»   » ಶಿವಣ್ಣನ ಹೊಸ ಚಿತ್ರ:ಮಳೆಯಲ್ಲಿ ಮಿಂದ ಹೂವಿನಂಥ ಹಾಡು

ಶಿವಣ್ಣನ ಹೊಸ ಚಿತ್ರ:ಮಳೆಯಲ್ಲಿ ಮಿಂದ ಹೂವಿನಂಥ ಹಾಡು

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

"ಮಳೆಯಲಿ ಮಿಂದ ಹೂವಿನ ಹಾಗೆ" ಎನ್ನುವ ಸಾಲುಗಳೊಂದಿಗೆ ಪ್ರಾರಂಭವಾಗುತ್ತದೆ ಅಂದರ್ ಬಾಹರ್ ಚಿತ್ರದ ಒಂದು ಹಾಡು. ಶ್ರೇಯಾ ಘೋಷಲ್ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ಈ ಗೀತೆಯನ್ನು ಕೇಳುತ್ತಿದ್ದಂತೆ ಅಹ್ಲಾದಕರವಾದ ತಣ್ಣನೆಯ ಗಾಳಿ ಸೋಕಿದಂತಾಗಿ ನಿಜಕ್ಕೂ ಮಳೆಯಲ್ಲಿ ಮಿಂದ ಹೂವಿನಂತಾಗುತ್ತದೆ ಮನಸ್ಸು. ಇದು ಈ ಚಿತ್ರದ ಬಹುತೇಕ ಹಾಡುಗಳ ಬಗ್ಗೆಯೂ ಹೇಳಬಹುದಾದ ಮಾತು.

ಹರಿಕೃಷ್ಣರ ಸಂಗೀತದ ಗುಂಗಿನಲ್ಲೇ ಇದ್ದ ಕನ್ನಡ ಚಿತ್ರ ರಸಿಕರಿಗೆ ಇಂಪಾದ ಅಚ್ಚರಿ ಅಂದರ್ ಬಾಹರ್ ಚಿತ್ರದ ಹಾಡುಗಳು. ಹೊಸ ನಿರ್ಮಾಪಕ, ನಿರ್ದೇಶಕ ತಂಡ ಎಂಬ ಕಾರಣದಿಂದಲೋ, ಶಿವಣ್ಣನ ವಿಭಿನ್ನವಾದ ಸ್ಟಿಲ್ಸ್ ದಿಂದಾಗಿಯೋ, ಶಿವಣ್ಣ ಪಾರ್ವತಿಯ ಸಂಗಮದಿಂದಲೋ, ಜೈ ಹೋ ಖ್ಯಾತಿಯ ವಿಜಯ ಪ್ರಕಾಶ್ ಸಂಗೀತ ನೀಡುತ್ತಿರುವ ಚೊಚ್ಚಲ ಚಿತ್ರವೆಂದೋ ಏನೋ, ಮೊದಲ ದಿನದಿಂದಲೂ ಚಿತ್ರದ ಬಗ್ಗೆ ನಿರೀಕ್ಷೆ ಖಂಡಿತ ಇತ್ತು.

ಈಗ ಚಿತ್ರದ ಸುಮಧುರ ಗೀತೆಗಳು ಯಶಸ್ವಿಯಾಗುವುದರೊಂದಿಗೆ ಚಿತ್ರದ ಮೇಲಿನ ನಿರೀಕ್ಷೆಯ ಭಾರ ಮತ್ತಷ್ಟು ಹೆಚ್ಚಾಗಿದೆ. ಹೊಸ ರೀತಿಯ ವಾದ್ಯಗಳ ಬಳಕೆ ಹಾಗೂ ಸಂಯೋಜನೆ ಮನ ಸೆಳೆಯುತ್ತದೆ. ಅಲ್ಲಿಗೆ ವಿಜಯ್ ಪ್ರಕಾಶ್ ತಮ್ಮ ಕೆಲಸದಲ್ಲಿ ಗೆದ್ದಿದ್ದಾರೆ ಎನ್ನಲು ಅಡ್ಡಿಯಿಲ್ಲ.

ಒಟ್ಟಾರೆ ಹಾಡುಗಳನ್ನು ಕೇಳುತ್ತಿದ್ದಂತೆ ವಿಜಯ್ ಪ್ರಕಾಶ್ ರವರಿಗೆ ಸಣ್ಣದೊಂದು ಕಂಗ್ರಾಟ್ಸ್ ಹೇಳುತ್ತದೆ ಮನಸ್ಸು. ಆಲ್ಬಂ ಹಾಡುಗಳು ಹೇಗಿವೆ, ಸ್ಲೈಡ್ ನೋಡಿ


ಅಂದರ್ ಬಾಹರ್ ಚಿತ್ರದ ಗ್ಯಾಲರಿ

ಅಂದರ್ ಬಾಹರ್

ವಿಶಾಲ್ ದದ್ಲಾನಿ ಹಾಡಿರುವ 'ಅಂದರ್ ಬಾಹರ್' ಎಂಬ ಶೀರ್ಷಿಕೆ ಗೀತೆ ಒಂದು ಜಲಪಾತದಂಥ ಜೀವ ಕಳೆ ತುಂಬಿರುವ ಗೀತೆ. ಬಳುಕುತ್ತಾ ಹರಿಯುತ್ತಾ, ಅಲ್ಲಲ್ಲಿ ವೇಗ ಹೆಚ್ಚಿಸಿಕೊಳ್ಳುತ್ತಾ, ಅಡ್ಡ ಬರುವ ಕಲ್ಲುಗಳ ನಡುವೆ ನುಸುಳುತ್ತಾ, ತಣ್ಣಗೆ ಕೊರೆಯುತ್ತಾ ಸಾಗಿ, ಭೋರ್ಗರೆಯುತ್ತಾ ಧುಮ್ಮಿಕ್ಕುವ ನದಿಯಂತೆ ಕೇಳುಗರನ್ನು ಆವರಿಸಿಕೊಳ್ಳುತ್ತದೆ ಈ ಗೀತೆ. ಗೀತೆಗೆ ತಕ್ಕಂತೆ ಬಳಕುವ ವಿಶಾಲ್ ರ ಧ್ವನಿ ನಿಜಕ್ಕೂ ಹೊಸ ಅನುಭವ ನೀಡುತ್ತದೆ. ಕೋರಸ್ ನಲ್ಲಿ ಬರುವ ಧ್ವನಿ ಕೂಡ ಸುಂದರವಾಗಿ ಮಿಶ್ರಿತವಾಗಿದೆ. ಅರ್ಜುನ್ ರ ಸಾಹಿತ್ಯ ನಂಟು ಗೀತೆಗೆ ಸಿಕ್ಕಿದೆ.

ಆಸೆ ಗರಿಗೆದರಿದೆ ಆಸೆ ಪಿಸುಗುಡುತ್ತಿದೆ

ಕಾರ್ತಿಕ್ ಹಾಗೂ ಅನುರಾಧ ಭಟ್ ಹಾಡಿರುವ "ಆಸೆ" ಗೀತೆ, ಧ್ವನಿಸುರಳಿಯ ಅತ್ತ್ಯುತ್ತಮ ಗೀತೆ ಯಾವುದು ಎನ್ನುವ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿ. ಕವಿರಾಜ್ ಮತ್ತೊಮ್ಮೆ ತಮ್ಮ ಕವಿಚಳಕ ತೋರಿದರೆ, ಗಾಯಕರು ಸ್ಪರ್ಧೆಗೆ ಬಿದ್ದವರಂತೆ ಉತ್ತಮವಾಗಿ ಹಾಡಿದಾರೆ. ಕೊನೆಗೆ ಗೆದ್ದಿರುವುದು ಸಂಗೀತ ನಿರ್ದೇಶಕ ವಿಜಯ್ ಪ್ರಕಾಶ್ ರ ಮಾಂತ್ರಿಕ ಸ್ಪರ್ಶ. ಸಾಧಾರಣವಾಗಿರಬಹುದಾದ ಗೀತೆಗೆ ಬೇರೆಯಾದ ಆದ ಲಹರಿ ದೊರಕಿಸಿ ಕೊಡುವಲ್ಲಿ ವಿಜಯ್ ಸಂಪೂರ್ಣವಾಗಿ ಗೆದ್ದಿದ್ದಾರೆ. ಸುಂದರವಾದ ಆಲಾಪನೆಯೊಂದಿಗೆ ಪ್ರಾರಂಭವಾಗುವ ಗೀತೆ ತನ್ನದೇ ಆದ ತಿರುವನ್ನು ಪಡೆಯುವ ಪರಿಯನ್ನು ಕೇಳಿಯೇ ಆನಂದಿಸಬೇಕು.

ಕೊನೆಯೇ ಇರದ ಮೊದಲ ಪದವೇ ಎಲ್ಲಿ ನೀನು

ಇನ್ನೂ ಶಂಕರ್ ಮಹಾದೇವನ್ ಹಾಡಿರುವ "ಕೊನೆಯೇ ಇರದ ಮೊದಲ ಪದವೇ ಎಲ್ಲಿ ನೀನು" ಗೀತೆ, ಶಂಕರ್ ಹಾಡಿರುವ ಧಾಟಿಯಿಂದಲೇ ಇಷ್ಟವಾಗುತ್ತಾ ಹೋಗುತ್ತಿದ್ದಂತೆ, ಜಯಂತ್ ಕಾಯ್ಕಣಿ ತಮ್ಮ ಇರುವಿಕೆಯನ್ನು ಸ್ಪಷ್ಟವಾಗಿ ನೆನಪಿಸುತ್ತಾರೆ. ಸಾಹಿತ್ಯದಿಂದಾಗಿ ಈ ಗೀತೆ ಏರುವ ಎತ್ತರಕ್ಕೆ ಜಯಂತ್ ನಿಜಕ್ಕೂ ಅಭಿನಂದನಾರ್ಹರು. ಕೊನೆಯಲ್ಲಿ, ಶಂಕರ್ ಮಹಾದೇವನ್, ಜಯಂತ್ ಕಾಯ್ಕಿಣಿ, ವಿಜಯ್ ಪ್ರಕಾಶ್ ಈ ಮೂವರಲ್ಲಿ ಯಾರು ಹೆಚ್ಚು ಅಭಿನಂದನಾರ್ಹರು ಎಂಬ ಗೊಂದಲ ನಿಮ್ಮದಾಗುತ್ತದೆ.

ನೀನು ನನ್ನ ಒನ್ಲಿ ವೈಫು ಆದ್ರೂ ಯಾಕೆ ಇಂಥ ಗ್ಯಾಪು

ನಡುವೆ ಬಂದೋಗುವ ಚೇತನ್ ಹಾಗೂ ಶಮಿತಾ ಹಾಡಿರುವ ' ನೀನು ನನ್ನ ಒನ್ಲಿ ವೈಫು ' ಗೀತೆಗೆ ಯೋಗ್ ರಾಜ್ ಭಟ್ ಸಾಹಿತ್ಯದ ಟಚ್ ಇದೆ. ಲವಲವಿಕೆಯ ವಾದ್ಯ ಸಂಯೋಜನೆ ಇದ್ದರೂ ಇನ್ನಿತರ ಗೀತೆಗಳಿಗೆ ಹೋಲಿಸಿದಾಗ ಸಾಹಿತ್ಯ ತುಸು ಕಳೆಗುಂದಿದಂತೆ ಕಾಣುತ್ತದೆ. ಆದರೂ ಭಟ್ಟರ ಸಾಹಿತ್ಯ, ಯುವಕರ ಮೋಡಿ ಮಾಡಿದರೂ ಮಾಡೀತು. ಶಮಿತಾ ಹಾಗೂ ವಿಶೇಷವಾಗಿ ಚೇತನ್ ತಮ್ಮ ಕಂಠದಿಂದ ಗಮನ ಸೆಳೆಯುತ್ತಾರೆ.

ಮಳೆಯಲ್ಲಿ ಮಿಂದ ಹೂವಿನ ಹಾಗೆ ಮಿನುಗುವೆ ಏಕೆ ನನ್ನೊಲವೆ

ಕೊನೆಗೆ, "ಮಳೆಯಲ್ಲಿ ಮಿಂದ ಹೀವನ್ ಹಾಗೆ" ಹಾಡು ನೀಡುವ ಅನುಭವ ಅಪೂರ್ವವಾದದು. ಕನ್ನಡದ ಇತರ ಕ್ಲಾಸಿಕ್ ಮಳೆ ಗೀತೆಗಳಿಗೆ ಹೊಸ ಸೇರ್ಪಡೆ ಈ ಗೀತೆ. ಇಂಥಾ ಗೀತೆಗಳಲ್ಲಿ ಸ್ಪೆಷಲಿಸ್ಟ್ ಆಗಿ ಹೋಗಿರುವ ಶ್ರೇಯಾ ಘೋಷಲ್ ಮತ್ತೊಮ್ಮೆ ಮೋಡಿ ಮಾಡಿದರೆ ಹಾಗೂ ವಿಜಯ್ ರ ತನ್ಮಯತೆ ಅದ್ಭುತ. ಹಾಡಿನ ನಡುವೆ ಬರುವ ರಾಗ, ಆಲಾಪನೆ ಹಾಗೂ ಮತ್ತಾವುದೋ ಭಾಷೆಯ ತುಣುಕು ಮನ ಸೆಳೆಯುತ್ತದೆ. ಜಯಂತ್ ಕಾಯ್ಕಿಣಿ ರವರ ಸಾಹಿತ್ಯದ ಬಗ್ಗೆ ಹೇಳುವುದೇನಿದೆ? ಬಹುಕಾಲ ನೆನಪಿನಲ್ಲಿ ಉಳಿಯುಂಥ ಗೀತೆ ಇದು.

English summary
Audio review of Kannada movie 'Andar Bahar'. Shivaraj Kumar, Parvathi Menon in lead role and Vijay Prakash composed the songs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada