»   » ಮರಣಾನಂತರ ದೇಹದಾನಕ್ಕೆ ಶಿವಣ್ಣ ನಿರ್ಧಾರ

ಮರಣಾನಂತರ ದೇಹದಾನಕ್ಕೆ ಶಿವಣ್ಣ ನಿರ್ಧಾರ

Posted By:
Subscribe to Filmibeat Kannada

ತೆರೆಯ ಮೇಲೆ ಮಾಡಿದ್ದನ್ನು ನಿಜ ಜೀವನದಲ್ಲಿ ಮಾಡಿ ತೋರಿಸಿದ ನಟರು ವಿರಳ. ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವಿರಳರ ಸಾಲಿಗೆ ಇದೀಗ ಸೇರ್ಪಡೆಯಾಗಿದ್ದಾರೆ. ಮರಣಾನಂತರ ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗೆ ದಾನ ಮಾಡುತ್ತಿರುವುದಾಗಿ ಶಿವರಾಜ್ ಕುಮಾರ್ ಘೋಷಿಸಿದ್ದಾರೆ.

ವರನಟ ಡಾ.ರಾಜ್ ಕುಮಾರ್ ನೇತ್ರದಾನ ಮಾಡಿ ಇಡೀ ನಾಡಿಗೆ ಮಾದರಿಯಾದರು. ಅವರ ಪುತ್ರ ಶಿವರಾಜ್ ಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ತಮ್ಮ ದೇಹವನ್ನೇ ದಾನ ಮಾಡಲು ಇಚ್ಛಿಸಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ತಮ್ಮ ಈ ನಿರ್ಧಾರಕ್ಕೆ ಇದೀಗ ಪ್ರದರ್ಶನ ಕಾಣುತ್ತಿರು 'ಸುಗ್ರೀವ' ಚಿತ್ರವೂ ಕಾರಣ ಎನ್ನುತ್ತಾರೆ ಶಿವಣ್ಣ.

'ಸುಗ್ರೀವ' ಚಿತ್ರದಲ್ಲಿ ತಮ್ಮ ಮಗನ ಪ್ರಾಣ ಉಳಿಸಲು ಶಿವರಾಜ್ ಕುಮಾರ್ ಹೃದಯನ್ನು ದಾನ ಮಾಡುತ್ತಾರೆ. ಅವಯವ ದಾನದ ಬಗ್ಗೆ 'ಸುಗ್ರೀವ' ಚಿತ್ರದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಮರಣಾನಂತರ ತಮ್ಮ ದೇಹದಾನ ಮಾಡಲು 'ಸುಗ್ರೀವ' ಚಿತ್ರದ ಈ ಪಾತ್ರವೂ ಕಾರಣ ಎನ್ನ್ನುತ್ತಾರೆ ಶಿವರಾಜ್ ಕುಮಾರ್.

''ನೇತ್ರದಾನಕ್ಕಿಂತಲೂ ಶ್ರೇಷ್ಠವಾದುದು ದೇಹದಾನ. ವೈದ್ಯಕೀಯ ವಿದ್ಯಾರ್ಥಿಗಳು, ಪ್ರಯೋಗಗಳು, ಸಂಶೋಧನೆಗೆ ಉಪಯೋಗಕ್ಕೆ ಬರುವ ದೇಹ ಬೂದಿ, ಮಣ್ಣಾಗುವುದು ನನಗಿಷ್ಟವಿಲ್ಲ. ಮನಸಾರೆ ಒಪ್ಪಿ ತಮ್ಮ ದೇಹವನ್ನು ದಾನ ಮಾಡಲು ತೀರ್ಮಾನಿಸಿದ್ದಾಗಿ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಹಿರಿಯ ನಟ ದಿವಂಗತ ಲೋಕೇಶ್ ವೈದ್ಯಕೀಯ ಸಂಶೋಧನೆಗಾಗಿ ಮರಣಾನಂತರ ತಮ್ಮ ದೇಹವನ್ನು ದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರ ದೇಹ ಎಂ ಎಸ್ ರಾಮಯ್ಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾಗಿತ್ತು.

ಸತ್ತ ನಂತರ ನಮ್ಮ ದೇಹಗಳನ್ನು ಮಣ್ಣು ಮಾಡುವುದಕ್ಕಿಂತ ನಾಲ್ಕು ಜನಕ್ಕೆ ಉಪಯೋಗವಾಗುವುದಾದರೆ ಮರಣಾನಂತರ ನಾವ್ಯಾಕೆ ನಮ್ಮ ದೇಹದಾನ ಮಾಡಬಾರದು ಎನ್ನುತ್ತಾರೆ ಶಿವರಾಜ್ ಕುಮಾರ್. ಮಂಗಳವಾರ(ಮಾ.2) ದೇಹದಾನ ಮಾಡುವ ಬಗ್ಗೆ ಅಧಿಕೃತವಾಗಿ ಶಿವರಾಜ್ ಕುಮಾರ್ ಘೋಷಿಸಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada