»   » ರಾಧಿಕಾಗೆ ಮಗು ತಂದ ಸೌಭಾಗ್ಯ

ರಾಧಿಕಾಗೆ ಮಗು ತಂದ ಸೌಭಾಗ್ಯ

By: *ಚಿದಾನಂದ ಪಟೇಲ್
Subscribe to Filmibeat Kannada

ಬಹುಶಃ ಇತ್ತೀಚಿನ ದಶಕಗಳಲ್ಲಿ ಅತಿ ಹೆಚ್ಚಿನ ಸುದ್ದಿ ಮಾಡಿದ ನಟಿಯೆಂದರೆ ರಾಧಿಕಾ. Of course, ನಟನೆಯ ಕಾರಣಕ್ಕಾಗಿ ಅಲ್ಲ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ರಾಧಿಕಾ, ಕುಮಾರಸ್ವಾಮಿಯವರಿಗೆ ಹತ್ತಿರದವಳಾದಳು ಎಂಬ ಕಾರಣಕ್ಕಾಗಿ ಸುದ್ದಿಯಾದಳು. ಕುಮಾರಸ್ವಾಮಿಯವರು ಆಕೆಯ ಮನೆಗೆ, ಊರಿಗೆ,ತೋಟಕ್ಕೆ ಮುಗಿಬಿದ್ದು ಹೋಗುತ್ತಿದ್ದರು. ದೇವೇಗೌಡರ ಮನೆಯಲ್ಲಿ ರಂಪಾಟಗಳಾಗುತ್ತಿದ್ದವು. ಕಡೆಗೊಮ್ಮೆ “ಹೌದು, ನಾನು ಅಲ್ಲೇ ಹೋಗ್ತೀನಿ. ಈಗೇನು?" ಅಂತ ಮನೆಯ ತುಂಬಿದ ಸಭೆಯಲ್ಲಿ ಕುಮಾರಸ್ವಾಮಿ ತಿರುಗಿ ಬೀಳುವುದರೊಂದಿಗೆ ರಾಧಿಕಾ ಪ್ರಹಸನಕ್ಕೆ ಒಂದು ಹಂತದ ಮಟ್ಟಿಗೆ ತೆರೆ ಬಿದ್ದಂತಾಗಿತ್ತು.

ಆದರೆ ರಾಧಿಕಾ ಮತ್ತೆ ಸುದ್ದಿಗೆ ಬಂದಳು. ಆಗ ಆಕೆಯ ಮನೆಯಿದ್ದುದು ಬನಶಂಕರಿಯ ಕತ್ರಿಗುಪ್ಪೆಯಲ್ಲಿ. ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ರೇಡ್ಆಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಬಂದು ಹೋದ ಹತ್ತೇ ಹತ್ತು ನಿಮಿಷಗಳೊಳಗಾಗಿ ಈ ರೇಡ್ ನಡೆದಿತ್ತು. ಆಸೆಯಿಂದ ಹೋದ ಮುಖ್ಯಮಂತ್ರಿಗಳು ಇನ್ನೂ ಒಂದ್ಹತ್ತು ನಿಮಿಷ ರಾಧಿಕಾಳ ಮನೆಯಲ್ಲೇ ಇರುತ್ತಿದ್ದರೋ ಏನೋ? ರೇಡು ಬೀಳಲಿದೆ ಎಂಬ ಸುಳಿವು ಹಿಡಿದ ಇಂಟೆಲಿಜೆನ್ಸ್ ಅಧಿಕಾರಿ ಕಿಶೋರಚಂದ್ರ,ಕುಮಾರಸ್ವಾಮಿಯವರನ್ನು ಅಲರ್ಟ್ ಮಾಡಿ ಆ ಮನೆಯಿಂದ ಎದ್ದು ಬರುವಂತೆ ಮಾಡಿದ್ದರು. ಹಾಗೆ ಮುಖ್ಯಮಂತ್ರಿಗಳು ಎದ್ದು ಹೋದ ಮನೆಯಲ್ಲಿ ಆದಾಯತೆರಿಗೆ ಅಧಿಕಾರಿಗಳಿಗೆ ಸಿಕ್ಕಿದ್ದು ಬರೋಬ್ಬರಿ ಮೂರೂವರೆ ಕೋಟಿ ರುಪಾಯಿ ಕ್ಯಾಷು.

ಮುಂದೆ ಅದಕ್ಕೆ ಲೆಕ್ಕ ಕೊಡಲಾಗದೆ ರಾಧಿಕಾ ಮತ್ತು ಅವಳ ತಂದೆ ಕಬಾಬುದೇವರಾಜ್ ವಿಲಗುಟ್ಟಿ ಹೋದರು. ವಿವರಣೆ ಸಿಕ್ಕದ ಹಣಕ್ಕೆ ಸಮಾ ಟ್ಯಾಕ್ಸ್ ಜಡಿದು ಉಳಿದ ಹಣವನ್ನು ರಾಧಿಕಾಗೆ ತೆರಿಗೆ ಅಧಿಕಾರಿಗಳು ಹಿಂತಿರುಗಿಸಿದ್ದರು. ಆ ಮೊತ್ತವನ್ನು ಬಿಡಿಸಿಕೊಂಡು ಬರಲು ಖುದ್ದಾಗಿ ರಾಧಿಕಾ ಕೇಂದ್ರ ತೆರಿಗೆ ಕಚೇರಿಗೆ ಹೋಗಿದ್ದಳು. ಟೀವಿ ಛಾನಲ್‌ಗಳ ಅರಿ ಭಯಂಕರ ವರದಿಗಾರರ್ಯಾರಿಗೂ ಸುಳಿವೂ ಹತ್ತಿರಲಿಲ್ಲ. ಇವತ್ತು ಕೆಲವು ಮೂಲಗಳು ಹೇಳುವ ಪ್ರಕಾರ ರಾಧಿಕಾ ಎಂಬ ಮಾಜಿ ನಟಿ ಮುನ್ನೂರು ಕೋಟಿ ರುಪಾಯಿಗಳಿಗೆ ಬಾಳುತ್ತಾಳೆ. ಆಕೆ ನಟಿಸಿದ
ಸಿನೆಮಾಗಳೆಲ್ಲದರಿಂದ ಗಳಿಸಿದ ಹಣ ಗೋರಿ ಗುಡ್ಡೆ ಹಾಕಿದರೂ, ಹತ್ತು ಲಕ್ಷ ರುಪಾಯಿಯಾಗುವುದಿಲ್ಲ.

ಇಷ್ಟಾಗಿ, ಕುಮಾರಸ್ವಾಮಿಯವರು ತೀರ ಹೆಣ್ಣು ಕಾಣದ ಗಾವಿಲರೇನಲ್ಲ. ಸ್ವತಃ ಸಿನೆಮಾಗಳ ನಿರ್ಮಾಪಕರೂ, ವಿತರಕರೂ ಆದ ಅವರಿಗೆ ಚಿತ್ರನಟಿಯರೂ ಅಪರಿಚಿತರಲ್ಲ. ವಿದೇಶಗಳಿಗೆ ಮೇಲಿಂದ ಮೇಲೆ ಹೋಗಿ ಬಂದ ಕುಮಾರಸ್ವಾಮಿ ಅಲ್ಲಿ ಜಪ ಮಾಡಿ ಹಿಂತಿರುಗಿದರು ಅಂದರೆ, ಸಾಕ್ಷಾತ್ತು ದೇವೇಗೌಡರೂ ನಂಬುವುದಿಲ್ಲ.ಇಷ್ಟಿದ್ದರೂ ಕುಮಾರಸ್ವಾಮಿ ಉಳಿದೆಲ್ಲರನ್ನೂ ಬಿಟ್ಟು ರಾಧಿಕಾಗೆ ಫಿಕ್ಸ್ ಆದದ್ದೇಕೆ ಎಂಬುದು ಪ್ರಶ್ನೆ. ರಾಧಿಕಾಳನ್ನು ಅನಿಲ್‌ಲಾಡ್ ಪರಿಚಯ ಮಾಡಿಕೊಡುವ ಹೊತ್ತಿಗೆ, ರಾಧಿಕಾ ರಾಜಕೀಯ ವಲಯದಲ್ಲೂ ಸಾಕಷ್ಟು ಓಡಾಡಿದ್ದಳು. ಆಕೆಯ ಮೂಲ ಗಂಡ ರತನ್ ಕುಮಾರ್ ಅಷ್ಟು ಹೊತ್ತಿಗಾಗಲೇ ಹೃದಯಾಘಾತದಿಂದಾಗಿ ಸತ್ತು ಹೋಗಿದ್ದ. ಆದರೆ ಕುಮಾರ ಸ್ವಾಮಿಯವರನ್ನು ಇಂಪ್ರೆಸ್ ಮಾಡಿದ್ದು, ರಾಧಿಕಾಳ ಪ್ರೀತಿ.

ಅಧಿಕಾರದಲ್ಲಿದ್ದ ಕುಮಾರಸ್ವಾಮಿ ಸರಿಸುಮಾರು ಇಪ್ಪತ್ತೈದು ತಿಂಗಳು ವಿಪರೀತ hectic ಅನ್ನಿಸುವಂಥ ರೀತಿಯಲ್ಲಿ ರಾಜಕಾರಣ ಮಾಡಿಬಿಟ್ಟರು. ಧರಂಸಿಂಗ್‌ರನ್ನು ಕೆಡವಿ, ಸಿದ್ರಾಮಯ್ಯನನ್ನು ಮೂಲೆಗೊತ್ತಿ, ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡು ರಾತ್ರೋರಾತ್ರಿ ಅವರು ಅಧಿಕಾರಕ್ಕೆ ಬಂದದ್ದಿದೆಯಲ್ಲ? ಕರ್ನಾಟಕದ ಮಟ್ಟಿಗೆ ಅದು ಇತಿಹಾಸವೇ ಸರಿ. ಮುಖ್ಯಮಂತ್ರಿಯಾದ ಮೇಲೆ ಅವರು ತಮ್ಮ ಸುತ್ತ ಇಟ್ಟುಕೊಂಡದ್ದು ಯಾರು ಯಾರನ್ನ? ನೀವೇ ನೋಡಿ. ಮನುಷ್ಯ ಸಹಜ ಸ್ಪಂದನೆಗಳೇ ಇಲ್ಲದ ಕುರುಗೋಡು ಶಾಸಕ ಸೂರ್ಯನಾರಾಯಣ ರೆಡ್ಡಿ, ಅರೆಬೆಂದ ಬಿರಿಯಾನಿಯಂತಹ ಜಮೀರ್ ಅಹ್ಮದ್, ದುಡ್ಡೇ ಎಲ್ಲವನ್ನೂ ಕೊಳ್ಳುತ್ತದೆ ಅಂದುಕೊಂಡಿರುವ ಅನಿಲ್‌ಲಾಡ್, ಬಫೂನ್ ಚೆನ್ನಿಗಪ್ಪ, ಸ್ವತಂತ್ರ ಅಭಿಪ್ರಾಯವಿಲ್ಲದ ಚೆಲುವರಾಯ ಸ್ವಾಮಿ-ಬರೀ ಇಂಥವರೇ.

ಯಾವಾಗ ಒಂದು ಕಡೆ ರಾಜಕಾರಣವೆಂಬುದು ತುಂಬ ಶಕ್ತಿ, ಶ್ರದ್ಧೆಗಳನ್ನು ಬೇಡ ತೊಡಗಿತೋ,ಯಾವಾಗ ಅದು ವಿಪರೀ demanding ಆಯಿತೋ, ಸಹಜವಾಗಿಯೇ ಕುಮಾರಸ್ವಾಮಿ ಮನುಷ್ಯ ಪ್ರೇಮದ ಕಡೆಗೆ ವಾಲಿದರು. ಆ ಹೊತ್ತಿಗೆ ಸರಿಯಾಗಿ ಕೈಗೆಟುಕಿದವಳು ರಾಧಿಕಾ. ಗಮನಿಸಬೇಕಾದ ವಿಷಯವೆಂದರೆ ಆ ಹುಡುಗಿ ಕೂಡ ಒಮ್ಮೆ ಒಸಗೆಯಾದ ಮೇಲೆ ಮತ್ತೆ ಕುಮಾರಸ್ವಾಮಿಯವರನ್ನು ಬಿಟ್ಟು ಬೇರೆಡೆಗೆ ನೋಡಲಿಲ್ಲ. ಈಗಲೂ ಕುಮಾರಸ್ವಾಮಿಯವರಿಗೆ ಅರ್ಧಗಂಟೆಗೊಂದು ಫೋನು ಮಾಡದಿದ್ದರೆ ರಾಧಿಕಾಗೆ ಸಮಾಧಾನವಿಲ್ಲ. 'ಊಟ ಆಯಿತಾ? ರೆಸ್ಟ್ ತಗೊಂಡ್ರಾ? ಮಾತ್ರೆ ತಗೊಂಡ್ರಾ?" ಮುಂತಾದ ಆರೈಕೆಗಳು ಕುಮಾರಸ್ವಾಮಿಯವರನ್ನು ಪೂರ್ತಿಯಾಗಿ ಗೆದ್ದಿವೆ.

ಆಸ್ಪತ್ರೆಯ ಮೂಲಗಳ ಪ್ರಕಾರ ವೈದ್ಯರು ಹೆರಿಗೆಯ ಡೇಟು ಕೊಟ್ಟಿದ್ದು ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ. ಆದರೆ ನವೆಂಬರ್ 23ರಂದೇ ನೋವು ಕಾಣಿಸಿಕೊಂಡಿದ್ದರಿಂದ ತಂದೆ ದೇವರಾಜ್ ಮತ್ತು ತಾಯಿ ಸುರೇಖಾ 'ಕ್ರೇಡಲ್"ಗೆ ಬೆಳಗ್ಗೆ ಹತ್ತು ಗಂಟೆಗೇ ಕರೆದುಕೊಂಡು ಬಂದಿದ್ದಾರೆ. ಮಧ್ಯಾಹ್ನ ಮೂರುಗಂಟೆಯ ಸುಮಾರಿಗೆ ಖುದ್ದು ಕುಮಾರಸ್ವಾಮಿಯವರೇ ತಮ್ಮ ಆಪ್ತ ಸಹಾಯಕನೊಂದಿಗೆ ಆಸ್ಪತ್ರೆಗೆ ಹೋಗಿದ್ದಾರೆ. ಎರಡನೇ ಫ್ಲೋರ್‌ನಲ್ಲಿ ರಾಧಿಕಾಳ ತಂದೆ ತಾಯಿಯೊಂದಿಗೆ ಶತಪಥ ಹಾಕುತ್ತ ತಿರುಗಿದ್ದಾರೆ. ಮೂರೂವರೆಗೆ ಮಗಳು ಹುಟ್ಟಿದ ಸುದ್ದಿ ಕೇಳಿ ನಿರಾಳವಾಗಿದ್ದಾರೆ.

ಆ ನಂತರ ಅವರು ಆಸ್ಪತ್ರೆಯಲ್ಲಿದ್ದುದು ಇಪ್ಪತ್ತೈದು ನಿಮಿಷ. ರಾಧಿಕಾಳನ್ನು ಮಾತನಾಡಿಸಿ, ಮಗುವನ್ನು ನೋಡಿಕೊಂಡು, ವೈದ್ಯರೊಂದಿಗೆ ಚರ್ಚಿಸಿ ಆ ನಂತರ ಹೊರಟು ಹೋಗಿದ್ದಾರೆ.ಅವರು 'ಕ್ರೇಡಲ್"ನಲ್ಲಿದ್ದಷ್ಟು ಹೊತ್ತೂ, ಅಂದರೆ ಸುಮಾರು ಐವತ್ತೈದು ನಿಮಿಷ ಆಸ್ಪತ್ರೆಯೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ರಾಧಿಕಾಗೆ ಗಂಡು ಮಗು ಆದರೆ ದೇವೇಗೌಡರು ಮತ್ತೆ ಪ್ರಧಾನಿಯಾಗುತ್ತಾರೆ ಅಥವಾ ಕುಮಾರಸ್ವಾಮಿಗೆ ಅರವತ್ತು ವರ್ಷ ತುಂಬಿದಾಗ ಅವರು ಪ್ರಧಾನಿಯಾಗುತ್ತಾರೆ ಎಂದು ಜ್ಯೋತಿಷಿಗಳು ಹೇಳಿದ್ದಾರಂತೆ ಎಂಬುದೊಂದು ಸುದ್ದಿಯಿತ್ತು. ಈಗ ಹೆಣ್ಣು ಮಗು ಆಗಿದೆ.

“ಹೋಗ್ಲಿ ಬಿಡ್ರೀ. ಇವತ್ತಿನ ಪರಿಸ್ಥಿತಿ ನೋಡ್ತಾ ಇದ್ರೆ, ದೇವೇಗೌಡರು ಪ್ರಧಾನಮಂತ್ರಿಯಾಗೋ ಛಾನ್ಸು ಕಾಣ್ತಿಲ್ಲ. ಈಗ ಹೆಣ್ಣು ಮಗು ಆಗಿದೆ. ಕಡೇ ಪಕ್ಷ ನಮ್ಮ ಗೌಡರು ರಾಷ್ಟ್ರಪತಿ ಆಗಲಿ" ಅಂತ ಕುಮಾರಣ್ಣನ ಆತ್ಮೀಯರೇ ಒಬ್ಬರು ತಮಾಷೆ ಮಾಡುತ್ತಿದ್ದರು. ಆದರೆ ಒಂದು ಸುದ್ದಿ ಮೂಲದ ಪ್ರಕಾರ, ತಮಗೆ ಆಗಲಿರುವುದು ಹೆಣ್ಣು ಮಗುವೇ ಅಂತ ದಂಪತಿಗಳಿಬ್ಬರಿಗೂ ಮುಂಚೆಯೇ ಗೊತ್ತಿತ್ತು. ಮೊದಲೇ ಅವರು ಭ್ರೂಣ ಪರೀಕ್ಷೆ ಮಾಡಿಸಿದ್ದರು. ಅವರಿಬ್ಬರಿಗೂ ಹೆಣ್ಣುಮಗು ಆದ ಬಗ್ಗೆ ಬೇಸರವೂ ಇಲ್ಲ. ಇದೆಲ್ಲದರ ಮಧ್ಯೆ ಯಥಾಪ್ರಕಾರ ಜಾತಕ ಜ್ಯೋತಿಷಗಳ ಮಾತು ಶುರುವಾಗಿದೆ.

ಜ್ಯೋತಿಷಿಗಳ ಪ್ರಕಾರ ಮಗುವಿನದು ಮೇಷ ಲಗ್ನ. ಲಗ್ನದಿಂದ ಮೂರನೆಯ ಮನೆಯಲ್ಲಿ ಕೇತು ಇದ್ದು ನಾಲ್ಕನೆಯ ಮನೆಗೆ ಕುಜ ಪ್ರವೇಶಿಸಿದ್ದಾನೆ. ಆರನೇ ಮನೆಯಲ್ಲಿ ಶನಿ, ಏಳನೇ ಮನೆಯಲ್ಲಿ ಶುಕ್ರ, ಎಂಟನೇ ಮನೆಯಲ್ಲಿ ರವಿ-ಬುಧರಿದ್ದು, ಒಂಬತ್ತನೇ ಮನೆಯಲ್ಲಿ ರಾಹು ನೆಲೆಸಿದ್ದಾನೆ. ಹತ್ತನೇ ಮನೆಯಲ್ಲಿ ಚಂದ್ರ-ಗುರು ಒಟ್ಟಿಗೇ ಇದ್ದಾರೆ. ಈ ಜಾತಕದ ಪ್ರಕಾರ ಮಗುವಿಗೆ ಅಪೂರ್ಣ ಕಾಳಸರ್ಪ ಯೋಗವಿದೆ. ಮಗುವಿನ ನವಾಂಶ ಕುಂಡಲಿ ಚೆನ್ನಾಗಿದೆ. ಜ್ಯೋತಿಷಿಗಳ ಪ್ರಕಾರ ಮಗು ಹುಟ್ಟಿದ ಘಳಿಗೆ ಚೆನ್ನಾಗಿದೆ.

ರಾಶಿ ಕುಂಡಲಿ, ನವಾಂಶ ಕುಂಡಲಿ ಪ್ರಕಾರ ಶ್ರವಣ ನಕ್ಷತ್ರ, ಮಕರ ರಾಶಿ, ಮೇಷ ಲಗ್ನವಿರುವುದರಿಂದ ಮಗುವಿನ ಭವಿಷ್ಯ ಉಜ್ವಲವಾಗಿದೆ. ಲಗ್ನದ ಆರನೇ ಮನೆಯಲ್ಲಿ ಶನಿ ಇದ್ದರೂ ಮಗುವಿಗೆ ಅದು ಬಾಧಕರವಲ್ಲ. ಯಾವುದೇ ತೊಂದರೆ ತಾಪತ್ರಯಗಳಿಲ್ಲ. ಏಕೆಂದರೆ, ಮಗುವಿಗೆ ಚಂದ್ರ ದೆಶೆ ಮತ್ತು ಶುಕ್ರ ಭುಕ್ತಿ ನಡೆಯುತ್ತಿದೆ. ಹೀಗಾಗಿ ತೊಂದರೆಯಿಲ್ಲ.ಅಪೂರ್ಣ ಕಾಳಸರ್ಪಯೊಗದಿಂದಲೂ ಮಗುವಿಗೆ ತೊಂದರೆಯಿಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಒಳ್ಳೆಯ ಭವಿಷ್ಯವಿದ್ದು, ಮಗುವು ಉನ್ನತ ಸ್ಥಾನಮಾನ ಪಡೆಯುತ್ತದೆ ಅನ್ನುತ್ತಾರೆ. ಈ ಮಗುವಿನ ಜನನದಿಂದಾಗಿ ತಂದೆ ತಾಯಿಗಳಿಗೂ ಒಳ್ಳೆಯದಾಗುತ್ತದೆಯಂತೆ.

(ಸ್ನೇಹ ಸೇತು : ಹಾಯ್ ಬೆಂಗಳೂರ್ )

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada