»   »  ಜಯಂತ ಕಾಯ್ಕಿಣಿ ಅಂದ್ರೆ ಏನು ನೆನಪಾಗುತ್ತದೆ?

ಜಯಂತ ಕಾಯ್ಕಿಣಿ ಅಂದ್ರೆ ಏನು ನೆನಪಾಗುತ್ತದೆ?

Posted By: * ಜಯಂತಿ
Subscribe to Filmibeat Kannada

ನವಿರು ಕಥೆಗಳು. ಅತಿ ನವಿರು ಕವಿತೆಗಳು. ನವಿರಾತಿನವಿರು ಅಂಕಣ ಬರಹಗಳು. ಜಿಲೇಬಿಯಂಥ ಮಾತುಗಳು. ಹೌದು, ಇವೆಲ್ಲ ಜಯಂತರ ಯಕ್ಷಸೃಷ್ಟಿಗಳೇ! ಆದರೆ, ಇವೆಲ್ಲ ಈಸ್ಟ್‌ಮನ್ ಕಲ್ಲರ್ ನೆನಪುಗಳು. ಈಗ, ಜಯಂತ್ ಎಂದರೆ ಮುಂಗಾರುಮಳೆ. ಜಯಂತ್ ಎಂದರೆ ಮಿಲನ. ಜಯಂತ್ ಎಂದರೆ ಹಾಗೇ ಸುಮ್ಮನೆ!

ಸೃಜನಶೀಲ ಮನಸ್ಸುಗಳು ತೊಡಗಿಕೊಂಡಾಗ ಚಿತ್ರರಂಗ ಪಡೆಯಬಹುದಾದ ಬದಲಾವಣೆಗಳಿಗೆ ಕನ್ನಡ ಸಂದರ್ಭದಲ್ಲಿ ಅತ್ಯುತ್ತಮ ಉದಾಹರಣೆ ಜಯಂತ ಕಾಯ್ಕಿಣಿ. ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕೊಟ್ಟಿದ್ದು ಅವರ ಅಗ್ಗಳಿಕೆ. ಹುಲ್ಲಿನ ಎಸಳುಗಳನ್ನು ಹೆಕ್ಕಿತಂದು ಗುಬ್ಬಚ್ಚಿ ಗೂಡುಕಟ್ಟುತ್ತದಲ್ಲ ಹಾಗೆ,- ಗಜಲ್ಲು, ಉರ್ದು ಶಾಯರಿ, ಮತ್ತಾವುದೋ ಕುಸುರಿ- ಹೀಗೆ ಎಲ್ಲೆಲ್ಲಿಂದಲೋ ರಮ್ಯ ಭಾವನೆಗಳನ್ನು ಹೆಕ್ಕಿತಂದು ಹಾಡುಗಳನ್ನು ಕಟ್ಟಿದವರು ಕಾಯ್ಕಿಣಿ.

ಮುಂಗಾರು ಮಳೆಯಲ್ಲಿನ ಗೀತೆಯೊಂದರಲ್ಲಿ ಕಾಯ್ಕಿಣಿ 'ಮಧುರ ಯಾತನೆ" ಎಂದು ಪ್ರೇಮವನ್ನು ಬಣ್ಣಿಸಿದಾಗ ಅನೇಕ ಹುಡುಗ ಹುಡುಗಿಯರು ರೋಮಾಂಚಿತರಾಗಿದ್ದರು. ಪ್ರೇಮ ಯಾತನೆಯೂ ಆಗಬಲ್ಲದು, ಅದು ಇಷ್ಟಪಟ್ಟು ಅನುಭವಿಸುವ ಯಾತನೆ ಎನ್ನುವ ಕಲ್ಪನೆಯೇ ಹೊಸತಾಗಿ ಕಂಡಿತ್ತು. ಆದರೆ 'ಚಂಡೆಮದ್ದಳೆ"ಯ ಕವಿ ಅಡಿಗರು ತಮ್ಮ ಮೋಹನ ಮುರಲಿ ಕವಿತೆಯಲ್ಲಿ 'ಸುಮಧುರ ಯಾತನೆ", 'ದಿವ್ಯದ ಯಾಚನೆ" ಮುಂತಾಗಿ ಬರೆದು ದಶಕಗಳೇ ಕಳೆದುಹೋಗಿದ್ದವು. ಆದರೆ, ಅಡಿಗರ ಕವಿತೆಗೆ ಸಾಧ್ಯವಾಗದ ಸಂವಹನ ಕಾಯ್ಕಿಣಿಯವರ ಸಿನಿಮಾ ಹಾಡಿಗೆ ಸಾಧ್ಯವಾಗಿತ್ತು. ಇದು ಸಿನಿಮಾ ಮಾಧ್ಯಮದ ಶಕ್ತಿ.

ಕಾಯ್ಕಿಣಿ ಹಾಡು ಬರೆಯತೊಡಗಿದ್ದೇ ತಡ, ಅವರ ಬೆನ್ನಹಿಂದಿನ ಹುಡುಗರಾದ ಕವಿರಾಜ್, ಹೃದಯಶಿವರಂಥ ಹುಡುಗರು ಮೈಮೇಲೆ ಏನನ್ನೋ ಆವಾಹಿಸಿಕೊಂಡವರಂತೆ ಸಿನಿಗವಿತೆಗಳ ಹೊಸೆಯತೊಡಗಿದರು. ಮನೋಹರ್, ನಾಗೇಂದ್ರಪ್ರಸಾದ್, ಕಲ್ಯಾಣ್ ಅವರ ರಾಗಗಳೂ ಬದಲಾದವು. ಮನೋಮೂರ್ತಿ, ಹರಿಕೃಷ್ಣರಂಥ ಸಂಗೀತ ನಿರ್ದೇಶಕರು ಹೊಸ ನುಡಿಗಟ್ಟುಗಳಿಗೆ ಸ್ಪಂದಿಸತೊಡಗಿದರು. ಪರಿಣಾಮವಾಗಿ, ಕಳೆದುಹೋಗಿದ್ದ ಮಾಧುರ್ಯ ಕನ್ನಡ ಸಿನಿಮಾಗಳಲ್ಲಿ ಮರುಕಳಿಸುವಂತಾಯಿತು. ಅಷ್ಟೇ ಅಲ್ಲ, ಸಂಗೀತ ಸಿನಿಮಾ ಮಟ್ಟಿಗೆ ಒಂದು ಪ್ಯಾಕೇಜ್ ಆಗಿ ಬದಲಾಯಿತು.

ಮಾಲ್, ಮಲ್ಟಿಫ್ಲೆಕ್ಸ್ ಸಂದರ್ಭದಲ್ಲಿನ ಕನ್ನಡ ಸಿನಿಮಾಕ್ಕೆ ಕಾಯ್ಕಿಣಿ ಅಂಡ್ ಟೀಂ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಿದೆ. ಈ ಬಗ್ಗೆ ಕನ್ನಡಿಗರ ಪ್ರೀತಿ ಕಾಯ್ಕಿಣಿ ಅಂಡ್ ಕಂಪನಿಗೆ ಸಲ್ಲುತ್ತದೆ. ಆದರೆ, ಗೌರವದ ಜೊತೆಗೇ ಕಾಯ್ಕಿಣಿ ಅವರ ಬಗ್ಗೆ ಕೆಲವು ಪ್ರಶ್ನೆಗಳೂ ಇವೆ. ಗಾಂಧಿನಗರದ ಗಾಳಿ ತಾಕಿ ಜಯಂತ್ ಕೂಡ ಗಾಂಧಿನಗರದವರೇ ಆಗಿದ್ದಾರಾ ಎನ್ನುವ ಪ್ರಶ್ನೆಯದು.

ಮುಂದೆ ಓದಿ : ಕನ್ನಡ ಚಿತ್ರರಂಗ ಕಂಡ ಅತ್ಯಂತ ದುಬಾರಿ ಗೀತರಚನೆಕಾರ »

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada