»   » ಬಿಗಿ ಪೊಲೀಸ್ ಭದ್ರತೆಯಲ್ಲಿ ಸುದೀಪ್, ದ್ವಾರ್ಕಿ ಚಿತ್ರ

ಬಿಗಿ ಪೊಲೀಸ್ ಭದ್ರತೆಯಲ್ಲಿ ಸುದೀಪ್, ದ್ವಾರ್ಕಿ ಚಿತ್ರ

Posted By:
Subscribe to Filmibeat Kannada

ಬಿಗಿ ಪೊಲೀಸ್ ಭದ್ರತೆಯಲ್ಲಿ ಸುದೀಪ್ ಅಭಿನಯದ ಹೊಚ್ಚ ಹೊಸ ಚಿತ್ರ ಸೆಟ್ಟೇರಿದೆ. ಐವತ್ತಕ್ಕೂ ಅಧಿಕ ಮಂದಿ ಪೊಲೀಸರ ರಕ್ಷಣೆಯಲ್ಲಿ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ರಾಜ ಮಹಾರಾಜನ ಗೆಟಪ್ ನಲ್ಲಿದ್ದ ಸುದೀಪ್ ಗಮನ ಸೆಳೆದರು. ಸುದೀಪ್ ಪೋಷಕರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಟೈಟಲ್ ಕಾರ್ಡ್ ನಲ್ಲಿ ಚಿತ್ರದ ಹೆಸರು 'ಪ್ರೊಡಕ್ಷನ್ ನಂ 47' ಎಂದಿತ್ತು. ಆದರೆ ಮಾಧ್ಯಮಗಳಲ್ಲಿ ಬಂದಂತೆ ಚಿತ್ರದ ಶೀರ್ಷಿಕೆ 'ವಿಷ್ಣುವರ್ಧನ' ಎಂದಿರಲಿಲ್ಲ. ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಸುದೀಪ್ ಮಧ್ಯಸ್ಥಿಕೆ ವಹಿಸಲಿದ್ದಾರೆ. ಭಾರತಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರೊಂದಿಗೆ ಒಟ್ಟಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಸುದೀಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ನಾಲ್ಕು ಗೋಡೆಗಳ ನಡುವೆ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ. ಡಾ.ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಹೆಸರುಗಳು ಕನ್ನಡ ಚಿತ್ರರಂಗದ ಆಧಾರ ಸ್ತಂಭಗಳಿದ್ದಂತೆ. ನಾನು ಪ್ರೀತಿಸುವ, ಆರಾಧಿಸುವ 'ಅಮ್ಮ' ಭಾರತಿ ವಿಷ್ಣುವರ್ಧನ್ ಅವರಿಗೆ ಅವಮಾನ ಆಗುವಂತೆ ನಡೆದುಕೊಳ್ಳುವುದಿಲ್ಲ" ಎಂದು ಸುದೀಪ್ ಹೇಳಿದ್ದಾರೆ.

ಸುದೀಪ್ ಜೊತೆ ಅನ್ನಮಯ್ಯ, ರಾಮದಾಸು ರೀತಿಯ ಭಕ್ತಿ ಪ್ರಧಾನ ಚಿತ್ರಗಳನ್ನು ಮಾಡಬೇಕೆಂದಿದ್ದೇನೆ-ದ್ವಾರ್ಕಿ
ದ್ವಾರಕೀಶ್ ಅವರು ಮಾತನಾಡುತ್ತಾ, ವಿಷ್ಣುವರ್ಧನ್ ಹೇಗೆ ಒಬ್ಬ ಉತ್ತಮ ಕಲಾವಿದನೋ ಸುದೀಪ್ ಸಹ ಅಷ್ಟೆ. ಸುದೀಪ್ ಜೊತೆ ಅನ್ನಮಯ್ಯ, ರಾಮದಾಸು ರೀತಿಯ ಭಕ್ತಿ ಪ್ರಧಾನ ಚಿತ್ರಗಳನ್ನು ಮಾಡಬೇಕೆಂದಿದ್ದೇನೆ. ಕಮಲ ಹಾಸನ್ ಅವರ 'ಸ್ವಾತಿ ಮುತ್ಯಂ' ಚಿತ್ರವನ್ನು ಕನ್ನಡದಲ್ಲಿ ಸುದೀಪ್ ಮಾಡುವ ಮೂಲಕ ತಾವೊಬ್ಬ ಅಪ್ಪಟ ಕಲಾವಿದ ಎಂಬುದನ್ನು ತೋರಿಸಿದ್ದಾರೆ ಎಂದರು.

'ಪ್ರೊಡಕ್ಷನ್ ನಂಬರ್ 47'ರಲ್ಲಿ ನಿರ್ಮಾಣದ ಜೊತೆಗೆ ದ್ವಾರಕೀಶ್ ನಟಿಸುತ್ತಿದ್ದಾರೆ. ಐದು ವರ್ಷಗಳ ಬಳಿಕ ದ್ವಾರಕೀಶ್ ನಿರ್ಮಿಸುತ್ತಿರುವ ಚಿತ್ರವಿದು. ಕನ್ನಡ ಚಿತ್ರರಂಗಕ್ಕೆ ಉತ್ಕೃಷ್ಟ ಚಿತ್ರಗಳನ್ನು ನೀಡಬೇಕು ಎಂಬುದು ನನ್ನ ಆಸೆ. ಯಾವುದೇ ಕಾರಣಕ್ಕೂ ಚಿತ್ರ ನಿರ್ಮಾಣವನ್ನು ನಾನು ನಿಲ್ಲಿಸುವುದಿಲ್ಲ ಎಂದು ದ್ವಾರಕೀಶ್ ಹೇಳಿದರು.

ಚಿತ್ರದಲ್ಲಿ ಸೋನು ಸೂದ್ ಖಳನಟನಾಗಿ ಸುದೀಪ್ ಬುದ್ಧಿವಂತ ಯುವಕನಾಗಿ ಕಾಣಿಸಲಿದ್ದಾರೆ. ಪ್ರಿಯಾಮಣಿ ಪಾತ್ರ ತಮಿಳಿನ 'ಪಡಿಯಪ್ಪ' ಪಾತ್ರಕ್ಕೆ ಹತ್ತಿರವಾಗಿರುತ್ತದೆ. ಚಿತ್ರದಲ್ಲಿ ಮತ್ತೊಬ್ಬ ನಾಯಕಿಯಾಗಿ ಭಾವನಾ ಕಾಣಿಸಲಿದ್ದಾರೆ. ಮೊದಲ ಹಂತದ ಚಿತ್ರೀಕರಣ ಆಗಸ್ಟ್ 5 ರಿಂದ 15 ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿದೆ. ಈ ಹಂತದಲ್ಲಿ ಸೋನು ಸೂದ್ ಭಾಗದ ಚಿತ್ರೀಕರಣ ಮುಕ್ತಾಯವಾಗಲಿದೆ.

ಸದ್ಯಕ್ಕೆ 'ಕನ್ವರ್ ಲಾಲ್' ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮುಗಿದ ಬಳಿಕ ಪ್ರೊಡಕ್ಷನ್ ನಂಬರ್ 47ರ ಚಿತ್ರೀಕರಣದಲ್ಲಿ ಸುದೀಪ್ ಭಾಗವಹಿಸಲಿದ್ದಾರೆ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪಿ ಕುಮಾರ್. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಕೆ ಎಸ್ ರವಿಕುಮಾರ್ ಮತ್ತು ಕೆ ಭಾಗ್ಯರಾಜ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ.

ಮೊದಲು ಲೂಸ್ ಮಾದ ಖ್ಯಾತಿಯ ಯೋಗೀಶ್ ಗೆ ಈ ಚಿತ್ರದ ಕತೆಯನ್ನು ಹೇಳಲಾಗಿತ್ತು. ಬಳಿಕ ದ್ವಾರಕೀಶ್ ಬಳಿಗೆ ಈ ಚಿತ್ರ ಬಂದಿದೆ. ಮೂರು ತಿಂಗಳ ಹಿಂದಷ್ಟೆ ಕತೆ ಕೇಳಿದ ಸುದೀಪ್ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಲು ಸೂಚಿಸಿದ್ದರು ಎಂದು ಪಿ ಕುಮಾರ್ ತಿಳಿಸಿದ್ದಾರೆ. ರಾಜರತ್ನಂ ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. ಚಿತ್ರವನ್ನು ಡಿಸೆಂಬರ್ 24ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada