For Quick Alerts
  ALLOW NOTIFICATIONS  
  For Daily Alerts

  ಪೊಲೀಸರ ಹತ್ಯೆಗೆ ಸಂಚು: ನಟ ದಿಲೀಪ್ ಅರ್ಜಿ ತಳ್ಳಿಹಾಕಿದ ನ್ಯಾಯಾಲಯ

  |

  ನಟಿಯೊಬ್ಬರ ಮೇಲೆ ಅತ್ಯಾಚಾರ ಯತ್ನ ಹಾಗೂ ಕೊಲೆ ಬೆದರಿಕೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಮಲಯಾಳಂ ಸ್ಟಾರ್ ನಟ ದಿಲೀಪ್ ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಆದರೆ ಆ ಅರ್ಜಿಯನ್ನು ನ್ಯಾಯಾಲಯವು ತಳ್ಳಿಹಾಕಿದೆ.

  2017 ರಲ್ಲಿ ನಟಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಗೂ ಹತ್ಯೆಗೆ ಸಂಚು ಮಾಡಿದ್ದ ಆರೋಪದಲ್ಲಿ ನಟ ದಿಲೀಪ್ ಹಾಗೂ ಸಂಗಡಿಗರ ವಿರುದ್ಧ ಕೇರಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

  ಈ ಎಫ್‌ಐಆರ್ ಅನ್ನು ರದ್ದು ಮಾಡಬೇಕು ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಟ ದಿಲೀಪ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

  ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜುನೈದ್ ರೆಹಮಾನ್ ಎಎ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿದ್ದಾರೆ. ಎಫ್‌ಐಆರ್ ಕೈಬಿಡುವಂತೆ ಸೂಚಿಸಲಾಗುವುದಿಲ್ಲ ಹಾಗೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಅಗತ್ಯವೂ ಇಲ್ಲವೆಂದು ತೀರ್ಪು ನೀಡಿದ್ದಾರೆ.

  ದಿಲೀಪ್ ತನ್ನ ವಕೀಲರಾದ ಫಿಲಿಪ್ ಟಿ ವರ್ಗೀಸ್ ಮುಖಾಂತರ ಸಲ್ಲಿಸಿದ್ದ ಅರ್ಜಿಯಲ್ಲಿ, ತಾನು ಪೊಲೀಸರ ಹತ್ಯೆಗೆ ಸಂಚು ಮಾಡಿರುವ ಆರೋಪಕ್ಕೆ ಯಾವುದೇ ಘನ ಸಾಕ್ಷಿ ಇಲ್ಲ. ಒಂದೊಮ್ಮೆ ತನಿಖಾಧಿಕಾರಿಗಳು ಸತ್ತರೆ ಎಂದು ತಾನು 'ಹಾರೈಸಿದ್ದೆ' ಅದನ್ನೇ ಆಧಾರವಾಗಿಟ್ಟುಕೊಂಡು ಕೊಲೆಗೆ ಸಂಚು ಪ್ರಕರಣ ದಾಖಲಿಸಲಾಗಿದೆ ಎಂದು ದಿಲೀಪ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

  ಆದರೆ ಕ್ರೈಂ ಬ್ರ್ಯಾಂಚ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆರೋಪಿಗಳ ಮನದಲ್ಲಿ ಪೊಲೀಸ್ ಅಧಿಕಾರಿಗಳನ್ನು ತಾವೇ ಕೊಲ್ಲುವ ಇರಾದೆ ಇತ್ತು, ಅದಕ್ಕೆ ವಿಫಲ ಯತ್ನವನ್ನು ಸಹ ಅವರು ಮಾಡಿದ್ದರು ಎಂದು ನ್ಯಾಯಾಲಯದಲ್ಲಿ ಹೇಳಿದರು. ತನಿಖಾಧಿಕಾರಿಯನ್ನು ಕೆಲವರು ಫಾಲೋ ಮಾಡಿರುವ ವಿಡಿಯೋವನ್ನು ಸಹ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

  ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ದಿಲೀಪ್‌ ಅರ್ಜಿಯನ್ನು ನಿರಾಕರಿಸಿದ್ದು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸಿದೆ. ಹಾಗೂ ಎಫ್‌ಐಆರ್ ರದ್ದು ಮಾಡಲು ಸಹ ಸಾಧ್ಯವಿಲ್ಲವೆಂದಿದೆ.

  2017 ರ ಫೆಬ್ರವರಿ 17 ರಂದು ಮಲಯಾಳಂನ ಜನಪ್ರಿಯ ನಟಿಯೊಬ್ಬರು ಚಿತ್ರೀಕರಣ ಮುಗಿಸಿ ಕಾರಿನಲ್ಲಿ ಮನೆಗೆ ವಾಪಸ್ಸಾಗಬೇಕಾದರೆ ಮೂವರು ಕಾರನ್ನು ಅಡ್ಡಗಟ್ಟಿ ನಟಿಯನ್ನು ಎಳೆದು ತಮ್ಮ ಕಾರಿಗೆ ಹಾಕಿಕೊಂಡು ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದರು, ಲೈಂಗಿಕ ಹಿಂಸೆ ನೀಡಿದ್ದರು. ಬೆದರಿಕೆ ಹಾಕಿದ್ದರು. ಆ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಸಹ ಮಾಡಿದ್ದರು. ಬಳಿಕ ನಟಿಯನ್ನು ಬ್ಯುಸಿ ಏರಿಯಾ ಒಂದರಲ್ಲಿ ಬಿಟ್ಟು ಪರಾರಿಯಾಗಿದ್ದರು.

  ಘಟನೆಗೆ ಸಂಬಂಧಿಸಿದಂತೆ ರೌಡಿ ಶೀಟರ್ ಪಲ್ಸರ್ ಸುನಿಯನ್ನು ಪೊಲೀಸರು ಬಂಧಿಸಿದರು. ಬಳಿಕ ಹೊರಬಂದ ವಿಷಯವೆಂದರೆ ನಟ ದಿಲೀಪ್ ಆದೇಶದ ಮೇರೆಗೆ ಪಲ್ಸರ್ ಸುನಿ ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ, ದೌರ್ಜನ್ಯ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಸೇರಿದಂತೆ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಟ ದಿಲೀಪ್ ಅನ್ನು ಬಂಧಿಸಲಾಗಿತ್ತು, ಆದರೆ ಆತ ಜಾಮೀನಿನ ಮೇಲೆ ಹೊರಗಿದ್ದಾನೆ.

  Recommended Video

  KGF 2 | ಕಾಮ್‌ ಸ್ಕೋರ್ ಪಟ್ಟಿಯಲ್ಲಿ 'KGF 2'ಗೆ 2ನೇ ಸ್ಥಾನ | Yash | KGF2 Rating By Comscore

  ನಟಿಯ ಮೇಲೆ ದೌರ್ಜನ್ಯ ಪ್ರಕರಣದ ತನಿಖೆ ನಡೆಯುವಾಗಲೇ, ನಟ ದಿಲೀಪ್ ಹಾಗೂ ಅವನ ಕೆಲವು ಸಂಬಂಧಿಗಳು ಹಾಗೂ ಗೆಳೆಯರು ತನಿಖಾಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ್ದರು ಎಂಬ ಅಂಶ ಕಳೆದ ವರ್ಷ ಹೊರಬಿದ್ದಿದ್ದು, ಅದರ ಬಗ್ಗೆಯೂ ಕೇರಳ ಪೊಲಿಸರು ಪ್ರಕರಣದ ದಾಖಲಿಸಿದ್ದಾರೆ.

  English summary
  Malayalam actor Dileep's plea dismissed by Kerala high court in related to planing to kill investigation officer of 2017 assault of actress case.
  Tuesday, April 19, 2022, 17:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X