twitter
    For Quick Alerts
    ALLOW NOTIFICATIONS  
    For Daily Alerts

    ಹೆಸರಿನಲ್ಲೆ ಸೆಳೆವಂಥ ಇವರು ಸುಂದರ್ ವೀಣಾ..!

    |

    ಅರೇ ಇವರು ಸುಂದರ್ ತಾನೇ? ಮತ್ತೆ ಯಾಕೆ ಪತ್ನಿಯ ಹೆಸರನ್ನು ಜತೆಗೆ ಇರಿಸಿಕೊಂಡಿದ್ದಾರೆ ಎನ್ನುವ ಸಂದೇಹ ಮೂಡುವುದು ಸಹಜವೇ. ಅದಕ್ಕೆ ಸುಂದರ್ ಅವರ ಬಳಿ ಒಂದು ಆಕರ್ಷಕ ವಿವರಣೆ ಇದೆ. ಇದಕ್ಕೆಲ್ಲ ಕಾರಣವಾಗಿದ್ದು ಫೇಸ್ ಬುಕ್ ಅಂತೆ. ಯಾಕೆಂದರೆ ಸುಂದರ್ ಅವರ ಪೂರ್ತಿ ಹೆಸರು ಸುಂದರ್ ರಾಜ್ ಎಂದು. ಆದರೆ ಆ ಹೆಸರಿನಲ್ಲಿ ಜನಪ್ರಿಯವಾಗಿರುವ ನಟರು ಈಗಾಗಲೇ ಚಿತ್ರರಂಗದಲ್ಲಿ ಇರುವ ಕಾರಣ ಸುಂದರ್ ಎಂದಷ್ಟೇ ಗುರುತಿಸಿಕೊಂಡವರು ಇವರು.

    ಫೇಸ್ಬುಕ್ ನಲ್ಲಿ ಸೆಕೆಂಡ್ ನೇಮ್ ಹಾಕಲೇಬೇಕಾದ ಅನಿವಾರ್ಯತೆ ಇದೆ. ಆಗ ಗೋಚರಿಸಿದ್ದೇ ಹೆಸರಿನ ಜತೆಗೆ ಪತ್ನಿ ವೀಣಾ ಹೆಸರನ್ನು ಸೇರಿಸುವ ಉಪಾಯ. ಆದರೆ ಫೇಸ್ಬುಕ್ ನಲ್ಲಿ ಮಾತ್ರ ಸುಂದರ್ ವೀಣಾ ಎಂದು ಗುರುತಿಸಲ್ಪಟ್ಟಿದ್ದ ಸುಂದರ್ ಅವರಿಗೆ ಚಿತ್ರರಂಗದಲ್ಲಿಯೂ ಅದೇ ಹೆಸರು ನೀಡಿದ ಕೀರ್ತಿ ನಿರ್ದೇಶಕಿ ಸುಮನಾ ಕಿತ್ತೂರು ಅವರಿಗೆ ಸಲ್ಲುತ್ತದೆ.

    ಯಾಕೆಂದರೆ ಅವರು ತಮ್ಮ 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಇವರನ್ನು ಸುಂದರ್ ವೀಣಾ ಎಂದೇ ಪರಿಚಯಿಸಿದ್ದರು. ಸದ್ಯಕ್ಕೆ ಚಿತ್ರರಂಗದಲ್ಲಿ ಅದೇ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿರುವ ಸುಂದರ್ ಅವರೊಂದಿಗ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

     ನಿಮ್ಮನ್ನು `ಸುಂದರ್ ವೀಣಾ' ಎಂದಾಗ ಮುಜುಗರವಾಗದೇ?

    ನಿಮ್ಮನ್ನು `ಸುಂದರ್ ವೀಣಾ' ಎಂದಾಗ ಮುಜುಗರವಾಗದೇ?

    ವೀಣಾ ನಟಿಯಾಗಿ ನನಗಿಂತ ಸೀನಿಯರ್. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವಳು. ಮಾತ್ರವಲ್ಲ ಪೋಷಕ ಪಾತ್ರದಲ್ಲಿ ಕೂಡ ನನಗಿಂತ ಮೊದಲೇ ಎಷ್ಟಾಬ್ಲಿಷ್ ಆದಂಥವಳು. ಹಾಗಾಗಿ ಸುಂದರ್ ಯಾರು ಎಂದರೆ ವೀಣಾಳ ಗಂಡ ಸುಂದರ್, ವೀಣಾ ಸುಂದರ್, ಸುಂದರ್..ವೀಣಾ ಎಂದು ಗುರುತಿಸುವುದು ಸಹಜವಾಗಿಯೇ ಇದೆ. ಆದರೆ ನಿಜಕ್ಕೂ ಗೊಂದಲಕ್ಕೆ ಒಳಗಾಗುವವರು ಇತರರು. ನಾನು ಸೆಟ್ ಗೆ ಬಂದಾಗ ಪ್ರೊಡಕ್ಷನ್ ಮ್ಯಾನೇಜರ್ ಗಳೇ ಹೇಳಿಕೊಂಡದ್ದಿದೆ.. "ಓಹ್ ನೀವಾ ಸರ್, ನಾವು ವೀಣಾ ಮೇಡಂ ಬರೋದು ಅಂತ ಅಂದ್ಕೊಂಡಿದ್ದೆವು'' ಅಂತ. ಕೆಲವೊಮ್ಮೆ ಅವರೇ ಆಕೆಗೆ ಫೋನ್ ಮಾಡಿ ಶೂಟಿಂಗ್ ಲೊಕೇಶನ್ ಬಗ್ಗೆ ವಿವರಿಸಿದ್ದೂ ಇದೆ. ಅದೇ ರೀತಿ ಕ್ಯಾರವಾನ್ ಹುಡುಗರು ಕೂಡ ಕನ್ಫ್ಯೂಸಾಗಿರುವುದಿದೆ.

     ಸಿನಿಮಾದಲ್ಲಿ ನಿಮಗೆ ಬೇರೆ ಜೋಡಿ ಬೇಕು ಅನಿಸಲ್ಲವೇ?

    ಸಿನಿಮಾದಲ್ಲಿ ನಿಮಗೆ ಬೇರೆ ಜೋಡಿ ಬೇಕು ಅನಿಸಲ್ಲವೇ?

    ನನಗೆ ಜೋಡಿ ಯಾರಿದ್ದರೂ ಚೆನ್ನಾಗಿಯೇ ಇರುತ್ತದೆ. ಆದರೆ ನಾವಿಬ್ಬರೇ ಜೋಡಿಯಾಗಿ ಸುಮಾರು ಹತ್ತು ಹನ್ನೆರಡು ಸಿನಿಮಾಗಳಲ್ಲಿ ನಟಿಸಿದ್ದೇವೆ. `ಸೂಪರ್ ರಂಗ'ದಿಂದ ಹಿಡಿದು ಇನ್ನು ತೆರೆ ಕಾಣಲಿರುವ `ಆಯುಷ್ಮಾನ್ ಭವ' ಚಿತ್ರದವರೆಗೆ ಸಾಕಷ್ಟು ಚಿತ್ರಗಳಲ್ಲಿ ಜೋಡಿಯಾಗಿದ್ದೇವೆ. ಹಾಗಾಗಿ ವೀಣಾ ಜತೆಗೆ ಕಂಫರ್ಟೆಬಲ್ ಆಗಿರುತ್ತದೆ. ಇನ್ನು ಪ್ರೇಕ್ಷಕರಿಗೆ ವೆರೈಟಿಯಾಗಿ ತೋರಿಸಲು ವಿಭಿನ್ನ ಜೋಡಿ ಬೇಕು ಎಂದು ಹೇಳುವಂತಿಲ್ಲ. ಯಾಕೆಂದರೆ ನಮ್ಮ ಜೋಡಿ ನಾಯಕ ನಾಯಕಿಯರದ್ದಲ್ಲವಾದ ಕಾರಣ ಅಂಥ ಇಂಟಿಮೇಟ್ ದೃಶ್ಯಗಳಾಗಲೀ, ಡ್ಯುಯೆಟ್ ಗಳಾಗಲೀ ಇರುವುದಿಲ್ಲವಲ್ಲ.

     ಸಿನಿಮಾದಿಂದ ಹೊರತಾಗಿ ನಿಮ್ಮಿಬ್ಬರ ಜೀವನದ ಬಗ್ಗೆ ಹೇಳಿ

    ಸಿನಿಮಾದಿಂದ ಹೊರತಾಗಿ ನಿಮ್ಮಿಬ್ಬರ ಜೀವನದ ಬಗ್ಗೆ ಹೇಳಿ

    ನಾವು ಹೊರಗೆ ಕೂಡ ಜತೆಯಾಗಿಯೇ ಇರಲು ಬಯಸುತ್ತೇವೆ. ಹಾಗಾಗಿಯೇ ನಾನು ಮತ್ತು ವೀಣಾ ಸೇರಿ ಆರಂಭಿಸಿರುವಂಥ ನಾಟಕ ತಂಡವೇ ಇದೆ. ನಮ್ಮಿಬ್ಬರ ಹೆಸರಿನ ಆರಂಭದ ಅಕ್ಷರಗಳನ್ನು ಸೇರಿಸಿ ‘ಸುವ್ವಿ' ಎನ್ನುವ ಹೆಸರನ್ನು ಅದಕ್ಕೆ ಇರಿಸಿದ್ದೇವೆ. ನಮ್ಮ ನಾಟಕಗಳು ಅಮೆರಿಕಾ ಸಿಂಗಾಪುರಗಳಲ್ಲಿ ಪ್ರದರ್ಶನ ಕಂಡಿವೆ. ನಮಗೆ ಇಬ್ಬರು ಮಕ್ಕಳು ಮಗ ಅಭಿಜ್ಞ ಎಂ ಎಸ್ ರಾಮಯ್ಯ ಮೆಡಿಕಲ್ ಕಾಲೇಜಲ್ಲಿ ಮೆಡಿಸಿನ್ ವಿಭಾಗದಲ್ಲಿ ವಿದ್ಯಾರ್ಥಿ. ಮಗಳು ಅನರ್ಘ್ಯ ಸೋಫಿಯಾ ಪ್ರೌಢಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿನಿ.

     ನಟ, ನಾಟಕಕಾರ ಹೀಗೆ ನಿಮ್ಮ ಪ್ರತಿಭೆಗೆ ಎಷ್ಟು ಮುಖಗಳಿವೆ?

    ನಟ, ನಾಟಕಕಾರ ಹೀಗೆ ನಿಮ್ಮ ಪ್ರತಿಭೆಗೆ ಎಷ್ಟು ಮುಖಗಳಿವೆ?

    1992ರಲ್ಲಿ ಎಂಕಾಮ್ ಫೈನಲಿಯರ್ ನಲ್ಲಿದ್ದಾಗ ರಂಗಭೂಮಿಯ ಸಂಪರ್ಕದಲ್ಲಿದ್ದೆ. ಎರಡು ವರ್ಷ ಬಿಟ್ಟು ಕಿರುತೆರೆಗೆ ಬಂದೆ. ಆದರೆ ಕತೆ, ಚಿತ್ರಕತೆ ವಿಚಾರದಲ್ಲಿ ನಾನು ಬಹಳ ಹಿಂದಿನಿಂದಲೇ ತೊಡಗಿಸಿಕೊಂಡಿದ್ದೇನೆ. ಟಿಎನ್ ಸೀತಾರಾಮ್ ಅವರ `ಮನ್ವಂತರ'ದಿಂದ ಆರಂಭಿಸಿ, ಚಿ ಸೌ ಸಾವಿತ್ರಿ, ಅರಸಿ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದೇನೆ. ಇದಲ್ಲದೆ ನನ್ನದೇ ಕತೆ, ಚಿತ್ರ ಕತೆ, ಸಂಭಾಷಣೆ ಎಲ್ಲವನ್ನೂ ಬರೆದಿರುವಂಥದ್ದು `ಮಂಗ್ಳೂರ್ ಹುಡುಗಿ ಹುಬ್ಬಳ್ಳಿ ಹುಡುಗ' ಎನ್ನುವ ಧಾರಾವಾಹಿಗೆ. ಕಲರ್ಸ್ ಸೂಪರ್ ವಾಹಿನಿ ಲಾಂಚ್ ಆದಾಗ ಆರಂಭವಾದ ಧಾರಾವಾಹಿಗಳಲ್ಲಿ ಇದು ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಪ್ರಸ್ತುತ ಜೀ ಕನ್ನಡದಲ್ಲಿ `ಬ್ರಹ್ಮಗಂಟು' ಮತ್ತು ಸುವರ್ಣ ವಾಹಿನಿಗೆ `ಬಯಸದೇ ಬಳಿ ಬಂದೆ' ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದೇನೆ.

     ಇದರ ಜತೆಗೆ ಸಿನಿಮಾ ನಟನೆಗೆ ಸಮಯ ಸಿಗುತ್ತಿದೆಯೇ?

    ಇದರ ಜತೆಗೆ ಸಿನಿಮಾ ನಟನೆಗೆ ಸಮಯ ಸಿಗುತ್ತಿದೆಯೇ?

    ಇದೇ ಜೀವನ ಎಂದಾಗಿರುವಾಗ ಸಮಯ ಹೊಂದಿಸಿಕೊಳ್ಳಲೇಬೇಕು. ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ದೊಡ್ಡದಾಗಿದೆ. `ಕ್ಷತ್ರಿಯ' ಎನ್ನುವ ಚಿರಂಜೀವಿ ಸರ್ಜಾ ನಾಯಕರಾಗಿರುವ ಚಿತ್ರದಲ್ಲಿ ಸುಧಾರಾಣಿಯ ಸ್ನೇಹಿತೆಯ ಗಂಡನಾಗಿ ನಟಿಸಿದ್ದೇನೆ. ಅದರಲ್ಲಿ ಆರತಿ ಕುಲಕರ್ಣಿಯವರಿಗೆ ನಾನು ಜೋಡಿ. ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡಿರುವ ದಯಾಳ್ ಪದ್ಮನಾಭನ್ ಸಿನಿಮಾ `ಒಂಭತ್ತನೇ ದಿಕ್ಕು' ಚಿತ್ರದಲ್ಲಿ ನಾಯಕಿ ಅದಿತಿ ಪ್ರಭುದೇವಗೆ ತಂದೆಯ ಪಾತ್ರ ಮಾಡಿದ್ದೇನೆ. ಅವರದೇ `ರಂಗನಾಯಕಿ' ಚಿತ್ರದಲ್ಲಿ ಅಯ್ಯಂಗಾರಿ ಕುಟುಂಬದವನಾಗಿ ಕಾಣಿಸಿಕೊಂಡಿದ್ದೇನೆ. ಪುನೀತ್ ರಾಜ್ ಕುಮಾರ್ ನಟನೆಯ `ಯುವರತ್ನ' ಚಿತ್ರದಲ್ಲಿ ಉಪನ್ಯಾಸಕನ ಪಾತ್ರ ನನ್ನದು. ಸದ್ಯದಲ್ಲೇ ತೆರಕಾಣಲಿರುವ `ಅಧ್ಯಕ್ಷ ಇನ್ ಅಮೆರಿಕ' ಸಿನಿಮಾದಲ್ಲಿ ಶರಣ್ ಅಣ್ಣನಾಗಿ ನಟಿಸಿದ್ದೇನೆ.

     ಮುಂದಿನ ಕನಸುಗಳೇನು?

    ಮುಂದಿನ ಕನಸುಗಳೇನು?

    ದೊಡ್ಡ ಕನಸುಗಳೇನು ಇಲ್ಲ. ವೈಯಕ್ತಿಕವಾಗಿ ನನಗೆ ಹೆಚ್ಚು ಪಾತ್ರಗಳನ್ನು ಮಾಡುವುದಕ್ಕಿಂತ ‘ಕಿರಗೂರಿನ ಗಯ್ಯಾಳಿಗಳು' ಅಥವಾ ‘ನಾನು ಅವನಲ್ಲ ಅವಳು' ಚಿತ್ರದಲ್ಲಿ ದೊರಕಿದಂತೆ ಗಟ್ಟಿಯಾದ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕು ಎನ್ನುವ ಕನಸಿದೆ. ಜತೆಗೆ ಒಂದು ಸಿನಿಮಾ ಮಾಡುವ ಯೋಜನೆ ಇದೆ. ಎಲ್ಲವು ಸರಿಯಾದರೆ ಶ್ರುತಿ ನಾಯ್ಡು ಅವರೇ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ಇದರೊಂದಿಗೆ ನನ್ನದೇ ಕತೆಯಲ್ಲಿ ವೆಬ್ ಸೀರೀಸ್ ಮಾಡುವ ಪ್ರಯತ್ನ ಕೂಡ ನಡೆದಿದೆ. ಎಂಬತ್ತರಷ್ಟು ಭಾಗ ಅಮೆರಿಕಾದಲ್ಲೇ ನಡೆಯುವಂಥ ಕತೆ ಹೊಂದಿರುವ ಕಾರಣ ಆ ಪ್ರಾಜೆಕ್ಟ್ ತುಸು ವೆಚ್ಚದಾಯಕ ಎಂದೇ ಹೇಳಬಹುದು.

    English summary
    How Sundar became Sundar Veena in kannada film industry.
    Tuesday, September 24, 2019, 17:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X