»   »  ಬಳ್ಳಾರಿ ನಾಗನಾಗಿ ನಾಗರಹಾವು ಮರುಹುಟ್ಟು!

ಬಳ್ಳಾರಿ ನಾಗನಾಗಿ ನಾಗರಹಾವು ಮರುಹುಟ್ಟು!

Posted By:
Subscribe to Filmibeat Kannada

ಮಲಯಾಳಂನ 'ರಾಜ ಮಾಣಿಕ್ಯಂ'(ಮಮ್ಮುಟ್ಟಿ ಮುಖ್ಯ ಭೂಮಿಕೆಯ ಚಿತ್ರ) ಚಿತ್ರದ ರೀಮೇಕ್ 'ಬಳ್ಳಾರಿ ನಾಗ'. ಈ ಚಿತ್ರದ ಸಿಡಿ ಮತ್ತು ಧ್ವನಿಸುರುಳಿಗಳನ್ನು ಶನಿವಾರ (ಸೆ.26) ಡಾ.ವಿಷ್ಣುವರ್ಧನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ತಮ್ಮ ಚೊಚ್ಚಲ 'ನಾಗಹಾವು' ಚಿತ್ರದ ಮೂಲಕ 'ಬಳ್ಳಾರಿ ನಾಗ' ಮರುಹುಟ್ಟು ಪಡೆಯಲಿದೆ ಎಂಬ ವಿಶ್ವಾಸವನ್ನು ವಿಷ್ಣು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಬೆಂಗಳೂರಿನ ಸೆಂಚುರಿ ಕ್ಲಬ್ ನ ಒಡೆಯರ್ ಸಭಾಂಗಣದಲ್ಲಿ ಮಾತನಾಡುತ್ತಿದ್ದ ವಿಷ್ಣು, ಚಿತ್ರೀಕರಣ ವೇಳೆ ನಡೆಯುವ ಅವಘಡಗಳನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಮ್ಮ ವೃತ್ತಿ ಬದುಕಿನಲ್ಲಿ ನಡೆದಂತಹ ಎಷ್ಟೋ ಅವಘಡಗಳನ್ನು ಸಾಹಸಸಿಂಹ ನೆನಪಿಸಿಕೊಂಡರು.

ಬಳ್ಳಾರಿನಾಗ ಚಿತ್ರದ ಸಾಹಸ ಸನ್ನಿವೇಶವ ಚಿತ್ರೀಕರಣದ ವೇಳೆ ತಾವು ಕೆಳಗೆ ಬಿದ್ದು ಗಾಯಗೊಂಡಿದ್ದಾಗಿ ವಿಷ್ಣು ತಿಳಿಸಿದರು. ತೀರಾ ಇತ್ತೀಚೆಗಷ್ಟೇ 'ಆಪ್ತರಕ್ಷಕ' ಚಿತ್ರೀಕರಣ ವೇಳೆಯೂ ಕುದುರೆ ಸವಾರಿ ಸನ್ನಿವೇಶದಲ್ಲಿ ಕೆಳಗುರುಳಿ ಬಿದ್ದಿದ್ದರು. ಇದೀಗ ಬಳ್ಳಾರಿ ನಾಗ ಚಿತ್ರೀಕರಣ ವೇಳೆ ಸಹ ಒಂದು ಅವಘಡ ಸಂಭವಿಸಿತು ಎಂದು ವಿಷ್ಣು ನೆನಪಿಸಿಕೊಂಡರು.

'ಮುತ್ತಿನ ಹಾರ' ಚಿತ್ರೀಕರಣ ವೇಳೆ ತಾವು ತುಂಬ ಎತ್ತರದಿಂದ ಕೆಳಗೆ ಬಿದ್ದಿರುವುದಾಗಿ ತಿಳಿಸಿದರು. ಈ ಘಟನೆ ಅಕ್ಟೋಬರ್ 17, 1989ರಲ್ಲಿ ನಡೆದಿತ್ತು. ಅಂದು ಅವರು ಹಾರಾಡುತ್ತಿದ್ದ ಪ್ಯಾರಾಚೂಟ್ ಕೈಕೊಟ್ಟಿತ್ತು. ಆದರೆ ಅದೃಷ್ಟವಶಾತ್ ತಮಗೇನು ಆಗಲಿಲ್ಲ ಎಂದು ವಿಷ್ಣು ಹೇಳಿದರು.ಅಂದಹಾಗೆ ಅಕ್ಟೋಬರ್ 9ರಂದು ಬಳ್ಳಾರಿ ನಾಗ ಬಿಡುಗಡೆಗೆ ಸಿದ್ಧವಾಗಿದೆ.

ಬಳ್ಳಾರಿ ಜಿಲ್ಲೆಯ ಆಡುಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಪತ್ರಕರ್ತ ರವಿಬೆಳಗೆರೆ ಅವರ ಸಹಾಯವನ್ನು ಪಡೆಯಲಾಗಿದೆ. ಬೆಂಗಳೂರು, ಮೈಸೂರಿನಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಕೆ.ಮಂಜು ವಿವರ ನೀಡಿದರು.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ ಎನ್ ಶಾಸ್ತ್ರಿ ಅವರ ಸಂಗೀತ ಸಂಯೋಜನೆಯಲ್ಲಿ ಅದ್ಭುತವಾಗಿ ಹೊರಹೊಮ್ಮಿವೆ. ವಿ. ಮನೋಹರ್ ಮತ್ತು ಕವಿರಾಜ್ ಅವರ ಸಾಹಿತ್ಯಕ್ಕೆ ಟಿಪ್ಪು, ಕೆ.ಎಸ್.ಚಿತ್ರಾ, ಡಾ.ಎಸ್ಪಿಬಿ, ಎಲ್ ಎಂ ಶಾಸ್ತ್ರಿ ಸುಶ್ರಾವ್ಯವಾಗಿ ಹಾಡಿದ್ದಾರೆ ಎಂದು ಚಿತ್ರದ ನಿರ್ಮಾಪಕ ಕೆ.ಮಂಜು ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada