For Quick Alerts
  ALLOW NOTIFICATIONS  
  For Daily Alerts

  ಕಬಡ್ಡಿ ಕಿಶೋರ್ ಮೀಸೆಯಂಚಿನಲ್ಲಿ ಗೆಲುವಿನ ನಗು

  By * ಜಯಂತಿ
  |

  ವರ್ಷದ ಹಿಂದಿನ ಮಾತು. ನಟ ಕಿಶೋರ್ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಬುಲೆಟ್‌ನಲ್ಲಿ ಸೀದಾ ಕಂಠೀರವ ಸ್ಟುಡಿಯೋಗೆ ಬಂದರು. ಅವರಿಗೆ ಸಂಬಂಧಿಸಿಲ್ಲದ ಬೇರೆ ಯಾವುದೋ ಸಿನಿಮಾ ಮುಹೂರ್ತ. ಚೆನ್ನೈನಿಂದ ನೇರವಾಗಿ ಮನೆಗೂ ಹೋಗದೆ ಅವರು ಹಾಗೆ ಬರಲು ಕಾರಣವಿತ್ತು. ಕಬಡ್ಡಿ' ಸಿನಿಮಾ ಕಥೆಯನ್ನೇ ತಮಿಳಿನವರಿಗೆ ಹೇಳಿ, ಅದರಲ್ಲಿ ನಟಿಸುವ ಅವಕಾಶವನ್ನು ಕಿಶೋರ್ ಗಿಟ್ಟಿಸಿದ್ದಾರೆ ಅಂತ ನಿರ್ದೇಶಕ ನರೇಂದ್ರ ಬಾಬು ಆರೋಪಿಸಿದ್ದರು. ಅದಕ್ಕೆ ಉತ್ತರ ಕೊಡುವ ಧಾವಂತದಲ್ಲಿ ಕಿಶೋರ್ ಅಲ್ಲಿಗೆ ಬಂದದ್ದು. ನಾನು ಹಣ ಹೂಡಿರುವ ಸಿನಿಮಾ ಕಥೆಯನ್ನು ಬೇರೆಯವರಿಗೆ ಹೇಳುತ್ತೇನೆಯೇ? ಸಿನಿಮಾ ಬಿಡುಗಡೆಯಾಗಲಿ, ಸತ್ಯ ಏನು ಅಂತ ಗೊತ್ತಾಗುತ್ತೆ' ಅಂತ ಹೇಳಿ ಕಿಶೋರ್ ಸುಮ್ಮನಾಗಿದ್ದರು.

  ಕಬಡ್ಡಿ ತೆರೆಕಂಡಿದೆ. ಸಿನಿಮಾ ಬಗ್ಗೆ ಒಳ್ಳೆ ಪ್ರತಿಕ್ರಿಯೆಯೂ ಇದೆ. ಅದಕ್ಕಿಂತ ಮುಖ್ಯವಾಗಿ ಕಿಶೋರ್ ಹೇಳಿದಂತೆ ಸತ್ಯ ಗೊತ್ತಾಗಿದೆ. ತಮಿಳಿನ ಕಬಡ್ಡಿಗೂ, ಈ ಕಬಡ್ಡಿಗೂ ಸಾಕಷ್ಟು ವ್ಯತ್ಯಾಸಗಳಿವೆ. ನರೇಂದ್ರ ಬಾಬು ಬಡಬಡಿಸಿದಂತೆ ಏನೂ ಆಗಿಲ್ಲ. ಕಿಶೋರ್ ಮೌನವೇ ಕೊನೆಗೂ ಜಯಿಸಿದೆ. ಸಿನಿಮಾದ ಅವರ ನಟನೆ ಕಾಡುವಷ್ಟು ತೀವ್ರವಾಗಿದೆ. ಇಮೇಜಿನ ಹಂಗುತೊರೆದು ಅವರು ವಿಗ್ ಹಾಕಿದ್ದಾರೆ. ಉತ್ತರ ಕನ್ನಡದ ಕನ್ನಡವನ್ನು ಸೊಗಸಾಗಿ ಮಾತಾಡಿದ್ದಾರೆ. ವಿಭಿನ್ನ ಚಿಂತನೆಯಿಲ್ಲದೆ ಸೊರಗುತ್ತಿದ್ದ ಕನ್ನಡ ಸಿನಿಮಾ ಕ್ಷೇತ್ರಕ್ಕೊಂದು ಚೆಂದದ ಚಿತ್ರ ಕೊಟ್ಟಿದ್ದಾರೆ.

  ನಿಜ, 'ಕಬಡ್ಡಿ' ನರೇಂದ್ರ ಬಾಬು ಅವರದ್ದೇ ಕಥೆ. ಹತ್ತು ವರ್ಷಗಳಿಂದ ಅದನ್ನು ಸಿನಿಮಾ ಮಾಡಬೇಕು ಎಂದು ಕನಸು ಕಂಡವರು ಅವರು. ಆದರೆ, ಸಿನಿಮಾ ಕನಸು ನನಸಾಗಲು ಕಾರಣ ಕಿಶೋರ್ ಹಾಗೂ ಅವರ ಸ್ನೇಹಿತರು. ತಂಡದಲ್ಲಿ ಬಿರುಕು ಮೂಡದೇ ಹೋಗಿದ್ದರೆ, ಚೆಂದ ಇರುವ ಕಬಡ್ಡಿ ಆಟ ಅದ್ಭುತವಾಗೇ ಇರುತ್ತಿತ್ತೋ ಏನೋ?

  ಈಗ ಕಿಶೋರ್ ವಿಷಯಕ್ಕೆ ಬರೋಣ. ಕನ್ನಡದಲ್ಲಿ ಬೇರೆ ತರಹ ಯೋಚಿಸದವರನ್ನು ಕಂಡು ಅವರಿಗೆ ನಿಜಕ್ಕೂ ಸಿಟ್ಟು ಬಂದಿತ್ತು. ತಮಿಳಿನವರಿಗೆ ಅವರ ಸಾಮರ್ಥ್ಯ ಗೊತ್ತಾಯಿತು. ಪೊಲ್ಲಾದವನ್' ಚಿತ್ರದಲ್ಲಿ ಅವರು ಸ್ಕೋಪ್ ಇರುವ ಖಳನಾಯಕ. ನಾಯಕ ಧನುಷ್ ತಮ್ಮ ಇಮೇಜನ್ನು ಬದಿಗೊತ್ತಿ ಆ ಸಿನಿಮಾ ಒಪ್ಪಿಕೊಂಡಿದ್ದರು. ನನ್ನ ಕೈಲಿ ಏನೂ ಆಗಲ್ಲ. ನನ್ನನ್ನ ಹೊಡೆದುಹಾಕು ಬಾ...' ಅಂತ ಧನುಷ್ ಅಂಗಲಾಚುವ ದೃಶ್ಯವಿದೆ. ನಮ್ಮ ಸ್ಟಾರ್‌ಗಳು ಅಂಥ ದೃಶ್ಯಗಳನ್ನು ಒಪ್ಪಿಕೊಳ್ಳುವುದು ಕಷ್ಟ. ಆದರೆ, ತಮಿಳಿನಲ್ಲಿ ಹಾಗಲ್ಲ. ಅಲ್ಲಿ ಸ್ಕ್ರಿಪ್ಟ್ ಮೇಲೆ ಮೊದಲು ಸಾಕಷ್ಟು ಕೆಲಸ ನಡೆಯುತ್ತದೆ. ಟ್ರೆಂಡ್ ಇಟ್ಟುಕೊಂಡೂ ಭಿನ್ನವಾದ ಸಿನಿಮಾ ಮಾಡಲು ಎಲ್ಲರೂ ಶತಾಯಗತಾಯ ಯತ್ನಿಸುತ್ತಾರೆ. ಹೊಸ ನಿರ್ದೇಶಕರನ್ನು ನಂಬುತ್ತಾರೆ. ನಮ್ಮಲ್ಲೂ ಹಾಗೆ ಆದರೆ ಎಷ್ಟು ಚೆಂದ' ಎಂದು ಕಿಶೋರ್ ಕಣ್ಣರಳಿಸುತ್ತಾರೆ.

  ಪೊಲ್ಲಾದವನ್' ಬಂದಮೇಲೆ ಕಿಶೋರ್‌ಗೆ ಚೆನ್ನೈ ಎರಡನೇ ಮನೆಯಾಗಿದೆ. ಪೋರ್ ಕಳಂ' ತಮಿಳು ಸಿನಿಮಾದಲ್ಲಿ ಅವರ್‍ದದೇ ಲೀಡ್ ರೋಲ್. ಕನ್ನಡದವರೇ ಆದ ಸ್ಮಿತಾ ಆ ಚಿತ್ರದ ನಾಯಕಿ. ಬಂಡಿ ಸರೋಜ್‌ಕುಮಾರ್ ಅದನ್ನು ನಿರ್ದೇಶಿಸಿದ್ದಾರೆ. ಅದಲ್ಲದೆ ವೆಟ್ರಿಮಾರನ್ ನಿರ್ದೇಶನದಲ್ಲೇ ಆಡು ಕಳಂ' ಎಂಬ ಇನ್ನೊಂದು ಸಿನಿಮಾ ಕೂಡ ಕೈಲಿದೆ. ಜಯನ್ ಕೊಂಡಾನ್' ಸಿನಿಮಾದಲ್ಲೂ ಕಿಶೋರ್ ಖಳನಾಯಕ. ಐದು ತಮಿಳು ಸಿನಿಮಾಗಳಲ್ಲಿ ಅವರು ಅಭಿನಯಿಸಿ ಆಗಿದೆ.

  ತಮಿಳಿನಲ್ಲಿ ಕಿಶೋರ್ ಅಭಿನಯದ ಗಂಧ ಬಾಲಿವುಡ್‌ಗೂ ತಲುಪಿದೆ. ಮಣಿರತ್ನಂ ಪಾಳಯದಲ್ಲಿ ಕೂಡ ಇವರ ನಡನೆಯ ಬಗ್ಗೆ ಒಳ್ಳೆ ಮಾತುಗಳು. ಅದರ ಪರಿಣಾಮವೇ ರಾವಣ' ಸಿನಿಮಾದಲ್ಲಿ ಅವರೊಂದು ಪಾತ್ರವನ್ನು ಆಫರ್ ಮಾಡಿದ್ದಾರೆ. ಧರ್ಮೇಂದ್ರ ಕೊನೆಯ ಮಗ ಅಭಯ್ ಡಿಯೋಲ್ ನಿರ್ಮಿಸಲಿರುವ ಹೊಸ ಹಿಂದಿ ಚಿತ್ರದಲ್ಲೂ ಪ್ರಮುಖ ಪಾತ್ರ ಸಿಕ್ಕಿದೆ. ಕಮಲ ಹಾಸನ್ ಪುತ್ರಿ ಶ್ರುತಿ ಹಾಸನ್ ಅದರ ನಾಯಕಿ.

  ಇಲ್ಲಿ, ಕನ್ನಡದಲ್ಲಿ ಪೊಲ್ಲಾದವನ್' ರೀಮೇಕ್ ತೆಗೆಯುತ್ತಿದ್ದಾರೆ. ಯೋಗೀಶ್ ನಾಯಕ. ಹೆಸರು ಪುಂಡ'. ಖಳನಾಯಕ ನೀವೇ ಆಗಿ ಎಂಬ ಆಫರ್‌ಗೆ ಕಿಶೋರ್ ಒಪ್ಪಿಲ್ಲ. ಮಾಡಿದ ಪಾತ್ರವನ್ನೇ ಮತ್ತೆ ಮಾಡುವುದು ಸರಿಯಲ್ಲ ಎಂಬುದು ಅವರ ನಿರ್ಧಾರ. ಜೊತೆಗೆ ಕನ್ನಡ ಚಿತ್ರಗಳಿಗೆ ಡೇಟ್ಸ್ ಹೊಂದಿಸಲು ಕ್ಯಾಲೆಂಡರ್ ನೋಡುವಷ್ಟು ಅವರು ಬ್ಯುಸಿ. ಹೆಂಡತಿ, ಮಗು ಬೆಂಗಳೂರಲ್ಲೇ ಇದ್ದಾರೆ. ಕಿಶೋರ್ ಚೆನ್ನೈ ಟು ಬೆಂಗಳೂರು ವಿಮಾನ ಹತ್ತುವುದು, ಇಳಿಯುವುದು ಇದ್ದೇ ಇದೆ. ಸದ್ಯಕ್ಕಂತೂ ಬೆಂಗಳೂರಿನಿಂದ ಶಿಫ್ಟ್ ಆಗುವ ಯೋಚನೆ ಇಲ್ಲ. ಮುಂದೆ ಮುಂಬೈನಿಂದ ಬರುವ ಫ್ಲೈಟ್‌ನಿಂದ ಇಳಿಯುತ್ತಾರೆ ಅನ್ನೋದು ಅವರ ಬೆಳವಣಿಗೆಗೆ ಹಿಡಿದ ಕನ್ನಡಿ.

  ಕಬಡ್ಡಿ ಗೆದ್ದರೆ ನಾವೆಲ್ಲಾ ಇನ್ನಷ್ಟು ಕನಸು ಕಾಣಬಹುದು' ಅಂತ ದುನಿಯಾ' ಚಿತ್ರದ ಎಸಿಪಿ ಸ್ಟೈಲಲ್ಲೇ ಹೇಳುವ ಕಿಶೋರ್ ದೊಡ್ಡದಾಗಿ ಯೋಚಿಸುತ್ತಾರೆ ಎಂಬುದಂತೂ ಅವರ ಮಾತುಗಳಲ್ಲೇ ಗೊತ್ತಾಗುತ್ತೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X