For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ: ಗೃಹ ಬಂಧನದಲ್ಲಿರುವ ಯೋಗರಾಜ ಭಟ್ಟರು ಏನು ಮಾಡ್ತಿದ್ದಾರೆ?

  |

  ಕೊರೋನ ಎಂದೊಡನೆ ನಡುಗುವಷ್ಟು ಆತಂಕ ಜನರಲ್ಲಿದೆ. ಅದಕ್ಕೆ ಕಾರಣ ಕೋವಿಡ್ 19. ಅದೇನೇ ಆತಂಕ ಇದ್ದರೂ, ಚಿತ್ರೋದ್ಯಮದಲ್ಲಿ ತಳಮಳಗಳಿದ್ದರೂ ಪ್ರಶ್ನೋತ್ತರದ ಸಂದರ್ಭ ಬಂದಾಗ ಪಂಚ್ ಡೈಲಾಗ್ ಹೊಡೆಯುವುದರಲ್ಲಿ ಯೋಗರಾಜ್ ಭಟ್ಟರು ನಿಸ್ಸೀಮರು.

  ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ? | Vishnu | filmibeat kannada

  ಆದರೆ ಕೊರೋನ ಬಗ್ಗೆ ಅವರು ಮಾತನಾಡುವಾಗ ಪಂಚ್ ಗಿಂತ ಹೆಚ್ಚು ಮಾರ್ಮಿಕತೆಗೆ ಒತ್ತು ನೀಡಿದ್ದಾರೇನೋ ಅನಿಸಿತು. ಯಾಕೆಂದರೆ ಮನೆಯ ಒಳಗಿರುವವರು, ಹೊರಗೆ ಬರಲು ಕಾಯುವವರಿಗೆ ಕೂಡ ಭಟ್ಟರು ತಾವು ಯಾವುದೇ ಸಂದೇಶ ನೀಡುವುದಿಲ್ಲ ಎಂದಿದ್ದಾರೆ.

  ಜತೆಗೆ ಅದಕ್ಕೆ ಕಾರಣವನ್ನೂ ಹೇಳಿದ್ದಾರೆ. ತಮ್ಮ ಗಾಳಿಪಟ' ಸಿನಿಮಾದ ಚಿತ್ರೀಕರಣ ಅರ್ಧದಲ್ಲಿ ನಿಲ್ಲಿಸಿ ಮನೆಯಲ್ಲೇ ಇರುವ ಭಟ್ಟರಿಗೆ ಮನೆಯಲ್ಲಿ ಕಾಲ ಕಳೆಯುವುದು ಕಷ್ಟವಾಗುತ್ತಿದೆ. ಅದನ್ನು ಕೂಡ ತಮಾಷೆಯಾಗಿಯೇ ಹಂಚಿಕೊಂಡಿರುವ ಅವರು, ಗಾಳಿಪಟ 2' ಚಿತ್ರದ ಬಗ್ಗೆ, ಮುಂದೆ ಚಿತ್ರರಂಗದ ಪರಿಸ್ಥಿತಿ ಏನಾದೀತು ಎನ್ನುವ ಬಗ್ಗೆ ಸೇರಿದಂತೆ ಸಾಕಷ್ಟು ವಿಚಾರಗಳ ಕುರಿತು ಫಿಲ್ಮೀಬೀಟ್' ಜತೆಗೆ ಮಾತನಾಡಿದ್ದಾರೆ.

  ಬರವಣಿಗೆಯ ಹವ್ಯಾಸ ಇರುವುದರಿಂದ ಲಾಕ್ಡೌನ್ ಸಮಯವನ್ನು ಬರಹಕ್ಕೆ ಮೀಸಲಿಟ್ಟಿದ್ದೀರ?

  ಬರವಣಿಗೆಯ ಹವ್ಯಾಸ ಇರುವುದರಿಂದ ಲಾಕ್ಡೌನ್ ಸಮಯವನ್ನು ಬರಹಕ್ಕೆ ಮೀಸಲಿಟ್ಟಿದ್ದೀರ?

  ನನಗೆ ಬರೆಯುವುದಕ್ಕೆ ಒಂದು ನಿರ್ದಿಷ್ಟ ಜಾಗ ಎಂದು ಇಲ್ಲ. ಚಿತ್ರೀಕರಣದ ಸೆಟ್ಟಲ್ಲಿ, ಕಾರಲ್ಲಿ ಹೀಗೆ ಎಲ್ಲೆಲ್ಲೂ ಬರೆಯುವ ಹವ್ಯಾಸ ನನಗೆ. ಈಗ ಓದುವಿಕೆಯಲ್ಲಿಯೂ ಕಾಲ ಕಳೆಯುತ್ತೇನೆ. ಆದರೆ ಒಂದು ಕೆಲಸ ಮಾಡುವುದರ ಜತಗೆ ಓದುವುದಕ್ಕೂ ಬರೆಯುವುದಕ್ಕೂ; ಈಗ ಓದಿ ಬರೆಯಲೆಂದೇ ಸಮಯ ಮೀಸಲಾಗಿರಿಸುವುದಕ್ಕೂ ಬಹಳ ವ್ಯತ್ಯಾಸ ಇದೆ. ತುಂಬ ಖಾಲಿ ಇದ್ದಾಗ ಏನೂ ಮಾಡಲು ಆಗುವುದಿಲ್ಲ. ತುಂಬ ಕೆಲಸ ಇದ್ದಾಗ ಓದುವುದರಲ್ಲಿ, ಸಂಗೀತ ಕೇಳುವುದರಲ್ಲಿ ಒಂದು ರಿಲ್ಯಾಕ್ಸೇಶನ್ ಸಿಗುತ್ತಿತ್ತು. ಈಗ ಕೆಲಸ ಇಲ್ಲದೆ ಅದನ್ನೇ ಕೆಲಸ ಮಾಡಲು ಹೋದರೆ ಸಾಧ್ಯವಾಗುವುದಿಲ್ಲ. ಎಲ್ಲರಂತೆ ನನಗೂ ಈ ಏಳೆಂಟು ದಿನದಲ್ಲೇ ತಲೆ ಚಿಟ್ಟು ಹಿಡಿದು ಹೋಗಿರುವುದು ಸತ್ಯ.

  ಹೀಗೆ ಅನಾಮತ್ತಾಗಿ ಮನೆಯೊಳಗೆ ಬಂಧಿಯಾಗಬಹುದೆಂದು ಯಾವತ್ತಾದರೂ ಯೋಚಿಸಿದ್ದೀರ?

  ಹೀಗೆ ಅನಾಮತ್ತಾಗಿ ಮನೆಯೊಳಗೆ ಬಂಧಿಯಾಗಬಹುದೆಂದು ಯಾವತ್ತಾದರೂ ಯೋಚಿಸಿದ್ದೀರ?

  ನಿಜ ಹೇಳಬೇಕೆಂದರೆ ಹೌದು. ಅಂದರೆ ಲಾಕ್ಡೌನ್ ಅಂತ ಅಲ್ಲ. ವೈರಸ್ ಅಟ್ಯಾಕ್ ಆದರೆ ಒಟ್ಟು ಒಂದು ದೇಶದ ಪರಿಸ್ಥಿತಿ ಎಷ್ಟೊಂದು ಕೆಟ್ಟು ಹೋಗಬಹುದು ಎಂದು ಚಿಂತಿಸಿದ್ದೆ. ಅದಕ್ಕೆ ಕಾರಣವಾಗಿದ್ದು, ಹಿಂದೆ ನಾನು ನೋಡುತ್ತಿದ್ದಂಥ ಒಂದು ಇಂಗ್ಲಿಷ್ ಧಾರಾವಾಹಿ. ಅದರ ಹೆಸರು `ಎಎಕ್ಸ್ಎನ್ 24' ಎಂದು. ಬಯಾಲಾಜಿಕಲ್ ಅಟ್ಯಾಕ್ ಆದಾಗ ಒಂದು ಹೋಟೆಲ್ ನಲ್ಲಿ ನಡೆಯುವ ಘಟನೆಯನ್ನು ಆಧಾರವಾಗಿಟ್ಟು ಆ ಕತೆ ಹೆಣೆಯಲಾಗಿತ್ತು. ಹೋಟೆಲ್ ಒಳಗಿರುವ ಎಲ್ಲ ಗ್ರಾಹಕರನ್ನು, ನೌಕರರನ್ನು ಪೊಲೀಸರು ಅಲ್ಲೇ ಕೂಡಿ ಹಾಕಿರುತ್ತಾರೆ. ಆದರೆ ಒಬ್ಬ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಹಾಗೆ ಹೊರಗಡೆ ಹೋದ ಒಬ್ಬನಿಂದ ವೈರಸ್ ಎಷ್ಟು ಜನಕ್ಕೆ ಹರಡುತ್ತದೆ ಎನ್ನುವುದನ್ನು ಕಂಡಾಗ ಹೆದರಿದ್ದೆ. ಒಂದು ವೇಳೇ ನಮ್ಮ ದೇಶದಲ್ಲಿ ಈ ರೀತಿ ನಡೆದರೆ ಎಷ್ಟು ಕಷ್ಟವಾದೀತು ಎಂದು ಯೋಚಿಸಿದ್ದೆ.

  ಈಗ ಮನೆಯಲ್ಲಿರುವವರಿಗೆ ನೀವು ಏನು ಹೇಳಲು ಬಯಸುತ್ತೀರಿ?

  ಈಗ ಮನೆಯಲ್ಲಿರುವವರಿಗೆ ನೀವು ಏನು ಹೇಳಲು ಬಯಸುತ್ತೀರಿ?

  ಸಾಮಾನ್ಯವಾಗಿ ಇಂಥ ಸಂದೇಶಗಳನ್ನೆಲ್ಲ ನಾನು ಹಾಡಲ್ಲೇ ಬರೆದು ಅಭ್ಯಾಸ. ಈ ಬಾರಿ ಹಾಡು ಬರೆದರೆ ಅದನ್ನು ರೆಕಾರ್ಡ್ ಮಾಡೋಕೆ ಸ್ಟುಡಿಯೋಗಳೇ ತೆರೆದಿಲ್ಲ. ಮಾತ್ರವಲ್ಲ, ನಾನೇ ಅಂತರ್ಜಾಲದಲ್ಲಿ ತುಂಬ ಕಡೆ ಇತರರು ಮಾಡಿರುವ ಹಾಡುಗಳನ್ನು ನೋಡಿದೆ. ಬೇರೆಯವರೆಲ್ಲ ಬರೆದಿರುವುದು ಚೆನ್ನಾಗಿಯೇ ಇದೆ ಅನಿಸಿತು. ಮತ್ತೆ ನಾನೇಕೆ ಬರೆಯಲಿ? ಮಾತ್ರವಲ್ಲ, ಇದು ಮನುಷ್ಯರು ಹೇಳಿದರೆ ಮನುಷ್ಯರು ಕೇಳುವ ಕಾಲವಂತೂ ಖಂಡಿತಾ ಅಲ್ಲ ಎಂದು ಅನಿಸಿತು. ನಮ್ಮ ಡಾಕ್ಟರ್ಸ್, ಪೊಲೀಸರು ಹೇಳಿರುವುದನ್ನೇ ಜನ ಕೇಳುತ್ತಿಲ್ಲ. ಇನ್ನು ನನ್ನ ಮಾತು ಕೇಳುತ್ತಾರ? ಅಂಥದ್ದೇನಾದರೂ ಇದ್ದರೆ ಪ್ರಕೃತಿಯೇ ಹೇಳಬೇಕು. ಪ್ರಕೃತಿ ಈಗ ಅದನ್ನು ವೈರಸ್ ರೂಪದಲ್ಲಿ ಹೇಳ್ತಾ ಇದೆ. ಮುಚ್ಕೊಂಡು ಮನೇಲಿರಿ ಅಂತ. ಹಾಗಾಗಿ ನಾವು ನೇಚರ್ ಮಾತನ್ನು ಕೇಳುವುದೇ ಬೆಟರ್. ನಮಗೆ ಬೇರೆ ಅವಕಾಶವೂ ಇಲ್ಲ. ಮನುಷ್ಯನ ಮೂಢತನಕ್ಕೆ ಪ್ರಕೃತಿಯೇ ಬಂದು ಸೂಜಿಮದ್ದು ನೀಡಿದೆ ಎಂದು ಭಾವಿಸಬೇಕಾದ ಸಂದರ್ಭ ಇದು.

  ಹೊಸ ಚಿತ್ರದ ಬಗ್ಗೆ, ಕತೆಯ ಬಗ್ಗೆ ಯೋಜನೆ ಹಾಕಿದ್ದೀರ?

  ಹೊಸ ಚಿತ್ರದ ಬಗ್ಗೆ, ಕತೆಯ ಬಗ್ಗೆ ಯೋಜನೆ ಹಾಕಿದ್ದೀರ?

  ಖಂಡಿತವಾಗಿ ಇಲ್ಲ. `ಗಾಳಿಪಟ 2' ಸಿನಿಮಾದ ಒಂದು ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಒಂದು ಹಂತಕ್ಕೆ ತಲುಪಿವೆ. ಎಡಿಟರ್ ದೀಪು ಚೆನ್ನಾಗಿ ಎಲ್ಲ ಮುಗಿಸಿದ್ದಾನೆ. ಸಿನಿಮಾದ ಇನ್ನೂ ಸ್ವಲ್ಪ ಭಾಗ ಪೋಲ್ಯಾಂಡ್ ನಲ್ಲಿ ಶೂಟಿಂಗ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಅದರೊಳಗೆ ಇಷ್ಟೆಲ್ಲ ನಡೆದು ಬಿಟ್ಟಿದೆ. ಸದ್ಯಕ್ಕಂತೂ ನನಗೆ ಹೊಸ ಸಿನಿಮಾ ಯೋಚನೆಗಳೇನೂ ಇಲ್ಲ. ಯಾಕೆಂದರೆ ಈಗ ಸಕ್ಸಸ್ ಫುಲ್ ಆಗಿ ಪ್ರದರ್ಶನವಾಗುತ್ತಿರುವ ಸಿನಿಮಾವೇ ಕೊರೋನ! ಅದು ಎಲ್ಲ ಕಡೆ ಓಡಾಡುತ್ತಿದೆ! ಅದರ ಯಶಸ್ಸಿನಲ್ಲಿ ಜನಗಳು ಬ್ಯುಸಿಯಾಗಿದ್ದಾರೆ. ನಾನು ಕೂಡ ಬ್ಯುಸಿಯಾಗಿದ್ದೇನೆ. ಸಮಸ್ಯೆ ಮುಗಿದೊಡನೆ ಜನ ಥಿಯೇಟರ್ ಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ. ಹಿಂದೆ ಪ್ಲೇಗ್ ಮೊದಲಾದ ಭೀಕರ ರೋಗಗಳು ಬಂದಾಗಲೇ ಹೆಣಗಳನ್ನು ಪಕ್ಕದಲ್ಲೇ ಇರಿಸಿಕೊಂಡು ಸಿನಿಮಾ ನೋಡಿದಂಥವರು ನಮ್ಮ ಜನಗಳು! ಶೋ ಮಸ್ಟ್ ಗೋ ಆನ್ ಅಂತಾರೆ. ಕತೆ ಮುಂದುವರಿಯಲೇ ಬೇಕು. ಸಿನಿಮಾಗಳು ಕೂಡ ಅಷ್ಟೇ.

  English summary
  Director And Lyricist Yogaraj Bhat talks about his new film Galipata-2 and coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X