For Quick Alerts
  ALLOW NOTIFICATIONS  
  For Daily Alerts

  ಬೇವು-ಬೆಲ್ಲದ ಹಾಡು : ಚಿತ್ರರಂಗದಲ್ಲಿ ಯುಗಾದಿ ಸಂಭ್ರಮ

  By ಶಶಿಧರ ಚಿತ್ರದುರ್ಗ
  |

  ಇತರೆ ಹಬ್ಬಗಳಂತೆ ಯುಗಾದಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿಲ್ಲ. ಹಾಗಾಗಿ ಈ ಹಬ್ಬ ನಮ್ಮ ಸಿನಿಮಾಗಳ ಹಾಡು, ಸಂಭಾಷಣೆಗಳಲ್ಲಷ್ಟೇ ಪ್ರಸ್ತಾಪವಾಗುತ್ತದೆ.

  ಯುಗಾದಿ ಹಬ್ಬಕ್ಕೆ ಸಿನಿ ತಾರೆಯರ ಸ್ಪೆಷಲ್ ವಿಶ್

  ಸಿದ್ದಲಿಂಗಯ್ಯ ನಿರ್ದೇಶನದ 'ದೂರದ ಬೆಟ್ಟ' ಚಿತ್ರದಲ್ಲೊಂದು ಸನ್ನಿವೇಶವಿದೆ. ಚಿತ್ರದ ಕಥಾನಾಯಕ ಮತ್ತು ನಾಯಕಿಯಾದ ಶಿವು (ಡಾ.ರಾಜ್) ಮತ್ತು ಗೌರಿ (ಭಾರತಿ) ಕಡುಬಡವರು. ಕಮ್ಮಾರಿಕೆ ಮಾಡುವ ಅವರಿಗೆ ಯುಗಾದಿ ಹಬ್ಬ ಆಚರಿಸಲು ಕೂಡ ಅನುಕೂಲ ಇರುವುದಿಲ್ಲ. ಏನು ಮಾಡುವುದೆಂದು ಅವರು ಹತಾಶೆಯಿಂದ ಮನೆಯಲ್ಲಿ ಕುಳಿತಿರುತ್ತಾರೆ. ಆಗ ಅವರಲ್ಲಿಗೆ ಬರುವ ಊರಿನ ಹಿರಿಯಜ್ಜ (ಸಂಪತ್) ದಂಪತಿಗೆ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಕೊಟ್ಟು ಹರಸುತ್ತಾರೆ. ಈ ಮೂಲಕ ನಿರ್ದೇಶಕ ಸಿದ್ದಲಿಂಗಯ್ಯ ಸಾಮರಸ್ಯ, ಸಹಜೀವನದ ಗ್ರಾಮ ಜೀವನವನ್ನು ಕಟ್ಟಿಕೊಡುತ್ತಾರೆ. ಇದಕ್ಕೆ ಪ್ರಾಸಂಗಿಕವಾಗಿ ಯುಗಾದಿ ಹಬ್ಬದ ಸಂದರ್ಭ ಬಳಕೆಯಾಗುತ್ತದೆ. ಇದೇ ಹಬ್ಬದ ಸಂದರ್ಭದಲ್ಲಿ ಶಿವು ಮತ್ತು ಗೌರಿ, 'ಪ್ರೀತಿನೇ ಆ ದ್ಯಾವ್ರ ತಂದ ಆಸ್ತಿ ನಮ್ಮ ಪಾಲಿಗೆ...' ಎಂದು ಹಾಡುತ್ತಾರೆ.

  ugadi festival special kannada songs

  ಹೀಗೆ, ಕೆಲವು ಕನ್ನಡ ಸಿನಿಮಾಗಳಲ್ಲಿ ಪ್ರಾಸಂಗಿಕವಾಗಿ ಯುಗಾದಿ ಹಬ್ಬದ ಪ್ರಸ್ತಾಪವಾಗುತ್ತದೆ. ಡಾ.ರಾಜಕುಮಾರ್ ಅಭಿನಯದ ಮತ್ತೊಂದು ಸಿನಿಮಾ 'ಬಂಗಾರದ ಪಂಜರ'ದಲ್ಲಿಯೂ ಯುಗಾದಿ ಪ್ರಸ್ತಾಪವಾಗುತ್ತದೆ. ಬೀರ (ಡಾ.ರಾಜ್) ತನ್ನ ಅಪ್ಪ-ಅಮ್ಮಂದಿರ ಜೊತೆಗೆ ಹಬ್ಬ ಅಚರಿಸಿ, ಹೋಳಿಗೆ ಮೆಲ್ಲುವ ನವಿರಾದ ಸನ್ನಿವೇಶವೊಂದನ್ನು ನಾವಲ್ಲಿ ನೋಡಬಹುದು. ಆದರೆ ಈ ಹೊತ್ತಿಗೂ ನಮಗೆ ಯುಗಾದಿ ಹಬ್ಬದ ಚಿತ್ರಣವನ್ನು ಸಂಪದ್ಭರಿತವಾಗಿ ಕಟ್ಟಿಕೊಡುವ ಹಾಡೆಂದರೆ 'ಕುಲವಧು' (1963) ಚಿತ್ರದ 'ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...' ಹಾಡು. ಚಿತ್ರದ ನಾಯಕನಟಿ ಲೀಲಾವತಿ ಅವರು ನಾಯಕ ಡಾ.ರಾಜ್ ಮತ್ತು ಮನೆಯ ಇತರೆ ಸದಸ್ಯರೊಂದಿಗೆ ಹಾಡಿ ನಲಿಯುವ ಗೀತೆಯಿದು. ಕವಿ ದ.ರಾ.ಬೇಂದ್ರೆ ಅವರ ಈ ಕವಿತೆಗೆ ಜಿ.ಕೆ.ವೆಂಕಟೇಶ್ ಸೊಗಸಾಗಿ ಸಂಗೀತ ಸಂಯೋಜಿಸಿದ್ದಾರೆ. ಹೊಸ ವರ್ಷದ ಸಂಭ್ರಮ, ಮಾವಿನ ಚಿಗುರು, ಬೇವು-ಬೆಲ್ಲ... ಎಲ್ಲವೂ ಸವಿವರವಾಗಿ ಪ್ರಸ್ತಾಪವಾಗುವ ಗೀತೆ ಐದು ದಶಕಗಳ ನಂತರವೂ ಸಿನಿರಸಿಕರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಎಸ್.ಜಾನಕಿ ಮಧುರ ಕಂಠದಲ್ಲಿ ಮೂಡಿಬಂದಿರುವ ಗೀತೆ ಪ್ರತೀ ಯುಗಾದಿಯಂದು ನೆನಪಾಗದಿರದು.

  ಗೀತ ಸಾಹಿತಿ ಕೆ.ಕಲ್ಯಾಣ್ 'ಈ ಬಂಧನ' ಚಿತ್ರಕ್ಕೆ ಯುಗಾದಿ ಹಬ್ಬದ ಸಂಭ್ರಮದ ಹಾಡೊಂದನ್ನು ಬರೆದಿದ್ದಾರೆ. ಆದರೆ ಇದು ಸಂಪೂರ್ಣವಾಗಿ ಯುಗಾದಿ ಚಿತ್ರಣ ಕೊಡುವುದಿಲ್ಲ ಎನ್ನುವುದನ್ನೂ ಸ್ವತಃ ಅವರೇ ಒಪ್ಪಿಕೊಳ್ಳುತ್ತಾರೆ. 'ಇತರೆ ಹಬ್ಬಗಳಂತೆ ಯುಗಾದಿಗೆ ಪೌರಾಣಿಕ, ಚಾರಿತ್ರಿಕ ಹಿನ್ನೆಲೆಯಿಲ್ಲ. ಶಿವರಾತ್ರಿ, ನವರಾತ್ರಿ, ಗಣೇಶ ಚತುರ್ಥಿಯಂತಹ ಹಬ್ಬಗಳಿಗೆ ಪೌರಾಣಿಕ ಹಿನ್ನೆಲೆಯಿದೆ. ಇವು ರಾಮಾಯಣ, ಮಹಾಭಾರತದಲ್ಲಿಯೂ ಉಲ್ಲೇಖವಾಗುತ್ತವೆ. ಆದ್ದರಿಂದ ಈ ಹಬ್ಬಗಳ ಆಚರಣೆ, ಅದಕ್ಕೆ ಸಂಬಂಧಿಸಿದ ದೇವತೆಗಳ ಚಿತ್ರಣವಿರುವ ಕಥೆಗಳು ತೆರೆಯ ಮೇಲೆ ಮೂಡಿವೆ. ಆದರೆ ಯುಗಾದಿ ಒಂದು ಸಾಂಪ್ರದಾಯಿಕ ಆಚರಣೆ. ಅದೊಂದು ನೂತನ ಸಂವತ್ಸರಕ್ಕೆ ನಾಂದಿ ಹಾಡುವ ಸಂದರ್ಭ. ಹಾಗಾಗಿ ಸಿನಿಮಾಗಳಲ್ಲಿ ಯುಗಾದಿ ಹೆಚ್ಚು ಪ್ರಸ್ತಾಪವಾಗಿಲ್ಲ' ಎನ್ನುತ್ತಾರವರು.

  ಹೀಗೆ 60, 70ರ ದಶಕಗಳ ಹತ್ತಾರು ಸಿನಿಮಾಗಳಲ್ಲಿ ಯುಗಾದಿ ಹಬ್ಬದ ಪ್ರಸ್ತಾಪ ಸಂಭಾಷಣೆಗಳಲ್ಲಿ ಕೇಳಿಬರುತ್ತದೆ. ಐದಾರು ವರ್ಷಗಳ ಹಿಂದೆ ತೆರೆಕಂಡ "ರಿಷಿ' ಸಿನಿಮಾದಲ್ಲಿ ಚಿತ್ರಸಾಹಿತಿ ವಿ.ಮನೋಹರ್ ಒಂದೊಳ್ಳೆಯ ಯುಗಾದಿ ಹಾಡು ಬರೆದಿದ್ದರು. 'ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ... ಈ ಸಂಬಂಧ ಬೆಸೆದ ಹಬ್ಬ... ಕಣ್ತುಂಬೋ ಪ್ರೀತಿ ಹಬ್ಬ...' ಎಂದು ಶುರುವಾಗುವ ಹಾಡಿನಲ್ಲಿ ಕುಟುಂಬದ ಸದಸ್ಯರೆಲ್ಲರೂ ಹಾಡಿ ಕುಣಿಯುತ್ತಾರೆ. ಶಿವರಾಜಕುಮಾರ್ ಮತ್ತು ವಿಜಯ ರಾಘವೇಂದ್ರ ಅಭಿನಯದ ಈ ಹಾಡು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಮತ್ತೊಂದು ಬಹುತಾರಾಗಣದ ಸಿನಿಮಾ 'ಹಬ್ಬ'ದಲ್ಲಿ ಹಂಸಲೇಖಾ ಯುಗಾದಿ ಸಂಭ್ರಮಕ್ಕೊಂದು ಹಾಡು ಬರೆದಿದ್ದಾರೆ. 'ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ...' ಎನ್ನುವ ಈ ಗೀತೆ ಕುಟುಂಬದ ಸಾಮರಸ್ಯ ಸಾರುತ್ತದೆ. ಓಂಸಾಯಿ ಪ್ರಕಾಶ್ ನಿರ್ದೇಶನದಲ್ಲಿ 'ಯುಗಾದಿ' (2007) ಶೀರ್ಷಿಕೆಯಡಿ ಕನ್ನಡ ಚಿತ್ರವೊಂದು ತೆರೆಕಂಡಿತ್ತು. ರವಿಚಂದ್ರನ್, ಕಾಮ್ನಾ ಜೇಠ್ನಲಾನಿ ಅಭಿನಯದ ಇದು ತೆಲುಗು ಚಿತ್ರವೊಂದರ ರೀಮೇಕ್. ಇಲ್ಲಿ ಹಬ್ಬ ಶೀರ್ಷಿಕೆಗೆ ಮಾತ್ರ ಸೀಮಿತವಾಗಿತ್ತಷ್ಟೆ. ಕೊನೆಗೂ ನಮಗೆ ಈ ಹಬ್ಬದಂದು ನೆನಪಾಗುವುದು ಬೇಂದ್ರೆಯವರ 'ಯುಗಯುಗಾದಿ ಕಳೆದರೂ...' ಹಾಡು ಎನ್ನುವುದು ಮಾತ್ರ ದಿಟ.

  English summary
  Ugadi festival special kannada songs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X