»   » ಶಿವಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ : ಕಿಚ್ಚ ಸುದೀಪ್

ಶಿವಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ : ಕಿಚ್ಚ ಸುದೀಪ್

Posted By:
Subscribe to Filmibeat Kannada

ವರ್ಷದ ಬಹುನಿರೀಕ್ಷಿತ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆ ಚಿತ್ರಕ್ಕೆ ಅಭೂತಪೂರ್ವ ಓಪನಿಂಗ್ ಸಿಕ್ಕಿದೆ.

ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ರನ್ನ ಚಿತ್ರದ ಬಗ್ಗೆ, ಚಿತ್ರದ ಮೇಕಿಂಗ್ ಬಗ್ಗೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಗ್ಗೆ ಸುದೀಪ್ ಮನಬಿಚ್ಚಿ ಮಾತನಾಡಿದ್ದಾರೆ.

ಗುರುವಾರ (ಜೂ 4) ಸಂಜೆ ಸಮಯ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಸುದೀಪ್, ಶಿವಣ್ಣನನ್ನು ಬಹಳ ಪ್ರೀತಿಸುತ್ತೇನೆಂದು ಹೇಳುವ ಮೂಲಕ ಕಲಾವಿದರು ನಾವೆಲ್ಲಾ ಒಂದೇ ಎನ್ನುವ ಪ್ರೀತಿಯ ಸಂದೇಶವನ್ನು ಪ್ರಮುಖವಾಗಿ ಅಭಿಮಾನಿ ಬಳಗಕ್ಕೆ ರವಾನಿಸಿದ್ದಾರೆ.

ಅಭಿಮಾನಿಗಳು ತೋರಿಸುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ, ಅವರಿಗಾಗಿ ಇನ್ನೂ ಉತ್ತಮ ಚಿತ್ರವನ್ನು ನೀಡುವ ಪ್ರಯತ್ನ ಮಾಡುತ್ತೇನೆಂದು ಕಿಚ್ಚ ಭರವಸೆ ನೀಡಿದ್ದಾರೆ.

ರಿಮೇಕ್, ಶಿವಣ್ಣ, ಗೀತಾ ಶಿವರಾಜ್ ಕುಮಾರ್, ಅಂಬರೀಶ್, ರಣವಿಕ್ರಮ ಚಿತ್ರ ಪ್ರದರ್ಶನದ ಸಂದರ್ಭದಲ್ಲಿನ ರನ್ನ ಟ್ರೈಲರ್ ಮುಂತಾದ ವಿಷಯಗಳ ಬಗ್ಗೆ ಸುದೀಪ್, ಸಂದರ್ಶನದಲ್ಲಿ ಹೇಳಿರುವುದನ್ನು ಹತ್ತು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ....

ರಾಜ್ ಕಪ್ ಕ್ರಿಕೆಟ್

ಹುಬ್ಬಳ್ಳಿಯಲ್ಲಿ ನಡೆದ ರಾಜ್ ಕಪ್ ಕ್ರಿಕೆಟ್ ಫೈನಲ್ ವೇಳೆಯಲ್ಲೂ 'ರಾಘಣ್ಣ ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ' ಎಂದು ಸುದೀಪ್ ಮೈದಾನದಲ್ಲಿ ಹೇಳಿದ್ದನ್ನು ಮೊದಲಿಗೆ ಸ್ಮರಿಸಿಕೊಳ್ಳಬಹುದಾಗಿದೆ.

ಓಂ ಚಿತ್ರ ಹದಿನೈದು ಸಾರಿ ನೋಡಿದ್ದೆ

ಶಿವಣ್ಣ ಅವರ ಹೆಚ್ಚಿನ ಎಲ್ಲಾ ಚಿತ್ರವನ್ನು ನೋಡಿದ್ದೇನೆ. ಅದರಲ್ಲೂ ಪ್ರಮುಖವಾಗಿ ಅವರ ಓಂ ಚಿತ್ರವನ್ನು ಕನಿಷ್ಠವೆಂದರೆ ಹದಿನೈದು ಸಾರಿ ನೋಡಿದ್ದೇನೆ. ಬೆಂಗಳೂರಿನ ಶಾಂತಿ ಚಿತ್ರಮಂದಿರದಲ್ಲೇ ಐದು ಬಾರಿ ನೋಡಿದ್ದೆ.

ಅವರು ಕರೆದಾಗ ಹೋಗುತ್ತಿದ್ದೆ

ಅವರು ಕರೆದಾಗ ಅವರ ಮನೆಗೆ ಹೋಗುತ್ತಿದ್ದೆ, ಅವರು ಎಲ್ಲಿ ಕರಿಯುತ್ತಾರೋ ಅಲ್ಲಿಗೆ ಹೋಗುತ್ತಿದ್ದೆ. ಅವರು ದೊಡ್ಡ ಸ್ಟಾರ್, ಕಾಲೇಜು ಜೀವನದಲ್ಲಿ ಅವರ ಸಿನಿಮಾವನ್ನು ನೋಡಿ ಬೆಳೆದವನು ನಾನು.

ಸಿಗರೇಟ್ ಬಿಸಾಕುತ್ತಿದ್ದೆ

ಶಿವಣ್ಣ ಸಿನಿಮಾವನ್ನು ನೋಡುತ್ತಿದ್ದ ನನಗೆ ಅವರು ಪಕ್ಕದಲ್ಲಿ ಇದ್ದಾಗ ಏನೋ ಸಂತೋಷ. ಫ್ರೆಂಡ್ಸ್ ಜೊತೆ ಸಿಗರೇಟು ಸೇದುತ್ತಿದ್ದಾಗ ಅವರು ಎದುರು ಬಂದರೆ ಸಿಗರೇಟು ಬಿಸಾಕುತ್ತಿದ್ದೆ.

ಗೀತಕ್ಕ ನಾವು ಒಂದೇ ಊರಿನವರು

ಗೀತಕ್ಕ ಮತ್ತು ನಾನು ಮಲೆನಾಡಿನವನು. ಎಷ್ಟೋ ಸಾರಿ ಗೀತಕ್ಕ ಮಾಡಿಕೊಟ್ಟ ಅಕ್ಕಿರೊಟ್ಟಿಯನ್ನು ತಿಂದಿದ್ದೇನೆ ಎಂದು ಸುದೀಪ್ ಅಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ.

ಅಂಬರೀಶ್ ಜೊತೆ

ಬಾಲ್ಯದಲ್ಲಿ ಅಂಬಿ ಅಂಕಲ್ ನಮ್ಮನ್ನು ಹೊತ್ತು, ಮುದ್ದಾಡಿದವರು. ನಾನು ಇಂದಿಗೂ ಅವರ ಜೊತೆ ಅವರ ಮನೆಯವರಲ್ಲಿ ಒಬ್ಬನಾಗಿದ್ದೇನೆ. ವಿಷ್ಣು ಸರ್ ಜೊತೆ ಕೂಡಾ ನಾನು ಸಂಪರ್ಕದಲ್ಲಿದ್ದೆ, ಆದರೆ ಅಂಬಿ ಅಂಕಲ್ ಜೊತೆ ಇದ್ದಷ್ಟು ಕ್ಲೋಸ್ ವಿಷ್ಣು ಸರ್ ಜೊತೆಗಿರಲಿಲ್ಲ.

ರಣವಿಕ್ರಮ

ರಣವಿಕ್ರಮ ಚಿತ್ರದ ಮೊದಲ ದಿನದ ಪ್ರದರ್ಶನದಲ್ಲಿ ನನ್ನ ಚಿತ್ರದ ಟ್ರೈಲರ್ ಪ್ರಸಾರ ವಿಚಾರದಲ್ಲಿ ಗಲಾಟೆಯಾಯಿತು. ಇದು ಕಲಾವಿದರಿಗೆ ಗೊತ್ತಾಗುವುದಿಲ್ಲ, ಇದು ಅಭಿಮಾನಿಗಳು ಮಾಡುವ ಕೆಲಸ. ದೊಡ್ಡ ಸಿನಿಮಾ ರಿಲೀಸ್ ಆದಾಗ, ನನ್ನ ಸಿನಿಮಾದ ಟ್ರೈಲರ್ ತೋರಿಸಿದರೆ ಅದರಿಂದ ನನ್ನ ಚಿತ್ರಕ್ಕೆ ಉಪಯೋಗವಾಗಬಹುದು ಎನ್ನುವುದು ನನ್ನ ಲೆಕ್ಕಾಚಾರವಾಗಿತ್ತು.

ರಿಮೇಕ್ ಬಗ್ಗೆ

ಸುದೀಪ್ ಬರೀ ರಿಮೇಕ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಲೇವಡಿ ಮಾತು, ಹೇಳಿಕೆಯನ್ನು ಕೇಳಿದ್ದೇನೆ. ಅದಕ್ಕೆಲ್ಲಾ ಉತ್ತರ ಕೊಡುತ್ತಾ ಹೋದರೆ ನಾನು ಜೀವನದಲ್ಲಿ ಮುಂದೆ ಹೋಗುವುದು ಕಷ್ಟವಾಗುತ್ತದೆ. ನಾನು ಇದುವರೆಗೆ ನಟಿಸಿದ ಸುಮಾರು ಅರವತ್ತು ಚಿತ್ರಗಳಲ್ಲಿ 16-17 ರಿಮೇಕ್ ಸಿನಿಮಾದಲ್ಲಿ ನಟಿಸಿರಬಹುದು. ರಿಮೇಕ್ ಚಿತ್ರದಿಂದ ಬೇರೊಬ್ಬರಿಗೆ ಉಪಯೋಗ ಆಗುತ್ತಂದರೆ ಯಾಕೆ ರಿಮೇಕ್ ಚಿತ್ರ ಮಾಡಬಾರದು.

ನಾನು ಸುಮ್ಮನಿರುವುದು ತಪ್ಪಾ

ನಾನಾಗಲಿ ಶಿವಣ್ಣನಾಗಲಿ ಎಂದಿಗೂ ನಮ್ಮಿಬ್ಬರ ಸಂಬಂಧದ ಬಗ್ಗೆ ಮಾತಾಡಿಲ್ಲ. ಹಾಗಾಯಿತು, ಹೀಗಾಯಿತು ಎನ್ನುವುದು ಪತ್ರಿಕೆಯವರು ಬರೆದದ್ದು. ನಾನು ಇವತ್ತಿಗೆ ಸ್ಟಾರ್ ಆಗಿರಬಹುದು, ಆದರೆ ಶಿವಣ್ಣನಂತಹ ದೊಡ್ಡ ಸ್ಟಾರ್ ನಾನಲ್ಲ.

ರನ್ನ ಚಿತ್ರದ ಬಗ್ಗೆ

ರನ್ನ ಚಿತ್ರವನ್ನು ಪ್ರೀತಿಯಿಂದ ನಿರ್ಮಿಸಿದ್ದೇವೆ. ನಂದ ಮತ್ತು ತರುಣ್ ನನ್ನು ನಾನು ವಾರ್ನರ್ ಬ್ರದರ್ಸ್ ಎಂದು ಕರೆಯುತ್ತೇನೆ. ಅವರ ಪರಿಶ್ರಮ ಚಿತ್ರಕ್ಕೆ ಬಹಳ ಇದೆ. ಸ್ವಿಜರ್ಲ್ಯಾಂಡಿನ ಶೀತದ ವಾತಾವರಣ, ಚಿಕ್ಕಣ್ಣ ಜೊತೆಗಿನ ಒಡನಾಟವನ್ನೂ ಸುದೀಪ್, ಸಮಯ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

English summary
Kichcha Sudeep in Samaya News TV interview, I have a lot of respect to Shivraj Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada