»   »  ಕರ್ನಾಟಕಕ್ಕೆ ಬಂತು ಮೊದಲ ಡಿಐ ಸ್ಟುಡಿಯೋ

ಕರ್ನಾಟಕಕ್ಕೆ ಬಂತು ಮೊದಲ ಡಿಐ ಸ್ಟುಡಿಯೋ

Subscribe to Filmibeat Kannada
Producer K Manju
ಇಂದಿನ ದಿನಗಳಲ್ಲಿ ಚಿತ್ರವೊಂದರ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ, ಚಿತ್ರವನ್ನು ಇನ್ನಷ್ಟು ವರ್ಣಮಯ ಮಾಡುವುದಕ್ಕೆ ಡಿ.ಐ(ಡಿಜಿಟಲ್ ಇಂಟರ್ ಮೀಡಿಯಟ್) ಅತ್ಯವಶ್ಯಕ. ಆದರೆ ಚಿತ್ರವೊಂದರ ಡಿ.ಐ ಮಾಡಿಸುವುದಕ್ಕಾಗಿ ಕನ್ನಡದ ನಿರ್ಮಾಪಕರು ಹಾಗೂ ನಿರ್ದೇಶಕರು ಚೆನೈ, ಹೈದರಾಬಾದ್ ಅಥವಾ ಮುಂಬೈಗೆ ಹೋಗಬೇಕಾಗಿತ್ತು ಅಲ್ಲಿ ದಿನಗಟ್ಟಲೆ ಕಾದು ತಮ್ಮ ಚಿತ್ರಕ್ಕೆ ಡಿ.ಐ ಮಾಡಿಸಬೇಕಾಗಿತ್ತು. ಆದರೆ ಈಗ ಈ ಸಮಸ್ಯೆ ಗೆ ಪರಿಹಾರ ಸಿಕ್ಕಿದೆ.

ಆ ಕೊರತೆಯನ್ನು ನೀಗಿಸುವತ್ತ ಶ್ರೀಚಾಮುಂಡೇಶ್ವರಿ ಸ್ಟುಡಿಯೋ ಕಾಲಿಟ್ಟಿದೆ. ಕಳೆದ ಕೆಲವು ದಶಕಗಳಿಂದ ರೆಕಾರ್ಡಿಂಗ್, ಎಡಿಟಿಂಗ್, ಡಬ್ಬಿಂಗ್, ರೀ-ರೆಕಾರ್ಡೀಂಗ್ ಮುಂತಾದ ಹಲವು ಸೌಲಭ್ಯಗಳನ್ನು ಕನ್ನಡ ಚಿತ್ರರಂಗಕ್ಕೆ ಚಾಚುತ್ತಿದ ಚಾಮುಂಡೇಶ್ವರಿ ಸ್ಟುಡಿಯೋ ಇದೇ ಮೊದಲ ಬಾರಿಗೆ ಡಿ.ಐ ಸ್ಟುಡಿಯೋ ಪ್ರಾರಂಭಿಸುವುದರ ಮೂಲಕ ಹೊಸಹೊಸ ತಂತ್ರಜ್ಞಾನಕ್ಕೆ, ತನ್ನನ್ನು ತೆರೆದುಕೊಂಡಿದೆ.

ಈ ನಿಟ್ಟಿನಲ್ಲಿ ಚಾಮುಂಡೇಶ್ವರಿ ಸ್ಟೂಡಿಯೋ ಗ್ರೀನ್‌ಪೆಪ್ಪರ್ ಎಫೆಕ್ಟ್ ಎಂಬ ಸಂಸ್ಥೆಯ ಕೈ ಜೋಡಿಸಿದೆ. ಅಷ್ಟೇ ಅಲ್ಲ, ಆಟೋಡೆಸ್ಕ್ ಸ್ಮೋಕ್ ಎಂಬ ಹೊಸ ತಂತ್ರಜ್ಞಾನವನ್ನು ಅಳವಡಿಸಿದೆ. ಈ ತಂತ್ರಜ್ಞಾನದ ಮೂಲಕ ಕಲರ್ ಕರೆಕ್ಷನ್, ವಿಷ್ಯುಯಲ್ ಎಫೆಕ್ಟ್ ಮತ್ತು ಡಿ.ಐ ಸೌಲಭ್ಯಗಳನ್ನು ಬೇರೆ ರಾಜ್ಯಗಳಿಗೆ ಹೋಗದೆಯೇ ಇಲ್ಲೇ ಮಾಡಿಸಬಹುದು. ಬರೀ ಚಲನಚಿತ್ರ ಮಾತ್ರವಲ್ಲ, ಜಾಹೀರಾತುಗಳು, ಟ್ರೈಲರ್, ಪ್ರೋಮೋಗಳನ್ನು ಸಹ ಅಂದಗಾಣಿಸಬಹುದು.

ತಂತ್ರಜ್ಞಾನ ಹೇಗೆಯೇ ಇದ್ದರೂ, ಅದನ್ನು ಚೆನ್ನಾಗಿ ನಿರ್ವಹಿಸಬಲ್ಲವರು ಮುಖ್ಯ ಅಲ್ಲವೇ? ಅದಕ್ಕಾಗಿ ಹೈದರಾಬಾದ್‌ನ ಡಿ.ಐ ಸ್ಟೂಡಿಯೋಗಳಿಂದ ನುರಿತ ತಂತ್ರಜ್ಞರನ್ನು ಚಾಮುಂಡೇಶ್ವರಿ ಸ್ಟೂಡಿಯೋ ಆಡಳಿತ ಮಂಡಳಿ ಕರೆತಂದಿದೆ. ಆ ತಂತ್ರಜ್ಞರು ಕನ್ನಡ ಚಿತ್ರಗಳನ್ನು ಇನ್ನಷ್ಟು ಚೆಂದಗಾಣಿಸುವುದರಲ್ಲಿ ಮುಂದಿನ ದಿನಗಳಲ್ಲಿ ಶ್ರಮವಹಿಸಲಿದ್ದಾರೆ ಎಂದು ಆಡಳಿತ ಮಂಡಳಿಯ ಮುಖ್ಯಸ್ಥೆ ರಾಜಲಕ್ಷ್ಮೀ ತಿಳಿಸಿದರು. ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಅತ್ಯವಶ್ಯಕವಾಗಿರುವ ಅನಿಮೇಶನ್ ತಂತ್ರಜ್ಞಾನವನ್ನು ಸಹ ಆರಂಭಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಡಿ.ಐ ಸ್ಟೂಡಿಯೋವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ನಿರ್ಮಾಪಕ ಕೆ.ಮಂಜು "ಕುಪ್ಪುಸ್ವಾಮಿ ಅವರ ಕುಟುಂಬ ಹಾಗೂ ಚಾಮುಂಡೇಶ್ವರಿ ಸ್ಟುಡಿಯೋ ಕನ್ನಡ ಚಿತ್ರರಂಗದಲ್ಲಿ ದುಡಿದ ಹಣವನ್ನು ಚಿತ್ರರಂಗಕ್ಕೆ ಸುರಿಯುತ್ತಾ ಬಂದಿದೆ. ಒಂದೇ ಸೂರಿನಡಿಯಲ್ಲಿ ರೆಕಾರ್ಡಿಂಗ್, ಎಡಿಟಿಂಗ್, ಡಬ್ಬಿಂಗ್, ರೀ-ರೆಕಾರ್ಡಿಂಗ್ ಮುಂತಾದ ಸೌಲಭ್ಯಗಳನ್ನು ಒದಗಿಸಿದೆ. ಈಗ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಡಿ.ಐ ಸ್ಟುಡಿಯೋ ನಿರ್ಮಿಸುವ ಮೂಲಕ, ನಿರ್ಮಾಪಕರು ದೂರದೂರುಗಳಿಗೆ ಹೋಗುವುದನ್ನು ತಪ್ಪಿಸಿದೆ. ಇಲ್ಲೇ ಅತ್ಯುನ್ನತ ಹಾಗೂ ಗುಣಮಟ್ಟದ ಸೌಲಭ್ಯ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿದೆ. ಕನ್ನಡ ನಿರ್ಮಾಪಕರು ಹಾಗೂ ನಿರ್ದೇಶಕರು ಇದರ ಸದುಪಯೋಗ ಪಡೆಯಬೇಕೆಂದು ಪ್ರಾರ್ಥಿಸುತ್ತೇನೆ" ಎಂದು ಮನವಿ ಮಾಡಿದರು.
(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada