»   »  ಜಯಂತ ಕಾಯ್ಕಿಣಿ ಅಂದ್ರೆ... ಭಾಗ 3

ಜಯಂತ ಕಾಯ್ಕಿಣಿ ಅಂದ್ರೆ... ಭಾಗ 3

By: *ಜಯಂತಿ
Subscribe to Filmibeat Kannada

ಜಯಂತರ ಬಗ್ಗೆ ತುಂಬ ಗೌರವ ಹೊಂದಿರುವವರಿಗೆ ಕೂಡ ಕೆಲವೊಮ್ಮೆ ಅವರ ಮಾತುಗಳು ಕಿರಿಕಿರಿ ಅನ್ನಿಸುವುದುಂಟು. ಎದುರಿಗೆ ಸಿಕ್ಕವರನ್ನು ಅಥವಾ ಎದುರಿಗೆ ಕೂತವರನ್ನು ಸುಖಾಸುಮ್ಮನೆ ಹೊಗಳುವುದು ಅವರ ರೂಢಿ. ಈ ಪ್ರಶಂಸೆ ಕೆಲವೊಮ್ಮೆ ಹಾಸ್ಯದಂತೆ ಕಾಣಿಸುವುದೂ ಇದೆ. ಯುವಕವಿ, ಕಥೆಗಾರರ ಪುಸ್ತಕಗಳಿಗೆ ಜಯಂತರು ಬರೆದ ಬೆನ್ನುಡಿ-ಮುನ್ನುಡಿಗಳನ್ನು ಓದಿದ್ದೀರಾದರೆ ನಿಮಗೆ ಈ ಮಾತು ಚೆನ್ನಾಗಿ ಅರ್ಥವಾಗುತ್ತದೆ.

ಮೊನ್ನೆ ಹೀಗಾಯಿತು. ಕಿರುತೆರೆ ಕಾರ್ಯಕ್ರಮ. 'ಮಿಲನ" ಚಿತ್ರದ ನಿರ್ದೇಶಕ ಪ್ರಕಾಶ್ ಪಕ್ಕದಲ್ಲಿ ಕೂತಿದ್ದರು. ಪ್ರಕಾಶ್ ಸಿಕ್ಕಾಪಟ್ಟೆ ಕ್ರಿಯಾಶೀಲ ನಿರ್ದೇಶಕ ಎಂದು ಕಾಯ್ಕಿಣಿ ಸಿಕ್ಕಾಪಟ್ಟೆ ಹೊಗಳಿದರು. ಜಯಂತ್, ತಮ್ಮ ಮಾತಿಗೆ ಉದಾಹರಣೆಯಾಗಿ ನೀಡಿದ್ದು 'ಮಿಲನ" ಶೀರ್ಷಿಕೆಯನ್ನು ಜೀನ್ಸ್‌ಬಟ್ಟೆಯ ಮೇಲೆ ರೂಪಿಸಿದ ನಿರ್ದೇಶಕರ ಕ್ರಿಯಾಶೀಲತೆಯನ್ನು!

ಜಯಂತರ ಪ್ರಕಾಶಮಾನ ಮಾತುಗಳಿಗೆ ಏನನ್ನುವುದು? ಪ್ರಕಾಶ್‌ರ ಸೃಜನಶೀಲತೆ ಕನ್ನಡ ಚಿತ್ರರಂಗದಲ್ಲೀಗ ಬಟಾಬಯಲು. 'ಮಿಲನ", 'ವಂಶಿ" ಚಿತ್ರಗಳ ಸೋಲುಗೆಲುವು ಮರೆತರೂ- ಅವುಗಳ ಕಥೆಯ ಮೂಲ ಪ್ರಶ್ನಾಹ್ನ. ಕಥೆಯ ನಕಲನ್ನು ಮುಚ್ಚಿಟ್ಟು, ಜೀನ್ಸ್ ತೇಪೆಯನ್ನು ಮೆರೆಸುವುದು ತಮಾಷೆಯಲ್ಲವೇ?

'ಈ ಬಂಧನ" ಸಿನಿಮಾ ಸೀಡಿ ಬಿಡುಗಡೆ ದಿನ ಅದು ರೀಮೇಕ್ ಅಂತೆ ಹೌದಾ ಅಂತ ಕೇಳಿದ್ದಕ್ಕೆ, ಮೆಲ್ಲಗೆ ಶ್ರಿಂಕ್ ಆಗಿದ್ದ ಅವರು, ವೇದಿಕೆ ಮೇಲೆ ರಾಜೇಂದ್ರ ಸಿಂಗ್ ಬಾಬು ವಂಶವೃಕ್ಷವನ್ನು ಬಾಯಿತುಂಬಾ ಹೊಗಳಿದ್ದರು. ಇಂಥ ಜೋಕ್‌ಗಳನ್ನು ಜಯಂತ್ ಆಗಾಗ ಮಾಡುತ್ತಿರುತ್ತಾರೆ.

ಮತ್ತೊಂದು ಜೋಕು ನೋಡಿ. ಈಟೀವಿ ವಾಹಿನಿಯ 'ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ಬಾಲಸುಬ್ರಹ್ಮಣ್ಯಂ ಜೊತೆಗೆ ತೀರ್ಪುಗಾರರಾಗಿ ಕಾಯ್ಕಿಣಿ ಕಾಣಿಸಿಕೊಳ್ಳುತ್ತಿರುವುದು ಸರಿಯಷ್ಟೇ. ಸ್ಪರ್ಧಿಯಾಗಿ ಭಾಗವಹಿಸಿದ್ದ ಬಾಲಕಿಯೊಬ್ಬಳೊಂದಿಗೆ ಕಾಯ್ಕಿಣಿ ಸಂಭಾಷಣೆ ನಡೆದದ್ದು ಹೀಗೆ:

ಕಾಯ್ಕಿಣಿ: ನಿನಗೆ ಶೃಂಗೇರಿ ಸಮೀಪದ ಅಜ್ಜಿ ಊರು ಇಷ್ಟವಂತೆ ಹೌದಾ?
ಬಾಲಕಿ: ಹೌದು ಸಾರ್. ನನಗೆ ಅಲ್ಲಿನ ಕಾಡು ತುಂಬಾ ಇಷ್ಟ.
ಕಾಯ್ಕಿಣಿ: ಯಾಕೆ?
ಬಾಲಕಿ: ನನಗೆ ನಗರದ ಟ್ರಾಫಿಕ್, ವಾಯುಮಾಲಿನ್ಯ ಇಷ್ಟವಾಗೊಲ್ಲ. ಕಾಡಿನಲ್ಲಿ ಪ್ರಾಣಿಗಳು ಮುಕ್ತವಾಗಿ ಓಡಾಡುತ್ತವೆ. ಅವುಗಳನ್ನು ನೋಡೋದೆ ಚಂದ.
ಕಾಯ್ಕಿಣಿ: ಇಲ್ಲೂ ಎಷ್ಟೊಂದು ಪ್ರಾಣಿಗಳು ಓಡಾಡ್ತವೆ ಅಲ್ಲವಾ, ಕಾರಿನಲ್ಲಿ! (ನಗು)

ಮೇಲಿನ ಮಾತುಕತೆ ತಮಾಷೆಯಾಗಿ ಕಾಣಿಸುತ್ತದಾದರೂ, ಅದರೊಳಗೆ ತಣ್ಣನೆಯ ಕ್ರೌರ್ಯವಿಲ್ಲವಾ? ಆ ಜೋಕನ್ನು ಕಾಯ್ಕಿಣಿ ಅವರಿಗೆ ಅನ್ವಯಿಸುವುದಾದರೆ ಅವರು ಏನಾಗುತ್ತಾರೆ? ಸ್ವವಿಮರ್ಶೆ ಒಳ್ಳೆಯದೇ? ಆದರೆ, ಇತರರನ್ನು ಹೀಗಳೆಯಲಿಕ್ಕೆ ನಮಗೇನು ಹಕ್ಕಿದೆ? ನಗರವನ್ನು ಕಾಂಕ್ರೀಟ್ ಕಾಡು ಎಂದು ಜರೆಯುವುದು, ನಗರದವರ ಬಗ್ಗೆ ಗುಮಾನಿಯಿಂದ ಕಾಣುವುದು ಒಂದು ಚಾಳಿ. ಕಾಯ್ಕಿಣಿಯಂಥ ಸಂವೇದನಾಶೀಲರು ಕೂಡ ಈ ಚಾಳಿಯ ಭಾಗವಾಗಬೇಕಾ?

ಭಟ್ಟರ ಅಡ್ಡೆಯಲ್ಲಿ...
ಮುಂಗಾರು ಮಳೆ ಗೆದ್ದದ್ದೇ ತಡ, ಯೋಗರಾಜಭಟ್ಟರ ನೇತೃತ್ವದಲ್ಲಿ ಗುಂಪೊಂದು ಕ್ರಿಯಾಶೀಲವಾಗಿದೆ. ಕನ್ನಡ ಚಿತ್ರರಂಗದಲ್ಲಿ ಸೃಜನಶೀಲತೆ ಎನ್ನುವುದೇನಾದರೂ ಇದ್ದರೆ ಅದು ನಮ್ಮಲ್ಲೇ ಎನ್ನುವುದು ಈ ಗುಂಪಿನ ನಂಬಿಕೆ. ಈ ಪಟಾಲಂಗೆ ಜಯಂತ್ ರಾಜಗುರುವಿನಂತಿದ್ದಾರೆ. 'ಭಟ್ಟರು ನೋಡಿ ಎಷ್ಟು ಚೆನ್ನಾಗಿ ಕವಿತೆ ಬರೆಯುತ್ತಾರೆ" ಎಂದು ಬೆನ್ನುತಟ್ಟುತ್ತಾರೆ. ಈ ಭಟ್ಟರು, ಹಳೆ ಕಬ್ಬಿಣ ಪಾತ್ರೆ ಎಂದು ಹಾರನ್ ಮಾಡುತ್ತಾರೆ (ಹಿರಿಯ ನಟ ರಾಜೇಶ್ ಪ್ರಕಾರ ಇದು ಕಚಡಾ ಸಾಹಿತ್ಯ).

ಕಾಯ್ಕಿಣಿ ಮಹತ್ವಾಕಾಂಕ್ಷಿ. ಬರಹಗಾರರಾಗಿಯಷ್ಟೇ ಅಲ್ಲ, ನಿರ್ದೇಶಕರಾಗಿಯೂ ಗುರ್ತಿಸಿಕೊಳ್ಳುವ ಹಂಬಲ ಅವರಿಗಿದೆ. ಇದು ಸಾಧ್ಯವಾದಲ್ಲಿ ಕನ್ನಡ ಚಿತ್ರರಂಗ ಕೆಲವು ಒಳ್ಳೆಯ ಸಿನಿಮಾಗಳನ್ನು ಕಾಣಬಹುದೇನೊ! ಆದರೆ, ಸಿನಿಮಾ ವ್ಯಾಮೋಹದಲ್ಲಿ 'ಕಾಯ್ಕಿಣಿತನ" ಕಳೆದುಹೋಗಬಾರದಲ್ಲವಾ?

ಸಿನಿಮಾದಲ್ಲಿ ಕನ್ನಡದ ಸೃಜನಶೀಲ ಪ್ರತಿಭೆಗಳು ತೊಡಗಿಸಿಕೊಂಡದ್ದು ಹೊಸತೇನಲ್ಲ. ಕಾರಂತರಂಥ ಕಾರಂತರೇ ಸಿನಿಮಾ ಹುಚ್ಚಿಗೆ ಬಿದ್ದಿದ್ದರು. ಲಂಕೇಶರು ಅದ್ಭುತ ಸಿನಿಮಾ ತಯಾರಿಸಿದ್ದರು. ಚದುರಂಗ ಕೂಡ ನಿರ್ದೇಶಕರ ಟೊಪ್ಪಿ ತೊಟ್ಟಿದ್ದರು. ಆದರೆ, ಅವರ್‍ಯಾರೂ ಸಿನಿಮಾದಲ್ಲೇ ಲೀನರಾಗಲಿಲ್ಲ. ಕಾಯ್ಕಿಣಿ ಅವರಿಗೆ ಕೂಡ ತಮ್ಮ ಮನೆಯ ವಿಳಾಸ ಮರೆತುಹೋಗದಿರಲಿ.

«ಜಯಂತ ಕಾಯ್ಕಿಣಿ ಅಂದ್ರೆ ?   
«ಎಸ್‌ಎಂಎಸ್ ಸಾಹಿತಿ!                                                                                                                

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada