»   »  ರಾಜ್ಯದ ಮೇಲೆ ದಂಡೆತ್ತಿ ಬಂದ ತೆಲುಗು ಮಗಧೀರ

ರಾಜ್ಯದ ಮೇಲೆ ದಂಡೆತ್ತಿ ಬಂದ ತೆಲುಗು ಮಗಧೀರ

Posted By:
Subscribe to Filmibeat Kannada

ಮೆಗಾಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ತೇಜ ನಟನೆಯ ಎರಡನೇ ಚಿತ್ರ 'ಮಗಧೀರ'ನಿಗೆ ರಾಜ್ಯದಲ್ಲೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಗಧೀರ ಚಿತ್ರದ ಟಿಕೆಟ್ ಗಳು ಕಾಳಸಂತೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾಗುತ್ತಿವೆ. ರು.65ರ ಬಾಲ್ಕನಿ ಟಿಕೆಟ್ ಗಳು ಬ್ಲಾಕ್ ನಲ್ಲಿ ರು.800ಗಳಿಗೆ ಮಾರಾಟವಾಗುತ್ತಿವೆ. ಕರ್ನಾಟಕದಲ್ಲಿ ತೆಲುಗು ಚಿತ್ರವೊಂದಕ್ಕೆ ಈ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಕನ್ನಡ ಚಿತ್ರೋದ್ಯಮವನ್ನ್ನು ಅಚ್ಚರಿಯಲ್ಲಿ ಮುಳುಗುವಂತೆ ಮಾಡಿದೆ.

ಉತ್ತರ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ 11.30ಕ್ಕೆ ಆರಂಭವಾಗಿದೆ. ಆದರೆ ತೆಲುಗು ಪ್ರೇಕ್ಷಕರ ಒತ್ತಾಯಕ್ಕೆ ಮಣಿದು 10.30ಕ್ಕೆಲ್ಲಾ ಬೆಳಗಿನ ಪ್ರದರ್ಶನ ಆರಂಭಿಸಲಾಗುತ್ತಿದೆ. 11.30ಕ್ಕೆ ಬಂದ ಪ್ರೇಕ್ಷಕರು ಇಂಗು ತಿಂದ ಮಂಗನಂತಾಗುತ್ತಿದ್ದಾರೆ. 'ಮಗಧೀರ' ಭಿತ್ತಿಚಿತ್ರಗಳನ್ನು ನೋಡಿಕೊಂಡು ಮುಂದಿನ ಪ್ರದರ್ಶನಕ್ಕೆ ಸರದಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ಅವರದು.

'ಮಗಧೀರ' ಬಿಡುಗಡೆಗೊಂಡಿರುವ ಬೆಂಗಳೂರಿನ ಬಹಳಷ್ಟು ಚಿತ್ರಮಂದಿರದ ಕೌಂಟರ್ ಗಳ ಬಳಿ 'ಟಿಕೆಟ್ ಖಾಲಿ' ಎಂಬ ಫಲಕ ರಾರಾಜಿಸುತ್ತಿದೆ. ಆದರೆ ಬ್ಲಾಕ್ ನಲ್ಲಿ ಮಾತ್ರ ಬಿಸಿ ದೋಸೆಯಂತೆ ದುಬಾರಿ ಬೆಲೆಗೆ ಬಿಕರಿಯಾಗುತ್ತಿದೆ. ರಜನಿಕಾಂತ್ ನಟನೆಯ ಚಿತ್ರ 'ಶಿವಾಜಿ' 2007ರಲ್ಲಿ ಬಿಡುಗಡೆಯಾದಾಗಲೂ ಇಷ್ಟೊಂದು ದುಬಾರಿ ಬೆಲೆಗೆ ಟಿಕೆಟ್ ಗಳು ಮಾರಾಟವಾಗಿರಲಿಲ್ಲ.

ಪ್ರಾದೇಶಿಕ ಭಾಷೆಯಲ್ಲಿ ನಿರ್ಮಿಸಿರುವ ಅತ್ಯಂತ ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ 'ಮಗಧೀರ' ಪಾತ್ರವಾಗಿದೆ. ಈ ಚಿತ್ರವನ್ನು ಸರಿಸುಮಾರು ರು.35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರೀತಿಯ ಅದ್ದೂರಿ ಚಿತ್ರವೊಂದು ತೆಲುಗಿನಲ್ಲಿ ಬಿಡುಗಡೆಯಾಗಿ ಬಹಳ ಕಾಲವಾಗಿತ್ತು. ಬಹಳಷ್ಟು ತೆಲುಗು ಚಿತ್ರನಟರು ರಾಜಕೀಯದಲ್ಲಿ ತೊಡಗಿಕೊಂಡಿದ್ದೇ ಇದಕ್ಕೆ ಕಾರಣ.

ಮೊದಲೇ ರಾಜ್ಯದಲ್ಲಿ ಚಿತ್ರಮಂದಿರದ ಕೊರತೆ. ಕನ್ನಡ ಚಿತ್ರಗಳು ಬಿಡುಗಡೆಗಾಗಿ ಕಾಯಬೇಕಾದ ಪರಿಸ್ಥಿತಿ. ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿ 'ಮಗಧೀರ' ರಾಜ್ಯದಾದ್ಯಂತ ಬಿಡುಗಡೆಯಾಗಿ ಉಳಿದ ಕನ್ನಡ ಚಿತ್ರಗಳಿಗೆ ಮುಳುವಾಗಿದೆ. ತಮಿಳು,ತೆಲುಗು ಚಿತ್ರಗಳ ನಡುವೆ ಕನ್ನಡ ಚಿತ್ರಗಳು ಪರದಾಡಬೇಕಾಗಿದೆ.

ಬೆಂಗಳೂರಿನಲ್ಲಿ ಪಿವಿಆರ್ ಸೇರಿದಂತೆ ಒಟ್ಟು 14 ಚಿತ್ರಮಂದಿರಗಳಲ್ಲಿ 'ಮಗಧೀರ' ಬಿಡುಗಡೆಯಾಗಿದೆ. ಶೀಘ್ರದಲ್ಲೇ ತಮಿಳಿನ ಮತ್ತೊಂದು ಅದ್ಧೂರಿ ಚಿತ್ರ 'ಮಲ್ಲನ್ನ' ಬಿಡುಗಡೆ ಸಜ್ಜಾಗಿದೆ. ಈ ಚಿತ್ರದ ಬಗ್ಗೆಯೂ ತಮಿಳು ಪ್ರೇಕ್ಷಕರು ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಅನ್ಯಭಾಷಾ ಚಿತ್ರಗಳ ನಡುವೆ ಕನ್ನಡ ಚಿತ್ರಗಳು ಬಿಡುಗಡೆಯಾಗಲು ಹೆಣಗಾಡಬೇಕಾದ ಪರಿಸ್ಥಿತಿ ತಲೆಯೆತ್ತಿರುವುದು ನಿಜಕ್ಕೂ ಶೋಚನೀಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada