ದಕ್ಷಿಣ ಭಾರತದ ಹಿರಿಯ ನಟಿ ಜಮೀಲಾ ಮಲಿಕ್ ನಿಧನ
ಮಲಯಾಳಂ ಇಂಡಸ್ಟ್ರಿಯ ಖ್ಯಾತ ನಟಿ ಜಮೀಲಾ ಮಲಿಕ್ ಮಂಗಳವಾರ ವಿಧಿವಶರಾಗಿದ್ದಾರೆ. 73 ವರ್ಷ ವಯಸ್ಸಿನ ಹಿರಿಯ ನಟಿ ಕೇರಳದ ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯಸ್ಸಾಗಿದ್ದ ಕಾರಣ ಹಲವು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿರಲಿಲ್ಲ. ಮಂಗಳವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನಲೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದ ನಟಿ ಇಹಲೋಕ ತ್ಯಜಿಸಿದರು ಎಂದು ಕುಟುಂಬದವರು ತಿಳಿಸಿದ್ದಾರೆ. ಜಮೀಲಾ ಮಲಿಕ್ ನಿಧನಕ್ಕೆ ಸೌತ್ ಚಿತ್ರರಂಗ ಸಂತಾಪ ಸೂಚಿಸಿದೆ.
ವಿಭಿನ್ನ ಮತ್ತು ಪ್ರಯೋಗಾತ್ಮಕ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನಪಡೆದುಕೊಂಡಿದ್ದ ಜಮೀಲಾ, ಮಲಯಾಳಂ ಮಾತ್ರವಲ್ಲದೇ, ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲೂ ನಟಿಸಿದ್ದರು.

80ರ ದಶಕದಲ್ಲಿ ಖ್ಯಾತ ನಟರಾದ ಪ್ರೇಮ್ ನಜೀರ್ ಮತ್ತು ಅಡೂರ್ ಭಾಸಿ ಅವರ ಜೊತೆ ಹಚ್ಚು ಸಿನಿಮಾ ಮಾಡಿದ್ದಾರೆ. ಪಾಂಡವಪುರಂ, ಅದ್ಯಾಥೆ ಕಥಾ, ರಾಜಹಂಸಂ ಮತ್ತು ಲಹರಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. ಹಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಪುಣೆಯ ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ (ಎಫ್‌ಟಿಐಐ) ಪದವಿ ಪಡೆದ ಮೊದಲ ಕೇರಳ ಮಹಿಳೆ ಜಮೀಲಾ ಮಲಿಕ್ ಎನ್ನುವುದು ವಿಶೇಷ.


Click it and Unblock the Notifications











