»   » ಹಾಡು ಹಕ್ಕಿ ಎಸ್ಪಿಬಿಗೆ ಹುಟ್ಟುಹಬ್ಬ ಶುಭಾಶಯಗಳು

ಹಾಡು ಹಕ್ಕಿ ಎಸ್ಪಿಬಿಗೆ ಹುಟ್ಟುಹಬ್ಬ ಶುಭಾಶಯಗಳು

Posted By:
Subscribe to Filmibeat Kannada
Happy birthday SPB
ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರು ಮೆಚ್ಚಿದ ಡಾರ್ಲಿಂಗ್ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ. ಅವರು ಹಾಡಿದ ಹಾಡುಗಳು ಎಷ್ಟೋ ಮಂದಿಗೆ ಸಾಂತ್ವನ ನೀಡಿವೆ, ಪ್ರೇಮ ಚಿಗುರಿಸಿವೆ, ಅನುರಾಗ ಅರಳಿಸಿವೆ, ಮನ ಮಿಡಿಸಿವೆ. ಎಸ್ಪಿಬಿ ಹಾಡು ಕೇಳದ ಕಿವಿಗಳಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಬಹುಭಾಷಾ ಗಾಯಕ, ನಟ, ನಿರ್ಮಾಪಕ ಪದ್ಮಶ್ರೀ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ(ಎಸ್ಪಿಬಿ) ಅವರಿಗೆ ಜನುಮ ದಿನದ ಶುಭಾಶಯಗಳು.

ಜೂನ್ 4, 2010ಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅರುವತ್ತ ನಾಲ್ಕು ವಸಂತಗಳನ್ನು ಪೂರೈಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಪಿಬಿ ಎದೆತುಂಬಿ ಹಾಡಿದ 'ಭೂಲೋಕದಲ್ಲಿ ಯಮರಾಜ' ಚಿತ್ರದ "ಎಂದೂ ಕಾಣದ ಬೆಳಕ ಕಂಡೆ..." ಹಾಡಿನ ಸಾಹಿತ್ಯವನ್ನು ನೀಡುತ್ತಿದ್ದೇವೆ.

ದೊಡ್ಡ ರಂಗೇಗೌಡರ ಗೀತ ರಚನೆಗೆ ಸಿ ಅಶ್ವತ್ಥ್ ಸಂಗೀತ ನೀಡಿದ್ದ ಈ ಚಿತ್ರವನ್ನು ಸಿದ್ದಲಿಂಗಯ್ಯ ನಿರ್ದೇಶಿಸಿದ್ದರು. ನಿರ್ಮಾಪಕರು ಚಂಚೂಲಾಲ್ ಜೈನ್. ಲೋಕೇಶ್, ವಾಣಿ, ಎಂ ಪಿ ಶಂಕರ್, ಜೈಜಗದೀಶ್, ಬಾಲಕೃಷ್ಣ, ಲೋಕನಾಥ್ ಅಭಿನಯಿಸಿದ್ದ ಚಿತ್ರ. ಜಾನಪದ ಧಾಟಿಯಲ್ಲಿ ಗ್ರಾಮ್ಯ ಸೊಗಡಿನಲ್ಲಿರುವ ಈ ಹಾಡಿಗೆ ಎಸ್ಪಿಬಿ ತಮ್ಮ ಸುಮಧುರ ಕಂಠದಿಂದ ಜೀವ ತುಂಬಿದ್ದಾರೆ.

ಕನ್ನಡದಲ್ಲಿ ಎಸ್ಪಿಬಿ ಅಭಿನಯದ ಚಿತ್ರಗಳು ಹೀಗಿವೆ..ಬಾಳೊಂದು ಚದುರಂಗ,ಮುದ್ದಿನ ಮಾವ,ಭಾರತ್ 2000,ಕಲ್ಯಾನೋತ್ಸವ,ಮಾಂಗಲ್ಯಂ ತಂತು ನಾನೇನ,ತಿರುಗುಬಾಣ,ಸಂದರ್ಭ,ಮಹಾ ಎಡಬಿಡಂಗಿ. ಎಸ್ಪಿಬಿ ಎದೆ ತುಂಬಿ, ತನು ತುಂಬಿ, ಮನ ತುಂಬಿ ಹೀಗೆ ಹಾಡುತ್ತಲೇ ಇದ್ದಾರೆ...ಎಲ್ಲ ಕೇಳುತ್ತಲೇ ಇರಲಿ.

ಹೆಣ್ಣು: ಎಂದೂ ಕಾಣದ ಬೆಳಕ ಕಂಡೆ
ಒಂದು ನಲ್ಮೆಯ ಹೃದಯ ಕಂಡೆ
ನಿನ್ನಿಂದ ಬಾಳ ಮಧುರ ರಾಗ ಇಂದು ಮೂಡಿದೇ

ಗಂಡು: ಎಂದೂ ಕಾಣದ ನಗೆಯಾ ಕಂಡೆ
ಚಂಡಿ ಹುಡ್ಗಿ ಚೆಲುವಾ ಕಂಡೆ
ಮಾವನ ಮಗಳು ಮನಮೆಚ್ಚಿ ಬರಲು ಸ್ವರ್ಗಾನೆ ಸಿಕ್ಕೈತೆ

ಹೆಣ್ಣು : ಕೆಡುವ ದಾರಿ ತುಳಿದಿರಲು ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು ಮರೆತು ನೀನು ಮನ್ನಿಸಿದೆ
ಹೊಂಗನಸು ತುಂಬಿ ಬಂದು ಕಣ್ಣ ತೆರೆಸಿದೆ
ಎಂದೆಂದಿಗೂ ನಿನ್ನ ಜತೆ ನಾನು ಬಾಳುವೆ, ನಾನು ಬಾಳುವೇ

ಗಂಡು : ಯಾವ್ದೇ ಕಷ್ಟ ಬರದಂಗೆ ನೋಡ್ಕೊತೀನಿ ಹೂವಿನಂಗೆ
ಕೇಳು ನಿಂಗೆ ಬೇಕಾದಂಗೆ ತಂದ್ಕೊಡ್ತೀನಿ ಮರೀದಂಗೆ
ಏಸೋ ದಿನ ಕಂಡಾ ಕನ್ಸೂ ಕೂಡಿ ಬಂದೈತೆ
ಹಾಲಿನಗೆ ಬೆಣ್ಣೆಯಂತೆ ಪ್ರೀತಿ ಬೆರೆತೈತೆ, ಪ್ರೀತಿ ಬೆರೆತೈತೇ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada