»   » ಸಿನಿಮಾದಲ್ಲಷ್ಟೇ ನಾನು ಜಂಭದ ಹುಡುಗಿ

ಸಿನಿಮಾದಲ್ಲಷ್ಟೇ ನಾನು ಜಂಭದ ಹುಡುಗಿ

Posted By:
Subscribe to Filmibeat Kannada

ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಹಿರಿಯ ಅಧಿಕಾರಿಣಿ ಜೀಜಾ ಹರಿಸಿಂಗ್ ಒಂದೇ ವೇದಿಕೆಯಲ್ಲಿದ್ದರು. ತಂತಮ್ಮ ಕ್ಷೇತ್ರಗಳಲ್ಲಿ ಶೋಭಾಯಮಾನರಾದ ಈ ಇಬ್ಬರೊಂದಿಗೆ ನಟಿ ಪ್ರಿಯಾ ಹಾಸನ್! ಅದು ಬಿಂದಾಸ್ ಹುಡುಗಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ. ನಾಯಕ-ನಾಯಕಿ, ನಿರ್ದೇಶನ ಸೇರಿದಂತೆ ಚಿತ್ರದಲ್ಲಿ ಪ್ರಿಯಾ ಹಾಸನ್ ಅವರದ್ದು ಹಲವು ಸಾಹಸ. ಈ ಮೊದಲು ಜಂಭದ ಹುಡುಗಿ ಮಾಡಿದ ಅನುಭವವುಳ್ಳ ಪ್ರಿಯಾಗೆ, ತಾರೆಯಾಗಿ ಬೆಳ್ಳಿತೆರೆಯಲ್ಲಿ ಸ್ಥಾನ ಕಂಡುಕೊಳ್ಳುವ ಆಸೆ. ಆ ಮಹತ್ವಾಕಾಂಕ್ಷೆಯಿಂದಲೇ ಬಿಂದಾಸ್ ಹುಡುಗಿ ನಿರ್ಮಿಸಿದ್ದಾರೆ.

ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ಹಿರಿಯ ನಿರ್ದೇಶಕ ಭಗವಾನ್ ಕೂಡ ಹಾಜರಿದ್ದರು. ಇದೇ ಸಂದರ್ಭದಲ್ಲಿ ಚಿತ್ರದ ತುಣುಕುಗಳನ್ನು ಹಾಗೂ ಮೂರು ಗೀತೆಗಳನ್ನು ತೋರಿಸಲಾಯಿತು.

ಪ್ರಿಯಾ ಹಾಸನ್ ಅವರ ಸಿನಿಮಾ ಸಾಹಸದ ಬಗ್ಗೆ ಶೋಭಾ ಕರಂದ್ಲಾಜೆ ಅವರಿಗೆ ಅಚ್ಚರಿ ಹಾಗೂ ಮೆಚ್ಚುಗೆ. ಹಾಡಿಕೊಂಡು ಕುಣಿದುಕೊಂಡು ನಟಿಸಬೇಕಿದ್ದ ಈ ಹುಡುಗಿ ಸಿನಿಮಾ ನಿರ್ಮಾಣ, ನಿರ್ದೇಶನದಂಥ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಬಗ್ಗೆ ಅವರಿಗೆ ವಿಸ್ಮಯ. ಈ ಪ್ರಿಯ ಪ್ರತಿಭೆ ಇನ್ನೂ ನೂರಾರು ಸಿನಿಮಾಗಳನ್ನು ರೂಪಿಸಲಿ. ಅವರಿಗೆ ನನ್ನ ಉತ್ತೇಜನ ಇದ್ದೇಇದೆ ಎಂದರು ಶೋಭಾ. ಜೀಜಾ ಹರಿಸಿಂಗ್ ಅವರು ಕೂಡ ಪ್ರಿಯಾಳನ್ನು ಶ್ಲಾಘಿಸಿದರು, ಬಿಂದಾಸ್ ಹುಡುಗಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಪ್ರಶಂಸೆಗೆ ಮತ್ತೊಂದು ಆಯಾಮವನ್ನು ದೊರಕಿಸಿಕೊಟ್ಟಿದ್ದು ಕೆ.ಸಿ.ಎನ್.ಚಂದ್ರಶೇಖರ್. ತೆರೆಯ ಮೇಲಣ ಪ್ರಿಯಾಳ ಸಾಹಸದೃಶ್ಯಗಳ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ ಅವರು- ಸಾಹಸ ದೃಶ್ಯಗಳಲ್ಲಿನ ಪ್ರಿಯಾ ಪ್ರತಿಭೆಯನ್ನು ರಜನಿಕಾಂತ್, ಚಿರಂಜೀವಿಗೆ ಹೋಲಿಸಿದರು. ಆ ಹೊತ್ತಿಗೆ ಪ್ರಿಯಾ ಸಂಕೋಚದಿಂದ ಮುದುಡಿಕೊಂಡಿದ್ದರು.ತಮ್ಮ ಸಿನಿಮಾ ಸಾಹಸಕ್ಕೆ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪ್ರಿಯಾ ಹಾಸನ್ ಒತ್ತಿ ಹೇಳಿದ್ದು- ಸಿನಿಮಾದಲ್ಲಷ್ಟೇ ನಾನು ಜಂಭದ ಹುಡುಗಿ. ನಿಜ ಜೀವನದಲ್ಲಿ ನಾನು ಬಿಂದಾಸ್ ಹುಡುಗಿ ಅಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada