twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೊದಲ ಸಿನಿಮಾ : 35 ಸಾವಿರದಲ್ಲಿ ಸಿನಿಮಾ ಮಾಡಿ ತೋರಿಸಿದ್ದ ಗಿರಿರಾಜ್

    By Naveen
    |

    ಕನ್ನಡದಲ್ಲಿ ವಿಭಿನ್ನ ಸಿನಿಮಾಗಳನ್ನು ತೆರೆ ಮೇಲೆ ಮೂಡಿಸುವ ನಿರ್ದೇಶಕ ಗಿರಿರಾಜ್. 'ಜಟ್ಟ' ಗಿರಿರಾಜ್ ಎಂದೇ ಜನಪ್ರಿಯತೆ ಗಳಿಸಿರುವ ಇವರ ಮೊದಲ ಸಿನಿಮಾ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಬಹುತೇಕರು 'ಜಟ್ಟ' ಸಿನಿಮಾನೇ ಗಿರಿರಾಜ್ ಅವರ ಮೊದಲ ಸಿನಿಮಾ ಎಂದುಕೊಂಡಿದ್ದಾರೆ. ಆದರೆ ಮೊದಲು ಗಿರಿರಾಜ್ ನಿರ್ದೇಶನ ಮಾಡಿದ್ದ ಸಿನಿಮಾ 'ನವಿಲಾದವರು'.

    'ನವಿಲಾದವರು' ಸಿನಿಮಾವನ್ನು ನಿರ್ದೇಶಕ ಗಿರಿರಾಜ್ ಬರೀ 35 ಸಾವಿರ ರೂಪಾಯಿಯಲ್ಲಿ ನಿರ್ಮಾಣ ಮಾಡಿದ್ದರು. ಮೊದಲ ಬಾರಿಗೆ SLR ಕ್ಯಾಮರಾ ಬಳಸಿ ಒಂದು ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟವರು ಕೂಡ ಗಿರಿರಾಜ್ ಅವರೇ. ಸಿನಿಮಾ ಮಾಡುವುದಕ್ಕೆ ದುಡ್ಡಿಗಿಂತ ಹೆಚ್ಚು ಅದರ ಮೇಲೆ ಪ್ರೀತಿ ಮತ್ತು ಸಿನಿಮಾ ಮಾಡುವ ಛಲ ಇರಬೇಕು ಎಂದು ನಂಬಿರುವ ಗಿರಿರಾಜ್ ಅದೇ ರೀತಿ ಸಿನಿಮಾ ಮಾಡಿ ತೋರಿಸಿದ್ದರು. 'ಮೈತ್ರಿ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಮೋಹನ್ ಲಾಲ್ ಅಂತಹ ದೊಡ್ಡ ನಟರಿಗೆ ಆಕ್ಷನ್ ಕಟ್ ಹೇಳಿರುವ ಗಿರಿರಾಜ್ ಅವರ ಮೊದಲ ಸಿನಿಮಾ 'ನವಿಲಾದವರು' ಇನ್ನೂ ಕೂಡ ಬಿಡುಗಡೆಯಾಗಿಲ್ಲ.

    ಅಂದಹಾಗೆ, ಗಿರಿರಾಜ್ ತಮ್ಮ ಮೊದಲ ಸಿನಿಮಾ 'ನವಿಲಾದವರು' ಚಿತ್ರ ಹುಟ್ಟಿದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದರ ಮಾತು ಮುಂದಿದೆ ಓದಿ...

    ಕಥೆ ಹೇಳಿದ ನಿರ್ಮಾಪಕರು ಸಿನಿಮಾ ಮಾಡಲಿಲ್ಲ

    ಕಥೆ ಹೇಳಿದ ನಿರ್ಮಾಪಕರು ಸಿನಿಮಾ ಮಾಡಲಿಲ್ಲ

    ''ನಾನು ಅನೇಕ ಸಿನಿಮಾಗೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್, ಆಕ್ಟಿಂಗ್ ಟ್ರೈನರ್ ಆಗಿ ಕೆಲಸ ಮಾಡಿದೆ. ನಾನೇ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂದಾಗ ಒಂದು ಕಥೆ ರೆಡಿ ಮಾಡಿಕೊಂಡು ಒಂದಷ್ಟು ನಿರ್ಮಾಪಕನ್ನು ಸಂಪರ್ಕ ಮಾಡಿದೆ. ಸಿನಿಮಾದ ಕಥೆ ಕೇಳಿ ಯಾರು ಕೂಡ ಒಪ್ಪಲಿಲ್ಲ. ಆಗ ನನ್ನ ಸ್ನೇಹಿತನೊಬ್ಬ SLR ಅಂತ ಹೊಸ ಕ್ಯಾಮರಾ ಬಂದಿದೆ. ಅದು ಸ್ಟಿಲ್ ಕ್ಯಾಮರಾ ಆದರೆ ರೆಕಾರ್ಡ್ ಮಾಡಬಹುದು ಎಂಬ ಸಲಹೆ ನೀಡಿದ. ಆ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಬಹುದು ಎಂತ ಗೊತ್ತಾದಾಗ 'ನವಿಲಾದವರು' ಸಿನಿಮಾ ಶುರು ಮಾಡಿದ್ವಿ.''

    ಒಬ್ಬ ತಾಯಿಯ ಮಾತಿನಿಂದ ಕಥೆ ಶುರುವಾಯ್ತು

    ಒಬ್ಬ ತಾಯಿಯ ಮಾತಿನಿಂದ ಕಥೆ ಶುರುವಾಯ್ತು

    ''ಮಂಗಳೂರಿನ ಉಲ್ಲಾಳದಲ್ಲಿ ಒಂದು ಘಟನೆ ನಡೆದಿತ್ತು. ಒಬ್ಬ ಹುಡುಗನಿಗೆ ಪೊಲೀಸರು ತಪ್ಪು ಕೇಸ್ ಹಾಕಿ ಸ್ಟೆಷನ್ ಗೆ ಕರೆದುಕೊಂಡು ಹೋಗಿ ಹೊಡೆದಿದ್ದರು. ನಂತರ ಆ ಅಮಾಯಕ ಹುಡುಗ ಆತ್ಮಹತ್ಯೆ ಮಾಡಿಕೊಂಡ. ನನ್ನ ಒಬ್ಬ ಸ್ನೇಹಿತನ ಸಹಾಯದಿಂದ ಆ ಹುಡುಗನ ತಾಯಿಯನ್ನು ಬೇಟಿ ಮಾಡಿದೆ. ಆಗ ಆ ತಾಯಿ ಘಟನೆ ಬಗ್ಗೆ ಕೇಳಿದ್ದಕ್ಕೆ ''ನಾನು ಸೇಡು, ದ್ವೇಶ ಅಂತ ತುಂಬಿಕೊಂಡರೆ ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.'' ಎಂದು ಹೇಳಿದರು. ಆಗ ನನಗೆ ಮಗನನ್ನು ಕಳೆದುಕೊಂಡ ತಾಯಿಯ ಆ ಮಾತು ತುಂಬ ಕಾಡಿತು. ನಮ್ಮ ಸಿನಿಮಾದಲ್ಲಿ ತಾಯಿಯ ದೃಶ್ಯ ಇರುವುದು ಒಂದು ಸೀನ್ ಮಾತ್ರ. ಆದರೆ ಇಡೀ ಸಿನಿಮಾ ಹುಟ್ಟುವುದಕ್ಕೆ ಆ ತಾಯಿಯೇ ಕಾರಣ.''

    35 ಸಾವಿರದಲ್ಲಿ ಸಿನಿಮಾ ಮಾಡಿದ್ವಿ

    35 ಸಾವಿರದಲ್ಲಿ ಸಿನಿಮಾ ಮಾಡಿದ್ವಿ

    ''ಆಗ ನನ್ನ ಬಳಿ ಸ್ಕ್ರಿಪ್ಟ್ ಬಿಟ್ಟರೆ ಏನು ಇರಲಿಲ್ಲ. 25 ಸಾವಿರ ಹಣ ಹೊಂದಿಸಿದೆ. ನಂತರ ನಾನು ಬರೆದ 'ಕಥೆಗೆ ಸಾವಿಲ್ಲ' ಕಥೆಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಹಾಗೂ 10 ಸಾವಿರ ರೂಪಾಯಿ ಬಹುಮಾನ ಬಂದಿತ್ತು. ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗ ಎಷ್ಟೊ ಜನರ ನಂಬಿಕೆ ಗಳಿಸಿದ್ದೆ. ಸ್ನೇಹಿತ ಪ್ರಕಾಶ್ ಫ್ರೀ ಆಗಿ ಎಡಿಟಿಂಗ್ ಮಾಡಿ ಕೊಟ್ಟರು. ಅಚ್ಚುತ್ ಕುಮಾರ್ ಕೂಡ ಬಂದು ನಟಿಸಿದರು. ನನ್ನ ನಾಟಕದ ತಂಡದ ಹುಡುಗರು ಸಿನಿಮಾದಲ್ಲಿ ಅಭಿನಯಿಸಿದರು. ಎಲ್ಲರೂ ತಾವೇ ಬಂದು ನಟಿಸಿದರು. 'ನವಿಲಾದವರು' ಇವತ್ತು ಮಾಡಬೇಕು ಅಂದರೆ ಆಗುವುದಿಲ್ಲ.''

    ರಾಮ್ ಗೋಪಾಲ್ ವರ್ಮ ಗಿಂತ ಮುಂಚೆ ಮಾಡಿದ ಪ್ರಯತ್ನ

    ರಾಮ್ ಗೋಪಾಲ್ ವರ್ಮ ಗಿಂತ ಮುಂಚೆ ಮಾಡಿದ ಪ್ರಯತ್ನ

    ''ನಾನು ಎಲ್ಲರೂ ಕ್ಯಾಮರಾ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿದಿದೆ. ರಾಮ್ ಗೋಪಾಲ್ ವರ್ಮ ಅವರ ಇದೇ ಕ್ಯಾಮರಾ ಬಳಿಸಿ 'ದೊಂಗಲ್ ಮುಟ' ಸಿನಿಮಾ ಮಾಡಿದರು. ಅದಕ್ಕೂ ಮುಂಚೆಯೇ ಕನ್ನಡದಲ್ಲಿ ನಾವು ಆ ಪ್ರಯತ್ನ ಮಾಡಿದೆವು. ಈ ಸಿನಿಮಾ ಯಾರಾದರೂ ನೋಡುತ್ತಾರೆ ಎನ್ನುವುದು ಸಹ ನಮಗೆ ಗೊತ್ತಿರಲಿಲ್ಲ. ಮೊದಲ ಶಾಟ್ ಸೀಸ್ ಕೂಡ ಅಷ್ಟು ನೆನಪಿಲ್ಲ. ನಮ್ಮ ಸ್ನೇಹಿತೆ ವಿಣ್ಯಾ ಅಂತ ಇದ್ದಳು. ಅವಳು ಸಿನಿಮಾಗೆ ತುಂಬ ಸಹಾಯ ಮಾಡಿದಳು. ಅವರ ಮನೆಯಲ್ಲಿಯೇ ಮೊದಲ ಸೀನ್ ಶೂಟಿಂಗ್ ಮಾಡಿದ್ದು. ಅವರೇ ಎಲ್ಲ ಕಾಸ್ಟೂಮ್ ಡಿಸೈನ್ ಮಾಡಿದ್ದು.''

    ತುಂಬ ಕಷ್ಟ ಆಗಿದ್ದ ಕ್ಯಾಮರಾ ಬಳಸುವುದು

    ತುಂಬ ಕಷ್ಟ ಆಗಿದ್ದ ಕ್ಯಾಮರಾ ಬಳಸುವುದು

    ''ಸಿನಿಮಾದಲ್ಲಿ ನನಗೆ ಕಷ್ಟ ಅನಿಸಿದ್ದ ಒಂದು ಅಂಶ ಕ್ಯಾಮರಾವನ್ನು ಬಳಸುವುದು. ಅದು ಆ ಕಾಲದಲ್ಲಿ ಬಂದ SLR ಕ್ಯಾಮರಾಗೆ ಅಷ್ಟೊಂದು ರೆಕಾರ್ಡಿಂಗ್ ಸಾಮರ್ಥ್ಯ ಇರಲಿಲ್ಲ. ರೆಕಾರ್ಡ್ ಮಾಡಿದರೆ ತುಂಬ ಬಿಸಿ ಆಗಿ ಬಿಡುತ್ತಿತ್ತು. ಅದು ವಿಡಿಯೋ ಕ್ಯಾಮರಾನೇ ಆಗಿರಲಿಲ್ಲ. ನಾವು ಅದನ್ನೇ ಬಳಸಿ ಏನೋ ಮಾಡಿದ್ವಿ. ಆ ಕ್ಯಾಮರಾವನ್ನು ಕೂಲ್ ಮಾಡಲು ಐಸ್ ಬಾಕ್ಸ್ ತಂದು ಇಟ್ಟುಕೊಂಡಿದ್ವಿ. ಅದು ಬಿಟ್ಟಿರೆ, ಈ ಸಿನಿಮಾದ ಕಥೆಯನ್ನು ಮೊದಲಿಗೆ ಬಹಳ ನಿರ್ಮಾಪಕರಿಗೆ ಹೇಳಿದ್ದೆ. ಆದರೆ ಇದು ಬೇರೆ ರೀತಿಯ ಸಿನಿಮಾ ಆಗಿರುವ ಕಾರಣ ಅವರಿಗೆ ಇಷ್ಟ ಆಗಿಲಿಲ್ಲ.''

    ನವಿಲಾದವರು ಸಿನಿಮಾ ಕೊನೆಗೂ ರಿಲೀಸ್ ಆಗಲಿಲ್ಲ

    ನವಿಲಾದವರು ಸಿನಿಮಾ ಕೊನೆಗೂ ರಿಲೀಸ್ ಆಗಲಿಲ್ಲ

    ''ನವಿಲಾದವರು ಸಿನಿಮಾ ಕೊನೆಗೂ ರಿಲೀಸ್ ಆಗಲಿಲ್ಲ. ಸಿಡಿ ಡಿವಿಡಿಯಲ್ಲಿ ಜನ ಸಿನಿಮಾ ನೋಡಿದರು. ನಾವು ಪ್ರಾರಂಭದಲ್ಲಿ ಫಿಲ್ಮ್ ಚೆಂಬರ್ ನಲ್ಲಿ ಚಿತ್ರವನ್ನು ನೊಂದಣೆ ಮಾಡಿರಲಿಲ್ಲ. ಆ ನಂತರ ಅದನ್ನು ಮಾಡಲು ಆಗಲಿಲ್ಲ. ಏನೇ ಆದರೆ ಈ ರೀತಿಯ ಒಂದು ವಿಷಯದ ಮೇಲೆ ಆ ಸಿನಿಮಾ ಮಾಡಿದ್ವಿ ಎನ್ನುವ ಹೆಮ್ಮೆ ನಮಗೆ ಇದೆ. ಇವತ್ತಿಗೂ ಜನ ಆ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರೆ ಖುಷಿ ಆಗುತ್ತದೆ. ನಾನು ನನ್ನ ಸಿನಿಮಾವನ್ನು ಫೈನಲ್ ಕಟ್ ಆದ ನಂತರ ನೋಡುವುದಿಲ್ಲ. ನನಗೆ ನೋಡುವಾಗ ತಪ್ಪುಗಳು ಕಾಣಿಸುತ್ತದೆ. ಇವತ್ತಿಗೂ ಜನರ ಜೊತೆಗೆ ನನಗೆ ಸಿನಿಮಾ ನೋಡುವುದಕ್ಕೆ ಆಗುವುದಿಲ್ಲ. ಸಿನಿಮಾ ಮಾಡಿದಾಗ ಒಂದು ಕ್ಯಾಮರಾ ಮತ್ತು ಅದರ ಸ್ಟೆಂಡ್ ಬಿಟ್ಟರೆ ಏನು ಇರಲಿಲ್ಲ. ಇದರಿಂದ ಕೆಲ ದೃಶ್ಯಗಳನ್ನು ರೀಕ್ರಿಯೆಟ್ ಮಾಡಲು ಆಗಲಿಲ್ಲ. ಮೇಕಿಂಗ್ ನಲ್ಲಿ ನಾವು ಕಾಂಪ್ರಮೈಸ್ ಅದ್ವಿ.''

    'ಮೈತ್ರಿ' ಚಿತ್ರ ಕೊಡಬೇಕಾದರೆ ಪುನೀತ್ ಈ ಸಿನಿಮಾ ನೋಡಿದ್ರು.

    'ಮೈತ್ರಿ' ಚಿತ್ರ ಕೊಡಬೇಕಾದರೆ ಪುನೀತ್ ಈ ಸಿನಿಮಾ ನೋಡಿದ್ರು.

    ''ನಿರ್ದೇಶಕನಿಗೆ ಪ್ರತಿ ಸಿನಿಮಾ ಕೂಡ ಮೊದಲ ಸಿನಿಮಾ. ಸಿನಿಮಾ ಬಗ್ಗೆ ಶ್ರದ್ಧೆ ಇರಬೇಕು ಆದರೆ ಅತಿಯಾದ ಮೋಹ ಇರಬಾರದು. ನನ್ನ ಪ್ರತಿ ಸಿನಿಮಾದಲ್ಲಿಯೂ ಒಂದು ನೋವು, ದುಖ, ಹತಾಶೆ ಸುಖ ಇದೆ. 'ನವಿಲಾದವರು' ಮಾಡುವ ತನಕ ನಾನು ಯಾರು ಅಂತ ಯಾರಿಗೂ ಗೊತಿರಲಿಲ್ಲ. ಅದು ನನ್ನ ವಿಸಿಟಿಂಗ್ ಕಾರ್ಡ್. ಪುನೀತ್ ಅವರು ಕೂಡ 'ಮೈತ್ರಿ' ಸಿನಿಮಾ ಕೊಡಬೇಕಾದರೆ ನನ್ನ ಇದೊಂದೆ ಸಿನಿಮಾ ನೋಡಿದ್ದು.''

    English summary
    Nanna Modala Cinema Series: Kannada director Giriraj spoke about his first movie 'Naviladavaru' in an exclusive interview with FilmiBeat Kannada.
    Saturday, March 24, 2018, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X