India
  For Quick Alerts
  ALLOW NOTIFICATIONS  
  For Daily Alerts

  ಅವನಲ್ಲ 'ಅವಳು' ಮಂಗಳಮುಖಿ ವಿದ್ಯಾ ವಿಶೇಷ ಸಂದರ್ಶನ

  By Harshitha
  |

  ಮಂಗಳಮುಖಿ ವಿದ್ಯಾ ರವರ ಜೀವನ ಚರಿತ್ರೆ 'I am Vidya: A Transgender's Journey' ಆಧಾರಿತ ಎರಡು ರಾಷ್ಟ್ರ ಪ್ರಶಸ್ತಿ ಪಡೆದಿರುವ ಕನ್ನಡ ಚಿತ್ರ 'ನಾನು ಅವನಲ್ಲ...ಅವಳು' ಈ ವಾರ ರಿಲೀಸ್ ಆಗುತ್ತಿದೆ.

  ಅಷ್ಟರೊಳಗೆ ನಿನ್ನೆಯಷ್ಟೆ (ಸೆಪ್ಟೆಂಬರ್ 22) ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ 'ನಾನು ಅವನಲ್ಲ...ಅವಳು' ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಪ್ರದರ್ಶನದಲ್ಲಿ ಮಂಗಳಮುಖಿ ವಿದ್ಯಾ ಕೂಡ ಹಾಜರಾಗಿದ್ದರು. [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']

  ತಮ್ಮ ಜೀವನಕಥೆಯನ್ನ ತೆರೆಮೇಲೆ ಕಣ್ಣಾರೆ ಕಂಡ ವಿದ್ಯಾ ಭಾವುಕರಾದರು. ತಮಿಳುನಾಡು ಮೂಲದವರಾದ ಮಂಗಳಮುಖಿ ವಿದ್ಯಾ ರವರೊಂದಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಸಂದರ್ಶನ ಇಲ್ಲಿದೆ.

  * ನಿಮ್ಮ ಜೀವನ 'ನಾನು ಅವನಲ್ಲ...ಅವಳು' ಚಿತ್ರವಾಗಿ ತೆರೆಗೆ ಬಂದಿದೆ. ಸಿನಿಮಾನ ನೋಡಿದಾಗ ನಿಮಗೆ ಆದ ಅನುಭವ?

  - ನಾನು ಅದನ್ನ ಸಿನಿಮಾ ಆಗಿ ನೋಡೋಕೆ ಆಗ್ಲಿಲ್ಲ. ಯಾಕಂದ್ರೆ, ಅದು ನನ್ನ ಕಥೆ. ನನ್ನ ಚೈಲ್ಡ್ ಹುಡ್, ನನ್ನ ಬಾಯ್ ಫ್ರೆಂಡ್, ನನ್ನ ನೋವಿನ ಬಗ್ಗೆ ಹೇಳುತ್ತಿದ್ದಾರೆ. ತುಂಬಾ ಕಷ್ಟಪಟ್ಟಿದ್ದೇನೆ. ತೆರೆಮೇಲೆ ಅದನ್ನ ನೋಡುವುದಕ್ಕೂ ನನಗೆ ತುಂಬಾ ಕಷ್ಟವಾಯ್ತು. ಸಿನಿಮಾ ಮೇಕಿಂಗ್ ತುಂಬಾ ಚೆನ್ನಾಗಿದೆ. ತುಂಬಾ ಡೀಟೇಲ್ ಆಗಿ ವರ್ಕ್ ಮಾಡಿದ್ದಾರೆ. ನನ್ನ ಮನಸ್ಸಿಗೆ ಮುಟ್ಟಿತು. [ಈ ತಿಂಗಳಾಂತ್ಯಕ್ಕೆ 'ನಾನು ಅವನಲ್ಲ, ಅವಳು' ನಿಮ್ಮ ಮುಂದೆ]

  Interview with 'Naanu Avanalla..Avalu' real heroine Vidya

  * ನಿಮ್ಮ ಜೀವನಾಧಾರಿತ 'ನಾನು ಅವನಲ್ಲ...ಅವಳು' ಚಿತ್ರ ನೋಡಿದ ಮೇಲೆ, ಮಂಗಳಮುಖಿಯರ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗುತ್ತೆ ಅಂತ ನಿಮಗೆ ಅನ್ಸುತ್ತಾ?

  - ಇಡೀ ದೇಶದಲ್ಲಿ ಮಂಗಳಮುಖಿಯರ ಬದುಕು ತುಂಬಾ ಶೋಚನೀಯವಾಗಿದೆ. ಮಂಗಳಮುಖಿಯರ ವಾಸ್ತವ ಬದುಕು ಅನೇಕರಿಗೆ ಗೊತ್ತಿಲ್ಲ. ಇಂಥ ಅಂಶಗಳನ್ನು ಸಿನಿಮಾದಲ್ಲಿ ಸೂಕ್ಷ್ಮವಾಗಿ ತೋರಿಸಿದ್ದಾರೆ. ಚಿತ್ರದಿಂದ ಜನರಿಗೆ ಅರಿವು ಮೂಡಿದರೆ ಸಂತೋಷ. ಸರ್ಕಾರ ಕೂಡ ಮಂಗಳಮುಖಿಯರಿಗೆ ಆರ್ಥಿಕ ಸಹಾಯ ಮತ್ತು ಸೂಕ್ತ ಸ್ಥಾನಮಾನವನ್ನು ನೀಡಿದರೆ ಸಮಾಜದ ಮುಖ್ಯವಾಹಿನಿಗೆ ಬರಬಹುದು.

  * ನಿಮ್ಮ ಆತ್ಮಕಥೆಗೆ ಸಿಕ್ಕ ಪ್ರತಿಕ್ರಿಯೆ...

  - ನನ್ನ ಆತ್ಮಕಥೆ ಕುರಿತು ಪುಸ್ತಕ ಬರೆದದ್ದು 2007 ನಲ್ಲಿ. ಆ ವರ್ಷದಲ್ಲಿ ಸೆಕೆಂಡ್ ಬೆಸ್ಟ್ ಸೆಲ್ಲಿಂಗ್ ಪುಸ್ತಕ ಅದು. ಇಲ್ಲಿಯವರೆಗೂ ಭಾರತದ ಐದು ಭಾಷೆಗಳಿಗೆ ಅನುವಾದ ಆಗಿದೆ. ಕನ್ನಡ ಅನುವಾದಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಇನ್ನೂ ಈ ಸಿನಿಮಾಗೆ ಎರಡು ನ್ಯಾಷನಲ್ ಅವಾರ್ಡ್ ಸಿಕ್ಕಿದೆ. ಆದರೆ, ಎಲ್ಲದರಿಂದ ನನ್ನ ಜೀವನಕ್ಕೆ ಏನಾಗಿದೆ ಅಂದ್ರೆ, ಏನೂ ಇಲ್ಲ..!! ನನ್ನ ಜೀವನ ಈಗಲೂ ಹಾಗೇ ಇದೆ. ನಾನು ಈಗಲೂ ಸಮಾಜದಲ್ಲಿ ಬದುಕಲು ಹೋರಾಟ ಮಾಡುತ್ತಿದ್ದೇನೆ.

  * ನಿಮ್ಮ ಜೀವನವನ್ನ ಪುಸ್ತಕ ರೂಪದಲ್ಲಿ ನೀವು ಹೊರತಂದಿದ್ದಕ್ಕೆ ಕಾರಣ?

  - ನನ್ನ ಸ್ನೇಹಿತರೊಬ್ಬರು ನಿನ್ನ ನೋವುಗಳಿಗೆ ಅಕ್ಷರ ರೂಪ ಕೊಡು ಅಂತ ಹೇಳಿದ್ರು. ಆಗ ಬ್ಲಾಗ್ ಗಳು ಶುರುವಾಗಿತ್ತು. ಬ್ಲಾಗ್ ನಲ್ಲಿ ನಾನು ತಮಿಳಿನಲ್ಲಿ ಬರೆಯುವುದಕ್ಕೆ ಶುರು ಮಾಡಿದಾಗ ನೆಗೆಟಿವ್ ಕಾಮೆಂಟ್ಸ್ ಬರುವುದಕ್ಕೆ ಶುರುವಾಯ್ತು. ಆಮೇಲೆ ಹೋಗ್ತಾ ಹೋಗ್ತಾ ಒಳ್ಳೆಯ ಪ್ರತಿಕ್ರಿಯೆ ಲಭಿಸಿತು. ನಂತರ ಪಬ್ಲಿಷರ್ ಬಂದು ಪುಸ್ತಕ ರೂಪದಲ್ಲಿ ಪಬ್ಲಿಷ್ ಮಾಡುತ್ತೇವೆ ಅಂದ್ರು. ಹಾಗೆ, ಪುಸ್ತಕ ಬಿಡುಗಡೆ ಆಗಿದ್ದು.

  * ನಿಮ್ಮ ಪಾತ್ರಧಾರಿ ಸಂಚಾರಿ ವಿಜಯ್ ನಟನೆ ಬಗ್ಗೆ...

  - ನನ್ನ ಕಥೆಯನ್ನ ಆಧರಿಸಿ ಸಿನಿಮಾ ಮಾಡುತ್ತೇನೆ ಅಂತ ಬಂದಾಗ, ನಾನು ಹಾಕಿದ ಕಂಡೀಷನ್ ಒಂದೇ. ನನ್ನ ಪಾತ್ರಕ್ಕೆ ಮಂಗಳಮುಖಿಯನ್ನೇ ಸೆಲೆಕ್ಟ್ ಮಾಡಿ ಅಂತ. ಆದ್ರೆ, ಅನಿವಾರ್ಯ ಕಾರಣಗಳಿಂದ ಅದು ಆಗ್ಲಿಲ್ಲ. ನಿಜ ಹೇಳ್ಬೇಕಂದ್ರೆ, ಸಂಚಾರಿ ವಿಜಯ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ನಾನು ಅವರಿಗೆ ಏನನ್ನೂ ಹೇಳಿಕೊಡಲಿಲ್ಲ. ನನ್ನ ನೋವು, ನನ್ನ ಭಾವನೆಗಳನ್ನು ಅವರು ತುಂಬಾ ಚೆನ್ನಾಗಿ ತೆರೆಮೇಲೆ ತೋರಿಸಿದ್ದಾರೆ. [ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ಸಿಎಂ ರಿಂದ ಸನ್ಮಾನ]

  * ಸಿನಿಮಾದಲ್ಲಿ ಮಾದೇಶ, ವಿದ್ಯಾ ಆಗ್ತಾರೆ. ನಿಮ್ಮ ನಿಜ ನಾಮ..?

  - ನಂಗೆ ಅದನ್ನ ಹೇಳುವುದಕ್ಕೆ ಇಷ್ಟವಿಲ್ಲ. ಪ್ಲೀಸ್...ಸಿನಿಮಾದಲ್ಲಿ ವಿದ್ಯಾ ಅಕ್ಕ, ಮಾದೇಶ ಅಂತ ಕರೆದಾಗ, ಆಕೆ ಆ ಹೆಸರಲ್ಲಿ ಕೂಗಬೇಡ ಅಂತ ಹೇಳ್ತಾಳೆ. ಅದು ನಾನು. ಆ ಹೆಸರು ಹೇಳುವುದಕ್ಕೆ ನನಗೆ ಇಷ್ಟವಿಲ್ಲ.

  * ನಿಮ್ಮ ಕುಟುಂಬ ನಿಮ್ಮನ್ನ ಸ್ವೀಕರಿಸಿದ್ದಾರಾ ಈಗ?

  - ಹೌದು. ಅವರ ಸಪೋರ್ಟ್ ನನಗೆ ಸಿಕ್ಕಿದೆ.

  * ಮಂಗಳಮುಖಿಯರನ್ನ ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ನೀವು ಹೋರಾಡುತ್ತಿದ್ದೀರಾ. ಅದರ ಬಗ್ಗೆ ನಮ್ಮ ಓದುಗರಿಗೆ ತಿಳಿಸಿ...

  - ನನ್ನ ಬ್ಲಾಗ್ ನಲ್ಲಿ ನಾನು ಮಂಗಳಮುಖಿಯರ ಜೀವನದ ಬಗ್ಗೆ ಸದಾ ಆರ್ಟಿಕಲ್ ಬರೆಯುತ್ತಿರುತ್ತೇನೆ. ನಮ್ಮ ಹೆಸರುಗಳನ್ನು ಬದಲಾವಣೆ ಮಾಡುವ ಬಗ್ಗೆ ಅನೇಕ ಸರ್ಕಾರಿ ಅಧಿಕಾರಿಗಳನ್ನ ಭೇಟಿ ಮಾಡಿ ಮಾತನಾಡಿದ್ದೇನೆ. ನಮ್ಮ ಎಡ್ಜ್ಯುಕೇಷನ್ ಸರ್ಟಿಫಿಕೇಟ್ ಗಳು, ಮಾರ್ಕ್ಸ್ ಕಾರ್ಡ್ಸ್ ಈಗಿನ ನಮ್ಮ ಹೆಸರಲ್ಲಾದರೆ ನಮಗೆ ಒಂದು ಕೆಲಸ ಅಂತ ಸಿಗುತ್ತದೆ. ನಾವು ಕೂಡ ನಾರ್ಮಲ್ ಲೈಫ್ ಲೀಡ್ ಮಾಡಬಹುದು. ಸೋ, ಆ ಬಗ್ಗೆ ಓಡಾಡುತ್ತಿದ್ದೇನೆ. ಸಮಾಜಕ್ಕೆ ಅರಿವು ಮೂಡಿಸುವ ಸಲುವಾಗಿ ನೃತ್ಯ ಕಾರ್ಯಕ್ರಮ ಮತ್ತು ಸಿಗ್ನಲ್ ಗಳಲ್ಲಿ ಸ್ಟ್ರೀಟ್ ಪ್ಲೇ ಮತ್ತು ಡ್ಯಾನ್ಸ್ ಕೂಡ ಮಾಡುತ್ತಿದ್ದೇವೆ.

  * ಅದೇ ಸಿಗ್ನಲ್ ಗಳಲ್ಲಿ ಮಂಗಳಮುಖಿಯರು ಭಿಕ್ಷೆ ಬೇಡುತ್ತಾರಲ್ಲ.!?

  - ಬೇರೆ ದಾರಿ ಇಲ್ಲ.! ಮಂಗಳಮುಖಿಯರನ್ನ ಸಮಾಜ Accept ಮಾಡುವುದಿಲ್ಲ. ನಾನು ಬೇರೆ ಬೇರೆ ಕೆಲಸ ಮಾಡಿದೆ. ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ನಂತರ ಬ್ಯಾಂಕ್ ನಲ್ಲಿ ಕೆಲಸ ಸಿಕ್ತು. ಈಗ ನಾನೇ ತಂಡ ಕಟ್ಟಿಕೊಂಡು ನಾಟಕಗಳನ್ನು ಮಾಡುತ್ತೇವೆ. ಆದರೆ ಬೇರೆಯವರಿಗೆ ಕುಟುಂಬದ ಸಪೋರ್ಟ್ ಇಲ್ಲ, ಜೀವನ ನಡೆಸಲು ದುಡ್ಡಿಲ್ಲ. ಯಾರೂ ಕೆಲಸ ಕೊಡಲ್ಲ ಅಂದ್ರೆ ಬೇರೇನು ಮಾಡುತ್ತೀರಾ. ಇದೇ ಕಾರಣಕ್ಕೆ ಹಲವರು ಭಿಕ್ಷೆ ಬೇಡುತ್ತಾರೆ. ಕೆಲವರು ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದಾರೆ. ಸಮಾಜ ನಮ್ಮನ್ನ Accept ಮಾಡಿ, ನಮಗೆ ಒಂದು ದಾರಿ ಆಗುವವರೆಗೂ ಇದು ಸರಿ ಹೋಗಲ್ಲ. [ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!]

  * ನಮ್ಮ ಓದುಗರಿಗೆ 'ನಾನು ಅವನಲ್ಲ...ಅವಳು' ಚಿತ್ರದ ಮೂಲಕ ನಿಮ್ಮ ಸಂದೇಶ...

  - ಎಷ್ಟೋ ಸಿನಿಮಾದ ಹಾಡುಗಳಲ್ಲಿ ಮಂಗಳಮುಖಿಯರನ್ನ ಬಳಸಿಕೊಳ್ಳುತ್ತಾರೆ. ಕೆಲವರು ಕೆಟ್ಟದಾಗಿ ತೋರಿಸುತ್ತಾರೆ. ಆದ್ರೆ, ಇದೊಂದೇ ಸಿನಿಮಾ ಅದು ಕರ್ನಾಟಕದಿಂದ ಮಂಗಳಮುಖಿಯರ ನಿಜ ಬದುಕನ್ನ ತೋರಿಸಿದೆ. ಇದು ನನ್ನ ಕಥೆ. ನಿಮ್ಮ ಓದುಗರಿಗೆ ನಾನು ಹೇಳುವುದು ಇಷ್ಟೆ. ಸಿನಿಮಾನ ಸಪೋರ್ಟ್ ಮಾಡಿ. ಹಾಗೆ ಮಂಗಳಮುಖಿಯರಿಗೂ ಒಂದು ಬದುಕು ಇದೆ. ಅವರಿಗೂ ಸಪೋರ್ಟ್ ಮಾಡಿ ಅಂತ ಕೇಳಿಕೊಳ್ಳುತ್ತೇನೆ.

  ಸಂದರ್ಶನ : ಹರ್ಷಿತಾ ರಾಕೇಶ್

  English summary
  National Award winning Kannada Movie 'Naanu Avanalla..Avalu' is based on Transgender Vidya's real life. Here is an interview with Transgender Vidya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X