For Quick Alerts
  ALLOW NOTIFICATIONS  
  For Daily Alerts

  ವೆಬ್ ಸಮುದ್ರದಲಿ ತೇಲುತ್ತಲೇಯಿದೆ ಚಿತ್ರಲೋಕ.ಕಾಂ

  By Staff
  |
  ಕನ್ನಡ ಚಲನಚಿತ್ರಗಳ ಸುದ್ದಿ ಬಿಂಬಗಳನ್ನು ಇಂಗ್ಲಿಷ್ ನಲ್ಲಿ ಸಾರುವ ಚಿತ್ರಲೋಕ ಡಾಟ್ ಕಾಮ್ ಚಡಪಡಿಕೆಗಳ ಒಂಭತ್ತು ವರ್ಷಗಳನ್ನು ಪೂರೈಸಿ ಸಂಭ್ರಮದ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಆರ್ಥಿಕ ಬಿಕ್ಕಟ್ಟು ಯಾರನ್ನಾದರೂ ಮುಳುಗಿಸಲಿ ನಾನು ಮಾತ್ರ ನಿರಾಂತಕವಾಗಿ ತೇಲುತ್ತಿರುತ್ತೇನೆ ಎನ್ನುತ್ತಿದೆ ಈ ಅಂತರ್ಜಾಲ ತಾಣ.

  ಚಿತ್ರಲೋಕ ವೆಬ್ ಸೈಟಿನ ಕಥೆ ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ನಿರ್ಮಾಣ, ನಿರ್ದೇಶನ, ಪ್ರಚಾರ, ಹಂಚಿಕೆ ಕಡೆಗೆ ಪೋಸ್ಟರ್ ಹಚ್ಚುವ ಕೆಲಸವನ್ನೂ ಮಾಡುವವರು ಮೂಲತಃ ಛಾಯಾಚಿತ್ರಕಾರರಾದ ವೀರೇಶ್. ಚಿತ್ರಲೋಕದ ಆನ್ ಲೈನ್ ಪತ್ರಿಕೋದ್ಯಮವೆಂದರೆ ವೀರೇಶ್ ಅವರ ಒನ್ ಮ್ಯಾನ್ ಷೊ!

  ಇತ್ತೀಚಿನವರೆವಿಗೂ ಫೋಟೋಗ್ರಾಫರ್ ವೀರೇಶ್ ಅವರಿಗೆ ಅಕ್ಷರ ಬೆಂಬಲ ಕೊಡುತ್ತಿದ್ದವರು ಕೆ.ಎಸ್.ವಾಸು. ಅವರು ರಾಜೀನಾಮೆ ನೀಡಿದ ನಂತರ ಈಗ ವೆಬ್ಬಿಗೆ ಸುದ್ದಿ ಲೇಖನಗಳನ್ನು ಬರೆಯುವವರು ಸರ್ವಾಂತರ್ಯಾಮಿ ಆರ್.ಜಿ. ವಿಜಯಸಾರಥಿ. ಈ ತಾಣದಲ್ಲಿ ಗಾಸಿಪ್ಪುಗಳು ಅಷ್ಟಾಗಿ ಇರುವುದಿಲ್ಲ. ಇದಕ್ಕೆ ಪಾಲಿಸಿ ಮ್ಯಾಟರ್ ಕಾರಣವೋ ಅಥವಾ ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸುವ ಓಲೈಸಿ ಮ್ಯಾಟರ್ ಕಾರಣವೋ ಎಂಬುದು ಸ್ಪಷ್ಟವಾಗಿಲ್ಲ.

  ಬುಧವಾರ ಸಂಜೆ ಸೆಂಚುರಿ ಕ್ಲಬ್ಬಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚಿತ್ರಲೋಕದ ವಾರ್ಷಿಕೋತ್ಸವ ಅಚ್ಚುಕಟ್ಟಾಗಿ ನಡೆಯಿತು. ವೇದಿಕೆಯಲ್ಲಿ ರಾಜ್ ಕುಮಾರ್ ಅವರ ನಿಜಜೀವನದ ಹೀರೋಯಿನ್ ಪಾರ್ವತಮ್ಮ, ತೆರೆಯಮೇಲಿನ ಸಂಗಾತಿಗಳಾದ ಜೇಡರ ಬಲೆ ಜಯಂತಿ, ಗಿರಿಕನ್ಯೆ ಜಯಮಾಲಾ, ಒಲವೆ ಜೀವನ ಲೆಕ್ಕಾಚಾರ ಖ್ಯಾತಿಯ ನಾಗತಿಹಳ್ಳಿ, ಮೆಚ್ಯೂರ್ಡ್ ವಿದೂಷಕ ದ್ವಾರಕೀಶ್ ಮತ್ತು ರಾಜಕಾರಣಿ -ನಿರ್ಮಾಪಕ ಬಿ.ಸಿ. ಪಾಟೀಲ್ ಕಂಗೊಳಿಸಿದರು.

  ಬ್ಲಾಗುಗಳಲ್ಲಿ ಕನ್ನಡ ಚಿತ್ರದ್ಯೋಮದವರನ್ನು ನಿಂದಿಸುವವರ ವಿರುದ್ಧ ನಾಗತಿಹಳ್ಳಿ ಚಂದ್ರು ವಾಗ್ದಾಳಿ ನಡೆಸುವುದನ್ನು ಹೊರತುಪಡಿಸಿದರೆ ಉಳಿದ ಗಣ್ಯರೆಲ್ಲ ವೀರೇಶ್ ಅವರ ಶ್ರಮವನ್ನು ಶ್ಲಾಘಿಸುವುದಕ್ಕೆ ತಮ್ಮ ಭಾಷಣಗಳನ್ನು ಬಹುತೇಕ ಮೀಸಲಿಟ್ಟರು. ತಮ್ಮ ವಿದೇಶ ಪ್ರವಾಸ ಅವಧಿಯಲ್ಲಿ ಕನ್ನಡ ಚಿತ್ರ ಪ್ರಪಂಚದ ಆಗುಹೋಗುಗಳನ್ನು ಚಿತ್ರಲೋಕದ ಮೂಲಕ ತಿಳಿದುಕೊಂಡ ಅನುಭವಗಳನ್ನು ನಾಗತಿಹಳ್ಳಿ ಹಾಗೂ ದ್ವಾರಕೀಶ್ ಬಿಚ್ಚಿಟ್ಟರು. ಕನ್ನಡ ಚಿತ್ರಗಳ ವಿದೇಶ ವ್ಯಾಪಾರದತ್ತ ಚಂದ್ರು ಗಮನಹರಿಸಿದರೆ ದ್ವಾರಕೀಶ್ ಅವರು ಅಮೆರಿಕಾದಲ್ಲಿ ಕನ್ನಡಚಿತ್ರ ಅಭಿಮಾನ ನೆನೆದು ಪುಳಕಗೊಂಡರು. ಚಿತ್ರಲೋಕ ನಡೆದುಬಂದ ದಾರಿಯನ್ನು ವೀರೇಶ್ ಆದ್ಯಂತ ವಿವರಿಸಿದರು.

  ಸಮಾರಂಭದಲ್ಲಿ ಕಣ್ಣಿಗೆ ಬಿದ್ದವರು : ಎಸ್.ನಾರಾಯಣ್, ಕೊಬ್ಬರಿ ಮಂಜು, ರಿಚರ್ಡ್ ಕ್ಯಾಸ್ಟಲಿನೊ, ಶ್ರೀಕಾಂತ್, ಮೋಹನ್, ರಾಮಮೂರ್ತಿ, ಥಾಮಸ್ ಡಿಸೋಜ, ವಿ. ಸನತ್ ಕುಮಾರ್, ಗುರುಕಿರಣ್, ಅನು ಪ್ರಭಾಕರ್, ದತ್ತಣ್ಣ, ಶಿವಧ್ವಜ್, ನೆನಪಿರಲಿ ಪ್ರೇಮ್, ಬಾಲಾಜಿ, ಕರಿಸುಬ್ಬು, ಯೋಗರಾಜ್ ಭಟ್, ಶಶಿಕುಮಾರ್, ಮಾಸ್ಟರ್ ಕಿಶನ್, ಲಹರಿ ವೇಲು, ಆನಂದ್ ಆಡಿಯೋ ಶ್ಯಾಮ್, ಸುಶ್ಮಾ, ಮೇಘನಾ, ಬಸವಾರೆಡ್ಡಿ, ಎನ್. ಆರ್. ಶೆಟ್ಟಿ ಮುಂತಾದವರು.

  (ದಟ್ಸ್ ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X