»   » 'ಡೆಡ್ಲಿ ಸೋಮ' ಆದಿತ್ಯಾ ಪ್ರಾಣಾಪಾಯದಿಂದ ಪಾರು

'ಡೆಡ್ಲಿ ಸೋಮ' ಆದಿತ್ಯಾ ಪ್ರಾಣಾಪಾಯದಿಂದ ಪಾರು

By: *ಉದಯರವಿ
Subscribe to Filmibeat Kannada

'ಡೆಡ್ಲಿ ಸೋಮ ಭಾಗ 2' ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟ ಆದಿತ್ಯಾ ಗಾಯಗೊಂಡಿದ್ದಾರೆ. ಅವರ ಬೆನ್ನು ಹಾಗೂ ಸೊಂಟಕ್ಕೆ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಬೆಂಗಳೂರು ಯಲಹಂಕ ಸಮೀಪದ ಫ್ಯಾಕ್ಟರಿಯೊಂದರಲ್ಲಿ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ 'ಡೆಡ್ಲಿ ಸೋಮ ಭಾಗ 2' ಚಿತ್ರೀಕರಣ ನಡೆಯುತ್ತಿತ್ತು. ಡ್ಯೂಪಿಲ್ಲದೆಯೇ ಸಾಹಸ ಸನ್ನಿವೇಶವೊಂದರಲ್ಲಿ ಆದಿತ್ಯಾ ಮಾಡುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ. ಚಿತ್ರೀಕರಣ ವೇಳೆ ಆದಿತ್ಯಾ 25 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರು.

ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಆದಿತ್ಯಾ ಅವರಿಗೆ ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎಂದು ಸಾಹಸ ನಿರ್ದೇಶನ ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಆದಿತ್ಯಾ ಅವರ ತಂದೆ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸುತ್ತಾ, ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಯಾರದೂ ಏನು ತಪ್ಪಿಲ್ಲ. ಸಾಹಸ ಚಿತ್ರೀಕರಣ ಎಂದರೆ ಇದೆಲ್ಲಾ ಸಾಮಾನ್ಯ. ಆದಿತ್ಯ ಗಂಭೀರವಾಗಿಯೇನು ಗಾಯಗೊಂಡಿಲ್ಲ, ಆರಾಮವಾಗಿಯೇ ಇದ್ದಾನೆ. ಎಕ್ಸ್ ರೇ ಫಲಿತಾಂಶ ಬಂದ ನಂತರ ಆದಿತ್ಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಯಲಿದೆ ಎಂದಿದ್ದಾರೆ.

ರವಿಶ್ರೀವತ್ಸ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಜಾಕ್ ಮಂಜು ಮತ್ತು ಶೋಭಾ ರಾಜಣ್ಣ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ಸಾಧುಕೋಕಿಲ. ಮುಖ್ಯಭೂಮಿಕೆಯಲ್ಲಿ ಆದಿತ್ಯಾ ಮತ್ತು ಪ್ರೀತಾ ರಾವ್ ಅಭಿನಯಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada