನರು ಈ ಮಾತನ್ನು ಹೇಳಿದ್ದರು.

ಈ ಸಿನಿಮಾ ನಿಮ್ಮ ಆಯ್ಕೆ ಯಾಕಾಯ್ತು?

ಈ ಪಾತ್ರ ಮತ್ತು ಸಿನಿಮಾ ಎರಡು ನನ್ನನ್ನು ಹುಡುಕಿಕೊಂಡು ಬಂದಿದ್ದೇ ಒಂದು ರೋಚಕ ಅಂತ ಹೇಳಬಹುದು. ಒಂದು ವರೆ ವರ್ಷದ ಹಿಂದೆ ನಿರ್ದೇಶಕರು ಕಥೆ ಹೇಳಿ ನಂತರ ಈ ಸಿನಿಮಾ ನಿರ್ಮಾಣ ಮಾಡಿ ಎಂದಿದ್ದರು. ಆಗ ನಾನು ನಿರ್ಮಾಣ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುವ ಉತ್ತರ ಕೊಟ್ಟಿದ್ದೆ. ಒಂದು ವರೆ ವರ್ಷದ ನಂತರ ಬಂದು ಹೆಬ್ಬೆಟ್ ರಾಮಕ್ಕ ಪಾತ್ರ ನೀವೇ ಮಾಡಬೇಕು ಎಂದರು. ನನಗೂ ಪಾತ್ರ ಕಥೆ ಇಷ್ಟ ಆಯ್ತು ಅಭಿನಯಿಸಿದೆ.

ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು ಅಭಿನಯಕ್ಕೆ ಸಹಾಯ ಆಯ್ತಾ?

ಖಂಡಿತಾವಾಗಿಯೂ ಹೌದು. ನಾನು ಪ್ರತಿ ನಿತ್ಯ ಹೆಬ್ಬೆಟ್ ರಾಮಕ್ಕಳಂತ ಮಹಿಳೆಯರನ್ನು ಭೇಟಿ ಮಾಡುತ್ತೇನೆ. ಹತ್ತಿರದಿಂದ ಅವರ ಗುಣಗಳನ್ನ ನೋಡಿರುತ್ತೇನೆ ಅದರಿಂದ ಸಾಕಷ್ಟು ಉಪಯೋಗ ಆಗಿದೆ.

ಕಮರ್ಷಿಯಲ್ ಸಿನಿಮಾಗೂ ಇಂತಹ ಚಿತ್ರಕ್ಕೂ ವ್ಯತ್ಯಾಸ ಏನೆನ್ನಿಸುತ್ತೆ?

ಅಭಿನಯ ಒಂದೇ ಆದರೆ ಕಮರ್ಷಿಯಲ್ ಚಿತ್ರಕ್ಕೆ ಮಾಡಿಕೊಳ್ಳುವ ಹೋಂ ವರ್ಕ್ ಗಿಂತಲೂ ಹೆಚ್ಚಿನ ಹೋಂ ವರ್ಕ್ ಹೆಬ್ಬೆಟ್ ರಾಮಕ್ಕಗಳಂತ ಚಿತ್ರಗಳಿಗೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಂತ 'ಹೆಬ್ಬೆಟ್ ರಾಮಕ್ಕ' ಆರ್ಟ್ ಸಿನಿಮಾ ಅಲ್ಲ, ಇದು ಬ್ರಿಡ್ಜ್ ಚಿತ್ರ ಪ್ರೇಕ್ಷಕರನ್ನ ನಗಿಸುವಂತಹ ಹಾಗೂ ತಿಳಿದುಕೊಳ್ಳುವಂತಹ ಸಾಕಷ್ಟು ಅಂಶಗಳು ಸಿನಿಮಾದಲ್ಲಿದೆ.

ಇಂತಹ ಚಿತ್ರಗಳು ನಿಮ್ಮನ್ನೇ ಯಾಕೆ ಹುಡುಕಿಕೊಂಡು ಬರುತ್ತೆ?

ನಿಜಕ್ಕೂ ಯಾವ ಜನ್ಮದ ಪುಣ್ಯ ಅಂತ ಅನ್ನಿಸುತ್ತೆ. ನಾನು ಸಿನಿಮಾರಂಗದಲ್ಲಿ ಸಾಕಷ್ಟು ವರ್ಷಗಳಿಂದ ಇದ್ದರೂ. ಅತ್ಯುತ್ತಮ ನಟಿ ಎಂದು ಎನ್ನಿಸಿಕೊಳ್ಳಲು ಹಲವಾರು ವರ್ಷಗಳೇ ಬೇಕಾಯ್ತು. 'ಕಾನೂರು ಹೆಗ್ಗಡತಿ' ಸಿನಿಮಾ ಮೂಲಕ ಉತ್ತಮ ನಟಿ ಎನ್ನಿಸಿಕೊಂಡೆ , ಅನಂತರ ನಾನು ಅಭಿನಯಿಸದ ಸಾಕಷ್ಟು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇಂತಹ ಪಾತ್ರ ಹುಡುಕಿಕೊಂಡು ಬರುವುದು ನಿಜಕ್ಕೂ ಪುಣ್ಯವೇ ಸರಿ.

ಈಗಿನ ಕಾಲದಲ್ಲಿ ಹೆಚ್ಚು ಸ್ಪರ್ಧೆ ಇದೆ ಅಂತದರಲ್ಲಿ ಪ್ರಶಸ್ತಿ ಗಿಟ್ಟಿಸಿದ್ದಿರಾ?

ಹೌದು ಭಾರತೀಯ ಚಿತ್ರರಂಗದಲ್ಲಿ ಒಂದಕ್ಕಿಂತ ಒಂದು ಚಿತ್ರಗಳು ಅದ್ಬುತವಾಗಿ ಬರುತ್ತಿವೆ. ನಿರ್ದೇಶಕರ ಆಲೋಚನೆ ಬದಲಾಗಿದೆ. ಸಾವಿರಾರು ಸಿನಿಮಾಗಳಲ್ಲಿ ನನ್ನ ಸಿನಿಮಾವನ್ನ ಪರಿಗಣಿಸಿ ಪ್ರಶಸ್ತಿ ನೀಡಿರುವುದಕ್ಕೆ ಸಂತೋಷವಾಗುತ್ತಿದೆ. ಇಡೀ ಚಿತ್ರತಂಡಕ್ಕೆ ಆ ಖುಷಿ ಇದೆ.

2017ನೇ ಸಾಲಿನ ಪ್ರತಿಷ್ಟಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ

English summary
65th National Film Awards announced: Kannada Actress Tara starrer 'Hebbet Ramakka' wins Best Kannada Film. here is an Interview with Kannada actress Tara Anuradha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X