For Quick Alerts
  ALLOW NOTIFICATIONS  
  For Daily Alerts

  ಅಕ್ಕ, ಅತ್ತಿಗೆಯ ಪಾತ್ರಗಳಿಗೊಂದು ಆತ್ಮೀಯ ಮುಖ: ಆರತಿ ಕುಲಕರ್ಣಿ

  |

  ಈ ವರ್ಷ ಸದ್ದು ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಪ್ರಜ್ವಲ್ ದೇವರಾಜ್ ಅವರ ಜಂಟಲ್ ಮ್ಯಾನ್' ಚಿತ್ರ ಕೂಡ ಸೇರಿಕೊಳ್ಳುತ್ತದೆ. ಸಿನಿಮಾ ನೋಡಿದವರಿಗೆ ಚಿತ್ರದಲ್ಲಿ ಪ್ರಜ್ವಲ್ ಜತೆಗೆ ಮರೆಯದೇ ನೆನಪಿಟ್ಟುಕೊಳ್ಳುವಂಥ ಕೆಲವು ಪಾತ್ರಗಳು ಸಿಗುತ್ತವೆ. ಅವುಗಳಲ್ಲಿ ಪ್ರಜ್ವಲ್ ಅತ್ತಿಗೆಯ ಪಾತ್ರ ಮಾಡಿದ ಆರತಿ ಕುಲಕರ್ಣಿ ಕೂಡ ಒಬ್ಬರು.

  ಆರತಿ ಅವರಿಗೆ ಕ್ಯಾಮೆರಾ ಜಗತ್ತು ಹೊಸತಲ್ಲ. ದಶಕದ ಹಿಂದೆ ಟಿ.ವಿ 9 ವಾರ್ತಾವಾಹಿನಿ ಸೇರಿದಂತೆ, ಜೀ ಕನ್ನಡ, ಉದಯ ಮತ್ತು ಸಮಯ ವಾಹಿನಿಗಳಲ್ಲಿ ವಾರ್ತಾವಾಚಕಿಯಾಗಿ ನಿರೂಪಕಿಯಾಗಿ ಗುರುತಿಸಿಕೊಂಡವರು. ಇತ್ತೀಚೆಗೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡವರು.

  ನಾನೆಲ್ಲೂ ತಲೆ ಮರೆಸಿಕೊಂಡಿಲ್ಲ; ಪಂಜಾಬ್ ಶೂಟಿಂಗ್ ಮುಗಿಸಿ ಬರಲಿದ್ದೇನೆ: ರಕ್ಷಿತ್ ಶೆಟ್ಟಿನಾನೆಲ್ಲೂ ತಲೆ ಮರೆಸಿಕೊಂಡಿಲ್ಲ; ಪಂಜಾಬ್ ಶೂಟಿಂಗ್ ಮುಗಿಸಿ ಬರಲಿದ್ದೇನೆ: ರಕ್ಷಿತ್ ಶೆಟ್ಟಿ

  ಆದರೆ ಸಿನಿಮಾರಂಗದಲ್ಲಿ ಅಪರೂಪವಾಗಿದ್ದ ಆರತಿಗೆ ಜಂಟ್ಲ್ ಮನ್ ಒಳ್ಳೆಯ ಬ್ರೇಕ್ ನೀಡಿದಂತಿದೆ. ನಾಯಕ-ನಾಯಕಿಗೆ ಸಹೋದರಿ, ಅತ್ತಿಗೆಯ ಪಾತ್ರಗಳಿಗೆ ನಿರ್ದೇಶಕರು ಆರತಿ ಕುಲಕರ್ಣಿಯವರನ್ನು ಆಯ್ಕೆ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಅವಕಾಶಗಳು ಹೆಚ್ಚಿವೆ. ಅದರ ಖುಷಿ ಇದ್ದರೂ ಪೋಷಕ ಪಾತ್ರಗಳಲ್ಲಿ ಕೂಡ ವೈವಿಧ್ಯ ಇದ್ದರೆ ಚೆನ್ನಾಗಿರುತ್ತದೆ ಎನ್ನುವುದು ಅವರ ಆಸೆ. ಆರತಿಯೊಂದಿಗಿನ ವಿಶೇಷ ಮಾತುಕತೆ ಇಲ್ಲಿದೆ.

   `ಜಂಟಲ್ ಮ್ಯಾನ್’ ಚಿತ್ರದಲ್ಲಿ ನಟಿಸಿದ ಅನುಭವದ ಬಗ್ಗೆ ಹೇಳಿ

  `ಜಂಟಲ್ ಮ್ಯಾನ್’ ಚಿತ್ರದಲ್ಲಿ ನಟಿಸಿದ ಅನುಭವದ ಬಗ್ಗೆ ಹೇಳಿ

  ನಾನು `ಸೀತಾ ವಲ್ಲಭ' ಧಾರಾವಾಹಿಯಲ್ಲಿ ತೊಡಗಿಸಿಕೊಂಡಿದ್ದೆ. ಸಂಜೆ ಆರರಿಂದ ಬೆಳಿಗ್ಗೆ ಆರರ ತನಕ ಶೂಟಿಂಗ್ ಇತ್ತು. ರಾತ್ರಿಯಿಡೀ ಶೂಟ್ ಮುಗಿಸಿಕೊಂಡು ಮತ್ತೆ ಬೆಳಗ್ಗಿನ ಚಿತ್ರೀಕರಣಕ್ಕಾಗಿ 'ಜಂಟಲ್ ಮ್ಯಾನ್' ಚಿತ್ರದ ಸೆಟ್‌ಗೆ ಹೋಗಿದ್ದೆ. ಮಾತಿನ ನಡುವೆ `ನಾನು ಉತ್ತರ ಕರ್ನಾಟಕದವಳು' ಎಂದು ಹೇಳಿದೆ. ಆಗ ಚಿತ್ರದ ನಿರ್ದೇಶಕ ಜಡೇಶ್, ನಿರ್ಮಾಪಕ ಗುರುದೇಶಪಾಂಡೆ ಕೂಡ ಉತ್ತರ ಕರ್ನಾಟಕದವರೇ ಎನ್ನುವ ವಿಚಾರ ತಿಳಿಯಿತು. ಹಾಗೆ ಚಿತ್ರದಲ್ಲಿಯೂ ನನಗೆ ಉತ್ತರ ಕರ್ನಾಟಕದ ಮಹಿಳೆಯ ಪಾತ್ರವನ್ನೇ ನೀಡಿದರು! ವಾಸ್ತವದಲ್ಲಿ ನನ್ನ ಪಾತ್ರಕ್ಕೆ ಬೆಂಗಳೂರು ಭಾಷೆಯ ಸಂಭಾಷಣೆ ಬರೆಯಲಾಗಿತ್ತು. ಸ್ಥಳದಲ್ಲಿಯೇ ಅದನ್ನು ಬದಲಾಯಿಸಿ ಕೊಟ್ಟರು.

  ಉತ್ತರ ಕರ್ನಾಟಕದ ಭಾಷೆ ನಿಮಗೆ ಬ್ರ್ಯಾಂಡ್ ಆಗುತ್ತಿದೆ ಅನಿಸಿದೆಯೇ?

  ಉತ್ತರ ಕರ್ನಾಟಕದ ಭಾಷೆ ನಿಮಗೆ ಬ್ರ್ಯಾಂಡ್ ಆಗುತ್ತಿದೆ ಅನಿಸಿದೆಯೇ?

  ಒಂದು ರೀತಿಯಲ್ಲಿ ಹೌದು. ಇದೀಗ ಚಿರಂಜೀವಿ ಸರ್ಜ ಅವರ `ಕ್ಷತ್ರಿಯ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ಕೂಡ ಉತ್ತರ ಕರ್ನಾಟಕ ಭಾಷೆ ಮಾತನಾಡುವ ಪಾತ್ರ! ನಿರ್ದೇಶಕರು ಜೀ ಕನ್ನಡದಲ್ಲಿ ನಾನು ನಟಿಸಿದ `ಗಂಗಾ' ಧಾರಾವಾಹಿ ನೋಡಿದ್ದಾರೆ. ಅದರಲ್ಲಿ ಕೂಡ ನಾನು ಉತ್ತರ ಕರ್ನಾಟಕದ ಭಾಷೆ ಮಾತನಾಡಿದ್ದೆ. ಹಾಗಾಗಿ ಅವರಿಗೆ ನನ್ನ ಪಾತ್ರ ಅದೇ ಗೆಟಪ್ ನಲ್ಲಿ ಬೇಕಾಗಿತ್ತು. ಹಾಗೆ ಅಲ್ಲಿಯೂ ಒಪ್ಪಿಕೊಳ್ಳಬೇಕಾಯಿತು. ಹಾಗಂತ ನಾನು ಬೆಂಗಳೂರು ಕನ್ನಡ ಮಾತನಾಡುವಾಗ ಅದರಲ್ಲಿ ಉತ್ತರ ಕರ್ನಾಟಕದ ಶೈಲಿ ಖಂಡಿತವಾಗಿ ಕಾಣದು. ಹಾಗಾಗಿದ್ದರೆ ನಾನು ವಾರ್ತಾವಾಚಕಿಯಾಗಿರಲು ಸಾಧ್ಯವೇ ಆಗುತ್ತಿರಲಿಲ್ಲ.

  ಕನ್ನಡದ ರೂಪಿಕಾರಲ್ಲಿ ಕೀರ್ತಿ ಸುರೇಶ್‌ರನ್ನು ಕಂಡ ತೆಲುಗು ಮಂದಿಕನ್ನಡದ ರೂಪಿಕಾರಲ್ಲಿ ಕೀರ್ತಿ ಸುರೇಶ್‌ರನ್ನು ಕಂಡ ತೆಲುಗು ಮಂದಿ

   ನಿಮ್ಮ ಕಿರುತೆರೆಯ ಅನುಭವದ ಬಗ್ಗೆ ಹೇಳಿ

  ನಿಮ್ಮ ಕಿರುತೆರೆಯ ಅನುಭವದ ಬಗ್ಗೆ ಹೇಳಿ

  ನಾನು ಮನರಂಜನೆ ಕಾರ್ಯಕ್ರಮ ನೋಡುವಾಗ ತಂದೆ ವಾರ್ತೆ ನೋಡಬೇಕು ಎಂದರೆ ಸಿಡುಕುತ್ತಿದ್ದೆ. ಅಷ್ಟೊಂದು ಕೂಡ ವಾರ್ತೆ ನೋಡದ ನಾನು ಸ್ವತಃ ವಾರ್ತಾವಾಚಕಿಯಾಗುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಒಂದು ಹಂತದಲ್ಲಿ ಧಾರಾವಾಹಿ ಕ್ಷೇತ್ರ ಪ್ರವೇಶಿಸುವ ಅವಕಾಶ ದೊರೆಯಿತು. ಅಲ್ಲಿಯವರೆಗೆ ನಟನೆಯ ಯಾವ ಹಿನ್ನೆಲೆಯೂ ಇರದ ನನಗೆ 'ಗಂಗಾ' ಧಾರಾವಾಹಿಯ ನಟನೆಗಾಗಿ ಒಂದು ವರ್ಷ ಬೆಸ್ಟ್ ಸೊಸೆ ಮತ್ತು ಅದರ ಮರು ವರ್ಷ ಬೆಸ್ಟ್ ಅಮ್ಮ ಪ್ರಶಸ್ತಿಗಳು ಲಭಿಸಿದವು. `ಗೋಕುಲದಲ್ಲಿ ಸೀತೆ', `ದುರ್ಗಾ', `ಪರಿಣಯ', `ನಾನು ನನ್ನ ಕನಸು' ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದೆ. `ಸಿಂಧೂರ'ದಲ್ಲಿ ನನ್ನದು ಪೊಲೀಸ್ ಪಾತ್ರವಾಗಿತ್ತು. ಅಕ್ಕ, ಅತ್ತಿಗೆ ಪಾತ್ರಗಳಿಗೆ ಆಹ್ವಾನಿಸುವ ಸಿನಿಮಾದ ಮಂದಿ ನಾನು ಪೊಲೀಸ್ ಅಧಿಕಾರಿಯಾಗಿಯೂ ನಟಿಸಬಲ್ಲೆ ಎನ್ನುವುದನ್ನು ನೋಡಿದ್ದರೆ ಚೆನ್ನಾಗಿತ್ತು!

   ಹಾಗಾದರೆ ನಿಮ್ಮ ಮುಂದಿನ ಗುರಿ ಎಲ್ಲವೂ ಸಿನಿಮಾದಲ್ಲೇ ಎನ್ನಬಹುದೇ?

  ಹಾಗಾದರೆ ನಿಮ್ಮ ಮುಂದಿನ ಗುರಿ ಎಲ್ಲವೂ ಸಿನಿಮಾದಲ್ಲೇ ಎನ್ನಬಹುದೇ?

  ಹೌದು. ಆದರೆ ನಾನು ಇದೇ ಬೇಕು ಎಂದು ಹೋಗುವುದಿಲ್ಲ. ದೇವರೇ ಆಯಾ ಸಮಯದಲ್ಲಿ ಆಯಾ ವಿಭಾಗಕ್ಕೆ ಕಳಿಸಿದ್ದಾನೆ ಅನಿಸುತ್ತದೆ. ಹಾಗೆ ನೋಡಿದರೆ ಈಗಲೂ ಕೂಡ ಟಿ.ವಿ ವಾರ್ತೆಗಳನ್ನು ಕಂಡಾಗ ನಾನಾಗಿದ್ದರೆ ಆ ನ್ಯೂಸ್ ಯಾವ ರೀತಿ ಓದುತ್ತಿದ್ದೆ ಎಂದು ಯೋಚಿಸುವುದುಂಟು. ಸಿನಿಮಾ ವಿಚಾರಕ್ಕೆ ಬಂದರೆ ಈಗಾಗಲೇ `ಸಿಗಂಧೂರು ಚೌಡೇಶ್ವರಿ ಮಹಿಮೆ', `ಮಫ್ತಿ' ಮೊದಲಾದ ಚಿತ್ರಗಳಲ್ಲಿ ನಟಿಸಿದ್ದೇನೆ. ಮಫ್ತಿಯಲ್ಲಿ ಶಾನ್ವಿಯ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ತಾಯಿ ಮತ್ತು ಮಗುವಿನ ಮಧ್ಯೆ ಸಾಗುವ ಕತೆಯುಳ್ಳ ಚಿತ್ರವಾದ `ಬೆಳಕಿನ ಕನ್ನಡಿ'ಯಲ್ಲಿ ನಾನೇ ತಾಯಿಯಾಗಿ ನಟಿಸಿದ್ದೆ. ಚಿತ್ರ ಕಳೆದ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಸಿನಿಮಾದಲ್ಲಿ ಪೋಷಕ ಪಾತ್ರಗಳಾಗಿ ಬಂದು ಹೋಗುವುದಕ್ಕಷ್ಟೇ ಸೀಮಿತವಾಗಿರದೆ ಜನ ಗುರುತಿಸುವಂಥದ್ದೇನೋ ಮಾಡುವಂಥ ಅವಕಾಶ ಸಿಕ್ಕರೆ ಖುಷಿಯಾಗುತ್ತದೆ.

   `ಕ್ಷತ್ರಿಯ’ ಸಿನಿಮಾದಲ್ಲಿ ಅಂಥ ಅವಕಾಶಗಳಿವೆಯೇ?

  `ಕ್ಷತ್ರಿಯ’ ಸಿನಿಮಾದಲ್ಲಿ ಅಂಥ ಅವಕಾಶಗಳಿವೆಯೇ?

  ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಅಕ್ಕನ ಪಾತ್ರ ನನ್ನದು. ಪಾತ್ರದ ಹೆಸರು ಚೆನ್ನಮ್ಮ. ಚಿರಂಜೀವಿ ಸರ್ಜಾಗೆ ಸ್ವಂತ ಅಕ್ಕ ಸುಧಾರಾಣಿ. ಅವರಿಗೆ ನಾಲ್ಕು ಜನ ಸ್ನೇಹಿತೆಯರು. ಒಬ್ಬರು ಕ್ರಿಶ್ಚಿಯನ್, ಒಬ್ಬರು ಮಸ್ಲಿಮ್, ಮತ್ತೊಬ್ಬರು ಉತ್ತರ ಕರ್ನಾಟಕ.. ಹೀಗೆ ಬೇರೆ ಬೇರೆ ರೀತಿಯ ಫ್ರೆಂಡ್ಸ್ ಇರ್ತಾರೆ. ಸುಧಾರಾಣಿಯವರಿಗೆ ತಮ್ಮನ ಮೇಲೆ ಯಾವುದೋ ಕಾರಣಕ್ಕೆ ಕೋಪ ಇರುತ್ತದೆ. ಆದರೆ ನಾವೆಲ್ಲರೂ ನಾಯಕನನ್ನು ತಮ್ಮ ಸ್ವಂತ ತಮ್ಮನಂತೆ ನೋಡಿಕೊಳ್ಳುತ್ತಿರುತ್ತೇವೆ. ಚಿತ್ರದಲ್ಲಿ ನನ್ನ ಪಾತ್ರದ ಬಾಲ್ಯ, ಮಧ್ಯವಯಸ್ಸು ಮತ್ತು ವಯಸ್ಸಿಗೆ ಬಂದಂಥ ಮೂರು ಶೇಡ್ ಗಳಲ್ಲಿದೆ. ಬಾಲ್ಯವೊಂದನ್ನು ಬಿಟ್ಟು ಉಳಿದೆರಡು ಶೇಡ್ ಗಳಲ್ಲಿ ನಾನೇ ನಟಿಸುತ್ತಿದ್ದೇನೆ. ನನ್ನೊಂದಿಗೆ ಇತರ ಸ್ನೇಹಿತೆಯರಾಗಿ ಶಾಲಿನಿ, ಸಪ್ನಾರಾಜು ಮತ್ತು ಅಶ್ವಿನಿ ಗೌಡ ಅಭಿನಯಿಸಿದ್ದಾರೆ. ನನಗೆ ಚಿತ್ರದಲ್ಲಿ ಸುಂದರ್ ಅವರು ಜೋಡಿಯಾಗಿದ್ದಾರೆ.

   ನಿಜ ಜೀವನದಲ್ಲಿ ನಿಮ್ಮ ಜೋಡಿ ಮತ್ತಿತರ ವಿಶೇಷಗಳ ಬಗ್ಗೆ ಹೇಳಿ

  ನಿಜ ಜೀವನದಲ್ಲಿ ನಿಮ್ಮ ಜೋಡಿ ಮತ್ತಿತರ ವಿಶೇಷಗಳ ಬಗ್ಗೆ ಹೇಳಿ

  ನನ್ನ ಪತಿ ಪವನ್ ಕುಲಕರ್ಣಿ ವೃತ್ತಿಯಲ್ಲಿ ನ್ಯೂಮರಾಲಜಿಸ್ಟ್. ನಮಗೊಬ್ಬ ಪುತ್ರನಿದ್ದಾನೆ. ಹೆಸರು ಸಂಕಲ್ಪ್. ನನ್ನ ತಂದೆ ಲಕ್ಷ್ಮಣರಾವ್ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ, ತಾಯಿ ಸುಮಾ. ನನ್ನ ಅತ್ತೆಯ ಹೆಸರು ವಸುಧಾ, ಮಾವ ವಿಠಲ್ ರಾವ್. ಅವರು ಹಿಂದೆ ಮಾಧ್ಯಮ ಕ್ಷೇತ್ರದಲ್ಲಿಯೇ ವೃತ್ತಿಯಲ್ಲಿದ್ದವರು. ಪತಿ ಮತ್ತು ಮನೆ ಮಂದಿಯ ಪ್ರೋತ್ಸಾಹ ಇರುವ ಕಾರಣ ಹೀಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆ.

  English summary
  Interview with Kannda serial and cinema actress Arathi Kulakarni. She has acted in Kannada Films like Mufthi, Gentleman, Belakina Kannadi, Kshathriya etc.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X