For Quick Alerts
ALLOW NOTIFICATIONS  
For Daily Alerts

  ಮುಂಗಾರು ಮಳೆ ಗೀತಸಾಹಿತಿ 'ಹೃದಯಶಿವ' ಸಂದರ್ಶನ

  |
  ಸ್ಯಾಂಡಲ್ ವುಡ್ ಗೀತಸಾಹಿತಿಗಳ ಸಾಲಿನಲ್ಲಿ 'ಹೃದಯಶಿವ' ಹೆಸರು ಚಿರಪರಿಚಿತ. ಈ 'ಹೃದಯಶಿವ' ಅವರನ್ನು ಯಾರೂ ಮರೆಯದಿರಲು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದ 'ಮುಂಗಾರು ಮಳೆ' ಚಿತ್ರದ 'ಇವನು ಗೆಳೆಯನಲ್ಲ...' ಹಾಡೊಂದೇ ಸಾಕು. ಅದೇ ಚಿತ್ರದ 'ಸುವ್ವಿ ಸುವ್ವಾಲಿ...' ಹಾಡು ಇವರನ್ನು ಮತ್ತೆ ಮತ್ತೆ ನೆನಪಿಸಲು ಪ್ರೇರಣೆ. 'ಡವಡವಡವ ಎದೆಯ ಬಡಿತ ಏರುಪೇರು...' ಎಂಬ ಸಂತ ಚಿತ್ರದ ಇವರು ಬರೆದ ಗೀತೆ ಸಂತೆಯಲ್ಲಿ ಕೇಳಿದರೂ ಒಂದು ಕ್ಷಣ ನಿಲ್ಲುವಂತೆ ಮಾಡುತ್ತದೆ.

  'ಮಂಡ್ಯ' ಚಿತ್ರದ 'ನಲ್ಲ ನಲ್ಲ ಮಂಡ್ಯದ ಬೆಲ್ಲ...' ಹಾಡಿನ ಮೂಲಕ ಚಿತ್ರಗೀತೆಗಳಿಗೆ ಸಾಹಿತ್ಯ ಬರೆಯಲು ಪ್ರಾರಂಭಿಸಿದ ಹೃದಯಶಿವ, ಅಲ್ಲಿಂದ ಮುಂದೆ 'ಗಂಡ ಹೆಂಡತಿ' ಚಿತ್ರಕ್ಕೆ 'ನಿದಿರೆ ಗುರಗ...' ಹಾಗೂ 'ಏಕದಂತ' ಚಿತ್ರಕ್ಕೆ 'ಈ ಸೊಂಟ ನೋಡು ನೆಂಟ...' ಎನ್ನುವ ಹಾಡು ಬರೆದು ಕನ್ನಡಚಿತ್ರರಂಗದಲ್ಲಿ ಗೀತಸಾಹಿತಿಯಾಗಿ ಪ್ರಮುಖ ಸ್ಥಾನ ಪಡೆದುಕೊಂಡವರು.

  ನಂತರ ಬಂದಿದ್ದೇ 'ಮುಂಗಾರು ಮಳೆ' ಚಿತ್ರದಲ್ಲಿ ಮನೋಮೂರ್ತಿ ಸಂಗೀತದಲ್ಲಿ ಮೂಡಿಬಂದ ಹಾಡುಗಳು. ಅಲ್ಲಿಂದ ಮುಂದೆ ಇವರ ಗೀತಸಾಹಿತ್ಯದ 'ಜರ್ನಿ' ಸರಾಗವಾಗಿ ಯಶಸ್ಸಿನೊಂದಿಗೆ ಸಾಗಿ ಬರುತ್ತಿದೆ. ಇಂಥ ಗೀತಸಾಹಿತಿ ಹೃದಯಶಿವ, 'ಒನ್ ಇಂಡಿಯಾ ಕನ್ನಡ'ದ 'ಶ್ರೀರಾಮ್ ಭಟ್' ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...

  * ನಿಮ್ಮ ಹುಟ್ಟೂರು, ವಿದ್ಯಾಭ್ಯಾಸದ ಹಾಗೂ ಸಾಹಿತ್ಯದ ಹಿನ್ನಲೆ ಬಗ್ಗೆ ಹೇಳಿ...

  ಕನಕಪುರದ 'ಕೆಬ್ಬರೆ' ನನ್ನ ಹುಟ್ಟೂರು. ತಂದೆ ಮಂಚೇಗೌಡ, ತಾಯಿ ನರಸಮ್ಮ. ಕನಕಪುರದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಮುಗಿಸಿದ್ದೇನೆ.

  ನಮ್ಮ ಕುಟುಂಬದಲ್ಲಿ ಸಾಹಿತಿಗಳು ಅಂತ ಯಾರೂ ಇರಲಿಲ್ಲ. ಆದರೆ ಸಾಹಿತ್ಯ ಹಾಗೂ ಸಂಗೀತದ ವಾತಾವರಣ ಇತ್ತು. ಕಾರಣ, ನಮ್ಮ ಅಮ್ಮ ನರಸಮ್ಮನವರು ಹಳ್ಳಿಯಲ್ಲಿ ಆಗ ಚಾಲ್ತಿಯಲ್ಲಿದ್ದ ಸೋಬಾನೆ ಪದಗಳನ್ನು ಹಾಡುತ್ತಿದ್ದರು. ಪ್ರತಿ ಶನಿವಾರ ಕನಕಪುರದ ಸಮೀಪವಿರುವ ನಮ್ಮ ಹಳ್ಳಿ ಕೆಬ್ಬರೆ ರಾಮಮಂದಿರದಲ್ಲಿ ನಡೆಯುತ್ತಿದ್ದ ಕೀರ್ತನೆಗಳನ್ನು ತಪ್ಪದೇ ಕೇಳುತ್ತಿದ್ದೆ. ಆ ಮಟ್ಟಿಗೆ ಸಾಹಿತ್ಯ, ಸಂಗೀತದ ಹಿನ್ನೆಲೆ ಇತ್ತು ಅಷ್ಟೇ.

  * ನಿಮ್ಮ ಸಾಹಿತ್ಯ ಹಾಗೂ ಗೀತಸಾಹಿತ್ಯದ ಪ್ರಯಾಣ ಪ್ರಾರಂಭವಾಗಿದ್ದು ಹೇಗೆ?

  ನಾನು 5ನೇ ಕ್ಲಾಸಿನಲ್ಲಿದ್ದಾಗ ನಡೆದ ಸ್ವರಚಿತ ಗೀತಗಾಯನ ಸ್ಪರ್ಧೆಯಲ್ಲಿ 'ಕನ್ನಡವನ್ನೇ ಬರೆಯೋಣ.. ಸಿರಿಗನ್ನಡವನ್ನೇ ತಿಳಿಯೋಣ.. ಕನ್ನಡಾಂಬೆ ಮಕ್ಕಳಾಗಿ ಜನುಮಜನುಮದಲು ಜನಿಸೋಣ' ಎಂದು ಬರೆದು ಬಹುಮಾನ ಗಿಟ್ಟಿಸಿದ್ದೆ. ನಂತರ ಶಾಲೆಯ ಟೀಚರ್ ಗಳು ನನಗೆ ಸಾಹಿತ್ಯದಲ್ಲಿರುವ ಆಸಕ್ತಿ ಹಾಗೂ ಪ್ರತಿಭೆ ಗುರುತಿಸಿ ಕಾಲಕಾಲಕ್ಕೆ ಅದನ್ನು ಪ್ರೋತ್ಸಾಹಿಸುತ್ತಾ ಬಂದರು.

  ಸನಿಹದಲ್ಲೇ ಇದ್ದ ಗ್ರಂಥಾಲಯಕ್ಕೆ ಹೋಗಿ ಹಳಗನ್ನಡ ಹಾಗೂ ಹೊಸಗನ್ನಡ ಎರಡೂ ಪ್ರಕಾರದ ಪಠ್ಯಪುಸ್ತಕಗಳನ್ನು ಓದುತ್ತಿದ್ದೆ, ರಜೆಯಲ್ಲಿ ದನಕಾಯುವಾಗ ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಿದ್ದೆ. ಆಗಲೇ ನಾನು ಕುವೆಂಪು ಅವರ 'ರಕ್ತಾಕ್ಷಿ', ಬೆರಳ್ ಗೆ ಕೊರಳ್' 'ಪಾಂಚಜನ್ಯ' ಮುಂತಾದ ಪುಸ್ತಕಗಳನ್ನು ಓದಿ ಅವರ ಪ್ರಭಾವಕ್ಕೆ ಒಳಗಾಗಿದ್ದೆ. 9 ಹಾಗೂ 10 ನೇ ಕ್ಲಾಸ್ ಮಧ್ಯದಲ್ಲಿ ಬರುವ ರಜೆಯಲ್ಲಿ ನಾನು 'ಅಡವಿಯ ಬಾಲೆಯರು' ಎಂಬ ನಾಟಕ ಬರೆದಿದ್ದೆ. ಅದು ನನ್ನ ಮೊಟ್ಟಮೊದಲ ಪುಸ್ತಕವಾಗಿ ಪ್ರಕಟವಾಗಬೇಕಿತ್ತು, ದುರದೃಷ್ಟವಶಾತ್ ಪ್ರಕಟಣೆಗೆಂದು ಕೊಟ್ಟಲ್ಲೇ ಅದು ಕಳೆದುಹೋಯ್ತು.

  ನಂತರ ಎಸ್ಸೆಸ್ಸೆಲ್ಸಿ ಮುಗಿಸಿ ಮುಗಿಸಿ ಬೆಂಗಳೂರಿಗೆ ಬಂದ ನಾನು ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ಭೇಟಿಯಾದೆ. ಅವರ ಸಂಗೀತ ನಿರ್ದೇಶನದ 'ಮಂಡ್ಯ' ಚಿತ್ರದಲ್ಲಿ 'ನಲ್ಲ ನಲ್ಲ ಮಂಡ್ಯದ ಬೆಲ್ಲ...' ಎಂಬ ಹಾಡಿನ ಮೂಲಕ ಸಿನಿಮಾ ಗೀತೆ ಬರೆಯಲು ಪ್ರಾರಂಭಿಸಿದೆ. ನಂತರ .ಗಂಡಹೆಂಡತಿ., .ಏಕದಂತ., .ಮುಂಗಾರು ಮಳೆ' ಹೀಗೆ ಗೀತಸಾಹಿತ್ಯದ ಜರ್ನಿ ಪ್ರಾರಂಭವಾಯ್ತು. ನಂತರ ಆರ್ ಪಿ ಪಟ್ನಾಯಕ್, ಮನೋಮೂರ್ತಿ, ಎಸ್ ಎ ರಾಜ್ ಕುಮಾರ್ ಮುಂತಾದವರ ಸಂಗೀತ ನಿರ್ದೇಶನದ ಹಾಡುಗಳಿಗೂ ಸಾಹಿತ್ಯ ಬರೆದಿದ್ದೇನೆ.

  * ನಿಮಗಿಷ್ಟವಾದ ಟಾಪ್ 10 ಹಾಡುಗಳು...

  ಖಂಡಿತವಾಗಿಯೂ ಹೆಸರಿಸುತ್ತೇನೆ. ನಾನು ಎಲ್ಲಾ ಹಾಡುಗಳನ್ನೂ ಇಷ್ಟಪಟ್ಟೇ ಬರೆದಿದ್ದರೂ ಅವುಗಳಲ್ಲಿ ಕೆಲವು ನನಗೆ ಅತಿಯಾಗಿ ಇಷ್ಟವಾಗಿದೆ. ಅವುಗಳೆಂದರೆ...

  * ಇವನು ಗೆಳೆಯನಲ್ಲ... (ಮುಂಗಾರು ಮಳೆ)
  * ಕವಿತೆ ಕವಿತೆ... (ಗಾಳಿಪಟ)
  * ಬಿಡುಬಿಡುಬಿಡು ಕದ್ದುಕದ್ದು ನೋಡೋದನ್ನ... (ಪಲ್ಲಕ್ಕಿ)
  * ಸೆರೆಯಾದೆನು ಸೆರೆಯಾದೆನು... (ಸತ್ಯ ಇನ್ ಲವ್)
  * ಸುವ್ವಿ ಸುವ್ವಾಲಿ... (ಮುಂಗಾರುಮಳೆ)
  * ಕಣ್ಣಾಮುಚ್ಚೆ ಕಾಡೆಗೂಡೆ ಆಟ ನಮ್ಮ ಬಾಳು... (ರಾಂಬೋ)
  * ಢವಢವಢವ ಎದೆಯ ಬಡಿತ ಏರುಪೇರು... (ಸಂತ)
  * ಮುಗಿದಿಲ್ಲ ಇನ್ನೂ ಕವಿತೆ... (ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ)
  * ಶುರುವಾಗಿದೆ ಒಳಗೆ... (ಗೌತಮ)
  * ಸಂಗಾತಿ ನೀನಿರಲು ಜೊತೆಯಲ್ಲಿ... (ಗೋಕುಲ ಕೃಷ್ಣ)

  * ಗೀತಸಾಹಿತ್ಯದ ಹೊರತಾಗಿ ಸಿನಿಮಾದ ಬೇರೆ ವಿಭಾಗಳಲ್ಲೂ ಕೈ ಆಡಿಸಿದ್ದೀರಾ?

  *ಹೌದು, ಖಂಡಿತವಾಗಿ. ಮೊದಲೆ ಹೇಳಿದಂತೆ ಹೈಸ್ಕೂಲ್ ಓದುವಾಗಲೆ ನಾನು 'ಅಡವಿಯ ಬಾಲೆಯರು' ಎಂಬ ನಾಟಕ ಬರೆದಿದ್ದೆ, ಆದರೆ ಅದು ಪ್ರಕಟವಾಗಲಿಲ್ಲ ಬಿಡಿ. 'ಮೂಕ ಮೈಲಿಗಲ್ಲು' ಹಾಗೂ 'ಚರಕದ ಮುದುಕ' ಎಂಬ ಎರಡು ಬುಕ್ ಬರೆದಿದ್ದೇನೆ. ನನ್ನದೇ '100 ಸಿನಿಮಾ ಗೀತೆಗಳ ಸಂಕಲಲ' ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಬರುವ ನವೆಂಬರ್ ನಲ್ಲಿ 'ಮಿಂಚುಹುಳು' ಎಂಬ ಕಥಾ ಸಂಕಲನ ಪ್ರಕಟವಾಗಲಿದೆ.

  * ಮುಂದಿನ ನಿಮ್ಮ ಕನಸು?

  ಸಿನಿಮಾ ನಿರ್ದೇಶಿಸುವ ಕನಸಿದೆ. ಅದಕ್ಕಾಗಿ ಈಗಾಗಲೆ ತಯಾರಿಯನ್ನೂ ನಡೆಸಿದ್ದು ಅಂದುಕೊಂಡಂತೆ ನಡೆದರೆ ಬರುವ ತಿಂಗಳು ಅಕ್ಟೋಬರ್ ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ನನ್ನ ನಿರ್ದೇಶನದಲ್ಲಿ ಮೂಡಿಬರಲಿರುವ ಆ ಚಿತ್ರಕ್ಕೆ 'ಅಲಾಲ್ ಟೋಪಿಗಳು' ಎಂದು ಹೆಸರಿಡಲಾಗಿದೆ. ಈ ಚಿತ್ರ ಮರಾಠಿ ಭಾಷೆಯಲ್ಲೂ ಬರಲಿದೆ. ಇಷ್ಟೇ ಅಲ್ಲ, ಮುಂದೆ ಕನ್ನಡವೂ ಸೇರದಂತೆ ತಮಿಳು, ಮಲಯಾಳಂ ಹಾಗೂ ಬೆಂಗಾಳಿ ಚಿತ್ರಗಳಿಗೂ ಕೆಲಸ ಮಾಡುವ ಅಭಿಲಾಷೆ ಇದೆ.

  ಈಗಿನಂತೆ ಸಿನಿಮಾಕ್ಕೆ ಸಾಹಿತ್ಯ ಬರೆಯುವುದನ್ನು ಮುಂದುವರಿಸಿಕೊಂಡು ಹೋಗಲಿದ್ದೇನೆ. ಜೊತೆಗೆ ಬಹಳಷ್ಟು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ಬರೆದು ಪ್ರಕಟಿಸುವ ಒಲವಿದೆ. ಸದ್ಯಕ್ಕೆ ಬಂದ ಅವಕಾಶಗಳಿಗೆ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. 'ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...' ಎಂಬ ಅಡಿಗರ ಕವನದ ಛಾಟಿಯೇಟನ್ನು ಆಗಾಗ ನೆನಪಿಸಿಕೊಂಡು ಇರುವಲ್ಲಿಯೇ ಏನಾದರೂ ಸಾಧಿಸಬೇಕೆಂದು ಹೊರಟಿದ್ದೇನೆ. ಕಾಲ ಕೈಹಿಡಿದರೆ ಯಶಸ್ಸು ಕೈಗೆಟಕುವುದಕ್ಕೆ ಎಷ್ಟು ಹೊತ್ತು? ಸಾಹಿತ್ಯ ಪಯಣದಲ್ಲಿ ಇನ್ನೂ ಹೆಚ್ಚಿನ ಯಶಸ್ಸಿನ ನಿರೀಕ್ಷೆಯಲ್ಲಿದ್ದೇನೆ...

                                                                 ***

  English summary
  Hridayashiva, popular Lyricist in Kannada Film Industry. He started work with Music Director Gurukiran from the movie 'Mandya', the song 'Nalla Nalla Madyada Bella...'. The song 'Ivanu Geleyanalla' in Successful movie 'Mungaru Male' became very populer. Here is 'Oneindia' Interview of Hridayashiva, to read...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more